ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲೆ ಧಾರಣೆ; ದತ್ತಾತ್ರೇಯ ನಾಮಸ್ಮರಣೆ

Last Updated 23 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳದ ನೇತೃತ್ವದಲ್ಲಿ ಜರುಗುವ ದತ್ತ ಜಯಂತಿ ಅಭಿಯಾನವು ಗುರುವಾರ ವಿಧ್ಯುಕ್ತವಾಗಿ ಆರಂಭವಾಯಿತು.

ನಗರದ ರತ್ನಗಿರಿ ರಸ್ತೆಯ ಕಾಮಧೇನು ಗಣಪತಿ ದೇಗುಲದ ಆವರಣದಲ್ಲಿ ದತ್ತ ಭಕ್ತರು ಗುರು ದತ್ತಾತ್ರೇಯ ವಿಗ್ರಹಕ್ಕೆ ಪೂಜೆ ನೆರವೇರಿಸಿ ಮಾಲೆ ಧರಿಸಿದರು. ಭಜನೆ ಮಾಡಿ ಗುರುದತ್ತಾತ್ರೇಯರ ನಾಮಸ್ಮರಣೆ ಮಾಡಿದರು. ಗಣ ಹೋಮ, ಪೂಜಾ ಕೈಂಕರ್ಯಗಳು ಜರುಗಿದವು. ಅರ್ಚಕ ರಘುನಾಥ ಅವಧಾನಿ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಯಿತು.

ದೇವಸ್ಥಾನದ ಮುಖ್ಯಸ್ಥ ಎಂ.ಎಸ್‌.ನಂಜುಂಡಸ್ವಾಮಿ ಅವರು ದಕ್ತ ಭಕ್ತರ ಕೊರಳಿಗೆ ಮಾಲೆ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ದೊರೆಯಿತು. ವಿಎಚ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎ.ಶಿವಶಂಕರ್‌, ಉಪಾಧ್ಯಕ್ಷ ಪ್ರೇಮ್‌ಕಿರಣ್‌, ಕಾರ್ಯದರ್ಶಿ ಯೋಗೇಶ್‌ರಾಜ್‌ ಅರಸ್‌, ಬಜರಂಗದಳದ ಜಿಲ್ಲಾ ಸಂಯೋಜಕ ಮಂಜುನಾಥ್‌ ತುಡುಕೂರು, ಬಿಜೆಪಿ ಮುಖಂಡರಾದ ವರಸಿದ್ಧಿ ವೇಣುಗೋಪಾಲ್‌, ಕೆ.ರವೀಂದ್ರನಾಥಪ್ರಭು ಹಾಗೂ 100ಕ್ಕೂ ಹೆಚ್ಚು ಮಂದಿ ಮಾಲೆ ಧರಿಸಿದರು. ಮಾಲಾಧಾರಿಗಳು 11 ದಿನಗಳು ವ್ರತಾಚರಣೆ ಮಾಡುವರು. ದತ್ತಪೀಠಕ್ಕೆ ತೆರಳುವ ಹಿಂದಿನ ದಿನ ಮೂರು ಮನೆಯಲ್ಲಿ ಭಿಕ್ಷೆ ಬೇಡಿ ಪಡಿ (ಅಕ್ಕಿ, ಬೆಲ್ಲ) ಸಂಗ್ರಹಿಸಿ ಪೀಠಕ್ಕೆ ಒಯ್ಯಬೇಕು ಎಂಬ ಸಂಪ್ರದಾಯ ಇದೆ.

ಡಿ.1ರಂದು ಅನಸೂಯಾ ಜಯಂತಿ ಜರುಗಲಿದೆ. ಬೆಳಿಗ್ಗೆ 9.30ಕ್ಕೆ ನಗರದಲ್ಲಿ ಮಹಿಳೆಯರಿಂದ ಸಂಕೀರ್ತನಾ ಯಾತ್ರೆ ನಡೆಯಲಿದೆ. ನಂತರ, ದತ್ತಪೀಠಕ್ಕೆ ತೆರಳುವರು. 2ರಂದು ಶೋಭಾಯಾತ್ರೆ, ಸಾರ್ವಜನಿಕ ಸಭೆ ನಡೆಯಲಿದೆ. 3ರಂದು ದತ್ತ ಜಯಂತಿ ಜರುಗಲಿದ್ದು, ದತ್ತಪೀಠ ದರ್ಶನ, ಹೋಮ, ಧಾರ್ಮಿಕ ಸಭೆಗಳು ಜರುಗಲಿವೆ.

ವಿಎಚ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಶಂಕರ್‌ ಸುದ್ದಿಗಾರರೊಂದಿಗೆ ಮಾತನಾಡಿ, ‘ಜಿಲ್ಲೆಯ ವಿವಿಧೆಡೆ ದತ್ತಭಕ್ತರು ಮಾಲೆ ಧರಿಸಿದ್ದಾರೆ. ಡಿ.3ರಂದು ದತ್ತ ಪೀಠಕ್ಕೆ ತೆರಳಿ ಪಡಿ (ಅಕ್ಕಿ, ಬೆಲ್ಲ) ಅರ್ಪಿಸುತ್ತೇವೆ. ನಂತರ ಮಾಲೆ ವಿಸರ್ಜಿಸುತ್ತೇವೆ’ ಎಂದರು.

‘ಧರ್ಮ ಸಂಸತ್‌ನಲ್ಲಿ ದತ್ತಪೀಠ ಚರ್ಚೆ’
‘ದತ್ತ ರಥಯಾತ್ರೆಗೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ. ಜಿಲ್ಲಾಡಳಿತ ಸರ್ಕಾರದ ಏಜೆಂಟರಂತೆ ವರ್ತಿಸಿದೆ. ಈ ಕ್ರಮ ಖಂಡನೀಯ. ಉಡುಪಿಯಲ್ಲಿ ನಡೆಯಲಿರುವ ಧರ್ಮ ಸಂಸತ್‌ನಲ್ಲಿ ದತ್ತಪೀಠ ವಿಚಾರ ಚರ್ಚೆಯಾಗಲಿದೆ. ಮುಂದಿನ ನಡೆ ಕುರಿತು ಸಾಧುಗಳು, ಸಂತರು ನಿರ್ಣಯ ಕೈಗೊಳ್ಳಲಿದ್ದಾರೆ’ ಎಂದು ಬಜರಂಗದಳದ ಜಿಲ್ಲಾ ಸಂಯೋಜಕ ಮಂಜುನಾಥ್‌ ತುಡುಕೂರು ಹೇಳಿದರು.

‘ದತ್ತಪೀಠಕ್ಕಾಗಿ ಎರಡು ದಶಕಗಳಿಂದ ಹೋರಾಟ ನಡೆದಿದೆ. ದತ್ತಪೀಠವನ್ನು ಪೂರ್ಣ ಪ್ರಮಾಣದಲ್ಲಿ ಹಿಂದೂಗಳ ಪುಣ್ಯಕ್ಷೇತ್ರವಾಗಿಸಬೇಕು. ತ್ರಿಕಾಲ ಪೂಜೆಗೆ ಅವಕಾಶ ನೀಡಬೇಕು’ ಎಂದು ಅವರು ಗುರುವಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT