ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿರಾ ಕ್ಯಾಂಟೀನ್ ತೆರೆಯಲು ಹರಸಾಹಸ

ಟೆಂಡರ್‌ ಕರೆದರೂ ಬಾರದ ಹೂಡಿಕೆದಾರರು, ಇಂದು ಮತ್ತೊಮ್ಮೆ ಟೆಂಡರ್‌ !
Last Updated 18 ಜನವರಿ 2018, 12:27 IST
ಅಕ್ಷರ ಗಾತ್ರ

ತುಮಕೂರು: ಈ ತಿಂಗಳಲ್ಲಿ ಜಿಲ್ಲೆಯ ಹನ್ನೊಂದು ಕಡೆ ಇಂದಿರಾ ಕ್ಯಾಂಟೀನ್‌ ತೆರೆಯುವ ಕನಸು ಸದ್ಯಕ್ಕೆ ಈಡೇರುವಂತೆ ಕಾಣುತ್ತಿಲ್ಲ. ಕ್ಯಾಂಟೀ‌ನ್‌ ನಡೆಸಲು ಖಾಸಗಿ ವ್ಯಕ್ತಿಗಳು ಉತ್ಸಾಹ ತೋರುತ್ತಿಲ್ಲ ಎಂದು ತಿಳಿದು ಬಂದಿದೆ.

ನಗರದ ನಾಲ್ಕು ಕಡೆ ಹಾಗೂ ಜಿಲ್ಲೆಯ ನಗರ ಮತ್ತು ಪಟ್ಟಣಗಳು ಸೇರಿ 11 ಕಡೆ ಇಂದಿರಾ ಕ್ಯಾಂಟೀನ್‌ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದಷ್ಟು ಬೇಗ ಪ್ರಾರಂಭಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹರಸಾಹಸ ಪಡುತ್ತಿದ್ದಾರೆ.

ಜಿಲ್ಲಾ ಯೋಜನಾ ನಿರ್ದೇಶಕರ ಕಚೇರಿಯಿಂದ ಕ್ಯಾಂಟೀನ್ ನಿರ್ವಹಣೆಗೆ 2 ವಿಭಾಗ ಮಾಡಿ ಟೆಂಡರ್‌ ಕರೆಯಲಾಗಿತ್ತು. ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ, ಶಿರಾ ಹಾಗೂ ಇನ್ನಿತರ ತಾಲ್ಲೂಕು ಕೇಂದ್ರಗಳಿಗೆ ಒಂದು ಹಾಗೂ ತುಮಕೂರಿನ 4 ಕ್ಯಾಂಟೀನ್ ನಿರ್ವಹಣೆಗೆ ಸಂಬಂಧಪಟ್ಟಂತೆ ಮತ್ತೊಂದು ಟೆಂಡರ್‌ ಕರೆಯಲಾಗಿತ್ತು.

ಟೆಂಡರ್‌ನಲ್ಲಿ ಬೆರಳಣಿಕೆಯ ಮಂದಿ ಮಾತ್ರ ಭಾಗವಹಿಸಿದ್ದರು. ಆದರೆ ಯಾರಿಗೂ ಅರ್ಹತೆ ಇರಲಿಲ್ಲ. ನಿಯಮಾವಳಿಗಳನ್ನು ಪಾಲಿಸ
ಬೇಕು. ಈ ನಿಯಮಾವಳಿಗಳಿಗೆ ಅನುಗುಣವಾಗಿ ಯಾವೊಬ್ಬರೂ ಟೆಂಡರ್‌ ದಾಖಲಿಸಿರಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

’ಮೊದಲ ಟೆಂಡರ್‌ ವಿಫಲವಾದ ಕಾರಣ ಮತ್ತೊಂದು ಟೆಂಡರ್‌ ಕರೆಯಲಾಗಿದೆ. ಎರಡನೇ ಟೆಂಡರನ್ನು ಜ.18 (ಗುರುವಾರ)  ತೆರೆಯಲಾಗುವುದು. ಈ ಸಲ ಅರ್ಹರು ಸಿಗಲಿದ್ದಾರೆ ಎಂಬ ವಿಶ್ವಾಸವಿದೆ’ ಎಂದರು.

ನಗರದ ಬಾಳನಕಟ್ಟೆ, ಶಿರಾ ಗೇಟ್ ಹಾಗೂ ಮಹಾನಗರ ಪಾಲಿಕೆ ಆವರಣದಲ್ಲಿ ಕ್ಯಾಂಟೀನ್ ಅನ್ನು ಜ. 26ರಂದು ಉದ್ಘಾಟನೆ ಮಾಡಲು ಶಾಸಕರು ಉತ್ಸುಕರಾಗಿದ್ದಾರೆ. ಆದರೆ ಟೆಂಡರ್‌ ಹೇಗಾಗಲಿದೆ ಎಂಬುದನ್ನು ಕಾದು ನೋಡುತ್ತಿದ್ದೇವೆ ಎಂದರು.

ಈಗಾಗಲೇ ಶಿರಾದಲ್ಲಿ ಇಂದಿರಾ ಕ್ಯಾಂಟೀನ್ ಸಾಂಕೇತಿಕವಾಗಿ ಉದ್ಘಾಟನೆ ಆಗಿದೆ. ಬೆಂಗಳೂರು ಹೊರತುಪಡಿಸಿದರೆ ರಾಜ್ಯದ ಉದ್ಘಾಟನೆ
ಯಾದ ಮೊದಲ ಕ್ಯಾಂಟೀನ್ ಎಂಬ ಹೆಗ್ಗಳಿಕೆ ಶಿರಾ ಕ್ಯಾಂಟೀನ್‌ನದ್ದು.

’ಕ್ಯಾತ್ಸಂದ್ರದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ನಿವೇಶನ ಗುರುತಿಸುವಲ್ಲಿ ಸ್ವಲ್ಪ ಹಿನ್ನಡೆಯಾಗಿದ್ದರಿಂದ ನಿರ್ಮಾಣ ಪೂರ್ಣವಾಗಿಲ್ಲ. ಹೀಗಾಗಿ, ಸ್ವಲ್ಪ ತಡವಾಗಿ ಅದನ್ನು ಉದ್ಘಾಟನೆ ಮಾಡುವ ಸಾಧ್ಯತೆಗಳಿವೆ. ಫೆಬ್ರುವರಿಯಲ್ಲಿ ಜಿಲ್ಲೆಯ ಎಲ್ಲ ಕಡೆ ಇಂದಿರಾ ಕ್ಯಾಂಟೀನ್ ಕಾರ್ಯನಿರ್ವಹಿಸಲಿವೆ’  ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಅಧಿಕಾರಿಗಳು.

ತುಮಕೂರು ನಗರದಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡಗಳು ಬಹುತೇಕ ಮುಗಿದಿದ್ದು, ಜನರ ಆಕರ್ಷಣೆಯ ಕೇಂದ್ರಗಳಾಗಿವೆ. ಯಾವಾಗಿನಿಂದ ತಿಂಡಿ, ಊಟ ಹಾಕುತ್ತಾರೆ ಎಂದು ದಾರಿಹೋಕರು ಪ್ರಶ್ನಿಸುತ್ತಿದ್ದಾರೆ.
**
ಬೇಗ ಪ್ರಾರಂಭವಾಗಲಿ
’ಕ್ಯಾಂಟೀನ್ ನಿರ್ಮಾಣ ಕಾಮಗಾರಿ ಪ್ರಾರಂಭವಾದಾಗಿನಿಂದಲೂ ಜನರು ಇದರ ಉದ್ಘಾಟನೆಗೆ ಕಾಯುತ್ತಿದ್ದಾರೆ. ಈ ಭಾಗದಲ್ಲಿ ಬಡವರು, ಕೂಲಿಕಾರ್ಮಿಕರು, ಲಗೇಜ್ ಆಟೊ ಚಾಲಕರು, ಕಾರ್ಮಿಕರು, ಮಂಡಿಪೇಟೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರದೇಶದಲ್ಲಿ ಇದ್ದಾರೆ’ ಎಂದು ಚಾಲಕ ಮುಜೀಬ್ ಪಾಷಾ ’ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

’ಬಡವರು, ಕೂಲಿಕಾರ್ಮಿಕರು ಹೊಟೇಲ್‌ಗೆ ಹೋದರೆ ಊಟಕ್ಕೆ ಕನಿಷ್ಠ ₹ 50 ಬೇಕು. ಎರಡು ಊಟಕ್ಕೆ, ಉಪಹಾರಕ್ಕೆ ದಿನಕ್ಕೆ ಕನಿಷ್ಠ ₹ 150 ಆದರೂ ಬೇಕು. ಅದೇ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ, ಉಪಾಹಾರ ಲಭಿಸಿದರೆ ಅನುಕೂಲ ಆಗುತ್ತದೆ’ ಎಂದು ಹೇಳಿದರು.
**
ಉದ್ಘಾಟನೆಗೆ ಪ್ರಯತ್ನ ನಡೆದಿದೆ
’ಜನವರಿ ಮೊದಲ ವಾರದಲ್ಲಿಯೇ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಲೇಬೇಕು ಎಂಬ ದಿಶೆಯಲ್ಲಿ ಪ್ರಯತ್ನ ಮಾಡಲಾಯಿತು. ನಿರ್ಮಾಣ ಕಾಮಗಾರಿ ಹಾಗೂ ಟೆಂಡರ್ ಪ್ರಕ್ರಿಯೆಯಲ್ಲಿ ಸ್ವಲ್ಪ ನಿಧಾನವಾಗಿದೆ. ಕ್ಯಾಂಟೀನ್ ನಿರ್ಮಾಣ ಬಹುತೇಕ ಪೂರ್ಣಗೊಂಡಿವೆ’ ಎಂದು ಶಾಸಕ ಡಾ.ರಫೀಕ್ ಅಹಮದ್ ’ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT