ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಲಯಗಳಲ್ಲಿ ಮನೆಮಾಡಿದ ಮೌನ

Last Updated 8 ನವೆಂಬರ್ 2017, 10:10 IST
ಅಕ್ಷರ ಗಾತ್ರ

ಯಾದಗಿರಿ: ಅಲ್ಲಿ ವಕೀಲರ ಸದ್ದುಗದ್ದಲ ಇಲ್ಲ. ಕ್ಷಕಿದಾರರ ಚರ್ಚೆಗಳಿಲ್ಲ. ನೀರವ ಮೌನ ಆವರಣ ತುಂಬಿದ್ದು, ನ್ಯಾಯಾಲಯಗಳು ಬಿಕೋ ಎನ್ನುತ್ತಿವೆ. ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್, ಸಿಜೆಎಂ, ಜೆ.ಎಂ.ಎಫ್‌, ಹೆಚ್ಚುವರಿ ಜೆ.ಎಂ.ಎಫ್‌ ನ್ಯಾಯಾಲಯಗಳು ನಿತ್ಯ ಕದ ತೆರೆಯುತ್ತವೆ. ನ್ಯಾಯಾಧೀಶರು ಸಮಯಕ್ಕೆ ಸರಿಯಾಗಿ ಹಾಜರಾಗುತ್ತಾರೆ.

ಪ್ರಕರಣಗಳ ವಿಚಾರಣೆಗೆ ನ್ಯಾಯಾಧೀಶರಿಂದ ಅನುಮತಿ ಸಿಗುತ್ತದೆ. ಆದರೆ, ಕಲಾಪ ನಡೆಸಲು ಅಲ್ಲಿ ವಕೀಲರಿಲ್ಲ. ಹಾಗಾಗಿ, ಅಪರಾಧ ಪ್ರಕರಣಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ಸಾಮಾನ್ಯ ಪ್ರಕರಣಗಳನ್ನು ನ್ಯಾಯಾಧೀಶರೇ ವಿಚಾರಣೆ ನಡೆಸುತ್ತಿದ್ದಾರೆ. ಇದರಿಂದಾಗಿ ಸಣ್ಣಪುಟ್ಟ ಪ್ರಕರಣಗಳಡಿ ಬಂಧನ ಕ್ಕೊಳಗಾದವರನ್ನು ನ್ಯಾಯಾಧೀಶರು ಪೊಲೀಸರ ವಶಕ್ಕೆ ಒಪ್ಪಿಸುತ್ತಿದ್ದಾರೆ. ಇದರಿಂದ ಪೊಲೀಸರೂ ಕಿರಿಕಿರಿ ಅನುಭವಿಸುವಂತಾಗಿದೆ.

‘ಇತ್ತ ಜಿಲ್ಲೆಯ ವಕೀಲರು ಆರಂಭಿಸಿರುವ ಅನಿರ್ದಿಷ್ಟ ಧರಣಿ ಒಂದು ವಾರ ಪೂರೈಸಿದರೂ, ವಕೀಲರ ಬೇಡಿಕೆಯಂತೆ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಜಿಲ್ಲಾಡಳಿತ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಹಗಲು–ರಾತ್ರಿ ವಕೀಲರು ಧರಣಿ ನಡೆಸುತ್ತಿದ್ದರೂ ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ವಕೀಲರತ್ತ ತಿರುಗಿಯೂ ನೋಡಿಲ್ಲ. ಜಿಲ್ಲಾಧಿಕಾರಿ ಕನಿಷ್ಠ ಪ್ರಾದೇಶಿಕ ಆಯುಕ್ತರಿಗೂ ವಿಷಯ ಮುಟ್ಟಿಸಿಲ್ಲ.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಿಲ್ಲೆಯ ವಕೀಲರಿಗೆ ಸುಸಜ್ಜಿತ ನ್ಯಾಯಾಲಯ ದೊರಕದಂತಾಗಿದೆ’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಭೀಮರಾಯ ಕಿಲ್ಲನಕೇರಾ ಅಸಮಾಧಾನ ವ್ಯಕ್ತಪಡಿಸಿದರು.

400ಕ್ಕೂ ಹೆಚ್ಚು ಪ್ರಕರಣಗಳ ವಿಚಾರಣೆ: ‘ನಗರದಲ್ಲಿ ಒಟ್ಟು 200ಕ್ಕೂ ಹೆಚ್ಚು ವೃತ್ತಿಪರ ವಕೀಲರು ನ್ಯಾಯಾಲಯ ಕಲಾಪಗಳಲ್ಲಿ ನಿತ್ಯ ಪಾಲ್ಗೊಳ್ಳುತ್ತಾರೆ. ನಾಲ್ಕು ನ್ಯಾಯಾಲಯಗಳು ಸೇರಿದಂತೆ ಪ್ರತಿದಿನ ಕನಿಷ್ಠ 400ಕ್ಕೂ ಹೆಚ್ಚು ಪ್ರಕರಣಗಳ ವಿಚಾರಣೆ ನಡೆಯುತ್ತದೆ. ನಿತ್ಯ ಕನಿಷ್ಠ 6ಕ್ಕೂ ಹೆಚ್ಚು ಅಂತಿಮ ತೀರ್ಪುಗಳು ಹೊರಬೀಳುತ್ತವೆ’ ಎಂದು ಕಿಲ್ಲನಕೇರಾ ಮಾಹಿತಿ ನೀಡಿದರು.

ಸಿಗದ ಜಾಮೀನು: ನ. 2ರಿಂದ ಕೋರ್ಟ್ ಕಲಾಪ ಸ್ಥಗಿತವಾಗಿದ್ದು, ನಗರ ಠಾಣೆ ವ್ಯಾಪ್ತಿಯಲ್ಲಿ 15 ಹಾಗೂ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ 20 ಸೇರಿ ಒಟ್ಟು 35 ಪ್ರತ್ಯೇಕ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. ಅವುಗಳಲ್ಲಿ ನಗರ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 8 ಪ್ರಕರಣಗಳು ರೌಡಿಶೀಟರ್ (ಐಪಿಸಿ 107) ಪ್ರಕರಣಗಳಾಗಿವೆ.

ಆದರೆ, ಪ್ರತ್ಯೇಕ ಪ್ರಕರಣಗಳಲ್ಲಿನ ಆರೋಪಿಗಳಿಗೆ ಜಾಮೀನು ಸಿಗುತ್ತಿಲ್ಲ. ಜಾಮೀನು ಅರ್ಜಿ ಹಾಕಲು ವಕೀಲರಿಲ್ಲದೇ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ.
‘ಈಗಿನ ನ್ಯಾಯಾಲಯದಲ್ಲಿ ಹೆಚ್ಚುವರಿ ಕೋಣೆಗಳಿಲ್ಲ. ವಕೀಲರ ವಿಶ್ರಾಂತಿ ತಾಣ ಇಲ್ಲ. ವಾಹನ ನಿಲುಗಡೆ ಸೌಕರ್ಯ ಇಲ್ಲ. ಉದ್ಯಾನಕ್ಕೆ ಸ್ಥಳವಿಲ್ಲ.

ಹೀಗೆ ಮೂಲ ಸೌಕರ್ಯಗಳ ಕೊರತೆಯನ್ನು ಇದುವರೆಗೂ ಅನುಭವಿಸುತ್ತಲೇ ಬಂದಿದ್ದೇವೆ. ಜಿಲ್ಲಾ ನ್ಯಾಯಾಲಯ ನಿರ್ಮಾಣಕ್ಕೆ ₹15 ಕೋಟಿ ಅನುದಾನ ಬಿಡುಗಡೆಯಾಗಿ 4 ವರ್ಷಗಳೇ ಕಳೆದಿವೆ. ಸ್ಥಳಾಭಾವದ ಕೊರತೆಯಿಂದ ಸಂಕೀರ್ಣ ನಿರ್ಮಾಣ ಸಾಧ್ಯವಾಗುತ್ತಿಲ್ಲ’ ಎಂದು ಹಿರಿಯ ವಕೀಲರಾದ ಸಿ.ಎಸ್.ಮಾಲಿಪಾಟೀಲ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT