ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ವಿಶ್ವಗುಂಪು ಪ್ರವೇಶದ ಕನಸು ಭಗ್ನ

ಡೇವಿಸ್ ಕಪ್‌: ಯೂಕಿ ಭಾಂಬ್ರಿ ಜಯಭೇರಿ; ನಿರ್ಣಾಯಕ ಪಂದ್ಯದಲ್ಲಿ ರಾಮ್‌ಕುಮಾರ್‌ಗೆ ಸೋಲು
Last Updated 18 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಎಡ್‌ಮಾಂಟನ್‌: ಭರವಸೆಯ ಆಟಗಾರ ರಾಮ್‌ಕುಮಾರ್ ರಾಮನಾ ಥನ್ ನಿರ್ಣಾಯಕ ಪಂದ್ಯವನ್ನು ಕೈಚೆ ಲ್ಲಿದ ಕಾರಣ ಡೇವಿಸ್ ಕಪ್‌ ವಿಶ್ವ ಗುಂಪಿಗೆ ಅರ್ಹತೆ ಗಳಿಸುವ ಭಾರತದ ಕನಸು ಭಗ್ನಗೊಂಡಿದೆ.

ಮೊದಲ ದಿನ ಮಿಶ್ರ ಫಲ ಕಂಡು ಎರಡನೇ ದಿನ 1–2ರ ಹಿನ್ನಡೆ ಅನುಭವಿ ಸಿದ್ದ ಭಾರತಕ್ಕೆ ರಿವರ್ಸ್ ಸಿಂಗಲ್ಸ್ ವಿಭಾಗದ ಪಂದ್ಯಗಳು ನಿರ್ಣಾಯಕವಾಗಿದ್ದವು.

ಭಾನುವಾರ ರಾತ್ರಿ ಎರಡೂ ರಿವರ್ಸ್‌ ಸಿಂಗಲ್ಸ್‌ ಪಂದ್ಯಗಳನ್ನು ಗೆಲ್ಲಬೇಕಾಗಿತ್ತು. ಆದರೆ ಮೊದಲ ಪಂದ್ಯದಲ್ಲಿ ಸೋಲುವ ಮೂಲಕ ರಾಮ್‌ಕುಮಾರ್‌ ನಿರಾಸೆ ಮೂಡಿಸಿದರು. ನಂತರ ನಡೆದ ಪಂದ್ಯದಲ್ಲಿ ಯೂಕಿ ಭಾಂಬ್ರಿ ಜಯ ಗಳಿಸಿದರು. ಆದರೆ ಅಷ್ಟರಲ್ಲಿ ಭಾರತ ಟೂರ್ನಿಯಿಂದ ಹೊರಬಿದ್ದಿತ್ತು. 3–2 ಅಂತರದಿಂದ ಗೆದ್ದ ಕೆನಡಾ ವಿಶ್ವ ಗುಂಪಿಗೆ ಲಗ್ಗೆ ಇಟ್ಟಿತು.

ರಾಮ್‌ಕುಮಾರ್‌ ಪಂದ್ಯ ವಿಶ್ವದ 51ನೇ ಕ್ರಮಾಂಕದ ಆಟಗಾರ ಡೆನಿಸ್ ಶಪೋವಲೊವ್‌ ಅವರೊಂದಿಗೆ ನಿಗದಿಯಾಗಿತ್ತು. ಲಭಿಸಿದ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳದ ಕಾರಣ ರಾಮ್‌ಕುಮಾರ್‌ ಸೋಲಿಗೆ ಶರಣಾದರು.

ಮೊದಲ ಸೆಟ್‌ನಲ್ಲಿ 6–3ರ ಹಿನ್ನಡೆ ಅನುಭವಿಸಿದ ರಾಮ್‌ಕುಮಾರ್ ಎರಡನೇ ಸೆಟ್‌ನಲ್ಲಿ 7–6 (1) ಅಂತರದಿಂದ ಪ್ರಯಾಸದ ಗೆಲುವು ಸಾಧಿಸಿದರು. ಮೂರನೇ ಸೆಟ್‌ನಲ್ಲಿ 6–3ರಿಂದ ಸುಲಭವಾಗಿ ಕೆನಡಾದ ಆಟಗಾರ ಜಯ ಗಳಿಸಿದರು.

ಕಳೆದ ಬಾರಿ ಬ್ರಿಟನ್ ಎದುರು ಸೋತಿದ್ದ ಕೆನಡಾ ಈ ಮೂಲಕ ಮತ್ತೆ ವಿಶ್ವ ಗುಂಪಿನಲ್ಲಿ ಸ್ಥಾನ ಗಳಿಸಿತು. ಬ್ರ್ಯಾಡನ್‌ ಶುನರ್‌ ವಿರುದ್ಧದ ಪಂದ್ಯದಲ್ಲಿ ಯೂಕಿ ಭಾಂಬ್ರಿ 6–4, 4–6, 6–4ರಿಂದ ಗೆಲುವು ಸಾಧಿಸಿದರು.

ರಾಮ್‌ಕುಮಾರ್ ಅವರ ಆರಂಭವೇ ಕಳಪೆಯಾಗಿತ್ತು. ನಿರಂತರ 11 ಪಾಯಿಂಟ್‌ಗಳನ್ನು ಎದುರಾಳಿಗೆ ಬಿಟ್ಟುಕೊಟ್ಟ ನಂತರವಷ್ಟೇ ತಂತ್ರಗಳನ್ನು ಬದಲಿಸಲು ಮುಂದಾದರು. ಅವರು ಲಯಕ್ಕೆ ಮರಳಿದ ನಂತರ ಪಂದ್ಯ ರೋಚಕವಾಗುತ್ತ ಸಾಗಿತು. ಆದರೆ ರಾಮ್‌ಕುಮಾರ್ ಅವರ ಸರ್ವ್ ಮುರಿದ ಶಪೋವಲೊವ್‌ 4–1ರ ಮುನ್ನಡೆ ಸಾಧಿಸಿದರು.

ಆದರೂ ಕೆನಡಾದ ಎಡಗೈ ಆಟಗಾರನ ವಿರುದ್ಧ ಮೇಲುಗೈ ಸಾಧಿಸಲು ರಾಮ್‌ಕುಮಾರ್ ನಡೆ ಸಿದ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ರಾಮ್‌ ಕುಮಾರ್ ಅವರ ಸರ್ವ್‌ಗಳನ್ನು ಮಿಂಚಿನ ವೇಗದಲ್ಲಿ ರಿಟರ್ನ್ ಮಾಡಿದ ಶಪೋವಲೊವ್‌ ಪಾಯಿಂಟ್‌ಗಳನ್ನು ಬಾಚುತ್ತ ಸಾಗಿದರು.

ಒಂದು ಹಂತದಲ್ಲಿ ದಿಟ್ಟ ಆಟ ಆಡಿದ ರಾಮ್‌ಕುಮಾರ್‌ ಮೋಹಕ ರಿಟರ್ನ್‌ಗಳ ಮೂಲಕ ಎರಡು ಬ್ರೇಕ್‌ಪಾಯಿಂಟ್‌ ಗಳಿಸಲು ಶ್ರಮಿಸಿದರು. ಆದರೆ ಇದಕ್ಕೆ ಅವಕಾಶ ನೀಡದ ಶಪೋವಲೊವ್‌ ಏಸ್ ಸಿಡಿಸಿ ಜಯದ ನಗೆ ಚೆಲ್ಲಿದರು.

ಎರಡನೇ ಸೆಟ್‌ನಲ್ಲಿ ರಾಮ್‌ ಕುಮಾರ್‌ ಎದುರಾಳಿಗೆ ಪಾಯಿಂಟ್ ಬಿಟ್ಟುಕೊಡದೇ ಎರಡು ಗೇಮ್‌ಗಳನ್ನು ಗೆದ್ದುಕೊಂಡರು. ಉತ್ತಮ ತಂತ್ರಗಳನ್ನು ಅನಸರಿಸಿ 5–4ರ ಮುನ್ನಡೆ ಸಾಧಿಸಿದರು. ಆದರೆ 12ನೇ ಗೇಮ್‌ನಲ್ಲಿ ಲಭಿಸಿದ ನಾಲ್ಕು ಸೆಟ್ ಪಾಯಿಂಟ್‌ಗಳನ್ನು ಪೂರಕವಾಗಿ ಬಳಸಿಕೊಳ್ಳಲಾಗದೆ ನಿರಾಸೆಗೆ ಒಳಗಾದರು.

ಐದನೇ ಬಾರಿ ಡಬಲ್‌ ಫಾಲ್ಟ್ ಎಸಗಿ ಟೈ ಬ್ರೇಕರ್‌ ಕೂಡ ಕಳೆದುಕೊಂಡರು. ಕೊನೆಯಲ್ಲಿ ಪ್ರಯಾಸದಿಂದ ಸೆಟ್ ಗೆದ್ದರು. ಮೊದಲ ಸೆಟ್‌ನ ಪಡಿಯಚ್ಚಿನಂತಿದ್ದ ಅಂತಿಮ ಸೆಟ್‌ನಲ್ಲಿ ಕೆನಡಾದ ಆಟಗಾರನಿಗೆ ರಾಮ್‌ಕುಮಾರ್ ಸವಾಲೊಡ್ಡಲು ವಿಫಲರಾಗಿ ಪಂದ್ಯವನ್ನು ಬಿಟ್ಟುಕೊಟ್ಟರು.

ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಆಗದೇ ಇರುವುದಕ್ಕೆ ಭಾರತ ತಂಡದ ನಾಯಕ ಮಹೇಶ್ ಭೂಪತಿ ಬೇಸರ ವ್ಯಕ್ತಪಡಿಸಿದರು.

‘ಅವಕಾಶಗಳನ್ನು ಬಳಸಿಕೊಳ್ಳಲು ನಾವು ವಿಫಲರಾಗಿದ್ದೇವೆ. ಪ್ರತಿ ಪಂದ್ಯದಲ್ಲೂ ಈ ವೈಫಲ್ಯ ಕಂಡುಬಂದಿದೆ. ರಾಮ್‌ಕುಮಾರ್‌ ಅವರಿಗೆ ಉತ್ತಮ ಅವಕಾಶಗಳಿದ್ದವು. ಎರಡನೇ ಸೆಟ್‌ನಲ್ಲಿ ನಾಲ್ಕು ಸೆಟ್‌ ಪಾಯಿಂಟ್‌ಗಳು ಲಭಿಸುವ ಸಾಧ್ಯತೆ ಇತ್ತು. ಅದು ಬುಟ್ಟಿಗೆ ಹಾಕಿಕೊಂಡಿದ್ದರೆ ಪಂದ್ಯ ಗೆಲ್ಲುವತ್ತ ಹೆಜ್ಜೆ ಹಾಕಬಹುದಿತ್ತು’ ಎಂದು ಭೂಪತಿ ಹೇಳಿದರು.

ಆಸ್ಟ್ರೇಲಿಯಾ ಮಣಿಸಿದ ಬೆಲ್ಜಿಯಂ: ಸೆಮಿಫೈನಲ್‌ ಹಂತದಲ್ಲಿ 3–2ರ ಜಯ ಸಾಧಿಸಿದ ಬೆಲ್ಜಿಯಂ ತಂಡ ಆಸ್ಟ್ರೇಲಿಯಾದ ಫೈನಲ್‌ ಕನಸಿಗೆ ಅಡ್ಡಿ ಯಾಯಿತು. ಈ ಮೂಲಕ ಫ್ರಾನ್ಸ್ ಜೊತೆ ಪ್ರಶಸ್ತಿ ಸುತ್ತಿನ ಪಂದ್ಯಕ್ಕೆ ಸಿದ್ಧವಾಯಿತು.

ಬ್ರೂಸೆಲ್ಸ್‌ನಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಸ್ಟೀವ್ ಡಾರ್ಸಿಸ್‌ 6–4, 7–5, 6–2ರಲ್ಲಿ ಜೋರ್ಡಾನ್ ಥಾಮ್ಸನ್‌ ವಿರುದ್ಧ ಗೆದ್ದು 14 ವರ್ಷಗಳ ಆಸ್ಟ್ರೇಲಿಯಾದ ಆಸೆಯನ್ನು ಚಿವುಟಿ ಹಾಕಿದರು.

ನಾಲ್ಕನೇ ಬಾರಿಯೂ ನಿರಾಸೆ
ಭಾನುವಾರ ನಿರಾಸೆ ಅನುಭವಿಸುವುದರೊಂದಿಗೆ ಭಾರತ ಸತತ ನಾಲ್ಕನೇ ಬಾರಿ ಡೇವಿಸ್ ಕಪ್‌ನ ವಿಶ್ವ ಗುಂಪು ಪ್ರವೇಶಿಸಲು ವಿಫಲವಾಯಿತು. ಕಳೆದ ಮೂರು ಬಾರಿ ಕ್ರಮವಾಗಿ ಸರ್ಬಿಯಾ, ಜೆಕ್ ಗಣರಾಜ್ಯ ಹಾಗೂ ಸ್ಪೇನ್ ಕೈಯಲ್ಲಿ ಭಾರತ ಸೋತಿತ್ತು.

ಕೆನಡಾ ಫೆಬ್ರುವರಿಯಲ್ಲಿ ಬ್ರಿಟನ್ ವಿರುದ್ಧ ನಡೆದ ಸ್ಪರ್ಧೆಯಲ್ಲಿ ಸೋತಿತ್ತು. ಆದರೂ ಭರವಸೆ ಕಳೆದುಕೊಳ್ಳದೆ ಮುನ್ನುಗ್ಗಿ ಈಗ 16 ರಾಷ್ಟ್ರಗಳ ವಿಶ್ವ ಗುಂಪಿಗೆ ಸೇರಿದೆ. ಭಾರತ ಮತ್ತೆ ಏಷ್ಯಾ/ಒಸೀನಿಯಾ ಗುಂಪಿಗೆ ಜಾರಿದ್ದು  ಮುಂದಿನ ವರ್ಷ ಮತ್ತೆ ಪ್ಲೇ ಆಫ್ ಹಂತಕ್ಕೇರಲು ಪ್ರಯತ್ನಿಸಬೇಕಿದೆ.

*
ವಿಶ್ವ ಗುಂಪಿನ ಬಾಗಿಲಲ್ಲಿ ಎಡವಿದ್ದೇವೆ. ಆದರೆ ಇಲ್ಲಿ ಉತ್ತಮ ಅನುಭವ ಲಭಿಸಿದೆ. ಯೂಕಿ ಭಾಂಬ್ರಿ ಮತ್ತು ರಾಮ್‌ಕುಮಾರ್ ಶೀಘ್ರದಲ್ಲೇ ಅಗ್ರ 100 ಆಟಗಾರರ ಪಟ್ಟಿಗೆ ಸೇರಲಿದ್ದಾರೆ.
–ಮಹೇಶ್ ಭೂಪತಿ,
ಭಾರತ ತಂಡದ ಆಟವಾಡದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT