ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತ್ ಷಾ 'ಜನರಕ್ಷಾ ಯಾತ್ರೆ'ಯನ್ನು ಅರ್ಧದಲ್ಲೇ ಕೈ ಬಿಟ್ಟದ್ದು ಸ್ವಯಂ ರಕ್ಷಣೆಗಾಗಿ!

Last Updated 10 ಅಕ್ಟೋಬರ್ 2017, 7:45 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ಕಾರ್ಯಕರ್ತರನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಬಿಜೆಪಿ ಜನರಕ್ಷಾ ಯಾತ್ರೆ ಆರಂಭಿಸಿತ್ತು.  ಕಳೆದ ಮಂಗಳವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಹುಟ್ಟೂರಿನಿಂದಲೇ ಯಾತ್ರೆ ಆರಂಭವಾಗಿದ್ದು, ಈ ಯಾತ್ರೆಗೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಚಾಲನೆ ನೀಡಿದ್ದರು. ಆದರೆ ಜನರಕ್ಷಾ ಯಾತ್ರೆ ಪಿಣರಾಯಿ ತಲುಪುವ ಮುನ್ನವೇ ಅಮಿತ್ ಷಾ, ಯಾತ್ರೆಯನ್ನು ಕೈ ಬಿಟ್ಟು ದೆಹಲಿಗೆ ಹೊರಟುಹೋಗಿದ್ದರು. ಇದರಿಂದ ಬಿಜೆಪಿ ಸಾಕಷ್ಟು ಮುಜುಗರವನ್ನು ಅನುಭವಿಸಿತ್ತು.

ಅಂದಹಾಗೆ ಅಮಿತ್ ಷಾ, ಜನರಕ್ಷಾ ಯಾತ್ರೆಯನ್ನು ಕೈ ಬಿಟ್ಟು ತುರ್ತಾಗಿ ದೆಹಲಿಗೆ ಹೊರಟು ಹೋಗಿದ್ದು ಸ್ವಯಂ ರಕ್ಷಣೆಗಾಗಿ ಎಂದು ಮಲಯಾಳ ಮನೋರಮಾ ಪತ್ರಿಕೆ ವರದಿ ಮಾಡಿದೆ.

ತಮ್ಮ ಪುತ್ರ ಜಯ್ ಷಾ ಅವರ ಕಂಪೆನಿಯ 'ಪ್ರಗತಿ' ಬಗ್ಗೆ  ದಿ ವೈರ್ ಸುದ್ದಿ ಜಾಲತಾಣ ತನಿಖಾ ವರದಿಯೊಂದನ್ನು ತಯಾರಿಸಲು ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿ ಅಮಿತ್ ಷಾಗೆ ಸಿಕ್ಕಿತ್ತು. ದಿ ವೈರ್ ಸುದ್ದಿ ಜಾಲತಾಣವು ಜಯ್ ಷಾ ಅವರಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳಿತ್ತು. ಈ ರೀತಿಯ ಪ್ರಶ್ನೆಗಳನ್ನು ಎದುರಿಸಬೇಕಾಗಿ ಬಂದಾಗ ಜಯ್ ಷಾ ತಕ್ಷಣವೇ ಅಪ್ಪನಿಗೆ ಕರೆ ಮಾಡಿ ವಿಷಯವನ್ನು ತಿಳಿಸಿದ್ದರು. ಮಗನ ಕರೆ ಬಂದ ಕೂಡಲೇ ಅಮಿತ್ ಷಾ, ಪಿಣರಾಯಿಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ಬಿಟ್ಟು ದೆಹಲಿಗೆ ಹೋಗಿದ್ದಾರೆ. ಅಲ್ಲಿ ತಲುಪಿದ ಕೂಡಲೇ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ರವಿಶಂಕರ್ ಪ್ರಸಾದ್, ಪೀಯೂಷ್ ಗೋಯಲ್ ಜತೆ ಮಾತುಕತೆ ನಡೆಸಿದ್ದಾರೆ ಎಂದು ಪತ್ರಿಕೆ ತಮ್ಮ ವರದಿಯಲ್ಲಿ ಹೇಳಿದೆ.

2014ರಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ ಜಯ್ ಅಮಿತ್ ಷಾ ಅವರ ಕಂಪೆನಿಯ ವಹಿವಾಟಿನಲ್ಲಿ ಭಾರಿ ಪ್ರಮಾಣದ ಏರಿಕೆ ಆಗಿದೆ. ಜಯ್ ಅಕ್ರಮವಾಗಿ ಸಾಲಗಳನ್ನು ಪಡೆದಿದ್ದಾರೆ ಎಂದು ಜಾಲತಾಣದಲ್ಲಿ ಪ್ರಕಟವಾದ ವರದಿಯಲ್ಲಿ ಆರೋಪಿಸಲಾಗಿತ್ತು.  ವರದಿಯನ್ನು ಆಧರಿಸಿ ಜಯ್ ಷಾ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿದ್ದವು.

ಏತನ್ಮಧ್ಯೆ, 'ಜಯ್ ಅವರ ಕಂಪೆನಿ ಕಾನೂನುಬದ್ಧವಾಗಿಯೇ ವ್ಯವಹಾರ ಮತ್ತು ವಹಿವಾಟು ನಡೆಸಿದೆ. ಅವರು ತಮ್ಮ ಶ್ರಮದಿಂದ ಕಂಪೆನಿಯ ವಹಿವಾಟನ್ನು ಹೆಚ್ಚಿಸಿದ್ದಾರೆ. ಕಂಪೆನಿಯ ಆದಾಯಕ್ಕೆ ತೆರಿಗೆಯನ್ನೂ ಪಾವತಿಸಿದ್ದಾರೆ. ಅವರು ಯಾವುದೇ ಅಕ್ರಮ ವ್ಯವಹಾರ ಮಾಡಿಲ್ಲ’ ಎಂದು ಪೀಯೂಷ್ ಗೋಯಲ್ ಹೇಳಿಕೆ ನೀಡಿದ್ದರು.

ಷಾ ಬೆಂಬಲಕ್ಕೆ ನಿಂತ ಗೋಯಲ್


ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರ ಮಗ ಜಯ್ ಷಾ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರ ಉದ್ಯಮ ಪ್ರಗತಿ ನಡುವೆ ಹೋಲಿಕೆ ಮಾಡುವುದು ಸರಿಯಲ್ಲ. ರಾಬರ್ಟ್ ವಾದ್ರಾ ಅವರ ಡಿಎಲ್‌ಎಫ್ ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ಹರಿಯಾಣದಲ್ಲಿ ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರದ ಸಹಾಯ ಹಸ್ತವಿತ್ತು. ಆದರೆ ಜಯ್ ಷಾ ಅವರಿಗೆ ಸರ್ಕಾರಿಂದ ಯಾವುದೇ ರೀತಿಯ ಸಹಾಯವೂ ಲಭಿಸಿಲ್ಲ. ಹೊಸತಾಗಿ ಉದ್ಯಮ ಆರಂಭಿಸಿದರೆ ವರ್ಷಗಳು ಕಳೆದಂತೆ ಅಲ್ಲಿ ಅಭಿವೃದ್ಧಿ ಸಹಜ.
ಅಂದಹಾಗೆ ಕೆಲವು ನಾಯಕರ ಮಕ್ಕಳಿಗೆ ಆದಾಯ ಏನೂ ಇಲ್ಲದೇ ಇದ್ದರೂ ಅವರು ತಿಂಗಳುಗಟ್ಟಲೆ ವಿದೇಶ ಪ್ರವಾಸ ಮಾಡುತ್ತಿರುವುದರ ಬಗ್ಗೆ, ಅವರ ಆರ್ಥಿಕ ಮೂಲಗಳ ಬಗ್ಗೆ ಯಾವುದೇ ಮಾಧ್ಯಮಗಳು ತನಿಖೆ ನಡೆಸುತ್ತಿಲ್ಲ ಎಂದು ಗೋಯಲ್ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಟಾಂಗ್ ನೀಡಿದ್ದರು.

ಜಯ್‌ ಷಾ  ಬಗ್ಗೆ ವರದಿ ಪ್ರಕಟವಾದ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಸಚಿವ ಪಿಯೂಷ್‌ ಗೋಯಲ್‌, ‘ದಿ ವೈರ್‌ ಸುದ್ದಿತಾಣವು ನಮ್ಮ ಮುಖಂಡ ಅಮಿತ್‌ ಷಾ ಹಾಗೂ ಅವರ ಪುತ್ರ ಜಯ್‌ ಷಾ ಅವರ ಮಾನ ಹಾನಿ ಉದ್ದೇಶದಿಂದಲೇ ಈ ವರದಿ ಪ್ರಕಟಿಸಿದೆ. ಇದು ಸಂಪೂರ್ಣ ಸುಳ್ಳು ವರದಿ. ಈ ವರದಿಗೆ ಆಧಾರವಿಲ್ಲ’ ಎಂದಿದ್ದರು.

[Related]

ಅಮಿತ್ ಷಾಗೆ ಇದೆ ಬಿಜೆಪಿ ನಾಯಕರ ಬೆಂಬಲ
ಭ್ರಷ್ಟಾಚಾರದ ವಿಷಯ ಬಂತು ಎಂದಾದರೆ ಕ್ರಮ ತೆಗೆದುಕೊಳ್ಳಲು ತಾನು ಬದ್ಧ. ಈ ವಿಷಯದಲ್ಲಿ ತಾನು ಆಪ್ತರು, ಬಂಧುಗಳು ಎಂದು ನೋಡಲ್ಲ ಎಂದು ನರೇಂದ್ರ ಮೋದಿ ಬಿಜೆಪಿ ರಾಷ್ಟ್ರೀಯ ಕಾರ್ಯ ನಿರ್ವಾಹಕ ಸಮಿತಿ ಸಭೆಯಲ್ಲಿ ಹೇಳಿದ್ದರು. ಪ್ರಧಾನಿ ಹೀಗೆ ಹೇಳಿದ್ದರೂ ಯಾವುದೇ ಕಾರಣಕ್ಕೂ ಅವರು ಅಮಿತ್ ಷಾ ಅವರ ಕೈ ಬಿಡುವುದಿಲ್ಲ ಅಂತಾರೆ ಬಿಜೆಪಿ ನಾಯಕರು. ಈ ಹಿಂದೆ ಗಡ್ಕರಿ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಾಗ, ಗಡ್ಕರಿ ವಿರುದ್ಧ ಗುಡುಗಿದ್ದ ಅಡ್ವಾಣಿ, ಯಶ್ವಂತ್ ಸಿನ್ಹಾ, ರಾಂ ಜೇಠ್ಮಲಾನಿ ಮೊದಲಾದವರನ್ನು ಬಿಜೆಪಿ ಈಗಾಗಲೇ ದೂರವಿಟ್ಟಿರುವುದರಿಂದ ಅಮಿತ್ ಷಾ ವಿಷಯದಲ್ಲಿ ಬಿಜೆಪಿ ಒಗ್ಗಟ್ಟಾಗಿ ನಿಲ್ಲಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT