ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, 14–9–1967

Last Updated 13 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನಾಥುಲಾ ಬಳಿ ಮತ್ತೆ ಗುಂಡಿನ ದಾಳಿ

ನವದೆಹಲಿ, ಸೆ. 13– ಇಂದು ಬೆಳಗಿನಿಂದ ಕದನ ಸ್ತಂಭನವಾಗಬೇಕೆಂಬ ಭಾರತದ ಸೂಚನೆಯನ್ನು ಉಪೇಕ್ಷಿಸಿ, ಚೀನಿ ಪಡೆಗಳು ಇಂದು ಬೆಳಗಿನಿಂದ ನಾಥುಲಾ ಗಡಿ ಬಳಿಯ ಭಾರತದ ನೆಲೆಗಳ ಮೇಲೆ ಗುಂಡು ಮತ್ತು ಷೆಲ್ ದಾಳಿಯನ್ನು ಆರಂಭಿಸಿದವು.

ಸ್ನಾತಕೋತ್ತರ ಶಿಕ್ಷಣಕ್ಕೆ‌ ಇಂಗ್ಲಿಷ್ ಮಾಧ್ಯಮ: ಉಪಕುಲಪತಿಗಳ ನಿರ್ಧಾರ

ನವದೆಹಲಿ, ಸೆ. 13– ಸ್ನಾತಕೋತ್ತರ ಮತ್ತು ಸಂಶೋಧನಾ ಮಟ್ಟದಲ್ಲಿ ಇಂಗ್ಲಿಷನ್ನು ಶಿಕ್ಷಣ ಮಾಧ್ಯಮವನ್ನಾಗಿ ಉಳಿಸಿಕೊಳ್ಳಬೇಕೆಂದೂ ಪದವಿಪೂರ್ವ ಮಟ್ಟದಲ್ಲಿ ಪ್ರಾದೇಶಿಕ ಭಾಷೆಗಳನ್ನು ಶಿಕ್ಷಣ ಮಾಧ್ಯಮವನ್ನಾಗಿ ಮಾಡಲು 5 ರಿಂದ 10 ವರ್ಷದ ಕಾಲ ಮಿತಿಯನ್ನು ಗೊತ್ತುಮಾಡಬೇಕೆಂದೂ ಉಪಕುಲಪತಿಗಳ ಐದನೇ ಸಮ್ಮೇಳನ ನಿರ್ಧರಿಸಿದೆ.

ಶಿಕ್ಷಣ ಆಯೋಗದ ಶಿಫಾರ್ಸಿನಂತೆ ಹಾಗೂ ಶಿಕ್ಷಣ ಸಚಿವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಪುನರ್ ಸೃಷ್ಟೀಕರಿಸಿದಂತೆ ಶಿಕ್ಷಣ ಮಾಧ್ಯಮ ಬದಲಾವಣೆಯ ಧೃತಿ ಮತ್ತು ಗತಿಯನ್ನು ವಿಶ್ವವಿದ್ಯಾನಿಲಯ ಪದ್ಧತಿಗೇ ಬಿಡಬೇಕೆಂಬ ನಿರ್ಣಯವನ್ನು ಇಂದು ಇಲ್ಲಿ ಮುಕ್ತಾಯಗೊಂಡ ಉಪಕುಲಪತಿಗಳ ಸಮ್ಮೇಳನ ಅಂಗೀಕರಿಸಿತು.

‌ವಿಯಟ್ನಾಂ ವಿನಾಶ ತಪ್ಪಿಸಲು ಅಮೆರಿಕವೇ ಮುಂದೆ ಬರಲಿ

ವಾಷಿಂಗ್ಟನ್, ಸೆ. 13– ವಿಯಟ್ನಾಂ ನಾಶ ಹೊಂದುವುದನ್ನು ತಪ್ಪಿಸಲು ಸಂಬಂಧಪಟ್ಟ ರಾಷ್ಟ್ರಗಳ ಪೈಕಿ ದೊಡ್ಡ ರಾಷ್ಟ್ರವಾಗಿರುವ ಅಮೆರಿಕವು ಪ್ರಥಮ ಹೆಜ್ಜೆಯನ್ನಿಟ್ಟು ಮಾತುಕತೆ ನಡೆಸಲು ಇನ್ನೊಂದು ಕಡೆಯವರಿಗೆ ಪ್ರೋತ್ಸಾಹ ನೀಡಬೇಕೆಂದು ಭಾರತದ ಉಪ ಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಇಂದು ಇಲ್ಲಿ ನುಡಿದರು.

ಟೆಲಿವಿಷನ್ ಸಂದರ್ಶನವೊಂದರಲ್ಲಿ ಶ್ರೀ ದೇಸಾಯಿ ಮಾತನಾಡುತ್ತಿದ್ದರು.

ಡಿ ಗಾಲ್: 1972ರ ತನಕ ಫ್ರಾನ್ಸಿನ ಅಧ್ಯಕ್ಷರಾಗಿರುವ ಇಚ್ಛೆ

ಪ್ಯಾರಿಸ್, ಸೆ. 13– 76 ವರ್ಷ ವಯಸ್ಸಿನ ಫ್ರೆಂಚ್ ಅಧ್ಯಕ್ಷ ಜನರಲ್ ಡಿ ಗಾಲ್‌ರವರು 1972ನೆಯ ಸಾಲಿನ ತನಕ ಅಧ್ಯಕ್ಷರಾಗಿ ಮುಂದುವರೆಯುವ ಇಚ್ಛೆ ಹೊಂದಿದ್ದಾರೆಂದು ಸಂದರ್ಶನವೊಂದರಲ್ಲಿ ಫ್ರೆಂಚ್ ಪ್ರಧಾನಮಂತ್ರಿ ಪಾಂಪಿಡೋರವರು ತಿಳಿಸಿದರು.

ಭಾರತದ ಶಸ್ತ್ರ ಸಜ್ಜಿಗೆ ಪ್ರಥಮ ಆದ್ಯತೆ: ಮುರಾರಜಿ ಒತ್ತಾಯ

ವಾಷಿಂಗ್ಟನ್, ಸೆ. 13– ಯಾವುದೇ ದಾಳಿಯನ್ನೆದುರಿಸಲು ಭಾರತವು ಸೂಕ್ತ ರೀತಿಯಲ್ಲಿ ಶಸ್ತ್ರಸಜ್ಜಿತವಾಗಬೇಕೆಂದೂ ಅದಕ್ಕೆ ಎಲ್ಲ ಆದ್ಯತೆ ನೀಡಬೇಕೆಂದೂ ಭಾರತದ ಉಪ ಪ್ರಧಾನಮಂತ್ರಿ ಶ್ರೀ ಮುರಾರಜಿ ದೇಸಾಯಿ ಅವರು ತಿಳಿಸಿದ್ದಾರೆ.

‘ನಾಥುಲಾ ಕದನ ಮುಂದುವರೆಯುವುದೇ ಇಲ್ಲವೇ ಮತ್ತಷ್ಟು ವ್ಯಾಪಕವಾಗಿ ಹರಡುವುದೇ ಎನ್ನುವುದನ್ನು ಹೇಳಲು ಸಾಧ್ಯವೇ ಇಲ್ಲ. ಏಕೆಂದರೆ ಚೀನದ ನಿಜವಾದ ಉದ್ದೇಶವೇನೆನ್ನುವುದನ್ನು ಯಾರೂ ಊಹಿಸಲಾರರು’ ಎಂದು ಶ್ರೀ ದೇಸಾಯಿ ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT