ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸಾಹತು ಕಥನದ ಹೊಸ ಚೌಕಟ್ಟು

ವಿಕ್ಟೋರಿಯಾ ಅಂಡ್ ಅಬ್ದುಲ್
Last Updated 12 ಅಕ್ಟೋಬರ್ 2017, 13:31 IST
ಅಕ್ಷರ ಗಾತ್ರ

ಸಿನಿಮಾ: ವಿಕ್ಟೋರಿಯಾ ಅಂಡ್ ಅಬ್ದುಲ್

ಕಥೆ: ಶರಬಾನಿ ಬಸು

ನಿರ್ಮಾಣ: ಬಿಬಿಸಿ ಫಿಲ್ಮ್ಸ್‌

ನಿರ್ದೇಶಕ: ಸ್ಟೀಫನ್ ಫ್ರಿಯರ್ಸ್

ತಾರಾಗಣ: ಜೂಡಿ ಡೆಂಚ್ (ವಿಕ್ಟೋರಿಯಾ), ಆಲಿ ಫಜಲ್ (ಅಬ್ದುಲ್)

* * *

'ಅಮ್ಮಾ ನೀನು ಅವನನ್ನ ತಲೆ ಮೇಲೆ ಕೂಡಿಸಿಕೊಳ್ತಿದ್ದಿ. ಅವನು ಅದನ್ನ ದುರುಪಯೋಗ ಮಾಡ್ಕೊಳ್ತಾನೆ'

'ಇಷ್ಟು ದಿನ ನೀವು ಮಾಡಿದ್ದೇನು? ನಿಮಗಿಂತ ಅವನು ಹೇಗೆ ಭಿನ್ನವಾಗಿರಲು ಸಾಧ್ಯ?'

'ವಿಕ್ಟೋರಿಯಾ ಅಂಡ್ ಅಬ್ದುಲ್' ಚಿತ್ರದಲ್ಲಿ ಬ್ರಿಟನ್‌ನ ರಾಣಿ ವಿಕ್ಟೋರಿಯಾ ಮತ್ತು ಆಕೆಯ ಮಗನ ನಡುವೆ ನಡೆಯುವ ಸಂಭಾಷಣೆ ಇದು. ಇವು ಇಡೀ ಚಿತ್ರದ ಆಶಯ ಬಿಂಬಿಸುವ ಸಾಲುಗಳೂ ಹೌದು.

ಇತಿಹಾಸದ ತುಣುಕುಗಳನ್ನು ಆಧರಿಸಿ ಸಿನಿಮಾ ಹೆಣೆಯುವುದು ಸುಲಭದ ಸವಾಲಲ್ಲ. ಕಳೆದ ಶತಮಾನದ ಆರಂಭದಲ್ಲಿ ನಡೆದ ಘಟನೆಗಳನ್ನು ಸಿನಿಮಾವೊಂದಕ್ಕೆ ವಸ್ತುವಾಗಿಸಿಕೊಂಡಾಗ ಸತ್ಯದರ್ಶನದ ಸವಾಲಿನೊಂದಿಗೆ ನೆನಪು ಮತ್ತು ಭಾವನೆಗಳ ತಾಕಲಾಟಗಳೂ ಇರುತ್ತವೆ. ಈ ಎಲ್ಲ ಸವಾಲುಗಳನ್ನು ಮುಕ್ತವಾಗಿ ಎದುರುಗೊಂಡಿರುವ ನಿರ್ದೇಶಕ ಸ್ಟೀಫನ್ ಫ್ರಿಯರ್ಸ್ ಬ್ರಿಟನ್‌ನ ಭೌಗೋಳಿಕ ವೈಪರೀತ್ಯಗಳ ಜೊತೆಗೆ ಲಂಡನ್‌ ಎನ್ನುವ ಜಗತ್ತಿನ ಅಧಿಕಾರ ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದವರ ಮನಸ್ಥಿತಿಗಳಿಗೆ ಕನ್ನಡಿ ಹಿಡಿಯುವಲ್ಲಿಯೂ ಯಶಸ್ವಿಯಾಗಿದ್ದಾರೆ.

ಭಾರತದ ಜೈಲಿನಲ್ಲಿ ಲೆಕ್ಕ ಬರೆಯುವ ಕಾರಕೂನ ಅಬ್ದುಲ್, ದೂರದ ಬ್ರಿಟನ್‌ನಲ್ಲಿ ಕುಳಿತಿರುವ ರಾಣಿ ವಿಕ್ಟೋರಿಯಾಗೆ ಕಾಣಿಕೆಯೊಂದನ್ನು ನೀಡಲೆಂದು ಲಂಡನ್‌ಗೆ ತೆರಳುತ್ತಾನೆ. ಜಾಣತನ ಮತ್ತು ಒಳ್ಳೆಯತನದಿಂದ ರಾಣಿಯ ಮನಗೆದ್ದು ಉರ್ದು ಕಲಿಸುವ ಮುನ್ಷಿ (ಶಿಕ್ಷಕ) ಆಗುತ್ತಾನೆ. ಸೂರ್ಯ ಮುಳುಗದ ಸಾಮ್ರಾಜ್ಯ ಆಳುವ ರಾಣಿಯು ಓರ್ವ ಯಕಃಶ್ಚಿತ್ ಸೇವಕನಿಗೆ ನೀಡುವ ಪ್ರಾಮುಖ್ಯ ರಾಣಿಯ ಅರಮನೆ ಸಿಬ್ಬಂದಿ ಆಸ್ಥಾನದ ಅಧಿಕಾರಿಗಳನ್ನು ಕಂಗೆಡಿಸುತ್ತದೆ. ವಿರೋಧ ಹೆಚ್ಚಾಗಿ ಸಾಮೂಹಿಕ ರಾಜೀನಾಮೆಯ ನಿರ್ಧಾರ ಘೋಷಣೆಯಾದಾಗ ರಾಣಿಯೂ ವಿಚಲಿತಳಾಗುತ್ತಾಳೆ.

ಆಸ್ಥಾನದ ವಿರೋಧಗಳನ್ನು ರಾಣಿ ಹೇಗೆ ಎದುರಿಸಿದಳು? ರಾಣಿ ಸತ್ತು ಹೋದ ನಂತರ ಅಬ್ದುಲ್ ಕರೀಮ್‌ನ ಸ್ಥಿತಿ ಏನಾಯಿತು? ಎನ್ನುವುದು ಚಿತ್ರ ನೋಡಿಯೇ ತಣಿಯಬೇಕಾದ ಕುತೂಹಲ.

ಮೈದಾನ ಪ್ರದೇಶದಲ್ಲಿ ತುಂಬಿ ಹರಿಯುವ ಗಂಗಾನದಿಯಂತೆ ಸಿನಿಮಾದ ಓಟವೂ ನಿಧಾನ, ಪ್ರಶಾಂತ. ಬ್ರಿಟನ್‌ನ ಪ್ರಾಕೃತಿಕ ಸೊಬಗು, ಹಸಿರು, ಮಂಜು, ಮಳೆ ಸಹ ಡ್ಯಾನಿ ಕೊಹೆನ್ ಅವರ ಕ್ಯಾಮೆರಾ ಕೈಚಳಕದಲ್ಲಿ ಕಥೆಯ ಭಾಗವೇ ಆಗಿಬಿಡುತ್ತವೆ. ಚಿತ್ರದ ಬಹುತೇಕ ಶಾಟ್‌ಗಳನ್ನು ವೈಡ್ ಆ್ಯಂಗಲ್‌ನಲ್ಲಿ ಕಂಪೋಸ್ ಮಾಡಿರುವುದರ ಹಿಂದೆ ಎರಡು ದೇಶಗಳ ಬಹುಕಾಲದ ಕಥೆ ಹೇಳುವ ಆಶಯವೂ ಇರಬಹುದು. ಡ್ಯಾನಿ ಕೊಹೆನ್ ಸಂಗೀತದಲ್ಲಿ ಮಾಧುರ್ಯಕ್ಕೇ ಪ್ರಾಧಾನ್ಯ.

ದೀರ್ಘಾವಧಿ ಅಧಿಕಾರದಲ್ಲಿದ್ದ, ಅದೇ ಕಾರಣಕ್ಕೆ ದಾಖಲೆಯೂ ಆದಾಕೆ ರಾಣಿ ವಿಕ್ಟೋರಿಯಾ. ಅಧಿಕಾರ ಸೂತ್ರ ಹಿಡಿದಿದ್ದ ಈ ರಾಣಿ ಬ್ರಿಟಿಷರ ವಸಾಹತು ವಿಸ್ತರಣೆಯ ಕ್ರೌರ್ಯಕ್ಕೂ ಹೊಣೆಯಾದಾಕೆ. ಅಂಥ ಯಾವ ಎಳೆಯೂ ಚಿತ್ರದಲ್ಲಿ ಸೋಕಿಲ್ಲ. ರಾಣಿ ವಿಕ್ಟೋರಿಯಾಳನ್ನು ಔದಾರ್ಯದ ಮೂರ್ತಿಯೆಂಬಂತೆ ಬಿಂಬಿಸುವ ತರಾತುರಿಯಲ್ಲಿ ಸುತ್ತಲಿದ್ದವರನ್ನು ಮಹಾನ್ ದುಷ್ಟರೆಂಬಂತೆ ಚಿತ್ರಿಸಲಾಗಿದೆ. ಮೌನದಲ್ಲಿ ಕರಗುವ ಅಬ್ದುಲ್‌ನ ನೋವಿಗೂ ಬೆಲೆ ಸಿಕ್ಕಿಲ್ಲ.

ರಾಣಿ ವಿಕ್ಟೋರಿಯಾಳ ಆಳದಲ್ಲೆಲ್ಲೋ ಇದ್ದಿರಬಹುದಾದ, ಒಳಿತನ್ನು ಬೆಳಗುವ ದೀಪವಾಗುವ ಅಬ್ದುಲ್‌ಗೆ ಮಾತ್ರ ಕೊನೆಯವರೆಗೂ ಅಸ್ತಿತ್ವವೆಂಬುದು ಮರೀಚಿಕೆಯೇ ಆಗಿ ಉಳಿಯುತ್ತದೆ. ಬಹುಶಃ ಇದು ಇಂದೂ ನಮ್ಮನ್ನು ಕಾಡುತ್ತಿರುವ ವಸಾಹತು ಮನಸ್ಥಿತಿಯ ದ್ವಂದ್ವ ಇರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT