ಬಂಡಾಯ ಮತ್ತೆ ಅರಳಲಿ, ತನ್ವೀರ್ ಖಾತೆ ಬದಲಾಗಲಿ, ನಮ್ಮ ಆಯ್ಕೆ ಸ್ಪಷ್ಟವಾಗಿರಲಿ

ಚಂಪಾ ರಾಜಕೀಯ ಕಹಳೆ

‘ಕನ್ನಡ–ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಾದೇಶಿಕ ಪಕ್ಷವೊಂದರ ಅಗತ್ಯವಿದೆ. ಆದರೆ, ಸದ್ಯಕ್ಕೆ ಹೊಸ ಪಕ್ಷದ ಸಾಧ್ಯತೆ ಕಾಣಿಸುತ್ತಿಲ್ಲವಾದ್ದರಿಂದ ಜಾತ್ಯತೀತವಾದ ರಾಷ್ಟ್ರೀಯ ಪಕ್ಷವೊಂದನ್ನು ಬೆಂಬಲಿಸುವುದು ಅಗತ್ಯ’ –83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಭಾಷಣದಲ್ಲಿ ಪ್ರೊ.ಚಂದ್ರಶೇಖರ ಪಾಟೀಲ.

ನಿಕಟಪೂರ್ವ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಅವರು ಸಮ್ಮೇಳನದ ಅಧ್ಯಕ್ಷ ಪ್ರೊ. ಚಂದ್ರಶೇಖರ ಪಾಟೀಲ ಅವರಿಗೆ ಧ್ವಜ ನೀಡಿದರು. ಚಂಪಾ ಪತ್ನಿ ನೀಲಾ ಪಾಟೀಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಸಾಪ ಅಧ್ಯಕ್ಷ ಮನು ಬಳಿಗಾರ ಇದ್ದಾರೆ

ರಾಷ್ಟ್ರಕವಿ ಕುವೆಂಪು ಪ್ರಧಾನ ವೇದಿಕೆ (ಮೈಸೂರು): ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಜಾತ್ಯತೀತ ಪಕ್ಷಗಳ ಪರವಾಗಿ ಮುಂಬರುವ ಚುನಾವಣೆಯಲ್ಲಿ ಕನ್ನಡಿಗರು ಮತ ಚಲಾಯಿಸಬೇಕು, ಮಾತೃಭಾಷೆಯನ್ನು ಶಿಕ್ಷಣ ಮಾಧ್ಯಮವನ್ನಾಗಿಸುವ ನಿಟ್ಟಿನಲ್ಲಿ ನಡೆಯಬೇಕಾದ ಹೋರಾಟಕ್ಕೆ ಕರ್ನಾಟಕ ಇಡೀ ದೇಶಕ್ಕೆ ದಿಕ್ಕು ತೋರಿಸಬೇಕು ಹಾಗೂ ಕನ್ನಡಪರ ನಿಲುವು ಹೊಂದಿಲ್ಲದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್‌ ಖಾತೆ ಬದಲಿಸಬೇಕು.

83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ಸರ್ವಾಧ್ಯಕ್ಷರ ಭಾಷಣ ಮಾಡಿದ ಪ್ರೊ.ಚಂದ್ರಶೇಖರ ಪಾಟೀಲರ ಮಾತುಗಳಲ್ಲಿನ ಕರೆ, ಆಶಯ ಹಾಗೂ ಒತ್ತಾಯಗಳಿವು.

ಕನ್ನಡ–ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಾದೇಶಿಕ ಪಕ್ಷವೊಂದರ ಅಗತ್ಯವಿದೆ. ಆದರೆ, ಸದ್ಯಕ್ಕೆ ಹೊಸ ಪಕ್ಷದ ಸಾಧ್ಯತೆ ಕಾಣಿಸುತ್ತಿಲ್ಲವಾದ್ದರಿಂದ ಜಾತ್ಯತೀತವಾದ ರಾಷ್ಟ್ರೀಯ ಪಕ್ಷವೊಂದನ್ನು ಬೆಂಬಲಿಸುವುದು ಅಗತ್ಯ ಎಂದರು.

ಕನ್ನಡನಾಡಿನ ಹಿತಾಸಕ್ತಿಗಳ ಸಂರಕ್ಷಣೆಯ ಹಿನ್ನೆಲೆಯಲ್ಲಿ ನಮ್ಮ ಆಯ್ಕೆ ಸ್ಪಷ್ಟವಾಗಿರಬೇಕು. ನಾವು ಬೆಂಬಲಿಸುವ ಪಕ್ಷಕ್ಕೆ ’ಪ್ರಾದೇಶಿಕ ಅಜೆಂಡಾ’ ಇದೆಯೇ ಎಂಬುದನ್ನು ಪರಿಶೀಲಿಸಬೇಕು. ರಾಜ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಆ ಪಕ್ಷದ ಒಲವು ನಿಲುವುಗಳನ್ನು ಒರೆಗೆ ಹಚ್ಚಬೇಕು ಎಂದು ಅಭಿಪ್ರಾಯಪಟ್ಟರು.

ಹಿಂದಿ ಹೇರಿಕೆ ಹಾಗೂ ಕನ್ನಡ ಧ್ವಜಕ್ಕೆ ಸಂಬಂಧಿಸಿದ ಚರ್ಚೆಯಲ್ಲಿ ರಾಷ್ಟ್ರೀಯ ಪಕ್ಷವೊಂದು ಮೌನವಾಗಿದ್ದುದನ್ನು ಕನ್ನಡ ಜನತೆ ಗಮನಿಸಬೇಕು ಎಂದರು.

ಚುನಾವಣಾ ರಾಜಕಾರಣದ ಜೊತೆಗೆ ಭಾಷಾ ರಾಜಕಾರಣಕ್ಕೆ ತಮ್ಮ ಮಾತುಗಳಲ್ಲಿ ಹೆಚ್ಚಿನ ಒತ್ತು ನೀಡಿದ ಅವರು, ’ಮಗುವಿನ ಶಿಕ್ಷಣ ಮಾಧ್ಯಮ ನಿರ್ಣಯಿಸುವುದು ಪೋಷಕರ ಆಯ್ಕೆಗೆ ಬಿಟ್ಟಿದ್ದು ಎನ್ನುವ ಸುಪ್ರೀಂಕೋರ್ಟ್‌ ತೀರ್ಪನ್ನು ಸಂವಿಧಾನ ತಿದ್ದುಪಡಿಯ ಮೂಲಕ ಬದಲಿಸಬೇಕು. ಈ ನಿಟ್ಟಿನಲ್ಲಿ ಹೋರಾಟವೇ ಒಂದು ಪರಂಪರೆಯಾಗಿರುವ ಕರ್ನಾಟಕ ಇಡೀ ದೇಶಕ್ಕೆ ದಾರಿ ತೋರಿಸಬೇಕು’ ಎನ್ನುವ ನಿರೀಕ್ಷೆ ವ್ಯಕ್ತಪಡಿಸಿದರು.

ತಮ್ಮ ಪತ್ರಕ್ಕೆ ಜನಪ್ರಿಯ ಪ್ರಧಾನಿ ಉತ್ತರಿಸಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸುಮ್ಮನಿರುವಂತಿಲ್ಲ, ಅವರು ಸುಮ್ಮನಿರಲು ನಾವು ಬಿಡುವುದೂ ಇಲ್ಲ. ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶರ ಹತ್ಯೆ ಸಂದರ್ಭದಲ್ಲೂ ಪ್ರಧಾನಿ ತುಟಿಬಿಚ್ಚಲಿಲ್ಲ. ಹೀಗಾಗಿ, ಪ್ರಧಾನಿ ಪ್ರತಿಕ್ರಿಯೆಗೆ ಕಾಯದೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಬೆಂಗಳೂರಿನಲ್ಲಿ ಕರೆಯಬೇಕು. ರಾಜ್ಯಭಾಷೆಗಳಿಗೆ ಒದಗಿರುವ ಸಂಕಟದ ಕುರಿತು ಚರ್ಚಿಸಿ ಒಮ್ಮತದ ನಿರ್ಣಯಕ್ಕೆ ಬರಬೇಕು. ಈ ಮೂಲಕ ಸಂವಿಧಾನ ತಿದ್ದುಪಡಿಗೆ ಸಂಸತ್ತಿನ ಮೇಲೆ ಒತ್ತಡ ತರುವ ಕೆಲಸವನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ಮಾಡಬೇಕಿದೆ ಎಂದು ಹೇಳಿದರು.

ತನ್ವೀರ್‌ ಖಾತೆ ಬದಲಿಸಿ

ಕನ್ನಡಪರ ಶಿಕ್ಷಣ ಸಚಿವರ ಪರಂಪರೆಯೊಂದು ಕರ್ನಾಟಕದಲ್ಲಿದೆ. ಎಚ್‌.ಜಿ.ಗೋವಿಂದೇಗೌಡರು ಶಿಕ್ಷಣ ಸಚಿವರೊಬ್ಬರು ಹೇಗಿರಬೇಕು ಎನ್ನುವ ಮೇಲ್ಪಂಕ್ತಿ ಹಾಕಿಕೊಟ್ಟವರು. ಈ ಪರಂಪರೆಯನ್ನು ಮುಂದುವರಿಸುವಲ್ಲಿ ಇಂದಿನ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಯಶಸ್ವಿಯಾಗಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಡೆಸಿದ ತಜ್ಞರ ಸಮಾಲೋಚನಾ ಸಭೆಯ ನಿರ್ಧಾರಗಳನ್ನು ಗೌರವಿಸದ, ಮುಖ್ಯಮಂತ್ರಿಯ ಸೂಚನೆಯನ್ನು ನಿರ್ಲಕ್ಷಿಸಿದ ಸಚಿವರ ಖಾತೆ ಬದಲಿಸಬೇಕು. ಶಿಕ್ಷಣ ಖಾತೆಯನ್ನು ಪ್ರಜಾಪ್ರಭುತ್ವವಾದಿ ಹಾಗೂ ಕನ್ನಡಪ್ರೇಮಿ ನಾಯಕರೊಬ್ಬರಿಗೆ ವಹಿಸಿಕೊಡಬೇಕು ಎಂದು ವೇದಿಕೆಯಲ್ಲಿದ್ದ ಸಿದ್ದರಾಮಯ್ಯನವರನ್ನು ಚಂಪಾ ಒತ್ತಾಯಿಸಿದರು.

ಕುಲ ಕಂಟಕರು

ನಮ್ಮ ಶತ್ರುಗಳು ತಮಿಳರೋ ಮರಾಠಿಗರೋ ಅಲ್ಲ. ಕನ್ನಡದ ಸಂಕಟಗಳಿಗೆಲ್ಲ ನಮ್ಮ ಕುಲಕಂಟಕರೇ ಕಾರಣ. ’ಕುಲ ಪುರೋಹಿತ’ರನ್ನು (ಆಲೂರು ವೆಂಕಟರಾಯರನ್ನು) ಸಮ್ಮೇಳನಾಧ್ಯಕ್ಷರಾಗಿ ಕಂಡವರು ಮೈಸೂರು ಜನ... ಈಗ ’ಕುಲಕಂಟಕ'ರನ್ನು, ಮನೆ ಮುರುಕರನ್ನು ತಮ್ಮ ಮನೆಯಲ್ಲೇ ಎದುರಿಸಬೇಕಾಗಿದೆ ಎಂದು ವಿಷಾದಿಸಿದರು.

ಕನ್ನಡ ಭಾಷೆಗೆ, ಬದುಕಿಗೆ, ಸಂಸ್ಕೃತಿಗೆ ಪ್ರೇರಕ ಶಕ್ತಿಗಳಾಗಬೇಕಿದ್ದ ಸಂಸ್ಕೃತ, ಇಂಗ್ಲಿಷ್, ಹಿಂದಿ ಭಾಷೆಗಳು ಇಂದು ಕನ್ನಡದ ‘ಕಡುವೈರಿ'ಗಳಾಗಿರುವುದಕ್ಕೆ ಇಂದಿನ ಕೇಂದ್ರೀಕೃತ ವ್ಯವಸ್ಥೆಯೇ ಕಾರಣ. ನಮಗೆ ಇಂದು ಬಹು ದೊಡ್ಡ ಆತಂಕ ಎದುರಾಗಿರುವುದು ’ಭಾಷೆ'ಗಳ ವಲಯದಲ್ಲಿ. ಪ್ರಬುದ್ಧ ಭಾಷೆಯಾದ ಸಂಸ್ಕೃತ, ಕೃತ್ರಿಮ ಶ್ರೇಷ್ಠತೆಯನ್ನು ಆರೋಪಿಸಿಕೊಂಡು ಬಂದ ಪುರೋಹಿತ ವರ್ಗದ ಒಳಸಂಚಿನಿಂದಾಗಿ ಓಣಿಯ ಕೂಸಾಗಿ ಬೆಳೆಯುವ ಬದಲು ಕೋಣೆಯ ಕೂಸಾಗಿ ಕೊಳೆಯತೊಡಗಿತು. ಜಗತ್ತಿನೊಂದಿಗೆ ಅರ್ಥಪೂರ್ಣ ಸಂಬಂಧ ಹೊಂದಲು ಅನುವು ಮಾಡಿಕೊಡುವ ಇಂಗ್ಲಿಷ್ ಹುಸಿ ಕಾನ್ವೆಂಟ್ ಸೊಕ್ಕಿನ ಕಹಳೆಯಾಗಿದೆ. ಉತ್ತರ ಭಾರತದ ಹಿಂದಿ ಸರ್ವಾಧಿಕಾರಿಗಳ ಕೈಯಲ್ಲಿನ ದಮನಕಾರಿ ಅಸ್ತ್ರವಾಗುತ್ತಿದೆ. ಈ ವಿರೋಧಾಭಾಸಕ್ಕೆ ಬಂಡವಾಳಶಾಹಿ, ಅಧಿಕಾರಶಾಹಿ ಹಾಗೂ ಪುರೋಹಿತಶಾಹಿ ಶಕ್ತಿಗಳ ಸ್ವಾರ್ಥ, ತಪ್ಪುನೀತಿಗಳು ಕಾರಣ ಎಂದು ವಿಶ್ಲೇಷಿಸಿದರು.

ಸಂವಿಧಾನದಲ್ಲಿ ಹಿಂದಿಯನ್ನು ಮಾತ್ರ ರಾಷ್ಟ್ರಭಾಷೆ ಎಂದು ಹೆಸರಿಸಿಲ್ಲದಿದ್ದರೂ, ಸುಳ್ಳು ಕಿರೀಟವನ್ನು ಅದಕ್ಕೆ ಹೊರಿಸಿ, ಹಿಂದಿಯೇತರ ರಾಜ್ಯಗಳಲ್ಲಿ ಅದನ್ನು ಮೆರೆಸುವ ’ಹಿಂದಿ ಸಾಮ್ರಾಜ್ಯಶಾಹಿ’ಯನ್ನು ನೋಡುತ್ತಿದ್ದೇವೆ. ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ಸಂಸ್ಥೆಗಳಲ್ಲಿ ಹಿಂದಿ ಹೇರಿಕೆ ನಡೆಯುತ್ತಿದೆ. ಬೆಂಗಳೂರಿನ ’ನಮ್ಮ ಮೆಟ್ರೊ' ಫಲಕಗಳಲ್ಲೂ ಹಿಂದಿ ಹೇರಲಾಗಿತ್ತು. ಅದನ್ನು ವಿರೋಧಿಸಿ ನಡೆದ ಹೋರಾಟವನ್ನು ಬೆಂಬಲಿಸಿ ಮುಖ್ಯಮಂತ್ರಿ ಹಾಗೂ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಲುವನ್ನು ಚಂಪಾ ಶ್ಲಾಘಿಸಿದರು.

ಸರ್ಕಾರಿ ಶಾಲೆಗಳ ಸಬಲೀಕರಣ ಕುರಿತಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೀಡಿರುವ ವರದಿ, ಸರೋಜಿನಿ ಮಹಿಷಿ ಪರಿಷ್ಕೃತ ವರದಿ, ಸರ್ಕಾರದ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಅಳವಡಿಕೆಯ ವರದಿಗಳ ಶೀಘ್ರ ಅನುಷ್ಠಾನಕ್ಕೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.

’ವಂದೇ ಮಾತರಂ’ ಹೈಜಾಕ್!
’ಬಹುತ್ವ’ವನ್ನು ಬುನಾದಿಯಾಗಿ ಹೊಂದಿರುವ ದೇಶದ ಪ್ರಜಾಸತ್ತಾತ್ಮಕ ಸ್ವರೂಪವನ್ನು ಕುರೂಪಗೊಳಿಸುವ ಕೆಲಸವನ್ನು ಪ್ರಸ್ತುತ ಕೇಂದ್ರದಲ್ಲಿರುವ ’ಪ್ರಭುತ್ವ’ ಮಾಡುತ್ತಿರುವ ಆತಂಕ ಶುರುವಾಗಿದೆ. ’ಒಂದೇ ಭಾಷೆ, ಒಂದೇ ಧರ್ಮ, ಒಂದೇ ಸಿದ್ಧಾಂತ' ಎಂಬ ಧಾಟಿಯಲ್ಲಿ, ನಾವೆಲ್ಲಾ ದಶಕಗಳುದ್ದಕ್ಕೂ ತುಂಬು ಕೊರಳಿನಿಂದ ಹಾಡುತ್ತಿದ್ದ ’ವಂದೇ ಮಾತರಂ' ಗೀತೆಯನ್ನು ಈ ಶಕ್ತಿಗಳು ಹೈಜಾಕ್ ಮಾಡಿದಂತಿದೆ.

’ಅಭಿವ್ಯಕ್ತಿ ಸ್ವಾತಂತ್ರ್ಯ, ’ವೈಚಾರಿಕತೆ’ಗಳ ಮೇಲೆ ನಡೆಯುತ್ತಿರುವ ದಾಳಿಗಳು, ಪ್ರಶ್ನೆ ಮಾಡುವುದೇ ’ರಾಷ್ಟ್ರದ್ರೋಹ' ಎಂದು ಬಿಂಬಿಸುವುದು ಫ್ಯಾಸಿಸಂ ವಾತಾವರಣವನ್ನು ಸೃಷ್ಟಿಸಿವೆ. ಇದನ್ನೆಲ್ಲ ತೆರೆದ ಕಣ್ಣುಗಳಿಂದ ಅರ್ಥಮಾಡಿಕೊಂಡು ಪರಿಹಾರದ ಪ್ರಯತ್ನಗಳತ್ತ ಹೊರಳುವುದು ನಮ್ಮ ಇಂದಿನ ಕರ್ತವ್ಯ ಎಂದರು.

ಜಾತ್ಯತೀತ ಕನ್ನಡಪ್ರಜ್ಞೆ
ಪ್ರತಿ ವರ್ಷ ಕನ್ನಡದ ಹೆಸರಿನಲ್ಲಿ ಲಕ್ಷಾಂತರ ಜನ ಸೇರಿ ಸಂಭ್ರಮಿಸುವುದು ಕನ್ನಡದ ಪ್ರಜ್ಞೆಯ ಸಂಕೇತವಾದರೆ, ಜಾತಿ–ಧರ್ಮಗಳ ಹೆಸರಿನಲ್ಲಿ ಸಮಾವೇಶಗೊಳ್ಳುವುದು ಸಮಾಜದ ವಿಘಟನೆಯ ಸಂಕೇತ ಎಂದು ಚಂಪಾ ವಿಶ್ಲೇಷಿಸಿದರು.

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಪ್ರತಿಗಾಮಿ–ಜೀವವಿರೋಧಿ ಧ್ವನಿಗಳು ಅಲ್ಲಲ್ಲಿ ಕೇಳಿಸಿದರೂ, ಅವು ಒಂದು ಪ್ರತ್ಯೇಕ ಧಾರೆಯಾಗಿ ರೂಪುಗೊಂಡಿಲ್ಲ. ಎರಡು ಸಾವಿರ ವರ್ಷಗಳುದ್ದಕ್ಕೂ ಉಳಿದುಕೊಂಡು ಬಂದಿರುವುದು ’ಮನುಷ್ಯ ಜಾತಿ ತಾನೊಂದೆ ವಲಂ' ಎಂಬ ಲೋಕದೃಷ್ಟಿಗೆ ದೃಷ್ಟಾಂತವಾಗಿರುವ ಕೃತಿಗಳು ಎಂದರು.

ಚಳವಳಿಯ ಬಳುವಳಿ
ಚಂಪಾ ಭಾಷಣದ ಮತ್ತೊಂದು ಪ್ರಮುಖ ಅಂಶ ಚಳವಳಿಗಳ ಕುರಿತಾದುದು. ’ನನ್ನ ಬದುಕೇ ಒಂದು ಚಳವಳಿಯ ಸರಪಳಿ ಆಯಿತೇನೋ’ ಎಂದ ಅವರು, 18ನೇ ಶತಮಾನದಿಂದ ಈಚೆಗೆ ಚಳವಳಿಯಿಲ್ಲದೆ ನಾವು ಏನನ್ನೂ ಪಡೆದಿಲ್ಲ. ಇಂಥ ಕನ್ನಡ ಚಳವಳಿ ನಿರಂತರವಾಗಿ ನಡೆಯುತ್ತಿರಬೇಕು ಎಂದರು.

ಕನ್ನಡಿಗರಿಗೂ ಚಳವಳಿಗೂ ಬಿಡಲಾಗದ ನಂಟು. ’ಕನ್ನಡ ಚಳವಳಿ’ ಎಂಬ ಪದಪುಂಜ ನಮ್ಮ ನಾಲಿಗೆಗೆ ಎಷ್ಟು ಹೊಂದಿಕೊಂಡಿದೆಯೆಂದರೆ, ’ಕನ್ನಡ’ ಮತ್ತು ’ಚಳವಳಿ' ಪದಗಳು ಅವಳಿ-ಜವಳಿಯೇನೋ ಎನ್ನುವಷ್ಟು. ಜನಶಕ್ತಿಯ ಸಮರ್ಪಕ ಅಭಿವ್ಯಕ್ತಿಯ ಮೂಲಕ ರಾಜಕೀಯ ಪಲ್ಲಟ ತರಬಹುದು ಎಂಬ ಸಾಧ್ಯತೆಯನ್ನು ಗೋಕಾಕ್ ಚಳವಳಿ ತೋರಿಸಿಕೊಟ್ಟಿತು. ಆ ಚಳವಳಿಗೆ ಸಾಂಸ್ಕೃತಿಕ ಸ್ವರೂಪದೊಂದಿಗೆ ಒಂದು ಸಾಮೂಹಿಕ ನಾಯಕತ್ವವಿತ್ತು. ಆ ನಾಯಕತ್ವ ಮುಂದುವರಿದಿದ್ದರೆ ಇಂದಿನ ಕರ್ನಾಟಕದ ರಾಜಕೀಯ ಸ್ವರೂಪವೇ ಭಿನ್ನವಾಗಿರುತ್ತಿತ್ತು ಎಂದರು.

ಕನ್ನಡ ಚಳವಳಿಯ ಸ್ವರೂಪ ಬದಲಾಗಬೇಕಾದ ಅಗತ್ಯವನ್ನು ಚಂಪಾ ಒತ್ತಿಹೇಳಿದರು. ಭಾಷೆ, ಸಾಹಿತ್ಯ, ಸಂಸ್ಕೃತಿಯ ಉಳಿವು ಎನ್ನುವ ಸೀಮಿತ ಚೌಕಟ್ಟನ್ನು ಮೀರಿ, ನಾಡ ಜನತೆಯ ಬದುಕಿನ ಸಕಲ ಮಗ್ಗಲುಗಳನ್ನೂ ಚಳವಳಿ ತನ್ನ ತೆಕ್ಕೆಗೆ ಒಗ್ಗಿಸಿಕೊಳ್ಳಬೇಕಾಗಿದೆ. ತಮಿಳರ ವಿರುದ್ಧ ಹೋರಾಡುವುದೇ ಕನ್ನಡ ಚಳವಳಿ ಎಂಬ ಮಿಥ್ಯೆ ಅಳಿದುಹೋಗಬೇಕು. ನಮ್ಮ ನಿಜವಾದ ಶತ್ರುಗಳಾದ ಹಿಂದಿ ವಲಯದ ವ್ಯಾಪಾರಿ ವರ್ಗ, ಜಾಗತೀಕರಣದ ಸೋಗಿನಲ್ಲಿ ಬರುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ಕೋಮುವಾದಿ ಶಕ್ತಿಗಳ ವಿರುದ್ಧ ನಮ್ಮ ಚಳವಳಿ ನಡೆಯಬೇಕಿದೆ ಎಂದು ಹೇಳಿದರು.

ಮಲ್ಲಿಗೆ ಹೂವಿನಿಂದ ಅಲಂಕೃತಗೊಂಡ ರಥದಲ್ಲಿ ಕನ್ನಡಾಭಿಮಾನಿಗಳ ನಡುವೆ ಸಮ್ಮೇಳನಾಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ, ಪತ್ನಿ ನೀಲಾ ಪಾಟೀಲ ಸಾಗಿದರು –ಪ್ರಜಾವಾಣಿ ಚಿತ್ರ / ಸಚಿತಾ ಬಿ.ಆರ್‌.

ಬಂಡಾಯದ ಹೊಸ ಚಿಗುರು
ಬಂಡಾಯ ಸಂಘಟನೆಯೊಂದಿಗಿನ ತಮ್ಮ ಒಡನಾಟವನ್ನು ಹಾಗೂ ಆ ಸಂಘಟನೆಯ ಮಹತ್ವವನ್ನು ಮೆಲುಕು ಹಾಕಿದರು.

ದಲಿತ-ಬಂಡಾಯದ ಪರ್ವ ಶುರುವಾದಾಗಿನಿಂದ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಗಳ ವಿನ್ಯಾಸ ಹಾಗೂ ಸಮ್ಮೇಳನಗಳ ಸ್ವರೂಪ ದಲಿತ-ಬಂಡಾಯದ ದಟ್ಟ ಪ್ರಭಾವಕ್ಕೆ ಒಳಗಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಶಾಂತರಸ, ಕೆ.ಎಸ್.ನಿಸಾರ್ ಅಹಮದ್, ಎಲ್.ಬಸವರಾಜು, ಗೀತಾ ನಾಗಭೂಷಣ, ಕೋಚೆ, ನಾ.ಡಿಸೋಜ, ಸಿದ್ಧಲಿಂಗಯ್ಯ, ಬರಗೂರು ರಾಮಚಂದ್ರಪ್ಪ – ಇವರೆಲ್ಲ ಇದೇ ಪ್ರಭಾವಳಿಗೆ ಸೇರಿದವರು. ಇವರೆಲ್ಲರ ಮುಂದುವರಿದ ಪರಿಷ್ಕೃತ ಆವೃತ್ತಿಯಾಗಿ ನಾನು ನಿಮ್ಮೆದುರು ನಿಂತಿದ್ದೇನೆ ಎಂದು ಚಂಪಾ ಹೇಳಿದರು.

ಬಂಡಾಯದ ಸಂಘಟನೆ ಈಗ ಅಸ್ತಿತ್ವದಲ್ಲಿ ಇಲ್ಲದಿದ್ದರೂ ಅದರ ಆಶಯಗಳು ತರುಣಪೀಳಿಗೆಯಲ್ಲಿ ಮುಂದುವರಿದಿವೆ. ಬಂಡಾಯ ಸಂಘಟನೆ ಕ್ರಿಯಾಶೀಲವಾಗಿದ್ದ ದಿನಗಳಲ್ಲಿ ನಮ್ಮೆದುರಿಗಿದ್ದ ರಾಜ್ಯ–ದೇಶದ ಚೌಕಟ್ಟಿಗೆ ಒಳಪಟ್ಟಿದ್ದ ಸಮಸ್ಯೆಗಳು ಈಗ ಜಾಗತಿಕ ವ್ಯಾಪ್ತಿಗೆ ಒಳಪಟ್ಟಿವೆ. ಜಾಗತೀಕರಣ, ಉದಾರೀಕರಣ, ಖಾಸಗೀಕರಣಗಳ ಜೊತೆಗೆ ಕೇಸರೀಕರಣ (ಕೋಮುವಾದ) ಸೇರಿಕೊಂಡು ಪರಿಸ್ಥಿತಿ ಉಲ್ಬಣಗೊಂಡಿದೆ. ಇವುಗಳ ವಿರುದ್ಧ ಹೋರಾಡಲು ಹಾಗೂ ಹೋರಾಟಕ್ಕೆ ನಿರ್ದಿಷ್ಟ ದಿಕ್ಕು–ದೆಸೆ ನೀಡಲು ಬಂಡಾಯ ಸಂಘಟನೆ ಮರುಹುಟ್ಟು ಪಡೆಯುವುದು ಇಂದಿನ ಅನಿವಾರ್ಯ.

ಸಮ್ಮೇಳನದ ಉದ್ಘಾಟನಾ ಸಮಾರಂಭಕ್ಕೂ ಮುನ್ನ ನಡೆದ ಮೆರವಣಿಗೆಯಲ್ಲಿ ನೆರೆದಿದ್ದ ಜನಸ್ತೋಮವನ್ನು ನೋಡಿ ಚಂಪಾ ಪುಳಕಗೊಂಡಿದ್ದರು. ಕನ್ನಡದ ಈ ಜನಶಕ್ತಿ ರಾಜಕೀಯ ಶಕ್ತಿಯಾಗಿ ರೂಪುಗೊಂಡಲ್ಲಿ ಕರ್ನಾಟಕದ ನಾಳೆಗಳು ಬದಲಾಗಲಿವೆ ಎನ್ನಿಸುತ್ತಿದೆ ಎಂದು ಉದ್ಗರಿಸಿದರು.

ಚಂಪಾ ಮಾತು ಮುಗಿಸಿದ್ದು ತಮ್ಮದೇ ಕವನದ ಸಾಲಿನೊಂದಿಗೆ – ಕನ್ನಡ ಕನ್ನಡ ಬರ‍್ರಿ ನಮ್ಮ ಸಂಗಡ’. ಚಂಪಾ ಕನ್ನಡ ಕನ್ನಡ ಎಂದು ಹೇಳಿದಾಗಲೆಲ್ಲ ’ಬರ್ರಿ ನಮ್ಮ ಸಂಗಡ’ ಎಂದು ಸಭಿಕರು ಕೋರಸ್‌ ಕೂಗುತ್ತಿದ್ದುದು ಒಟ್ಟಾರೆ ಭಾಷಣದ ಆಶಯದಂತಿತ್ತು.

ಮಾತು ತಪ್ಪಿದ ಅಧ್ಯಕ್ಷರು

ಭಾಷಣ ಆರಂಭಿಸುವ ಮುನ್ನ ಸಭಾಂಗಣದಲ್ಲಿನ ಗದ್ದಲವನ್ನು ಕಂಡು ಕಸಿವಿಸಿಗೊಂಡ ಚಂಪಾ, ’ನಾಲ್ಕು ದಶಕಗಳ ಕಾಲ ಅಧ್ಯಾಪಕನಾಗಿದ್ದ ನಾನು ನನ್ನ ಮಾತುಗಳನ್ನು ಶಾಂತಚಿತ್ತದಿಂದ ಕೇಳಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಭಾಷಣದ ಕೆಲವು ಭಾಗಗಳನ್ನಷ್ಟೇ ಓದಿ 30ರಿಂದ 40 ನಿಮಿಷಗಳಲ್ಲಿ ಭಾಷಣ ಮುಗಿಸುತ್ತೇನೆ ಎಂದು ಹೇಳಿದರು. ಅದರಂತೆಯೇ ಲಿಖಿತ ಭಾಷಣದ ಕೆಲವು ಅಂಶಗಳನ್ನು ಕೈ ಬಿಟ್ಟರು. ಆದರೂ ಭಾಷಣಕ್ಕೆ ಅವರು ತೆಗೆದುಕೊಂಡ ಸಮಯ 1 ಗಂಟೆ 20 ನಿಮಿಷ!

ಭಾಷಣದ ಕೊನೆಯಲ್ಲಿ ಕಸಿವಿಸಿ ಘಟನೆಯೊಂದು ನಡೆಯಿತು. ಊಟದ ವ್ಯವಸ್ಥೆ ಮತ್ತು ಅನ್ಯ ಕಾರ್ಯ ನಿಮಿತ್ತ ರಜೆಚೀಟಿ ಪಡೆಯುವಲ್ಲಿ ಪ್ರತಿನಿಧಿಗಳು ಗದ್ದಲ ಎಬ್ಬಿಸದೆ ಸಹಕರಿಸಬೇಕು ಎಂದು ಭಾಷಣದ ನಡುವೆ ಪ್ರವೇಶಿಸಿದ ಮನು ಬಳಿಗಾರ್‌ ಮನವಿ ಮಾಡಿಕೊಂಡರು. ಅದಾದ ಮೂರು ನಿಮಿಷಕ್ಕೆ ’ಚಂಪಾದಕೀಯ’ ಕೊನೆಗೊಂಡಿತು.

ಕನ್ನಡದ ಸಿದ್ದರಾಮಯ್ಯ

ಸಿದ್ದರಾಮಯ್ಯನವರ ರಾಜಕೀಯ ಪ್ರವೇಶ ಕನ್ನಡ ಧ್ವಜ ಹಿಡಿಯುವುದರ ಮೂಲಕ ಆಯಿತು. ಜವಾರಿ ನಡೆ–ನುಡಿಯ ಅವರಿಂದು ಮುಖ್ಯಮಂತ್ರಿ ಆಗಿರುವುದು ಕನ್ನಡದ ಪುಣ್ಯ. ಇವರು ಬರೀ ಸಿದ್ದರಾಮಯ್ಯ ಅಲ್ಲ, ’ಕನ್ನಡದ ಸಿದ್ದರಾಮಯ್ಯ’ ಎಂದು ಚಂಪಾ ಬಣ್ಣಿಸಿದರು.

ಅಮ್ಮನ ಪಕ್ಷಪಾತ!

ಕನ್ನಡಮಾತೆಯನ್ನು ಭಾರತ ಜನನಿಯ ’ತನುಜಾತೆ' ಎಂದು ಕುವೆಂಪು ಕರೆದರು. ಅಂದರೆ`ಭಾರತ' ಎಂಬ ಅಮ್ಮನ ಮಕ್ಕಳು ನಮ್ಮ ರಾಜ್ಯಗಳು. ಆದರೆ ಈ ಅಮ್ಮ ತಾನು ಪಡೆದ ಮಕ್ಕಳಲ್ಲಿ ಕೆಲವರಿಗೆ ಮೊಲೆ ಹಾಲನ್ನು, ಉಳಿದವರಿಗೆ ಬಾಟಲಿ ಹಾಲನ್ನು ಕುಡಿಸುತ್ತಿದ್ದಾಳೆ. ಬಹುಪಾಲು ಹಾಲನ್ನು ಬಹುಶಃ ತಾನೇ ಕುಡಿಯುತ್ತಿರಬೇಕು
–ಚಂಪಾ

ಅನೇಕ ವಿಷಯಗಳನ್ನು ಕವುಚಿಕೊಂಡು ಕನ್ನಡ ಜನಸ್ತೋಮದ ಸಮಕ್ಷಮದಲ್ಲಿ ಮುಕ್ತ ಸಂವಾದ ಏರ್ಪಡಿಸಬಲ್ಲ ಪರಿಷತ್ತಿನಂಥ ಸಂಸ್ಥೆ ಇಡೀ ಪ್ರಪಂಚದಲ್ಲಿ ಎಲ್ಲೂ ಇಲ್ಲ

–ಚಂಪಾ

ಮುಖ್ಯಾಂಶಗಳು

* ಅಂದು ಕುಲಪುರೋಹಿತರು, ಇಂದು ಕುಲಕಂಟಕರು

* ’ವಂದೇ ಮಾತರಂ’ ಗೀತೆ ಹೈಜಾಕ್ ಆಗಿದೆ

* ಜಾತಿ–ಧರ್ಮಗಳ ಹೆಸರಿನ ಸಮಾವೇಶ ಸಮಾಜದ ವಿಘಟನೆಯ ಸಂಕೇತ

* ಬಂಡಾಯದ ಆಶಯಗಳು ತರುಣಪೀಳಿಗೆಯಲ್ಲಿ ಮುಂದುವರೆದಿವೆ

Comments