ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಿಸ್ಟರ್‌ ಬೀನ್‌’ ರೂಪುಗೊಂಡ ಬಗೆ..

Last Updated 10 ನವೆಂಬರ್ 2017, 19:30 IST
ಅಕ್ಷರ ಗಾತ್ರ

‘ಸಾಮಾನ್ಯವಾಗಿ ನಾನು ಯಾವ ಕೆಲಸವನ್ನೂ ಖುಷಿಪಟ್ಟು ಮಾಡುವುದಿಲ್ಲ. ಇದರ ಅರ್ಥ ಸೋಮಾರಿ ಎಂದಲ್ಲ. ಅದು ಬಲು ಒತ್ತಡ ಹಾಕುತ್ತದೆ. ಏನಾಗುವುದೋ ಎಂಬ ಚಿಂತೆ ಸಖತ್ತಾಗಿ ಕಾಡುತ್ತದೆ. ಯಾವುದಕ್ಕೆ ಎಷ್ಟು ತಲೆ ಕೆಡಿಸಿಕೊಳ್ಳಬೇಕೋ ಅದಕ್ಕಿಂತ ಹೆಚ್ಚು ಉಸಾಬರಿಗೆ ಬೀಳುವವರ ಪೈಕಿ ನಾನು. ಮಿಸ್ಟರ್ ಬೀನ್ ವಿಷಯದಲ್ಲಿ ಇದನ್ನು ನಾನು ಪದೇ ಪದೇ ಅನುಭವಿಸಿದ್ದೇನೆ...’

ರೊವಾನ್ ಅಟ್ಕಿನ್‌ಸನ್ ಹೀಗೆ ಹೇಳಿಕೊಂಡಾಗ ಕಣ್ಣರಳಿಸಿ ನೋಡಿದ್ದವರಿಗೆ ಲೆಕ್ಕವಿಲ್ಲ. ಕಿವಿಯರಳಿಸಿ ಕೇಳಿದವರಿಗೂ ಲೆಕ್ಕವಿಲ್ಲ. ಇತ್ತೀಚೆಗೆ ರೊವಾನ್ ಹೋರಾಟದ ಕೆಲವು ಮಜಲುಗಳನ್ನು ಸಂಕ್ಷಿಪ್ತವಾಗಿ ತೋರುವ ವಿಡಿಯೊ ಒಂದು ವಾಟ್ಸ್ಆ್ಯಪ್‌ ನಲ್ಲಿ ಹರಿದಾಡಿತು. ನಾಯಕನ ದೇಹಾಕಾರವಿಲ್ಲದ ಅವರ ಅಭಿನಯದ ಬಯಕೆಗೆ ಮೊದ ಮೊದಲು ಬಂದದ್ದು ನಿರಾಕರಣೆ. ಉಗ್ಗುವ ಅವರ ಮಾತಿಗೆ ಸಂದದ್ದು ತಾತ್ಸಾರ. ನೋಡಿ ಲಘುವಾಗಿ ನಕ್ಕವರಿಗೆ ಲೆಕ್ಕವಿಲ್ಲ. ಅನೇಕರ ‘ಬೇಡ’ಗಳನ್ನು ಕೇಳಿದ ಮೇಲೆ ರೊವಾನ್ ತನ್ನ ಬುದ್ಧಿಯನ್ನೇ ಬಂಡವಾಳ ಆಗಿಸಿಕೊಂಡು ಜನಪ್ರಿಯ ಆದದ್ದು ಕಥನ. ಆ ವಿಡಿಯೊ ತೋರಿದ್ದು ಅದನ್ನೇ.

1976ರಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಗಳು ‘ಸ್ಕೆಚ್ ಮೆಟೀರಿಯಲ್’ ರೂಪಿಸುತ್ತಿದ್ದರು. ರಿಚರ್ಡ್ ಕರ್ಟಿಸ್ ಎಂಬಾತ ಇಂಥ ಕ್ರಿಯಾಶೀಲತೆಯಲ್ಲಿ ಮುಂದು. ಕಾಲೇಜಿನಲ್ಲಿ ಅಂತರ್ಮು ಖಿ ಎನ್ನುವಂತೆ ಇರುತ್ತಿದ್ದ, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪಿಎಚ್.ಡಿ. ವಿದ್ಯಾರ್ಥಿಯೊಬ್ಬರು ಅವರ ಕಣ್ಣಿಗೆ ಬಿದ್ದರು. ಕಾರು ಚಾಲನೆಯ ಚಲನಶೀಲ ಸ್ಕೆಚ್ ಒಂದನ್ನು ಆ ಮೌನಿ ಹುಡುಗ ರಚಿಸಿಕೊಟ್ಟಾಗ ರಿಚರ್ಡ್ ಅವಾಕ್ಕಾದರು. ಆ ಮೌನಿಯೇ ರೊವಾನ್. ರೈತನ ಮಗ. ಸಂಕೋಚದ ಮುದ್ದೆ.

ಆ ಸ್ಕೆಚ್ ಕಾಲಕ್ಷೇಪ ನಡೆದು ಮೂರೇ ವರ್ಷಗಳಲ್ಲಿ ‘ನಾಟ್ ದಿ 9 ಒ ಕ್ಲಾಕ್ ನ್ಯೂಸ್’ ಎಂಬ ವ್ಯಂಗ್ಯದ ಸ್ಕೆಚ್ ಷೋ ಪ್ರಸಾರವಾಯಿತು. ಅದರ ವಿಸ್ತೃತ ರೂಪವೇ ‘ಬ್ಲಾಕಾಡರ್’ ಎಂಬ ಇನ್ನೊಂದು ಟಿ.ವಿ. ಷೋ. 1980ರ ದಶಕದಲ್ಲಿ ಅದಕ್ಕೆ ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದವು.

ಒಂದು ದಶಕವಿಡೀ ಜನಪ್ರಿಯತೆಗಾಗಿ ಹಪಹಪಿಸಿದ ಜೋಡಿ ರೊವಾನ್-ರಿಚರ್ಡ್ ಕರ್ಟಿಸ್. ಇಬ್ಬರೂ ಸೇರಿ ‘ನಗೆ ನಮ್ಮ ಕುಲದೇವರು’ ಎಂದುಕೊಂಡರು. ನಗಿಸಲೆಂದೇ ಟಿ.ವಿ. ಸ್ಕ್ರಿಪ್ಟ್‌ ಗಳನ್ನು ಬರೆದರು. ಅದು ಫಲ ಕೊಟ್ಟಿದ್ದು 1990ರ ದಶಕದಲ್ಲಿ; ‘ಮಿಸ್ಟರ್ ಬೀನ್’ ರೂಪದಲ್ಲಿ.

ರೊವಾನ್ ಓದಿನಲ್ಲಿ ಜಾಣ. ತಂತ್ರಜ್ಞಾನ ನಿಪುಣ. ಉಗ್ಗುವಿಕೆ ಮೊದಲಿನಿಂದ ಕಾಡಿದ ಸಮಸ್ಯೆ. ಅದಕ್ಕೇ ಹಿಂಜರಿಕೆ. ಮೊದಲ ಪ್ರೇಯಸಿಯ ಜೊತೆ ಡೇಟ್ ಹೋದಾಗ ಅವರಾಡಿದ್ದ ಏಕೈಕ ಮಾತು -‘ಆ ಸಾಸ್ ಜಾರ್ ಪಾಸ್ ಮಾಡು’. ಸಂದರ್ಶನಗಳಿಗೆ ಅವರು ಬೆನ್ನುಮಾಡುತ್ತಿದ್ದುದೂ ‘ಉಗ್ಗಿದರೆ ಏನು ಗತಿ' ಎಂಬ ಹಿಂಜರಿಕೆಯಿಂದಲೇ.

ಅಭಿನಯಕ್ಕೆ ನಿಂತರೆ ಉಗ್ಗುವಿಕೆ ಮಾಯವಾಗುತ್ತಿತ್ತು. ಅದಕ್ಕೇ ಅವರು ಮೊದಮೊದಲು ಗಂಭೀರ ನಾಟಕಗಳಲ್ಲಿ ನಟಿಸಿದರು. ತನ್ನದೇ ಹಾವಭಾವದಿಂದ ಗುರುತಾದರು. 'ಮಿಸ್ಟರ್ ಬೀನ್' ಎಲ್ಲದರ ಹರಳುಗಟ್ಟಿದ ರೂಪ. 245 ದೇಶಗಳ ಜನರ ಮನಸೂರೆಗೊಂಡ ಈ ಟಿವಿ ಷೋ, ಸಿನಿಮಾ ಅಗಿಯೂ ದುಡ್ಡು ಬಾಚಿತು.

ರೊವಾನ್ ಗಂಟೆಗಟ್ಟಲೆ ಕ್ಯಾಮೆರಾ ಮುಂದೆ ನಿಲ್ಲಲು ಇಷ್ಟಪಡುವುದಿಲ್ಲ. ಎಷ್ಟು ತಾಸು ಬೇಕಾದರೂ ಕಾರು ಓಡಿಸಲು ಸದಾ ಸಿದ್ಧ. ಆಡಿ 8, ಮೆಕ್ ಲಾರೆನ್ಸ್ ಅವರಿಷ್ಟದ ಕಾರುಗಳು. ಈ ಮೋಹದಿಂದಲೇ ಎರಡು ಬಾರಿ ಅವರ ಕಾರುಗಳಿಗೆ ಅಪಘಾತವೂ ಸಂಭವಿಸಿದೆ. ಒಮ್ಮೆಯಂತೂ ಮೆಕ್‌ ಲಾರೆನ್ಸ್ ಕಾರು ನುಜ್ಜುಗುಜ್ಜಾಗಿತ್ತು.

ತನ್ನೆಲ್ಲ ಏರುಪೇರುಗಳನ್ನು ನೆನಪಿಸಿಕೊಳ್ಳುವ ರೊವಾನ್, ಈಗಲೂ ಆಗೀಗ ಉಗ್ಗುತ್ತಾರೆ. ಕ್ಯಾಮೆರಾ ಎದುರು ನಿಂತರೆ ನೋಡುಗರು ನಗುತ್ತಾರೆ. ಟೋನಿ ಬ್ಲೇರ್ ಸಹಪಾಠಿಯಾಗಿದ್ದ ರೊವಾನ್ ಇದ್ದಕ್ಕಿದ್ದಂತೆ ಹಳೆಯ ಪ್ಲಗ್ ಬಿಚ್ಚಿ, ಅದರ ಎಂಜಿನಿಯರಿಂಗ್ ಕೌಶಲದ ಕುರಿತು ತಲೆ ಕೆಡಿಸಿಕೊಳ್ಳುವಾಗ ಸಹ ನಟ-ನಟಿಯರು ತಲೆ ಕೆರೆದುಕೊಳ್ಳುವುದುಂಟು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT