ಸಂಪಾದಕೀಯ

ಬೆಂಕಿ ಅನಾಹುತ ತಡೆಗೆ ಕಟ್ಟುನಿಟ್ಟು ಕ್ರಮ ಬೇಕು

ಬಹುಮಹಡಿ ಕಟ್ಟಡಗಳು, ಮಾಲ್‌ಗಳು, ಅಂಗಡಿಗಳು, ಜನದಟ್ಟಣೆ ಹೆಚ್ಚಿರುವ ವಾಣಿಜ್ಯ ಸ್ಥಳಗಳಲ್ಲಿ ಬೆಂಕಿ ನಿರೋಧಕ ವ್ಯವಸ್ಥೆ ಹೇಗಿದೆ ಎನ್ನುವುದನ್ನು ಸಮಗ್ರ ಪರಿಶೀಲನೆಗೆ ಒಳಪಡಿಸಬೇಕು

ಬೆಂಕಿ ಅನಾಹುತ ತಡೆಗೆ ಕಟ್ಟುನಿಟ್ಟು ಕ್ರಮ ಬೇಕು

ಬೆಂಕಿ ಅನಾಹುತಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಜೀವಹಾನಿಯಾದಾಗ ‘ತುರ್ತು ಕ್ರಮ, ತನಿಖೆಗೆ ಆದೇಶ, ವರದಿ, ಪರಿಹಾರೋಪಾಯಗಳ ಘೋಷಣೆ’ ಒಂದಿಷ್ಟು ದಿನ ಸದ್ದು ಮಾಡುತ್ತವೆ. ಕ್ರಮೇಣ ಇಡೀ ಅವಘಡ ಜನಕ್ಕೆ ಮರೆತು ಹೋಗುತ್ತದೆ. ಅಧಿಕಾರಿಗಳಿಗೆ ಬೇಕಿರುವುದೂ ಇದೇ. ಮತ್ತೆ ಜನ, ಸರ್ಕಾರಿ ಅಧಿಕಾರಶಾಹಿ ಎಚ್ಚೆತ್ತುಕೊಳ್ಳುವುದು ಇನ್ನೊಂದು ದೊಡ್ಡ ಅವಘಡ ಆದಾಗಲೇ. ದೊಡ್ಡ ದೊಡ್ಡ ಅನಾಹುತಗಳಿಂದಲೂ ನಾವು ಪಾಠ ಕಲಿಯಲು ತಯಾರಿಲ್ಲ ಎನ್ನುವುದನ್ನು ಇದು ತೋರಿಸುತ್ತದೆ. ಮೂರು ದಿನಗಳ ಹಿಂದೆ ಮುಂಬೈಯ ಲೋವರ್‌ ಪರೇಲ್‌ನ ಬಹುಮಹಡಿ ಕಟ್ಟಡವೊಂದರ ತಾರಸಿಯಲ್ಲಿನ ಬಾರ್‌ ಮತ್ತು ರೆಸ್ಟೊರೆಂಟ್‌ನಲ್ಲಿ ಬೆಂಕಿ ದುರಂತ ಸಂಭವಿಸಿ 14 ಜನರನ್ನು ಬಲಿ ತೆಗೆದುಕೊಂಡಿದೆ. ಇವರಲ್ಲಿ ಹೆಚ್ಚಿನವರು ಅಸುನೀಗಿದ್ದು ಹೊಗೆಯಿಂದ ಉಸಿರು ಕಟ್ಟಿಕೊಂಡು. ಅಂದರೆ, ಅನಾಹುತ ಸಂಭವಿಸಿದಾಗ ಪ್ರಾಣ ಉಳಿಸಿಕೊಳ್ಳಲು ಪರ್ಯಾಯ ದಾರಿಯೇ ಇವರಿಗೆ ಇರಲಿಲ್ಲ. ಇದು ತಪ್ಪಿಸಬಹುದಾಗಿದ್ದ ಸಾವು. ಕಟ್ಟಡ ನಿರ್ಮಾಣಕ್ಕೆ ಮತ್ತು ರೆಸ್ಟೊರೆಂಟ್‌ಗೆ ಪರವಾನಗಿ ಕೊಡುವಾಗ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಿಲ್ಲ ಮತ್ತು ಆ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನಿಗಾ ವಹಿಸಿಲ್ಲ ಎಂಬುದನ್ನು ಇದು ಮತ್ತೆ ಮತ್ತೆ ನೆನಪಿಸುತ್ತಿದೆ.

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ ಬೃಹನ್‌ ಮುಂಬೈ ಮಹಾನಗರ ಪಾಲಿಕೆ ಈಗ ನಿದ್ದೆಯಿಂದ ಮೇಲೆದ್ದಿದೆ. ಎರಡೇ ದಿನಗಳಲ್ಲಿ 624 ಹೋಟೆಲ್‌ಗಳು, ಬಹುಮಹಡಿ ಕಟ್ಟಡಗಳು, ಮಾಲ್‌ಗಳಲ್ಲಿ ತಪಾಸಣೆ ನಡೆಸಿದೆ. 314 ಸ್ಥಳಗಳಲ್ಲಿ ಅಕ್ರಮವಾಗಿ ಮತ್ತು ನಿಯಮ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳನ್ನು ನೆಲಸಮ ಮಾಡಿದೆ. ಮುಂಬೈಯಂತಹ ಬೃಹತ್‌ ಮಹಾನಗರಕ್ಕೆ ಹೋಲಿಸಿದರೆ ಇದು ಸಾಸಿವೆ ಕಾಳಿನಷ್ಟು ಎನ್ನುವುದೇನೋ ನಿಜ. ಆದರೆ ಇದು ನಿಯಮಿತವಾಗಿ, ನಿರಂತರವಾಗಿ ನಡೆಯಬೇಕಾಗಿದ್ದ ಕೆಲಸ. ಜನರ ಕಣ್ಣೊರೆಸಲು, ಟೀಕೆಯಿಂದ ಪಾರಾಗಲು ಈಗ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಮೊದಲೇ ಈ ಕೆಲಸ ಮಾಡಿದ್ದರೆ ಅಮಾಯಕ ಜೀವಗಳು ಬಲಿಯಾಗುವುದು ತಪ್ಪುತ್ತಿತ್ತು.

ನಿಯಮ ಉಲ್ಲಂಘನೆಗಳಿಗೆ ಮುಖ್ಯ ಕಾರಣ, ಎಂಜಲು ಕಾಸಿಗಾಗಿ ಕೈಯೊಡ್ಡುವ ಭ್ರಷ್ಟ ಅಧಿಕಾರ ಶಾಹಿ. ಏಕೆಂದರೆ ಬಹುಮಹಡಿ ಕಟ್ಟಡಗಳು, ಮಾಲ್‌ಗಳು ಸೇರಿದಂತೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ, ಕಾರ್ಯ ನಿರ್ವಹಿಸುವ ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ, ಹೋಟೆಲ್‌– ರೆಸ್ಟೊರೆಂಟ್‌ಗಳಿಗೆ ಪರವಾನಗಿ ಕೊಡಲು ಅನೇಕ ನಿಯಮಗಳಿವೆ. ಬೆಂಕಿ ನಿರೋಧಕ ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅದರಲ್ಲಿ ಮುಖ್ಯವಾದದ್ದು. ಈ ಬಗ್ಗೆ ಅಗ್ನಿಶಾಮಕದಳ ಸೇರಿದಂತೆ ವಿವಿಧ ಇಲಾಖೆಗಳಿಂದ ಕಡ್ಡಾಯ ತಪಾಸಣೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಅಧಿಕಾರಿಗಳು ಪ್ರಾಮಾಣಿಕತೆಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕು. ಆದರೆ ವಾಸ್ತವವೇ ಬೇರೆ. ಹಣ ಕೊಟ್ಟರೆ ಸಾಕು; ಅಧಿಕಾರಿಗಳು ಯಾವುದಕ್ಕೆ ಬೇಕಾದರೂ ಕಣ್ಣುಮುಚ್ಚಿ ಸಹಿ ಹಾಕುತ್ತಾರೆ ಎನ್ನುವುದು ಸಾರ್ವಜನಿಕರ ಆರೋಪ. ಬಹಳಷ್ಟು ಸಂದರ್ಭಗಳಲ್ಲಿ ಅಧಿಕಾರಶಾಹಿಯ ವರ್ತನೆ ಕೂಡ ಈ ಆರೋಪವನ್ನು ಪುಷ್ಟೀಕರಿಸುವಂತೆಯೇ ಇರುತ್ತದೆ. ಅಗ್ನಿನಿರೋಧಕ ವ್ಯವಸ್ಥೆ, ತುರ್ತು ನಿರ್ಗಮನ ಮೆಟ್ಟಿಲುಗಳ ನಿರ್ಮಾಣ ಇಲ್ಲದ ಕಟ್ಟಡಗಳು ತಲೆ ಎತ್ತಿರುವುದೇ ಇದಕ್ಕೆ ಸಾಕ್ಷಿ. ಏಕೆಂದರೆ ಮುಂಬೈ ದುರಂತಕ್ಕಿಂತಲೂ ಹಿಂದೆ ನಮ್ಮ ದೇಶದಲ್ಲಿಯೇ ಎಷ್ಟೋ ದೊಡ್ಡ ದೊಡ್ಡ ಅಗ್ನಿ ಆಕಸ್ಮಿಕಗಳು ನಡೆದಿವೆ. ನೂರಾರು ಜನರನ್ನು ಬಲಿ ತೆಗೆದುಕೊಂಡಿವೆ. 80ರ ದಶಕದಲ್ಲಿ ನಮ್ಮ ಬೆಂಗಳೂರಿನಲ್ಲಿಯೇ ನಡೆದ ಸರ್ಕಸ್‌ ದುರಂತ ಇರಬಹುದು, 1997ರಲ್ಲಿ ದೆಹಲಿಯಲ್ಲಿ 59 ಜನರ ಸಾವು ಸಂಭವಿಸಿದ ಉಪಹಾರ್‌ ಸಿನಿಮಾ ಅಗ್ನಿ ದುರಂತವೇ ಇರಬಹುದು, 2011ರ ಡಿಸೆಂಬರ್‌ನಲ್ಲಿ ಕೋಲ್ಕತ್ತದಲ್ಲಿ 90 ರೋಗಿಗಳನ್ನು ಸಾವಿನ ಕೂಪಕ್ಕೆ ತಳ್ಳಿದ ಎಎಂಆರ್‌ಐ ಆಸ್ಪತ್ರೆ ಬೆಂಕಿ ಅನಾಹುತವೇ ಇರಬಹುದು... ಇವೆಲ್ಲ ನಮ್ಮ ಕಣ್ಣು ತೆರೆಸಬೇಕಾಗಿತ್ತು. ಈ ಎಲ್ಲ ದುರಂತಗಳಲ್ಲೂ ಹೆಚ್ಚಿನವರ ಸಾವಿಗೆ ಕಾರಣ ಹೊಗೆ ಮತ್ತು ಅದರಿಂದ ಉಸಿರುಕಟ್ಟಿದ್ದು. ಮುಂಬೈ ದುರಂತವೂ ಅದರ ಮುಂದುವರಿದ ಭಾಗ. ಇಂತಹ ಲೋಪ ಮತ್ತು ಅಧಿಕಾರಶಾಹಿಯ ಭ್ರಷ್ಟಕೂಪ ಮುಂಬೈಗೆ ಮಾತ್ರ ಸೀಮಿತವಲ್ಲ. ನಮ್ಮ ರಾಜ್ಯದಲ್ಲೂ ಅದರಲ್ಲೂ ಬೆಂಗಳೂರಿನಲ್ಲಿ ಇದಕ್ಕೆ ಬೇಕಾದಷ್ಟು ಪುರಾವೆಗಳು ಸಿಗುತ್ತವೆ. ಆದ್ದರಿಂದ ಇಷ್ಟು ದಿನ ತೋರಿದ ನಿರ್ಲಕ್ಷ್ಯ ಸಾಕು. ಸುರಕ್ಷತೆ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿ ಬೇಡ.

Comments
ಈ ವಿಭಾಗದಿಂದ ಇನ್ನಷ್ಟು
ಸಿ‍‍ಪಿಎಂ ರಾಜಕೀಯ ನಡೆ ಮರುಚಿಂತನೆಯ ದಿಕ್ಸೂಚಿ

ಸಂಪಾದಕೀಯ
ಸಿ‍‍ಪಿಎಂ ರಾಜಕೀಯ ನಡೆ ಮರುಚಿಂತನೆಯ ದಿಕ್ಸೂಚಿ

25 Apr, 2018
ನ್ಯಾಯಾಂಗ ಉತ್ತರದಾಯಿ ಮಸೂದೆಗೆ ಮರುಜೀವ ನೀಡಿ

ಸಂಪಾದಕೀಯ
ನ್ಯಾಯಾಂಗ ಉತ್ತರದಾಯಿ ಮಸೂದೆಗೆ ಮರುಜೀವ ನೀಡಿ

23 Apr, 2018
ಮರಣದಂಡನೆ ಮದ್ದಲ್ಲ ಶಿಕ್ಷಾಭಯ ಮೂಡಿಸಿ

ಅತ್ಯಾಚಾರಕ್ಕೆ ಮರಣ ದಂಡನೆ
ಮರಣದಂಡನೆ ಮದ್ದಲ್ಲ ಶಿಕ್ಷಾಭಯ ಮೂಡಿಸಿ

22 Apr, 2018
ಆರ್‌ಟಿಐ ವ್ಯಾಪ್ತಿಗೆ ಬಿಸಿಸಿಐ ಶಿಫಾರಸು ಸ್ವಾಗತಾರ್ಹ

ಸಂಪಾದಕೀಯ
ಆರ್‌ಟಿಐ ವ್ಯಾಪ್ತಿಗೆ ಬಿಸಿಸಿಐ ಶಿಫಾರಸು ಸ್ವಾಗತಾರ್ಹ

20 Apr, 2018
ನಗದು ಕೊರತೆ ಆತಂಕ ತಕ್ಷಣ ದೂರವಾಗಲಿ

ಸಂಪಾದಕೀಯ
ನಗದು ಕೊರತೆ ಆತಂಕ ತಕ್ಷಣ ದೂರವಾಗಲಿ

19 Apr, 2018