ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಆಹಾರಕ್ಕೆ ಭದ್ರ ಬುನಾದಿ

Last Updated 15 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಪ್ರತಿ ವರ್ಷ ಸೆಪ್ಟೆಂಬರ್ ಮೊದಲ ವಾರವನ್ನು 'ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ'ವೆಂದು ಆಚರಿಸಲಾಗುತ್ತದೆ. ಈ ವರ್ಷದ ವಿಷಯ ’ಶಿಶು–ಮಕ್ಕಳ ಆಹಾರ ಮತ್ತು ಪೋಷಣೆ’ ಎಂದಾಗಿತ್ತು. ನಮ್ಮ ಶಿಶು ಆಹಾರಪದ್ಧತಿಯಲ್ಲಿ ಗಣನೀಯ ಬದಲಾವಣೆ ತರಬೇಕಾಗಿದೆ. ರಾಷ್ಟ್ರೀಯ ಆರೋಗ್ಯ ಸಮೀಕ್ಷಾ ವರದಿ 4ರ ಪ್ರಕಾರ ನಮ್ಮ ರಾಜ್ಯವನ್ನು ಗಮನಿಸಿದರೆ ಈ ವಿಷಯದಲ್ಲಿ ಕೆಲವು ಗಂಭೀರ ಸಮಸ್ಯೆಗಳು ಎದ್ದುಕಾಣುತ್ತವೆ.

ಮೊಟ್ಟಮೊದಲನೆಯದಾಗಿ ಮಗು ಜನಿಸಿದ ಒಂದು ಗಂಟೆಯೊಳಗೆ ತಾಯಿಯ ಎದೆಹಾಲು ಉಣಿಸುವವರು ಕೇವಲ ಶೇ.56.4ರಷ್ಟು ಮಾತ್ರ. ಅರ್ಧ ಗಂಟೆಯೊಳಗೆ ಶಿಶುವಿಗೆ ತಾಯಿಹಾಲನ್ನು ಕೊಡುವುದು  ಅದರ ಇಡೀ ಬದುಕಿಗೆ ಭದ್ರ ಬುನಾದಿ. ಕನಿಷ್ಠ ಒಂದು ಗಂಟೆಯೊಳಗಾದರೂ ಎದೆಹಾಲನ್ನು ಮಗುವಿಗೆ ಉಣಿಸದಿದ್ದಲ್ಲಿ ಮುಂದೆ ಅದರ ಅನಾರೋಗ್ಯಕ್ಕೆ ಆಹ್ವಾನ ಮಾಡಿಕೊಂಡಂತೆ. ತಾಯಿಹಾಲಿನಿಂದ ಎಲ್ಲ ರೀತಿಯ ರೋಗ ನಿರೋಧಕಶಕ್ತಿಯ ಜೊತೆಗೆ ಪೌಷ್ಟಿಕಾಂಶಗಳು ಕೂಡ ಒದಗುತ್ತವೆ.

ಹೊಕ್ಕಳ ಬಳ್ಳಿಯ ಮೂಲಕ ಒಂಬತ್ತು ತಿಂಗಳು ಸರಬರಾಜು ಆಗುತ್ತಿದ್ದ ಪೌಷ್ಟಿಕಾಂಶಗಳೆಲ್ಲವೂ ತಾಯಿಯ ಎದೆಹಾಲಿನಿಂದ ಎರಡು ವರ್ಷದವರೆಗೆ ಪಡೆಯುವಂಥದ್ದು. ಶಿಶು ಜನಿಸಿದ ಒಂದು ಗಂಟೆಯೊಳಗೆ ಉಣಿಸುವ ತಾಯಿಹಾಲಿಗೆ ಜಗತ್ತಿನಲ್ಲಿ ಪರ್ಯಾಯ ಆಹಾರವೇ ಇಲ್ಲ. ಆದರೆ ಸುಮಾರು ಅರ್ಧಕ್ಕೆ ಅರ್ಧದಷ್ಟು ತಾಯಂದಿರು ಒಂದು ಗಂಟೆಯೊಳಗೆ ಈ ಹಾಲನ್ನು ಕೊಡದಿರುವುದು ಮಹಾದುರಂತವೇ ಸರಿ. ಇದಕ್ಕೆ ಕೆಲವು ಅಂಧ ವಿಶ್ವಾಸಗಳು, ನಂಬಿಕೆಗಳು ಕಾರಣವಾಗಿವೆ.

ಮೊದಲು ಬರುವ ತಾಯಿಯ ಹಾಲು ಭೂತಾಯಿಗೆ ಅರ್ಪಿಸಬೇಕೆಂದು ಕೆಲವು ಬುಡಕಟ್ಟುಗಳ ನಂಬಿಕೆಯಾಗಿದ್ದರೆ, ಇನ್ನು ಕೆಲವರಿಗೆ ಅದು ಕಲುಷಿತ, ಅಶುದ್ಧವೆಂಬ ಮೂಢನಂಬಿಕೆಯೂ ಇದೆ. ಹುಟ್ಟಿದ ಮಗುವಿಗೆ ಜೇನು ತಿನ್ನಿಸುವುದು, ಸಕ್ಕರೆ ನೀರನ್ನು ಕುಡಿಸುವುದು, ಕತ್ತೆಹಾಲನ್ನು ಕುಡಿಸುವುದು – ಹೀಗೆ ಹತ್ತುಹಲವು ಅನಾಹುತಗಳನ್ನು ಇಂದಿಗೂ ಮಾಡುವುದು ಕಾಣಬಹುದಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ.40ರಷ್ಟು ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸುವಾಗಲೂ ತಾಯಿಹಾಲನ್ನು ಕೊಡಲು ವಿಳಂಬವಾಗುತ್ತಿರುವುದನ್ನು ಗಮನಿಸಬಹುದು.

ಮೊಟ್ಟಮೊದಲನೆಯ ವಿಷಯ: ಒಂದು ಗಂಟೆಯೊಳಗೆ ಎದೆಹಾಲು ಕೊಡುವುದು; ಎರಡನೇ ಪ್ರಮುಖ ವಿಷಯ: ಆರು ತಿಂಗಳಿನವರೆಗೆ ಬೇರೆ ಯಾವುದೇ ಆಹಾರವನ್ನೂ ಕೊಡದೆ, ನೀರನ್ನೂ ಸೇರಿ, ಆರು ತಿಂಗಳವರೆಗೆ ಕೇವಲ ತಾಯಿಯ ಹಾಲನ್ನೇ ಕೊಡುವುದು. ಮೂರನೇ ಪ್ರಮುಖ ವಿಷಯ: ಆರು ತಿಂಗಳಿಗೆ ಪೌಷ್ಟಿಕ ಘನ ಆಹಾರ ಕೊಡಲು ಶುರು ಮಾಡಿ, ಎರಡು ವರ್ಷದವರೆಗೆ ತಾಯಿಹಾಲಿನ ಜೊತೆಗೆ ಘನ ಆಹಾರವನ್ನು ಮುಂದುವರಿಸುವುದು. ಇವಿಷ್ಟು ಮಗುವಿನ ಬೆಳವಣಿಗೆಗೆ ಮತ್ತು ಆರೋಗ್ಯಕ್ಕೆ ಮೂಲಭೂತ ಅಂಶಗಳು. ಈ ನಿಯಮಗಳ ಆಚರಣೆಯಲ್ಲಿಯೂ ಸಹ ಕರ್ನಾಟಕದಲ್ಲಿ ಕೊರತೆಯಿದೆ.

ಆರು ತಿಂಗಳಿನವರೆಗೆ ಶಿಶುವಿಗೆ ತಾಯಿಹಾಲನ್ನೇ ಕೊಡುವವರು ಕೇವಲ ಶೇ.54.2. ಆರು ತಿಂಗಳಿಗೆ ಸರಿಯಾಗಿ ಘನ ಆಹಾರ ಕೊಡಲು ಶುರು ಮಾಡುವವರು ಕೇವಲ ಶೇ. 46 ಮಾತ್ರ. ಹಾಗೆಯೇ ಆರು ತಿಂಗಳಿಂದ ಎರಡು ವರ್ಷದವರೆಗೆ ತಾಯಿ ಹಾಲನ್ನೂ ಮುಂದುವರಿಸಿ ಘನ ಆಹಾರವನ್ನು ಕೊಡುವವರು ಕೇವಲ ಶೇ.5.8. ಇಂದು ‘ನಮ್ಮ ಮಕ್ಕಳು ಬೆಳೆಯುತಿತಿಲ್ಲ, ಎತ್ತರ ಕಡಿಮೆ, ತೂಕ ಕಡಿಮೆ, ಆರೋಗ್ಯ ಇಲ್ಲ’ ಎಂದು ಬರೀ ಗೊಣಗುವುದರ ಬದಲು ಈ ಮೊದಲ ಮೆಟ್ಟಿಲುಗಳನ್ನು ಸರಿಯಾಗಿ ಗಮನಿಸುವುದು ಸೂಕ್ತವೆನ್ನಬಹುದು.

ಘನ ಆಹಾರವನ್ನು ಆರು ತಿಂಗಳಿಗೆ ಕೊಡದೆ, ಮುಂದೂಡುವುದು ಎಷ್ಟು ದೋಷವೋ ಅಷ್ಟೇ ಸಮಸ್ಯೆ ಆರು ತಿಂಗಳಿಗಿಂತ ಮೊದಲೇ ಕೊಡುವುದು. ಅನೇಕರು ಮಗು ಬೇಗ ಬೆಳೆಯಬೇಕೆಂದು 3 ತಿಂಗಳು, 4 ತಿಂಗಳಿಗೆ ಘನ ಆಹಾರವನ್ನು ಕೊಡಲು ಆತುರ ಪಡುತ್ತಾರೆ. ಆ ಸಮಯದಲ್ಲಿ ಮಗುವಿನ ದೇಹದಲ್ಲಿ ತಾಯಿ ಹಾಲನ್ನಲ್ಲದೆ ಬೇರೇನನ್ನೂ ಜೀರ್ಣಿಸುವ ರಾಸಾಯನಿಕ ವಸ್ತುಗಳು ಅಂದರೆ ಕಿಣ್ವಗಳು ಉತ್ಪತ್ತಿಯಾಗುವುದಿಲ್ಲ.

ಇನ್ನು ಕೆಲವರು ಅನ್ನಪ್ರಾಶನ ಮಾಡಿಸಲು ದಿನಾಂಕಕ್ಕಾಗಿ ಅಥವಾ ಹೊರಗಿರುವ ಮನೆಯವರು ರಜೆಗೆ ಬರಲು ಕಾಯ್ದು ಮುಂದೂಡಿ ಮಗುವಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತಾರೆ.

ಉತ್ತಮ ಘನ ಆಹಾರಕ್ಕಾಗಿ ಏಕದಳಧಾನ್ಯ, ದ್ವಿದಳಧಾನ್ಯ ಮತ್ತು ಎಣ್ಣೆಕಾಳುಗಳನ್ನು ಸರಿಯಾದ ಪ್ರಮಾಣದಲ್ಲಿ ಬೆರೆಸಿ, ಅಂದರೆ ಸುಮಾರು ಅರ್ಧದಷ್ಟು ಏಕದಳ ಧಾನ್ಯ, ಕಾಲು ಭಾಗ ದ್ವಿದಳ ಧಾನ್ಯ, ಇನ್ನು ಕಾಲು ಭಾಗ ಎಣ್ಣೆಕಾಳುಗಳ ಜೊತೆಗೆ ಸ್ವಲ್ಪ ಪ್ರಮಾಣದ ಮೊಳಕೆ ಕಟ್ಟಿ ತಯಾರಿಸಿದ ರಾಗಿಸರಿಯಂತಹ ಪದಾರ್ಥವಿದ್ದಲ್ಲಿ ಪೌಷ್ಟಿಕ ಆಹಾರ ಸಿದ್ಧವಾಗುತ್ತದೆ. ಕಾಳುಗಳನ್ನು ಹುರಿದು 15 ದಿನಕ್ಕೆ ಮಾಡಿಟ್ಟುಕೊಳ್ಳಬಹುದು. ಬೇಳೆಕಾಳಿನಲ್ಲಿ ಹೆಸರುಬೇಳೆ ಮಗುವಿಗೆ ಉತ್ತಮ.

ಜೊತೆಗೆ ಎಲ್ಲ ರೀತಿಯ ಹಣ್ಣು, ತರಕಾರಿ, ಮೀನು–ಮಾಂಸ, ಮೊಟ್ಟೆ ಅವರವರ ಸಾಂಸ್ಕೃತಿಕ ಆಯ್ಕೆಯಂತೆ ಪರಿಚಯಿಸಬೇಕು. ಎಷ್ಟು ವೈವಿಧ್ಯಮಯ ಆಹಾರಗಳನ್ನು ಪರಿಚಯಿಸಲಾಗುತ್ತದೆಯೋ ಅಷ್ಟು ರೋಗ ನಿರೋಧಕಶಕ್ತಿ ವೃದ್ಧಿಯಾಗುತ್ತದೆ. ಗ್ಯಾಬ್ರಿಯಲ್ ಮಿಸ್ಟ್ರಲ್ ಹೇಳಿದಂತೆ, ‘Many things we need can wait. The child cannot. Now is the time his bones are formed, his mind developed. To him we cannot say tomorrow, his name is today’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT