ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ನಿಲ್ದಾಣ ಕಾಮಗಾರಿ ಕೊನೆ ಹಂತದಲ್ಲಿ

Last Updated 19 ನವೆಂಬರ್ 2017, 7:02 IST
ಅಕ್ಷರ ಗಾತ್ರ

ಶಿಕಾರಿಪುರ: ಪಟ್ಟಣದ ಸಂತೆಮೈದಾನ ಪ್ರದೇಶದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಅಂತಿಮ ಹಂತದ ಕಾಮಗಾರಿ ಭರದಿಂದ ಸಾಗುತ್ತಿದ್ದು,
ನ. 27ರಂದು ಉದ್ಘಾಟನೆಯಾಗಲಿದೆ. ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸುಸಜ್ಜಿತ ಬಸ್‌ನಿಲ್ದಾಣ ನಿರ್ಮಾಣವಾಗಬೇಕು ಎಂಬ ಬಹು ವರ್ಷಗಳ ಬೇಡಿಕೆ ಈಡೇರುತ್ತಿದೆ.

ಹೊನ್ನಾಳಿ, ಸಾಗರ, ಆನಂದಪುರ, ಮಾಸೂರು ಮಾರ್ಗಗಳ ಮೂಲಕ ಶಿಕಾರಿಪುರ ಪಟ್ಟಣ ತಲುಪಲು ಬಸ್‌ಗಳ ಸೌಲಭ್ಯ ರಾತ್ರಿ ವೇಳೆ ಸಮರ್ಪಕವಾಗಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ನಿರ್ಮಾಣ ಆಗುತ್ತಿರುವುದು ಪ್ರಯಾಣಿಕರಲ್ಲಿ ಸುಗಮ ಸಂಚಾರದ ಸೌಲಭ್ಯ ಸಿಗುವ ನಿರೀಕ್ಷೆ ಮೂಡಿಸಿದೆ.

ಸಂಸದ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪಟ್ಟಣದಲ್ಲಿ ಬಸ್‌ನಿಲ್ದಾಣ ನಿರ್ಮಾಣವಾಗುತ್ತದೆ ಎಂಬ ನಿರೀಕ್ಷೆ ಜನರಲ್ಲಿತ್ತು. ಇದಕ್ಕೆ ಪೂರಕ ಎಂಬತೆ ಯಡಿಯೂರಪ್ಪ ಕೂಡ ಹಲವು ವೇದಿಕೆಗಳಲ್ಲಿ ಬಸ್‌ನಿಲ್ದಾಣ ನಿರ್ಮಿಸುವ ಬಗ್ಗೆ ಭರವಸೆ ನೀಡಿದ್ದರು. ಆದರೆ, ನಂತರ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು.

ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಶಾಸಕರಾದ ನಂತರ ಕೂಡ ಹಲವು ಬಾರಿ ಬಸ್‌ನಿಲ್ದಾಣ ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಸಂತೆ ಮೈದಾನವಿರುವ ಸ್ಥಳದಲ್ಲಿ ಕೆಎಸ್ಆರ್‌ಟಿಸಿ ಬಸ್‌ನಿಲ್ದಾಣ ನಿರ್ಮಾಣವಾಗಲಿದೆ ಎಂಬ ಮಾತುಗಳು ಪ್ರಚಲಿತದಲ್ಲಿದ್ದವು.

2016ರ ಡಿ. 22ರಂದು ಬರಪೀಡಿತ ಪ್ರದೇಶ ಅಧ್ಯಯನಕ್ಕಾಗಿ ತಾಲ್ಲೂಕಿಗೆ ಬಂದಿದ್ದಾಗ ಸಾರಿಗೆ ಸಚಿವರಾಗಿದ್ದ ರಾಮಲಿಂಗಾರೆಡ್ಡಿ ಅವರಿಗೆ ಬಸ್‌ ನಿಲ್ದಾಣ ನಿರ್ಮಿಸುವಂತೆ ಶಾಸಕ ರಾಘವೇಂದ್ರ ಮನವಿ ಮಾಡಿದ್ದರು. ಬಸ್‌ನಿಲ್ದಾಣ ನಿರ್ಮಿಸಲು ಮೀಸಲಿಟ್ಟ ಸ್ಥಳವನ್ನು ಸಚಿವರಿಗೆ ತೋರಿಸಿದ್ದರು. ಸಚಿವ ರೆಡ್ಡಿ ಬಸ್‌ನಿಲ್ದಾಣ ಕಾಮಗಾರಿ ಆರಂಭಿಸುವಂತೆ ಅಧಿಕಾರಿಗಳಿಗೆ ಬಸ್‌ನಿಲ್ದಾಣ ನಿರ್ಮಾಣ ಮಾಡುವಂತೆ ಸೂಚಿಸಿದ್ದರು.

ಸಂತೆ ಮೈದಾನ ಪ್ರದೇಶದ ಕೃಷಿ ಇಲಾಖೆ ಕಚೇರಿ ಹಳೇ ಕಟ್ಟಡ ಆವರಣದಲ್ಲಿ ನೂತನ ಬಸ್‌ನಿಲ್ದಾಣ ಕಾಮಗಾರಿಗೆ 2017ರ ಜೂನ್‌ 9ರಂದು ಶಾಸಕ ಬಿ.ವೈ.ರಾಘವೇಂದ್ರ ಭೂಮಿ ಪೂಜೆ ನೆರವೇರಿಸಿದ್ದರು. ಕಾಮಗಾರಿಗೆ ತೊಡಕಾಗುವ ಪುರಸಭೆ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳನ್ನು ಕೂಡ ಕೆಲವು ತಿಂಗಳುಗಳ ಹಿಂದೆ ತೆರವುಗೊಳಿಸಿ ನೆಲಸಮ ಮಾಡುವ ಕಾರ್ಯವನ್ನು ಪುರಸಭೆ ಮಾಡಿತ್ತು.

ಪ್ರಸ್ತುತ ಕೃಷಿ ಇಲಾಖೆ ಕಚೇರಿ ಹಳೇ ಕಟ್ಟಡವನ್ನು ಕೆಡವದೇ ಮೂಲ ಕಟ್ಟಡವನ್ನೇ ನವೀಕರಣ ಮಾಡುವ ಮೂಲಕ ಬಸ್‌ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದೆ. ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ನ. 27ರಂದು ಬಸ್‌ನಿಲ್ದಾಣ ಉದ್ಘಾಟಿಸಲಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ಉದ್ಘಾಟನೆ ಆಗುತ್ತಿರುವುದು ಸಂತಸದ ಸಂಗತಿ. ಆದರೆ, ಕಟ್ಟಡ ನಿರ್ಮಾಣವಾದರೆ ಸಾಲದು; ಸಮರ್ಪಕ ಬಸ್‌ ಸೌಲಭ್ಯ ದೊರಕಿಸಬೇಕು. ಈ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹೆಚ್ಚು ಒತ್ತು ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT