ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾನ್ ‘ನವೆಂಬರ್ ಕ್ರಾಂತಿ’ಯ ಕುರಿತು ಜಾನ್‍ರೀಡ್ ಹೇಳುವ ಕಥನ

Last Updated 4 ನವೆಂಬರ್ 2017, 19:30 IST
ಅಕ್ಷರ ಗಾತ್ರ

‘ಅಂಥ ಮುಂಜಾವಿನಲಿ
ಬದುಕಿರುವುದೇ ಒಂದು ಸೊಗಸು
ಇನ್ನು ತರುಣನಾಗಿದ್ದಲ್ಲಿ
ಅದು ಸ್ವರ್ಗಸುಖವೇ!’

ಪ್ರೆಂಚ್‌ ಮಹಾಕ್ರಾಂತಿಯ ನಂತರ ಪ್ಯಾರಿಸ್ ನಗರಕ್ಕೆ ಭೇಟಿ ನೀಡಿದ ಮಹಾಕವಿ ವರ್ಡ್ಸ್‌ವರ್ಥ್‌ ನುಡಿದ ಮಾತುಗಳಿವು. ಎಲ್ಲ ತರುಣರ ಮನಸ್ಸೂ ಹಾಗೇ ಅಲ್ಲವೇ? ಹೊಸದರ ಅನ್ವೇಷಣೆ, ಸ್ವಾತಂತ್ರ್ಯದ ಅಪೇಕ್ಷೆ, ಸಮಾನತೆಯ ಅಭಿಲಾಷೆ, ಉಕ್ಕುವ ಉತ್ಸಾಹ.

ಕಳೆದ ಶತಮಾನದಲ್ಲಿ ಇಂಥ ಅನೇಕ ಯುವಕರು ಕಂಡು ಬಂದರು. ನ್ಯಾಯಕ್ಕಾಗಿ ಜಗತ್ತಿನ ಯಾವುದೇ ಭಾಗದ ರಣಾಂಗಣಕ್ಕೂ ಧುಮುಕುವ ಸಾಹಸಿಗಳು. ನೊಬೆಲ್ ಪ್ರಶಸ್ತಿ ವಿಜೇತ ಅಮೆರಿಕಾದ ಅರ್ನೆಸ್ಟ್ ಹೆಮಿಂಗ್‍ವೇ, ಖ್ಯಾತ ಚಿಂತಕ ಬರಹಗಾರ 29 ವರ್ಷಕ್ಕೆ ಹುತಾತ್ಮನಾದ ಇಂಗ್ಲೆಂಡಿನ ಕ್ರಿಸ್ಟೊಫರ್‌ ಕಾಡ್‍ವೆಲ್, ಹುತಾತ್ಮ ವಿಮರ್ಶಕ ರಾಲ್ಫ್‍ಫಾಕ್ಸ್ ಇವರೆಲ್ಲಾ ಸ್ಪೇನ್‍ನಲ್ಲಿ ಫ್ಯಾಸಿಸಂ ವಿರುದ್ಧ ಸೆಣೆಸಾಡಲು ಧಾವಿಸಿದರು. ಕೆನೆಡಾದ ಡಾ. ನಾರ್ಮನ್ ಬೆಥೂನ್, ಭಾರತದ ಡಾ. ಕೊಟ್ನಿಸ್ ಚೀನಾದ ಕ್ರಾಂತಿಯ ಸಂದರ್ಭದಲ್ಲಿ ಜೀವತ್ಯಾಗ ಮಾಡಿದರು. ಈ ಸಾಲಿಗೆ ಸೇರುವ ಅಮೆರಿಕಾದ ಮೇಧಾವಿ ಯುವ ಪತ್ರಕರ್ತ ಜಾನ್‍ರೀಡ್ ಈಗ ನೂರು ತುಂಬುತ್ತಿರುವ ರಷ್ಯಾದ ನವೆಂಬರ್ ಕ್ರಾಂತಿಯನ್ನು ದಾಖಲಿಸಲು 1917ರಲ್ಲಿ ಅಲ್ಲಿಗೆ ಧಾವಿಸಿದ. ಅವನ ‘ಟೆನ್ ಡೇಸ್ ದಟ್ ಶುಕ್ ದ ವರ್ಲ್ಡ್‌’ ಅತ್ಯುತ್ತಮ ವಸ್ತುನಿಷ್ಠ ವರದಿಗೂ, ಕಾವ್ಯಮಯ ಶೈಲಿಗೂ, ಜನಪರ ಧೋರಣೆಗೂ ಮಾದರಿಯಾಗಿದೆ. ಅದು ಹೀಗೆ ಆರಂಭವಾಗುತ್ತದೆ.

***

‘1917ರ ಮಾರ್ಚ್‍ನಲ್ಲಿ ಜಾರ್‌ ಚಕ್ರವರ್ತಿಯ ವಿರುದ್ಧದ ಕ್ರಾಂತಿ ಮುಗಿದಿತ್ತು. ಅದೇ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ನಾನು ಪೆತ್ರೋಗ್ರಾಡ್ ನಗರದಲ್ಲಿದ್ದೆ. ಆಗ ಪ್ರವಾಸಿಗರಾದ ವಿದೇಶಿ ಪ್ರೊಫೆಸರ್‌ ಒಬ್ಬರು ನನ್ನನ್ನು ಕಾಣಲು ಬಂದರು. ಕ್ರಾಂತಿ ನಿಧಾನವಾಗಿ ನಿಲುಗಡೆಗೆ ಬರುತ್ತಿದೆ ಎಂದು ಅವರು ವರ್ತಕರಿಂದಲೂ, ಬುದ್ಧಿಜೀವಿಗಳಿಂದಲೂ ಕೇಳಿದ್ದರು. ಆಮೇಲೆ ಅವರು ಕಾರ್ಖಾನೆಗಳಿದ್ದ, ರೈತ ಸಮುದಾಯವಿದ್ದ ಊರುಗಳಿಗೆ ಭೇಟಿ ಕೊಟ್ಟರು. ಅಲ್ಲಿ ನೋಡಿದರೆ ಕ್ರಾಂತಿ ವೇಗವಾಗಿ ಮುಂದೆ ಮುಂದೆ ಹೋಗುತ್ತಿದ್ದಂತೆ ಅವರಿಗೆ ತೋರಿತು. ಎಲ್ಲೆಡೆ ದುಡಿಯುವ ಜನ ‘ಎಲ್ಲ ಜಮೀನು ರೈತರಿಗೆ, ಎಲ್ಲಾ ಕಾರ್ಖಾನೆಗಳು ಕಾರ್ಮಿಕರಿಗೆ’ ಎಂದು ಮಾತನಾಡಿಕೊಳ್ಳುತ್ತಿದ್ದರು. ಪ್ರೊಫೆಸರೇನಾದರೂ ಸಮರಭೂಮಿಗೆ ಭೇಟಿ ಕೊಟ್ಟಿದ್ದರೆ ಯುದ್ಧದಿಂದ ಬೇಸತ್ತ ಸೈನಿಕರು ಶಾಂತಿಗಾಗಿ ಪರಿತಪಿಸುವುದನ್ನೂ ನೋಡಬಹುದಿತ್ತು. ಪ್ರೊಫೆಸರರಿಗೆ ಅಚ್ಚರಿ ಎನಿಸಿತು. ಆದರೆ ಎರಡು ಅಭಿಪ್ರಾಯಗಳೂ ಸತ್ಯವೇ ಆಗಿದ್ದವು. ಆಸ್ತಿವಂತ ವರ್ಗಗಳೆಲ್ಲಾ ಸಂಪ್ರದಾಯವಾದಿಗಳೂ, ಯಥಾಸ್ಥಿತಿವಾದಿಗಳೂ ಆಗುತ್ತಾ ಹೋಗುತ್ತಿದ್ದರೆ, ಜನಸಾಮಾನ್ಯರು ಹೆಚ್ಚು ಹೆಚ್ಚು ತೀವ್ರಗಾಮಿಗಳಾಗುತ್ತಿದ್ದರು...’

‘‘ಇಡಿಯ ರಷ್ಯಾ ಹೊಸ ಜಗತ್ತೊಂದನ್ನು ಗರ್ಭದಲ್ಲಿ ಹೊತ್ತು ಪ್ರಸವ ವೇದನೆಯನ್ನು ಅನುಭವಿಸುತ್ತಿರುವಂತಿತ್ತು. ನೌಕರ ಚಾಕರರನ್ನು ಇನ್ನು ಮುಂದೆ ಪ್ರಾಣಿಗಳಂತೆ ನಡೆಸಿಕೊಳ್ಳುವುದು ಸಾಧ್ಯವಿರಲಿಲ್ಲ ಹೋಟೆಲ್ ನೌಕರರೂ ಸಂಘಟಿತರಾಗಿದ್ದರು. ಸ್ವಾಭಿಮಾನದಿಂದ ನಾವು ‘ಟಿಪ್ಸ್ ಸ್ವೀಕರಿಸುವುದಿಲ್ಲ’ ಎಂಬ ಬೋರ್ಡ್‍ಗಳನ್ನು ಗೋಡೆಗೆ ಹಾಕಿಕೊಂಡಿದ್ದರು’’

“ರಷ್ಯಾ ಬದಲಾಗಲಾರಂಭಿಸಿತ್ತು. ಜನತೆ ರಾಜಕೀಯ, ಅರ್ಥಶಾಸ್ತ್ರ, ಚರಿತ್ರೆ ಎಲ್ಲವನ್ನೂ ಅಭ್ಯಸಿಸಿದರು... ಕಲಿಯಬೇಕೆಂಬ ಭಯಂಕರ ಹಸಿವಿಗೆ ಕ್ರಾಂತಿ ಅಭಿವ್ಯಕ್ತಿ ನೀಡಿತ್ತು. ಕಾದ ಮರಳಿನಲ್ಲಿ ನೀರು ಇಂಗಿಹೋಗುವಂತೆ ರಷ್ಯಾ ಈ ಸಾಹಿತ್ಯವನ್ನು ಹೀರಿಕೊಂಡಿತ್ತು. ಅವರು ಓದುತ್ತಿದ್ದದ್ದು ಗೊಡ್ಡುನೀತಿಕಥೆಯನ್ನಲ್ಲ, ವಿರೂಪಗೊಂಡ ಇತಿಹಾಸವನ್ನಲ್ಲ, ಜನತೆಯಲ್ಲಿ ಹೊಲಸನ್ನು ಹರಡುವ ಅಗ್ಗದ ಸಾಹಿತ್ಯವನ್ನಲ್ಲ, ಅವರು ಓದುತ್ತಿದ್ದದ್ದು ಸೈದ್ಧಾಂತಿಕ ವಿಷಯಗಳನ್ನು; ಟಾಲ್‍ಸ್ಟಾಯ್, ಗೊಗೊಲ್, ಗಾರ್ಕಿಯರನ್ನ”

“ಮತ್ತೆ ಎಲ್ಲೆಲ್ಲೂ ಭಾಷಣಗಳ ಸುರಿಮಳೆ. ಭಾಷಣ, ಚರ್ಚೆ, ಉಪನ್ಯಾಸ -ರಂಗಭೂಮಿಯಲ್ಲಿ, ಸರ್ಕಸ್‍ನಲ್ಲಿ, ಶಾಲೆ - ಕ್ಲಬ್ಬುಗಳಲ್ಲಿ, ಸೋವಿಯತ್ ಸಭೆಗಳಲ್ಲಿ, ರಣಾಂಗಣದಲ್ಲಿ, ಹಳ್ಳಿಗಳಲ್ಲಿ, ಕಾರ್ಖಾನೆಗಳಲ್ಲಿ, ಎಲ್ಲೆಡೆ ತೀವ್ರವಾದ ಮಾತುಕತೆ. ಎಲ್ಲಾ ಪಕ್ಷಗಳ ಭಾಷಣಕಾರರನ್ನೂ ಆಲಿಸಲು ಜನ ಸಾವಿರಗಟ್ಟಲೆ ಸೇರುತ್ತಿದ್ದರು. ಪೆತ್ರೋಗ್ರಾಡಿನ ಎಲ್ಲಾ ರಸ್ತೆ ಸೇರುವ ಮೂಲೆಗಳಲ್ಲಿ, ರೈಲುಗಳಲ್ಲಿ, ಬಸ್‍ಗಳಲ್ಲಿ ಅಲ್ಲಲ್ಲೇ ಹುಟ್ಟುತ್ತಿದ್ದ ವಾದವಿವಾದಗಳು...

ಕಡೆಗೂ ಕ್ರಾಂತಿಯ ದಿನ ಬಂತು. ನವೆಂಬರ್ 7ರಂದು ಪೆತ್ರೋಗ್ರಾಡಿನಲ್ಲಿ ವ್ಯಾಪಕ ಸಶಸ್ತ್ರ ಹೋರಾಟದ ಮೂಲಕ ರೈತ-ಕಾರ್ಮಿಕರು ರಾಜ್ಯಾಧಿಕಾರವನ್ನು ಕೈವಶ ಮಾಡಿಕೊಂಡರು. ದೊಡ್ಡ ಸಭಾಂಗಣದಲ್ಲಿ ಕ್ರಾಂತಿಕಾರಿ ಪ್ರತಿನಿಧಿಗಳೆಲ್ಲಾ ಸೇರಿದ್ದಾರೆ. ಈ ಐತಿಹಾಸಿಕ ಘಳಿಗೆಯನ್ನು ಭಾವುಕನಾಗಿ ಜಾನ್ ರೀಡ್ ಹೀಗೆ ದಾಖಲಿಸುತ್ತಾನೆ; ಸಮಯ ಎಂಟು ಘಂಟೆ ನಲವತ್ತು ನಿಮಿಷ.

ಲೆನಿನ್! ಮಹಾನ್ ಲೆನಿನ್‍ರೊಂದಿಗೆ ಅಧ್ಯಕ್ಷೀಯ ಮಂಡಳಿ ಪ್ರವೇಶಿಸುತ್ತಿದ್ದಂತೆ ಗುಡುಗಿನಂತಹ ಹರ್ಷೋದ್ಗಾರದ ಅಲೆಗಳು ಕಿವಿಗೆ ಅಪ್ಪಳಿಸಿದವು. ಎತ್ತರವಲ್ಲದ, ಅಗಲವಾದ ಗಟ್ಟಿ ದೇಹ, ಹೆಗಲ ಮೇಲೆ ದೊಡ್ಡದಾಗಿರುವ ತಲೆ, ಬೋಳಾಗಿ ಉಬ್ಬಿದಂತಿದೆ. ಸಣ್ಣ ಕಣ್ಣುಗಳು, ಮೊಂಡು ಮೂಗು, ಅಗಲವಾದ ಬಾಯಿ, ದೃಢವಾದ ಗಲ್ಲ. ಸದ್ಯಕ್ಕೆ ಮುಖಕ್ಷೌರವಾಗಿದ್ದರೂ, ಹಿಂದೆಯೂ ಮುಂದೂ ಖ್ಯಾತಿ ಪಡೆದ ಗಡ್ಡದ ಮೊಳಕೆಗಳು ಕಾಣತೊಡಗಿವೆ. ಬಟ್ಟೆಗಳು ಅಡ್ಡಾದಿಡ್ಡಿಯಾಗಿವೆ. ಪ್ಯಾಂಟು ಅವರಿಗೆ ಅತಿ ಉದ್ದ ಎನಿಸುವಂತಿದೆ. ಮೇಲ್ನೋಟಕ್ಕೆ ಕೂಡಲೇ ಛಾಪು ಮೂಡಿಸುವ ವ್ಯಕ್ತಿತ್ವ ಎನಿಸಿದ ಈತ ಜನ ಸಮುದಾಯದ ಆರಾಧ್ಯಮೂರ್ತಿ. ಚರಿತ್ರೆಯಲ್ಲಿ ಇಷ್ಟೊಂದು ಪ್ರೀತಿಗೂ, ಗೌರವಕ್ಕೂ ಕಾರಣರಾದ ನಾಯಕರು ಹೆಚ್ಚಿಲ್ಲ. ವಿಚಿತ್ರವಾಗಿ ಜನಪ್ರಿಯನಾದ ನಾಯಕ. ತನ್ನ ಅಸಾಧಾರಣ ಮೇಧಾಶಕ್ತಿಯಿಂದ ನಾಯಕರಾದವರು. ವರ್ಣರಂಜಿತ ವ್ಯಕ್ತಿತ್ವವಲ್ಲ. ಗಂಭೀರ, ರಾಜಿರಹಿತ, ನಿರ್ವಿಕಾರ, ಆದರೆ ಚಿತ್ತಾಕರ್ಷಕ ವ್ಯಕ್ತಿ. ಅದೇನೇ ಇರಲಿ, ಮೂರ್ತ ಸನ್ನಿವೇಶಗಳನ್ನು ಕರಾರುವಾಕ್ಕಾಗಿ ವಿಶ್ಲೇಷಿಸಬಲ್ಲ, ಪ್ರಗಾಢ ಚಿಂತನೆಗಳನ್ನು ಸರಳವಾಗಿ ಮುಂದಿಡಬಲ್ಲ ನಾಯಕ. ಮತ್ತು ಜಾಣತನದೊಂದಿಗೆ ಅಪಾರ ಬೌದ್ಧಿಕ ಧಾಷ್ಟ್ರ್ಯವಿರುವಾತ.

ಇದೀಗ ಲೆನಿನ್ ಮಾತನಾಡಲು ಬಂದರು. ತಮ್ಮ ಪುಟ್ಟ ಕಣ್ಣುಗಳನ್ನು ಮಿಟುಕಿಸುತ್ತಾ ಅವರು ಇಡಿಯ ಸಭಾಂಗಣವನ್ನು ದಿಟ್ಟಿಸಿನೋಡಿ, ಕಾಯುತ್ತಾ ನಿಂತರು. ಅನೇಕ ನಿಮಿಷಗಳ ಕಾಲ ಮುಂದುವರೆದ ದೀರ್ಘ ಕರತಾಡನದ ಪರಿವೆಯೇ ಇಲ್ಲದವರಂತೆ ಇದ್ದರು. ಕರತಾಡನ ಮುಗಿದ ಮೇಲೆ ಅವರು ನೇರವಾಗಿ ಸರಳವಾಗಿ ವಿಷಯಕ್ಕೆ ಬಂದರು. ‘‘ನಾವೀಗ ಸಮಾಜವಾದಿ ವ್ಯವಸ್ಥೆಯನ್ನು ನಿರ್ಮಿಸಲು ಪ್ರಾರಂಭ ಮಾಡೋಣ’’

...ಇದ್ದಕ್ಕಿದ್ದಂತೆ, ಏಕಕಾಲದಲ್ಲಿ ಹುಟ್ಟಿದ ಪ್ರೇರಣೆಯಿಂದ ನಾವೆಲ್ಲರೂ ನಿಂತು ನಯವಾಗಿ ಮೇಲೇಳುತ್ತಿದ್ದ ‘ಕಮ್ಯುನಿಸ್ಟ್ ಇಂಟರ್‍ನ್ಯಾಷನಲ್’ ಗೀತೆಯ ಸ್ವರಮೇಳದಲ್ಲಿ ತೊದಲುತ್ತಾ ಸೇರಿಕೊಂಡುಬಿಟ್ಟಿದ್ದೆವು. ಮುಖದಲ್ಲಿ ಬಿಳಿಕಪ್ಪು ಕಲೆಗಳಿದ್ದ ವೃದ್ಧ ಸೈನಿಕನೊಬ್ಬ ಮಗುವಿನಂತೆ ಬಿಕ್ಕುತ್ತಿದ್ದ. ಹೆಸರಾಂತ ಮಹಿಳಾ ನಾಯಕಿ, ಅಲೆಕ್ಸಾಂಡ್ರಾ ಕೊಲಂತಾಯ್ ತನ್ನ ಉಕ್ಕಿಬರುತ್ತಿದ್ದ ಕಣ್ಣೀರನ್ನು ತಡೆಯಲು ಒಂದೇ ಸಮನೆ ರೆಪ್ಪೆಗಳನ್ನು ಮುಚ್ಚಿ ತೆಗೆಯುತ್ತಿದ್ದಳು. ಅದರ ಉದ್ಘೋಷ ಸಭಾಂಗಣವನ್ನು ತುಂಬಿ, ಬಾಗಿಲು ಕಿಟಕಿಗಳನ್ನು ಸೀಳಿಕೊಂಡು ಹೊರಗಿನ ನಿಶ್ಶಬ್ದ ಆಕಾಶವನ್ನೇ ತುಂಬಿಬಿಟ್ಟಿತ್ತು. ಅದು ಮುಗಿದಾಗ ಒಂದು ರೀತಿಯ ಮುಜುಗರದ ಮೌನ ಆವರಿಸಿಕೊಂಡಿತ್ತು. ಇದ್ದಕ್ಕಿದ್ದಂತೆ ಹಿಂದುಗಡೆಯಿಂದ ಯಾರೋ ಕೂಗಿಕೊಂಡರು, ‘‘ಕಾಮ್ರೇಡ್ಸ್, ಸ್ವಾತಂತ್ರ್ಯಕ್ಕಾಗಿ ಮಡಿದವರನ್ನು ನೆನಪಿಗೆ ತಂದುಕೊಳ್ಳೋಣ.”

ಮಾರಣಾಂತಿಕ ಕದನದಲಿ ಕುಸಿದಿದ್ದೆ ನೀನು ಜನರ ಬಿಡುಗಡೆಗಾಗಿ, ಘನತೆಗಾಗಿ ವಿದಾಯ ಸೋದರನೆ ಗೋರಿ ಬಳಿ ಇದುವೆ ಸಂಕಲ್ಪ ಜನರ ಸ್ವಾತಂತ್ರ್ಯ ಸಂತಸಕೇ ನಮ್ಮ ಸಮರ... ರಾಜ್ಯಾಧಿಕಾರ ಕೈಗೆ ಬಂದ ಮೇಲೂ ಶ್ರೀಮಂತರ, ಮಧ್ಯಮವರ್ಗದವರ ಹಠಮಾರಿ ಪ್ರತಿರೋಧ ಉಳಿದೇ ಇತ್ತು. ಆದರೆ ವಿದ್ಯಾವಂತರಲ್ಲದಿದ್ದರೂ, ಮಾತಿನಲ್ಲಿ ಜಾಣರಲ್ಲದಿದ್ದರೂ, ರೈತ-ಕಾರ್ಮಿಕರು-ಸೈನಿಕರು ಅವರ ಪ್ರಚಾರಗಳನ್ನು ದೃಢವಾಗಿ ಎದುರಿಸುತ್ತಿದ್ದರು ಅಂತಹ ಒಂದು ಘಟನೆಯನ್ನು ರೀಡ್ ಹೀಗೆ ಹಾಸ್ಯಮಯವಾಗಿ ವರದಿ ಮಾಡುತ್ತಾನೆ.

ರೈಲ್ವೆ ನಿಲ್ದಾಣದ ದ್ವಾರದಲ್ಲಿ ಇಬ್ಬರು ಸೈನಿಕರು ನಿಂತಿದ್ದರು. ಅವರ ಸುತ್ತ ಸುಮಾರು ನೂರು ಜನ ಸೇರಿ ಅವರೊಂದಿಗೆ ವಾದಿಸುತ್ತ, ಬಯ್ಗುಳಗಳ ಸುರಿಮಳೆ ಮಾಡುತ್ತಿದ್ದರು. ದಾಳಿಯ ನೇತೃತ್ವ ವಹಿಸಿದ್ದವನು ಒಬ್ಬ ದುರಹಂಕಾರಿ ವಿದ್ಯಾರ್ಥಿ. ಅವನು ದರ್ಪದಿಂದ ಕೇಳಿದ, ‘‘ನಿಮ್ಮ ಸೋದರರ ಮೇಲೆ ಗುಂಡು ಹಾರಿಸುತ್ತಾ ನೀವು ದ್ರೋಹಿಗಳ, ಕೊಲೆಗಡುಕರ ಏಜೆಂಟರಾಗುತ್ತಿದ್ದೀರಿ ಎಂಬ ಅರಿವು ನಿಮಗಿದೆಯೇ?'' ಸೈನಿಕ ತುಂಬ ಪ್ರಾಮಾಣಿಕತೆಯಿಂದ, ಶ್ರದ್ಧೆಯಿಂದ ಉತ್ತರಿಸಿದ: ‘‘ನೋಡಣ್ಣ, ನಿನಗೆ ಅರ್ಥ ಆಗ್ತಿಲ್ಲ. ಇಲ್ಲಿ ಎರಡು ವರ್ಗಗಳಿವೆ.

ಬಂಡವಾಳಶಾಹಿ ಮತ್ತು ಕಾರ್ಮಿಕ ವರ್ಗ...’’ ಗರ್ವದಿಂದ ವಿದ್ಯಾರ್ಥಿ ಬಾಯಿ ಹಾಕಿದ: ‘‘ನಾನು ಮಾರ್ಕ್ಸ್‌ವಾದವನ್ನೇ ಓದ್ತಿರೋನು, ಹೇಳ್ತೀನಿ ಕೇಳು; ನಾನು ಬೋಲ್ಶೆವಿಕ್ ವಿರೋಧಿ. ಅವರು ರಷ್ಯಾನ, ಹಾಳುಮಾಡ್ತಾ ಇದಾರೆ. ಏನು ಹೇಳ್ತಿಯಾ ಅದಕ್ಕೇ?’’

ಸೈನಿಕ ತಲೆ ಕೆರೆದುಕೊಂಡು, ಬೌದ್ಧಿಕ ಕಸರತ್ತಿನಿಂದ ಸುಸ್ತಾದವನಂತೆ ನುಡಿದ ‘‘ನನಗನ್ನಿಸೋದು ವಿಷಯ ಸರಳವಾಗಿದೆ. ನಾನು ವಿದ್ಯಾವಂತ ಅಲ್ಲ ಬಿಡಿ. ಇರೋದು ಎರಡೇ ವರ್ಗಗಳು: ಬೂಶ್ರ್ವಾಗಳು, ಶ್ರಮಜೀವಿಗಳು’’ ‘‘ಮತ್ತೆ ಮಂತ್ರ ಹೇಳೋಕೆ ಶುರು ಮಾಡ್ದೇನೋ!’’ ಎಂದು ವಿದ್ಯಾರ್ಥಿ ಹತಾಶೆಯಿಂದ ಕಿರುಚಿಕೊಂಡ!.

ಕ್ರಾಂತಿಯ ಅವಧಿಯಲ್ಲಿ ಒಂದು ದಿನ ಮಡಿದ ನೂರಾರು ಕ್ರಾಂತಿಕಾರಿಗಳನ್ನು ಮಾಸ್ಕೋದ ಕ್ರೆಮ್ಲಿನ್ ಭವನದ ಬಳಿ ಮಣ್ಣು ಮಾಡಿದರು. ಆಗ ಧಾರ್ಮಿಕ ವಿಧಿಗಳನ್ನು ಪೂರೈಸಲು ಯಾವ ಪಾದ್ರಿಯೂ ಬರಲು ಒಪ್ಪಲಿಲ್ಲವಂತೆ. ಜಾನ್ ರೀಡ್ ಹಗಲೆನ್ನದೆ, ರಾತ್ರಿಯೆನ್ನದೆ ನಿದ್ದೆಗೆಟ್ಟು ಆ ಗಾಢ ಶೋಕದ ಸಂದರ್ಭವನ್ನು ವರದಿ ಮಾಡಲು ಅಲ್ಲೇ ಉಳಿದು ಬಿಟ್ಟ. ಅವನು ಕಂಡದ್ದನ್ನು ಅವನ ಬಾಯಲ್ಲೇ ಕೇಳೋಣ.

ಮೆರವಣಿಗೆಯಲ್ಲಿ ಬಂದವರು ಸಮಾಧಿಯನ್ನು ತಲುಪಿದರು. ಶವದ ಪೆಟ್ಟಿಗೆಗಳನ್ನು ಹೊತ್ತವರು ಹಳ್ಳದಲ್ಲಿ ಇಳಿದರು. ಅವರಲ್ಲಿ ಅನೇಕರು ಗಟ್ಟಿಮುಟ್ಟಾಗಿದ್ದ ದುಡಿಯುವ ವರ್ಗದ ಹೆಂಗಸರು. ಸತ್ತವರ ಹಿಂದೆ ಇನ್ನೂ ಅನೇಕ ಹೆಂಗಸರು ಬಂದರು. ತರುಣಿಯರು, ದುಃಖತಪ್ತರು, ವಯಸ್ಸಾಗಿ ಚರ್ಮ ಸುಕ್ಕುಗಟ್ಟಿದ ಅಜ್ಜಿಯರು, ಗಾಯಗೊಂಡ ಮೂಕಪ್ರಾಣಿಗಳಂತೆ ಸದ್ದು ಮಾಡುತ್ತಾ ತಮ್ಮ ಮಕ್ಕಳನ್ನೋ ಗಂಡಂದಿರನ್ನೋ ಅನುಸರಿಸಿ ‘ಸೋದರರ ಸಮಾಧಿ’ಗೆ ಬಂದವರು. ಸಹಾನುಭೂತಿಯ ಕೈಗಳು ಅವರನ್ನು ಸಮಾಧಾನ ಮಾಡಲೆತ್ನಿಸಿದಾಗ ಗೊಳೋ ಎಂದು ಅತ್ತರು.

ಬಡವರು ಒಬ್ಬರನ್ನೊಬ್ಬರು ಪ್ರೀತಿಸುವುದು ಹಾಗೆಯೇ! ...ನನಗೆ ಇದ್ದಕ್ಕಿದ್ದಂತೆ ಅನ್ನಿಸಿತು, ಇನ್ನು ಧರ್ಮಭೀರು ರಷ್ಯನ್ನರಿಗೆ ಸ್ವರ್ಗಕ್ಕೆ ಕಳಿಸಿಕೊಡಲು ಪಾದ್ರಿಗಳ ಅವಶ್ಯಕತೆ ಇಲ್ಲ. ಯಾವುದೇ ಸ್ವರ್ಗಕ್ಕಿಂತ ಉಜ್ವಲವಾದ ಸಾಮ್ರಾಜ್ಯವನ್ನು ಅವರು ಭೂಮಿಯ ಮೇಲೆಯೇ ಕಟ್ಟುತ್ತಿದ್ದಾರೆ ಮತ್ತು ಅದಕ್ಕಾಗಿ ಪ್ರಾಣಕೊಡುವುದೇ ಭವ್ಯವಾದದ್ದು, ದಿವ್ಯವಾದದ್ದು...!

ಕ್ರಾಂತಿಯ ಕೊನೆಯಲ್ಲಿ ಬೃಹತ್ ರೈತ ಸಮಾವೇಶವೊಂದು ನಡೆಯಿತು. ಅದೊಂದು ವಿಜಯೋತ್ಸವ. ಅಂದಿನ ರೈತ-ಕಾರ್ಮಿಕರ ಭಾವನೆಗಳನ್ನು ರೀಡ್ ಕಾವ್ಯಮಯವಾಗಿ ವರ್ಣಿಸುವುದು ಹೀಗೆ;

ಯಾರೋ ಎಲ್ಲಿಂದಲೋ ದೀವಟಿಗೆಗಳನ್ನು ಹೊತ್ತಿಸಿ ತಂದರು. ಕಿತ್ತಳೆ ಬಣ್ಣದ ಜ್ವಾಲೆಯ ಪಂಜುಗಳ ಚೆಲುವು, ಹಿಮದಗಡ್ಡೆಯ ಮೇಲೆ ಪ್ರತಿಫಲಿಸುತ್ತಾ ನೂರ್ಮಡಿ ಹೆಚ್ಚಾಯಿತು. ಮೆರವಣಿಗೆ ಹೊರಟಂತೆ, ಜನ ಅಚ್ಚರಿಯಿಂದ ಅವರನ್ನು ನೋಡುತ್ತಿದ್ದರು. ಘೋಷಣೆಗಳು ಮೊಳಗುತ್ತಲೇ ಇದ್ದವು; ``ಕ್ರಾಂತಿಕಾರಿ ಸೈನ್ಯ ಚಿರಾಯುವಾಗಲಿ! ರೆಡ್‍ಗಾರ್ಡ್ ಚಿರಾಯುವಾಗಲಿ! ರೈತರು ಚಿರಾಯುವಾಗಲಿ!’’

ಮಹಾ ಮೆರವಣಿಗೆ ನಗರದುದ್ದಕ್ಕೂ ನಡೆಯುತ್ತಾ ಹೋದಂತೆ ದಾರಿಯಲ್ಲಿ ಇನ್ನಷ್ಟು ಚಿನ್ನದ ಅಕ್ಷರವಿರುವ ಕೆಂಪು ಪತಾಕೆಗಳು ಸೇರಿಕೊಂಡವು. ಇಬ್ಬರು ವಯಸ್ಸಾದ ರೈತರು ಮಾತಾಡಿಕೊಳ್ಳುತ್ತಾ ಹೋಗುತ್ತಿದ್ದರು. ಕೈ ಕೈ ಹಿಡಿದು ಸಾಗುತ್ತಿದ್ದ ಅವರ ಮುಖದಲ್ಲಿ ಶಿಶುಸಹಜ ಸಂತಸ ತುಂಬಿ ತುಳುಕುತ್ತಿತ್ತು.

‘‘ಇನ್ನು ನಮ್ಮ ಭೂಮಿಯನ್ನು ಶ್ರೀಮಂತರು ಕಸಿದುಕೊಳ್ಳಲಿ ನೋಡೋಣ!’’ ಇನ್ನೊಬ್ಬ ರೈತ ಈಗ ಮಾತಾಡಿದ: ‘‘ನನಗೆ ಸುಸ್ತೇ ಆಗ್ತಿಲ್ಲ. ಗಾಳಿಯಲ್ಲಿ ನಡೀತಾ ಇದೀನಿ ಅನ್ನಿಸ್ತಾ ಇದೆ.’’ ...ಕ್ಷಿತಿಜದಲ್ಲಿ ರಾಜಧಾನಿಯ ದೀಪಗಳು ಮಿನುಗುತ್ತಿದ್ದವು. ಖಾಲಿ ಮೈದಾನದ ಮೇಲೆ ಮುತ್ತುರತ್ನಗಳನ್ನು ಸುರಿದ ಹಾಗಿತ್ತು. ರಾತ್ರಿಯಲ್ಲಿ ನಗರ ಬಲು ಚೆನ್ನ.

ಗಾಡಿ ಓಡಿಸುವ ವಯಸ್ಸಾದ ಕಾರ್ಮಿಕ ಇಡೀ ರಾಜಧಾನಿಯತ್ತ ಕೈ ಬೀಸಿ ಹೇಳಿದ:

“ನನ್ನದು. ಎಲ್ಲವೂ ನನ್ನದು. ನನ್ನ ಪೆತ್ರೋಗ್ರಾಡ್!” ಅವನ ಮುಖ ಆನಂದದಿಂದ ಬೆಳಗುತ್ತಿತ್ತು. ಅಮೆರಿಕಕ್ಕೆ ಹಿಂದಿರುಗಿದ ಜಾನ್ ರೀಡ್, ಕ್ರಾಂತಿಯ ಬಗ್ಗೆ ಸೊಗಸಾದ ಪುಸ್ತಕವನ್ನು ಬರೆದ. ನಂತರ ಸೋವಿಯತ್ ಒಕ್ಕೂಟವನ್ನು ನೋಡಲು ಬಂದವನು ಟೈಫಾಯ್ಡ್ ರೋಗದಿಂದ ತೀರಿಕೊಂಡ. ಅವನ ಪ್ರೀತಿಯ ಸಮಾಜವಾದಿ ವ್ಯವಸ್ಧೆ ಇಂದು ಬಿದ್ದು ಹೋಗಿದೆ. ‘ಸಮಾಜವಾದ ಕೇವಲ ಆದರ್ಶ, ಎಲ್ಲಾ ಸಮಾಜವಾದಿಗಳೂ ಭೂಮಿಯ ಮೇಲಿಲ್ಲದೆ ಗಾಳಿಯಲ್ಲಿ ತೇಲುವ ಜನ, ರಷ್ಯಾದ ಸಮಾಜವಾದ ಒಂದು ವಿಫಲಪ್ರಯೋಗ’ ಎಂದು ವಾದಿಸುವ ಜನರಿದ್ದಾರೆ. ಇಂಥ ಸಂದರ್ಭದಲ್ಲಿ ಜಾಣನಾದ ರೀಡ್ ಬದುಕಿದ್ದರೆ ಹೀಗೆ ವಾದಿಸುತ್ತಿದ್ದನೇನೊ;

‘‘ಆದರೆ ರೈಟ್ ಸೋದರರು ಹಾರಲೆತ್ನಿಸಿದರು. ಪ್ರಾಯೋಗಿಕ ವಿಮಾನಗಳು ಮುರಿದು ಹೋದವು. ಸಂಪ್ರದಾಯವಾದಿಗಳು ಅವರನ್ನು ನೋಡಿ ನಕ್ಕರು. ಮೊದಲ ಬಾರಿ ಅವರು ಕೇವಲ 120 ಅಡಿ ಹಾರಿದ್ದರು, ಕೇವಲ 12 ಸೆಕೆಂಡ್ ಗಾಳಿಯಲ್ಲಿದ್ದರು. ವಿಜ್ಞಾನ ವಿರೋಧಿಗಳು ಅವರನ್ನು ಕೆಳಗೆ ಬಿದ್ದಿದ್ದಕ್ಕೆ, ವಿಮಾನಕ್ಕೂ ದೇಹಕ್ಕೂ ಪೆಟ್ಟಾದದ್ದಕ್ಕೆ ಹಾಸ್ಯ ಮಾಡುತ್ತಾ ಹೋದರು. ಆದರೆ ರೈಟ್ ಸೋದರರು ಯೋಚಿಸಿದರು, `ನಾವು ಹನ್ನೆರಡು ಸೆಕೆಂಡ್ ಗಾಳಿಯಲ್ಲಿ ಇದ್ದುದ್ದು ಹೇಗೆ, ಬಿದ್ದದ್ದು ಏಕೆ ಎಂದು ಅರ್ಥಮಾಡಿಕೊಂಡರೆ ಒಂದು ದಿನ, ಹನ್ನೆರಡು ನೂರು ಕಿಲೋಮೀಟರ್ ಕ್ರಮಿಸಬಲ್ಲ, ಹನ್ನೆರಡು ತಾಸು ಹಾರಬಲ್ಲ ವಿಮಾನವನ್ನು ತಯಾರಿಸಬಲ್ಲೆವು.‘ ವಿಜ್ಞಾನ ಹಿನ್ನಡೆಗಳಿಂದ ಕಲಿಯುತ್ತದೆ.
ನಾವು ಇಂದು ಅಷ್ಟೇ ಧನಾತ್ಮಕವಾಗಿ, ವೈಜ್ಞಾನಿಕವಾಗಿ ಯೋಚಿಸಬೇಕಾಗಿದೆ. ಒಂದು ವ್ಯವಸ್ಥೆ 74 ವರ್ಷ ಅಭೂತಪೂರ್ವ ಸಾಧನೆ ಮಾಡಿದ್ದು ಸತ್ಯವಾದರೆ, ಅದನ್ನು ಶತಮಾನಗಳ ಕಾಲ ಉಳಿಯಬಲ್ಲ, ಇನ್ನೂ ಮುಂದಕ್ಕೆ ವಿಕಸನವಾಗಬಲ್ಲ ವ್ಯವಸ್ಥೆಯನ್ನಾಗಿ ರೂಪಿಸುವುದು ಹೇಗೆ ? ಅದು ಕೆಳಗುರುಳಲು ಕಾರಣಗಳಾದರೂ ಯಾವುವು, ಮುಂದಿನ ಪ್ರಯೋಗದಲ್ಲಿ ಅದನ್ನು ನಿವಾರಿಸುವುದು ಹೇಗೆ?’’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT