ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾಗೆ ಶ್ರೀರಂಗಪಟ್ಟಣ ಸಜ್ಜು: ಉತ್ಸವಕ್ಕೆ ಆನೆಗಳಿಲ್ಲ ಎಂದ ಡಿಸಿ

Last Updated 24 ಸೆಪ್ಟೆಂಬರ್ 2017, 9:28 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಸೆ. 24ರಿಂದ ಪಟ್ಟಣದಲ್ಲಿ 3 ದಿನಗಳ ಕಾಲ ನಡೆಯುವ ದಸರಾ ಉತ್ಸವಕ್ಕೆ ಪಟ್ಟಣ ಸಜ್ಜುಗೊಂಡಿದೆ.

ದಸರಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಇಲ್ಲಿನ ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನದಲ್ಲಿ ಬೃಹತ್‌ ವೇದಿಕೆ ಸಿದ್ಧಗೊಂಡಿದೆ.

ಕಲಾವಿದರು ಕಾರ್ಯಕ್ರಮ ನೀಡಲು ಅನುಕೂಲವಾಗುವಂತೆ 60/36 ಅಡಿಗಳ ವಿಸ್ತೀರ್ಣದ ಪ್ರಧಾನ ವೇದಿಕೆ ನಿರ್ಮಿಸಲಾಗಿದೆ. ಇದಕ್ಕೆ ಹೊಂದಿಕೊಂಡಂತೆ ಪ್ರೇಕ್ಷಕರು ಕುಳಿತು ಕಾರ್ಯಕ್ರಮ ವೀಕ್ಷಿಸಲು 100/260 ಅಡಿ ವಿಸ್ತೀರ್ಣದ ವೇದಿಕೆ ಇರಲಿದೆ. 2,000 ಜನರು ಏಕಕಾಲಕ್ಕೆ ಕುಳಿತು ಕಾರ್ಯಕ್ರಮ ವೀಕ್ಷಿಸಲು ಕುರ್ಚಿಗಳನ್ನು ಹಾಕಲಾಗುತ್ತಿದೆ. ಮುಂದಿನ ಸಾಲಿನಲ್ಲಿ ಮೀಡಿಯಾ ಗ್ಯಾಲರಿ ಮತ್ತು ವಿಐಪಿ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. ವೇದಿಕೆಯ ಬಲ ಭಾಗದಲ್ಲಿ ತೋಟಗಾರಿಕೆ, ಪಶುಪಾಲನೆ, ರೇಷ್ಮೆ ಇತರ ಇಲಾಖೆಗಳ ವಸ್ತುಪ್ರದರ್ಶನಕ್ಕಾಗಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಇದು ಸಂಪೂರ್ಣ ವಾಟರ್‌ ಪ್ರೂಫ್‌ ವೇದಿಕೆ ಎಂದು ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ನರೇಶ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ದಸರಾ ಉತ್ಸವದಲ್ಲಿ ನಂದಿ ಕಂಬ, ಡೊಳ್ಳು ಕುಣಿತ, ಪೂಜಾ ಕುಣಿತ, ಸೋಮನ ಕುಣಿತ, ಜಡೆ ಕೋಲಾಟ, ವೀರಗಾಸೆ, ತಮಟೆ, ಜಾಂಝ್ ಮೇಳ, ಗಿರವನ ಕುಣಿತ ಇತರ ಜಾನಪದ ಕಲಾ ತಂಡಗಳು ಭಾಗವಹಿಸಲಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ತಾಂತ್ರಿಕ ಸಮಾಲೋಚಕಿ ವಿದ್ಯಾ ತಿಳಿಸಿದ್ದಾರೆ. ಉತ್ಸವ ಸಾಗುವ ಮಾರ್ಗದ ಉದ್ದಕ್ಕೂ ಹಸಿರು ತೋರಣ ಮತ್ತು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗುತ್ತದೆ. ದಸರಾ ಉತ್ಸವಕ್ಕೆ ಚಾಲನೆ ನೀಡಲಾಗುವ ಕಿರಂಗೂರು ಬನ್ನಿ ಮಂಟಪದ ಬಳಿ 8 ಅಡಿ ಎತ್ತರದ ಲೋಹದ ಅಟ್ಟಣಿಗೆ ಸಿದ್ಧಗೊಳ್ಳುತ್ತಿದೆ. ಭಾನುವಾರ ಮಧ್ಯಾಹ್ನ 3ಕ್ಕೆ ಸಾಹಿತಿ ಡಾ.ಮರುಳಸಿದ್ದಪ್ಪ ಕಿರಂಗೂರು ಬನ್ನಿ ಮಂಟಪದ ಬಳಿ ದಸರಾ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಂ. ಕೃಷ್ಣಪ್ಪ, ಶಾಸಕ ರಮೇಶ ಬಂಡಿಸಿದ್ದೇಗೌಡ ಪಾಲ್ಗೊಳ್ಳಲಿದ್ದಾರೆ.

ಮಾರ್ಗ: ದಸರಾ ಉತ್ಸವವು ಕಿರಂಗೂರು, ಬಾಬುರಾಯನಕೊಪ್ಪಲು, ಬೆಂಗಳೂರು– ಮೈಸೂರು ಹೆದ್ದಾರಿಯ ಬಲ ಮಾರ್ಗ, ಕೋಟೆ ದ್ವಾರದ ಬಲ ಭಾಗದ ಮಾರ್ಗ (ಬೈಪಾಸ್‌ ರಸ್ತೆ) ಹಾಗೂ ರಾಜಬೀದಿ ಮೂಲಕ ಸಂಜೆ 6 ಗಂಟೆಗೆ ಶ್ರೀರಂಗ ವೇದಿಕೆಗೆ ಬರಲಿದೆ ಎಂದು ಡಿ.ವೈ.ಎಸ್‌.ಪಿ. ವಿಶ್ವನಾಥ್‌ ತಿಳಿಸಿದ್ದಾರೆ.

**

ದಸರಾ ಉತ್ಸವಕ್ಕೆ ಆನೆಗಳಿಲ್ಲ–ಡಿಸಿ

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಭಾನುವಾರ ಮಧ್ಯಾಹ್ನ ಆರಂಭವಾಗುವ ದಸರಾ ಉತ್ಸವಕ್ಕೆ ಆನೆಗಳು ಬರುತ್ತಿಲ್ಲ ಎಂದು ಜಿಲ್ಲಾಧಿಕಾರಿ ಎನ್‌. ಮಂಜುಶ್ರೀ ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ಸಂಜೆ ದಸರಾ ಉತ್ಸವದ ಅಂತಿಮ ಹಂತದ ಸಿದ್ಧತೆ ಪರಿಶೀಲಿಸಿದ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಈ ಮೊದಲು ಮೂರು ಆನೆಗಳನ್ನು ಇಲ್ಲಿನ ದಸರಾ ಉತ್ಸವಕ್ಕೆ ಕರೆಸಲು ಯೋಜಿಸಲಾಗಿತ್ತು. ಸೆ. 11ರಂದು ರಾಜ್ಯದ ಉಚ್ಚ ನ್ಯಾಯಾಲಯ ನೀಡಿರುವ ಆದೇಶದಂತೆ, ಮೈಸೂರು ದಸರಾ ಉತ್ಸವ, ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಹೊರತುಪಡಿಸಿ ಇತರ ಕಾರ್ಯಕ್ರಮಗಳಿಗೆ ಬಳಸುವಂತಿಲ್ಲ ಎಂದು ಅವರು ವಿವರಿಸಿದರು.

ಆನೆಗಳು ನಿಯಂತ್ರಣ ತಪ್ಪದಂತೆ ನೋಡಿಕೊಂಡರೆ ಅವುಗಳನ್ನು ಬಳಸಿಕೊಳ್ಳಬಹುದು ಎಂಬ ಅಂಶ ಕೂಡ ಈ ಆದೇಶದಲ್ಲಿದೆ. ಆದರೆ, ಇಲ್ಲಿಗೆ ಆನೆ ತರಿಸಲು ಪೊಲೀಸ್‌ ಇಲಾಖೆಯಿಂದ ಎನ್‌.ಒ.ಸಿ ಸಿಗಲಿಲ್ಲ. ಪಶುಪಾಲನಾ ಇಲಾಖೆಯೂ ಆನೆಗಳನ್ನು ನಿಯಂತ್ರಿಸುವ ಬಗ್ಗೆ ಭರವಸೆ ಕೊಡಲಿಲ್ಲ. ಹೀಗಾಗಿ ಉತ್ಸವಕ್ಕೆ ಆಕರ್ಷಕ ರಥ ಬಳಸಲಾಗುವುದು, ಉಳಿದಂತೆ ಕುದುರೆಗಳು, ಮೈಸೂರು ಬ್ಯಾಂಡ್‌, ಜನಪದ ಕಲಾತಂಡಗಳು ಉತ್ಸವದಲ್ಲಿ ಪಾಲ್ಗೊಳ್ಳಲಿವೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT