ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿ ಪ್ರತಿಭಟನೆ

Last Updated 11 ನವೆಂಬರ್ 2017, 7:05 IST
ಅಕ್ಷರ ಗಾತ್ರ

ಕುಶಾಲನಗರ: ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಎಲ್ಲೆಡೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಭದ್ರತೆ ನಡುವೆಯೆ ಬಿಜೆಪಿ, ಹಿಂದೂ ಸಂಘಟನೆಗಳ ಕಾರ್ಯಕರ್ತರು ಗಣಪತಿ ದೇವಸ್ಥಾನದಲ್ಲಿ ‘ಹುತಾತ್ಮ ಕುಟ್ಟಪ್ಪ’ ಸ್ಮರಣಾರ್ಥ ವಿಶೇಷ ಪೂಜೆ ಸಲ್ಲಿಸಿದರು.

ಬಿಜೆಪಿ ಹಿರಿಯ ಮುಖಂಡ ಜಿ.ಎಲ್.ನಾಗರಾಜು ಮತ್ತು ಟಿಪ್ಪು ಜಯಂತಿ ವಿರೋಧಿ ಸಮಿತಿ ಸಂಚಾಲಕ ಕೆ.ಜಿ.ಮನು ನೇತೃತ್ವದಲ್ಲಿ ದೇವಸ್ಥಾನಕ್ಕೆ ಬಂದ ಬಿಜೆಪಿ ಕಾರ್ಯಕರ್ತರು ಕುಟ್ಟಪ್ಪ ಹೆಸರಿನಲ್ಲಿ ಪೂಜೆ ಸಲ್ಲಿಸಿ ಕೆಲ ಕಾಲ ಭಜನೆ ಮಾಡಿದರು.

ಪ್ರತಿಭಟನೆ ನಡೆಸುವ ಮುನ್ಸೂಚನೆ ಅರಿತ ಪೊಲೀಸರು ದೇವಸ್ಥಾನದ ಸುತ್ತ ಬ್ಯಾರಿಕೇಟ್ ನಿರ್ಮಿಸಿ ಸುತ್ತುವರಿದರು. ಪೊಲೀಸರ ಭದ್ರಕೋಟೆಯ ನಡುವೆಯೆ ಕಾರ್ಯಪ್ಪ ವೃತ್ತದಲ್ಲಿ ಕೆಲಕಾಲ ಕುಳಿತು ಪ್ರತಿಭಟಿಸಿದ ಕಾರ್ಯಕರ್ತರು, ಕುಟ್ಟಪ್ಪ ಭಾವಚಿತ್ರವನ್ನು ಹಿಡಿದು ಘೋಷಣೆಗಳನ್ನು ಕೂಗಿದರು.

‘ಕುಟ್ಟಪ್ಪ ಅಮರ್ ರಹೇ’, ‘ಟಿಪ್ಪು ಜಯಂತಿಗೆ ದಿಕ್ಕಾರ’, ‘ರಾಜ್ಯ ಸರ್ಕಾರಕ್ಕೆ ದಿಕ್ಕಾರ’, ‘ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದಿಕ್ಕಾರ’ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.
ಅಷ್ಟರಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಸುತ್ತುವರಿದು ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದರು. ನಂತರ ಅವರನ್ನು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇಟ್ಟು ಸಂಜೆ ಬಿಡುಗಡೆಗೊಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್.ಮಂಜುಳಾ, ತಾ.ಪಂ.ಸದಸ್ಯ ಗಣೇಶ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಚಿಲ್ಲನ ಗಣಿಪ್ರಸಾದ್, ಕೂಡುಂಗಳೂರು ಗ್ರಾ.ಪಂ.ಸದಸ್ಯ ಭಾಸ್ಕರ್ ನಾಯಕ್, ತಾಲ್ಲೂಕು ಬಿಜೆಪಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೃಷ್ಣಪ್ಪ, ನಗರ ಕಾರ್ಯದರ್ಶಿ ನಿಡ್ಯಮಲೆ ದಿನೇಶ್, ಹಿಂದೂ ಜಾಗರಣ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್, ಅನಿಷ್, ಭರತ್ ಮಾಚಯ್ಯ, ಮುಖಂಡರಾದ ಎಂ.ವಿ.ನಾರಾಯಣ, ಎಚ್.ಟಿ.ಕೆ.ತಿಮ್ಮಪ್ಪ, ಲಕ್ಷ್ಮಿ ನಾರಾಯಣ ಸೇರಿದಂತೆ 50ಕ್ಕೂ ಹೆಚ್ಚಿನ ಕಾರ್ಯಕರ್ತರನ್ನು ಬಂಧಿಸಲಾಯಿತು.

ಮೈಸೂರು ವಿಭಾಗದ ಡಿವೈಎಸ್ಪಿ ಪ್ರಭಾಕರ್ ಸಿಂದೆ, ಸಿಪಿಐ ಕ್ಯಾತೇಗೌಡ, ಕಿರಣ್ ಕುಮಾರ್, ಬಿ.ಜಿ.ಪ್ರಕಾಶ್, ಎಸ್ಐ ಜಗದೀಶ್, ಮಹೇಶ್, ಸಂಚಾರಿ ಠಾಣಾಧಿಕಾರಿ ಅಪ್ಪಾಜಿ ಸೇರಿದಂತೆ ಕೆಎಸ್ಆರ್‌ಪಿ, ಡಿಎಆರ್‌ನ 150ಕ್ಕೂ ಹೆಚ್ಚಿನ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT