ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

23ರಂದು ಪ್ರದರ್ಶನ ಪಂದ್ಯ ಆಯೋಜನೆ

Last Updated 20 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಜ್ಯದಲ್ಲಿ ಮಹಿಳಾ ಕ್ರಿಕೆಟ್‌ ಜನಪ್ರಿಯಗೊಳಿಸಲು ಮುಂದಾಗಿರುವ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಮುಂದಿನ ವರ್ಷದಿಂದ ಮಹಿಳೆಯರಿಗೂ ಕೆಪಿಎಲ್‌ ಟೂರ್ನಿ ಜಾರಿಗೆ ತರಲು ಯೋಜನೆ ರೂಪಿಸಿದೆ.

ಇದಕ್ಕೆ ಪೂರ್ವಭಾವಿಯಾಗಿ ಕೆಎಸ್‌ಸಿಎ, ಮಹಿಳಾ ತಂಡಗಳ ನಡುವೆ ಪ್ರದರ್ಶನ ಪಂದ್ಯ ಆಯೋಜಿಸಿದೆ. ಇಲ್ಲಿನ ರಾಜನಗರದ ಕ್ರೀಡಾಂಗಣದಲ್ಲಿ ಸೆ. 23ರಂದು ರಾತ್ರಿ 7ಕ್ಕೆ ಕೆಪಿಎಲ್‌ ಟೂರ್ನಿಯ ಫೈನಲ್‌ ಪಂದ್ಯ ನಡೆಯಲಿದೆ.

ಅಂದು ಮಧ್ಯಾಹ್ನ 1 ಗಂಟೆಗೆ ಮಹಿಳೆಯರ ಪಂದ್ಯವನ್ನು ಆಯೋಜಿಸಲಾಗಿದೆ. ಅಧ್ಯಕ್ಷರ ಇಲೆವನ್‌ ತಂಡವನ್ನು ವೇದಾ ಕೃಷ್ಣಮೂರ್ತಿ, ಕಾರ್ಯದರ್ಶಿ ಇಲೆವನ್‌ ತಂಡವನ್ನು ರಕ್ಷಿತಾ ಕೃಷ್ಣಪ್ಪ ಮುನ್ನಡೆಸಲಿದ್ದಾರೆ.

‘ಕರ್ನಾಟಕದಲ್ಲಿ ಮಹಿಳಾ ಕ್ರಿಕೆಟ್‌ ಬೆಳವಣಿಗೆಗೆ ಒತ್ತು ನೀಡಬೇಕಾಗಿದೆ. ಅವರಿಗೆ ಆಡಲು ಹೆಚ್ಚು ಪಂದ್ಯಗಳಲ್ಲಿ ಅವಕಾಶ ಸಿಗಬೇಕು. ಆದ್ದರಿಂದ ಮಹಿಳಾ ಕೆಪಿಎಲ್‌ ಆರಂಭಿಸುವ ಯೋಜನೆಯಿದೆ. ಅದಕ್ಕಾಗಿ ಮೊದಲ ಬಾರಿಗೆ ಪ್ರದರ್ಶನ ಪಂದ್ಯ ಆಯೋಜಿಸಿದ್ದೇವೆ’ ಎಂದು ಕೆಎಸ್‌ಸಿಎ ವಕ್ತಾರ ವಿನಯ್‌ ಮೃತ್ಯುಂಜಯ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಈ ಬಾರಿಯ ಮಹಿಳಾ ವಿಶ್ವಕಪ್‌ ಟೂರ್ನಿಯಲ್ಲಿ ರನ್ನರ್ಸ್‌ ಅಪ್‌ ಆದ ಭಾರತ ತಂಡದಲ್ಲಿದ್ದ ವಿಜಯಪುರದ ರಾಜೇಶ್ವರಿ ಗಾಯಕ್ವಾಡ್‌, ಅವರ ಸಹೋದರಿ ರಾಮೇಶ್ವರಿ ಗಾಯಕ್ವಾಡ್‌ ಕಾರ್ಯದರ್ಶಿ ಇಲೆವನ್‌ ತಂಡದಲ್ಲಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಆಡಿರುವ ಕರುಣಾ ಜೈನ್‌, ವಿ.ಆರ್‌. ವನಿತಾ ಕೂಡ ಕಣಕ್ಕಿಳಿಯಲಿದ್ದಾರೆ.

ಉತ್ತಮ ಅವಕಾಶ: ‘ಮಹಿಳಾ ತಂಡದವರು ಇಷ್ಟು ವರ್ಷ ಪಂದ್ಯಗಳನ್ನು ಆಡಿದ್ದಕ್ಕಿಂತ ಅಭ್ಯಾಸ ಮಾಡಿದ್ದೇ ಹೆಚ್ಚು. ನಮಗೆ ಆಡಲು ಹೆಚ್ಚು ಪಂದ್ಯಗಳೇ ಇರುತ್ತಿರಲಿಲ್ಲ. ಆದ್ದರಿಂದ ಕೆಎಸ್‌ಸಿಎ ಆಯೋಜಿಸಿರುವ ಪ್ರದರ್ಶನ ಪಂದ್ಯ ಮಹಿಳಾ ಕ್ರಿಕೆಟ್ ಬೆಳವಣಿಗೆಯ ದೃಷ್ಟಿಯಿಂದ ಮಹತ್ವದ ಹೆಜ್ಜೆ’ ಎಂದು ರಾಜೇಶ್ವರಿ ಗಾಯಕ್ವಾಡ್‌ ಸಂತೋಷವ್ಯಕ್ತಪಡಿಸಿದ್ದಾರೆ.

‘ಭಾರತದಲ್ಲಿ ಐಪಿಎಲ್‌ ಬಂದ ಬಳಿಕ ಕ್ರಿಕೆಟ್‌ ನೋಡುಗರ ಸಂಖ್ಯೆ ಹೆಚ್ಚಾಗಿದೆ. ಅದೇ ರೀತಿ ಮಹಿಳೆಯರಿಗೂ ಐಪಿಎಲ್‌ ಟೂರ್ನಿ ನಡೆಯಬೇಕು. ವಿಶ್ವಕಪ್‌ನಲ್ಲಿ ನಮ್ಮ ತಂಡದ ಸಾಧನೆ ಸಾಕಷ್ಟು ಜನರಿಗೆ ಸ್ಫೂರ್ತಿಯಾಗಿದೆ. ಮುಂದಿನ ವರ್ಷ ಮಹಿಳಾ ಕೆಪಿಎಲ್‌ ನಡೆದರೆ ಅದಕ್ಕಿಂತ ದೊಡ್ಡ ಖುಷಿ ಇನ್ನೊಂದಿಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT