ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ವರವಾದ ಗೋಡಂಬಿ

Last Updated 28 ನವೆಂಬರ್ 2017, 9:31 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನಲ್ಲಿ ಇದೇ ಮೊದಲ ಬಾರಿಗೆ 785 ಹೆಕ್ಟೇರ್‌ನಲ್ಲಿ ಗೋಡಂಬಿ ಬೆಳೆಯನ್ನು ಬೆಳೆಯಲಾಗಿದೆ. ಯಾವುದೇ ನದಿ, ನಾಲೆಗಳಿಲ್ಲದೆ ಬರಗಾಲಕ್ಕೆ ತುತ್ತಾಗಿರುವ ರೈತರಿಗೆ ಗೋಡಂಬಿ ಆರ್ಥಿಕ ಅಭಿವೃದ್ಧಿಯ ಆಶಾಕಿರಣವಾಗಿ ಗೋಚರಿಸುತ್ತಿದೆ.

ಅಂತರ್ಜಲ ಕುಸಿತದ ನಡುವೆಯೂ ಕೆಲವು ರೈತರು ತರಕಾರಿ ಬೆಳೆದಿದ್ದರು. ಆದರೆ ರೋಗ ಮತ್ತು ಬೆಲೆ ಕುಸಿತ ಕೈಸುಡುವಂತೆ ಮಾಡಿತು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರು ಪರ್ಯಾಯ ಬೆಳೆಯಾಗಿ ಗೋಡಂಬಿಯತ್ತ ಮುಖ ಮಾಡ ತೊಡಗಿದ್ದಾರೆ. ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ಗಳಿಸಬಹುದು ಎಂಬುದು ರೈತರ ಲೆಕ್ಕಾಚಾರವಾಗಿದೆ.

‘ತಾಲ್ಲೂಕಿನಲ್ಲಿ ಸುಮಾರು 650 ಕ್ಕೂ ಅಧಿಕ ರೈತರು 785 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯುತ್ತಿದ್ದಾರೆ. ಗಿಡದಿಂದ ಗಿಡಕ್ಕೆ 6 ಅಡಿಗಳ ಅಂತರದಲ್ಲಿ ಹಾಕಬೇಕು. ಒಂದು ಹೆಕ್ಟೇರ್‌ಗೆ 270 ಗಿಡಗಳನ್ನು ಹಾಕಬಹುದು. ತೋಟಗಾರಿಕೆ ಇಲಾಖೆಯಿಂದ ಸಾಮಾನ್ಯ ರೈತರಿಗೆ ಶೇ 50 ಮತ್ತು ಪರಿಶಿಷ್ಟಜಾತಿ, ಪಂಗಡದವರಿಗೆ ಶೇ 90 ಸಬ್ಸಿಡಿ ನೀಡಲಾಗುತ್ತದೆ’ ಎಂದು ಕೃಷಿ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಆನಂದ್‌ ತಿಳಿಸಿದರು.

‘ಒಂದು ಹೆಕ್ಟೇರ್‌ ಗೋಡಂಬಿ ಅಭಿವೃದ್ಧಿಗೆ ಮೊದಲ ವರ್ಷ ₹ 50 ಸಾವಿರ, 2ನೇ ವರ್ಷ ₹ 20 ಸಾವಿರ, 3ನೇ ವರ್ಷ ₹ 20 ಸಾವಿರ ಖರ್ಚು ಬರುತ್ತದೆ’ ಎಂದು ಅಭಿಪ್ರಾಯಪಟ್ಟರು.

ಗಿಡ ಹಾಕಿದ ಮೊದಲ ವರ್ಷವೇ ಫಸಲು ಆರಂಭವಾಗುತ್ತದೆ. 3ನೇ ವರ್ಷದಿಂದ ಉತ್ತಮ ಇಳುವರಿ ಬರುತ್ತದೆ. ಕಡಿಮೆ ನೀರಿನಿಂದ ಬೆಳೆಯಬಹುದು. ರೋಗನಿರೋಧಕ ಶಕ್ತಿ ಇರುವುದರಿಂದ ಹೆಚ್ಚಿನ ಔಷಧದ ಅವಶ್ಯಕತೆ ಇರುವುದಿಲ್ಲ. ಹೂ ಬರುವಾಗ ಒಮ್ಮೆ ಔಷಧ ಸಿಂಪಡಿಸಿದರೆ ಸಾಕು ಎಂದು ತಿಳಿಸಿದರು.

ಚಿಂತಾಮಣಿ–1 ಮತ್ತು 2, , ಉಳ್ಳಾಲ–1, ಉಲ್ಲಾಳ–4, ಮಹಾರಾಷ್ಟ್ರದ ವೆಂಗಲೂರು–3 ಉತ್ತಮ ತಳಿಗಳನ್ನು ತಾಲ್ಲೂಕಿನಲ್ಲಿ ನಾಟಿ ಮಾಡಲಾಗಿದೆ. ಕುರುಬೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗೋಡಂಬಿ ಸಂಶೋಧನಾ ಅಭಿವೃದ್ಧಿ ಕೇಂದ್ರವಿದೆ. ಇಲ್ಲಿಯೇ ಚಿಂತಾಮಣಿ–1 ಮತ್ತು 2 ತಳಿ ಅಭಿವೃದ್ಧಿಪಡಿಸಲಾಗಿದೆ. ಈ ತಳಿಗಳು ತಾಲ್ಲೂಕಿನ ಹವಾಗುಣಕ್ಕೆ ಹೊಂದುತ್ತವೆ.

’ಸಾಮಾನ್ಯವಾಗಿ ಗೋಡಂಬಿಗೆ ಕೀಟಬಾಧೆ ಕಡಿಮೆ. 30ಕ್ಕೂ ಹೆಚ್ಚು ವರ್ಷ ಫಸಲು ನೀಡುತ್ತವೆ. ಹೂ ಬಿಡುವ ಸಮಯಲ್ಲಿ ಗಿಡಗಳಿಗೆ ಕಾಂಡ ಕೊರೆಯುವ ಹುಳ, ಎಲೆ ಸುರಂಗ ಕೀಟ ಕಾಡುತ್ತದೆ. ಗಿಡಗಳು ಬಲಿತ ನಂತರ ಎಲೆ ಚುಕ್ಕೆರೋಗ ಹಾಗೂ ಪೋಷಕಾಂಶಗಳ ಕೊರತೆಯಿಂದ ಗಿಡ ಒಣಗುವ ರೋಗಗಳು ಕಾಣಿಸಿಕೊಳ್ಳಬಹುದು’ ಎಂಬುದು ರೈತರ ಅಭಿಪ್ರಾಯ.

‘ಗೋಡಂಬಿ ಶ್ರೀಮಂತರ ಆಹಾರವಾಗಿದೆ. ಜಾಮ್‌, ಉಪ್ಪಿನಕಾಯಿ, ಕ್ಯಾಂಡಿ, ಜಲ್ಲಿ, ವೈನ್‌ ತಯಾರಿಕೆಗೂ ಬಳಸಲಾಗುತ್ತದೆ.   ಸಾಮಾನ್ಯವಾಗಿ ಬೆಲೆ ಕುಸಿತದ ಭೀತಿ ಇರುವುದಿಲ್ಲ. ಹಿಂದೆ ಇಲಾಖೆಯಿಂದ ಗಿಡಗಳನ್ನು ನೀಡಲಾಗುತ್ತಿತ್ತು. ಈಗ ಸಬ್ಸಿಡಿ ನೀಡಲಾಗುತ್ತಿದೆ. ಇದರ ಜತೆಗೆ ತೋಟಕ್ಕೆ ಹನಿ ನೀರಾವರಿ ಅಳವಡಿಸಿಕೊಳ್ಳಲು ಶೇ 90 ರಷ್ಟು ಸಬ್ಸಿಡಿ ನೀಡಲಾಗುತ್ತದೆ’ ಎಂದು ಮಾಹಿತಿ ನೀಡುವರು ಕೃಷಿ ಇಲಾಖೆ ಅಧಿಕಾರಿಗಳು.


ಪ್ರಸ್ತುತ ಕಚ್ಚಾ ಗೋಡಂಬಿ ಕೆ.ಜಿ.1ಕ್ಕೆ ‌₹ 120 ರಿಂದ 140 ಇದೆ. ಕಾಲ ಕಾಲಕ್ಕೆ ಅಗತ್ಯವಾದ ತರಬೇತಿಯನ್ನು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ನೀಡುತ್ತಾರೆ. ಮಾವಿನ ತೋಟಗಳಿಗಿಂತಲೂ ಗೋಡಂಬಿ ಹೆಚ್ಚು ಉಪಯುಕ್ತ ಎನ್ನುತ್ತಾರೆ ಅಧಿಕಾರಿಗಳು. ಆಸಕ್ತ ರೈತರು ಕುರುಬೂರಿನ ಗೋಡಂಬಿ ಸಂಶೋಧನಾ ಕೇಂದ್ರ ಅಥವಾ ನಗರದ ತೋಟಗಾರಿಕೆ ಇಲಾಖೆ ಸಂಪರ್ಕಿಸಬಹುದು.

ಅಂಕಿ ಅಂಶ

785 ಹೆಕ್ಟೇರ್‌ ತಾಲ್ಲೂಕಿನಲ್ಲಿ ಗೋಡಂಬಿ ಬೆಳೆದಿರುವ ಪ್ರದೇಶ

270 ಗಿಡ ಹೆಕ್ಟೇರ್‌ಗೆ ನಾಟಿ ಮಾಡುವ ಸಂಖ್ಯೆ

6 ಅಡಿ ಗಿಡ ನಾಟಿ ಮಾಡುವ ಅಂತರ

* * 

4 ಎಕರೆಗೆ 5.5 ಟನ್‌ ಇಳುವರಿ ಪಡೆಯುತ್ತಿದ್ದೇನೆ. ಒಂದು ಟನ್‌ಗೆ ₹ 16 ರಿಂದ 18 ಸಾವಿರ ಬೆಲೆ ಇದೆ. ನಿರ್ವಹಣೆಯ ಖರ್ಚು ಕಡಿಮೆ. ನನಗೆ ಉತ್ತಮವಾದ ಲಾಭ ಬಂದಿದೆ.
ತಿಪ್ಪಾರೆಡ್ಡಿ,
ರೈತ, ಆಲಂಬಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT