ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಬಿಎ ಎಚ್‌ಆರ್‌ಗೆ ಬೆಲೆ ಇದೆಯೇ?

Last Updated 11 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಅನಿತ್ ಥಾಮಸ್‌, ಊರು ಬೇಡ

1. ‌ನಾನು ಬಿಕಾಂ 6ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದು, ಮುಂದೆ ಎಂ‌ಬಿಎಯಲ್ಲಿ ಎಚ್‌ಆರ್‌ ಮಾಡಬೇಕೆಂದಿದ್ದೇನೆ. ಇದಕ್ಕೆ ಈಗ ಪ್ರಾಮುಖ್ಯ ಇದೆಯೇ? ಮುಂದೆ ಎಚ್‌ಆರ್‌ ಕೋರ್ಸ್‌ ಮಾಡಿದರೆ ಯಾವ ರೀತಿಯಾದ ಕೆಲಸ ಸಿಗಬಹುದು?

ನೀವು ಸರಿಯಾದ ಸಮಯದಲ್ಲಿ ಪ್ರಶ್ನೆ ಕೇಳಿದ್ದೀರಿ. ಎಂಬಿಎ ಪದವಿಗಾಗಿ ಲಕ್ಷಾಂತರ ಜನ ಪ್ರಯತ್ನಿಸುತ್ತಾರೆ. ಸಿಎಟಿ–ಕಾಮನ್‌ ಅಡ್ಮಿಶನ್‌ ಟೆಸ್ಟ್‌ ಪರೀಕ್ಷೆಯನ್ನು ನೀವು ಬರೆಯಬೇಕು. ಆಗಸ್ಟ್‌ ತಿಂಗಳಲ್ಲಿ ನೋಟಿಫಿಕೇಷನ್‌ ಬರುತ್ತದೆ. ಇದಕ್ಕೆ ಒಳ್ಳೆಯ ಕೋಚಿಂಗ್‌ ಕ್ಲಾಸ್‌ಗೂ ಸೇರಬಹುದು. ವೇಗ ಮತ್ತು ನಿಖರತೆ ಬಹಳ ಮುಖ್ಯ. ತರಬೇತಿ ಅಭ್ಯಾಸ ಮಾಡಿದರೆ ಖಂಡಿತ ಉತ್ತೀರ್ಣರಾಗುತ್ತೀರಿ. ಈ ಸಿಎಟಿ ಪರೀಕ್ಷೆಯನ್ನು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಐಐಎಂ) ಮತ್ತು ಸಿಎಟಿ ಸ್ಕೋರ್‌ ಅನ್ನು ಕೇಳುವ ಇನ್‌ಸ್ಟಿಟ್ಯೂಟ್‌ಗಳಿಗೆ, ಆಲ್‌ ಇಂಡಿಯ ಅಡ್ಮಿಶನ್‌ ಟೆಸ್ಟ್‌. ಇದರಲ್ಲಿ ಪಾಸಾದರೆ, ಗುಂಪುಚರ್ಚೆ, ಸಂದರ್ಶನ ಸಹ ಇರುತ್ತದೆ.

ಈ ಪರೀಕ್ಷೆಯಲ್ಲಿ ವರ್ಬಲ್‌ ಎಬಿಲಿಟಿ (ವಿಎ), ಕ್ವಾಂಟಿಟೇಟಿವ್‌ ಎಬಿಲಿಟಿ (ಪ್ರಶ್ನೆ–ಉತ್ತರ) ರೀಡಿಂಗ್‌ ಕಾಂಪ್ರಹೆನ್‌ಷನ್‌ (ಆರ್‌ಸಿ) ಲಾಜಿಕಲ್‌ ರೀಸನಿಂಗ್‌ (ಎಲ್‌ಆರ್‌), ಡ್ಯಾಟ್‌ ಇಂಟರ್‌ಪ್ರಿಟೇಷನ್‌ (ಡಿಐ) ಅನ್ನು ಪರೀಕ್ಷಿಸುತ್ತಾರೆ. ಒಂದರ ನಂತರ ಒಂದು ಐಐಎಮ್‌ಗಳು ಈ ಪರೀಕ್ಷೆಯನ್ನು ನಡೆಸುತ್ತಾರೆ. ಪರೀಕ್ಷೆ 3 ಗಂಟೆಗಳ ಕಾಲ. ಇದರ ವ್ಯಾಲಿಡಿಟಿ ಒಂದು ವರ್ಷ.

ಸಿಎಟಿ ಪರೀಕ್ಷೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಎಲಿಜಿಬಿಲಿಟಿ ಕೊನೆಯ ವರ್ಷ ಬರೆಯುತ್ತಿರುವ ಡಿಗ್ರಿಯವರು, ಡಿಗ್ರಿ ಪಡೆದವರು, ಜನರಲ್‌ ಕ್ಯಾಟಗರಿಯಲ್ಲಿ ಶೇ 50 ಅಂಕ ಪಡೆದವರು ಇದಕ್ಕೆ ದಾಖಲಾಗಬಹುದು. ಎಸ್‌ಸಿ/ಎಸ್‌ಟಿ ಅವರಿಗೆ ಶೇ 45 ಅಂಕ ಒಂದಿದ್ದರೆ ಸಾಕು. 99 ಸೆಂಟರ್‌ಗಳಲ್ಲಿ ಪರೀಕ್ಷೆ ನಡೆಯುತ್ತದೆ. www.iimcat.ac.in ವೆಬ್‌ಸೈಟಿನಲ್ಲಿ ಪರೀಕ್ಷೆಯ ನೋಟಿಫಿಕೇಷನ್‌, ಆನ್‌ಲೈನ್‌ ಅಪ್ಲಿಕೇಶನ್‌, ಸಿಲೆಬಸ್‌, ಯಾವುದೇ ಬದಲಾವಣೆ ಇದ್ದಲ್ಲಿ ಅದರ ವಿವರ, ಈ ರೀತಿಯ ಸಂಪೂರ್ಣ ವಿವರವನ್ನು ಪಡೆಯಬಹುದು. ಮ್ಯಾನೇಜ್‌ಮೆಂಟ್‌ ಕೋರ್ಸ್‌ಗಳನ್ನು ಹಲವಾರು ಸ್ಪೆಷಲೈಜೇಷನ್‌ನಲ್ಲಿ ಮಾಡಬಹುದು. ಅದರಲ್ಲಿ ಪ್ರಖ್ಯಾತವಾದ ಮತ್ತು ಆಯ್ಕೆಪಡಲು ವಿದ್ಯಾರ್ಥಿಗಳು ಇಚ್ಚಿಸುವುದು:

1. Marketing

2. Finance

3. Human Resource Management (HR)

4. IT/ Systems

5. Operations

6. Entrepreneurship

ನೀವು ಮಾಡಲು ಇಚ್ಛಿಸುತ್ತಿರುವುದು MBA HR. ಇದನ್ನು ನೀವು ಮಾಡಬೇಕಾದರೆ ನಿಮಗೆ ಜನಗಳಲ್ಲಿ ಸೌಹಾರ್ದದಿಂದ ವರ್ತಿಸುವ ಸಹನೆ, ಇನ್ನೊಬ್ಬರ ಸಮಸ್ಯೆ ಕೇಳುವ ಸಹನೆ, ಒಳ್ಳೆಯ ಸಮಾಧಾನಕರ ವರ್ತನೆ, ಯಾವುದೇ ವಿಷಯವನ್ನು ಹೇಳುವ ರೀತಿ, ಮನಸ್ಸಿನಲ್ಲಿ ಯಾವುದು ಸರಿ, ಯಾವುದು ತಪ್ಪು ಅಂತ ನಿರ್ಣಯಿಸುವ ಕ್ಷಮತೆಗಳು ನಿಮ್ಮಲ್ಲಿ ಇವೆಯೇ ನೋಡಿಕೊಳ್ಳಿ.

HR ಸ್ಪೆಷಲೈಜೇಷನ್‌ನಲ್ಲಿ ತೆಗೆದುಕೊಂಡಲ್ಲಿ ನೀವು ಕಂಪನಿಗೆ ಜನರನ್ನು ಆಯ್ಕೆ ಹೇಗೆ ಮಾಡಬೇಕು, ಹೇಗೆ ತರಬೇತಿ ಕೊಡಬೇಕು, ಸಿಬ್ಬಂದಿಗಳಿಗೆ ಬೇಕಾದ ಸಂಬಳ ಮತ್ತು ಇತರ ಉಪಯೋಗಗಳು, ಪರ್ಫಾರ್ಮೆನ್ಸ್‌ ಅಪ್ರೇಸಲ್, ಅವರ ಕಷ್ಟಗಳನ್ನು ಕೇಳುವ ಜವಾಬ್ದಾರಿ ಎಲ್ಲಾ ನಿಮ್ಮದೇ. ಉದ್ಯೋಗಾವಕಾಶಗಳು ಬಹುರಾಷ್ಟ್ರೀಯ ಕಂಪನಿಗಳಲ್ಲಿ, ಇತರ ಕೈಗಾರಿಕೆಗಳಲ್ಲಿ ದೊರೆಯುತ್ತದೆ.

CAT ಅಲ್ಲದೇ MAT  (ಮ್ಯಾನೇಜ್‌ಮೆಂಟ್ ಆಪ್ಟಿಟ್ಯೂಡ್ ಟೆಸ್ಟ್) ಅನ್ನು ಆಲ್ ಇಂಡಿಯ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ ನಡೆಸುತ್ತಾರೆ. ಹಲವು ಕಾಲೇಜುಗಳು ಈ ಸ್ಕೋರನ್ನು ಬೆಳೆಸುತ್ತಾರೆ.

ಇನ್ನು ರಾಜ್ಯಮಟ್ಟದ ಪರೀಕ್ಷೆಗಳು ಇವೆ. ಕೆಇಎ (KEA) ಇವರು ಕರ್ನಾಟಕದಲ್ಲಿ MBA ಕಾಲೇಜುಗಳ ಪ್ರವೇಶಕ್ಕೆ PGCET ನಡೆಸುತ್ತಾರೆ. 2 ವರ್ಷಗಳ ಕೆಲಸದ ಅನುಭವ ಬೇಕು. ನಂತರ GMAT ಮತ್ತು TOEFL ಪರೀಕ್ಷೆ ಬರೆದರೆ ಅಮೆರಿಕದಲ್ಲಿ ಉನ್ನತ MBA ವ್ಯಾಸಂಗ ಸಹ ಮಾಡಬಹುದು.

ಮಂಜುನಾಥ್ ಎನ್‌, ಊರು ಬೇಡ

2. ನಾನು 2016ರಲ್ಲಿ ಸಿವಿಲ್ ಎಂಜಿನಿಯರಿಂಗ್ ಮುಗಿಸಿ, ಈಗ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ಮುಂದೆ ಭೂಗೋಳಶಾಸ್ತ್ರದಲ್ಲಿ ಬಾಹ್ಯವಾಗಿ (external) ಉನ್ನತ ವ್ಯಾಸಂಗ ಮಾಡಬಹುದೇ? ಮಾಡಿದರೆ ಇದನ್ನು ಕೆ-ಸೆಟ್ ಪರೀಕ್ಷೆಗೆ ಪರಿಗಣಿಸುತ್ತಾರೆಯೇ? ಇದಕ್ಕೆ ಸಂಬಂಧಿಸಿದ ಕರ್ನಾಟಕದ ಉತ್ತಮ ವಿದ್ಯಾಸಂಸ್ಥೆಗಳು ಯಾವುವು?

ನಿಮಗೆ ಸಿವಿಲ್‌ ಎಂಜಿನಿಯರಿಂಗ್‌ ಮಾಡಿ ಉನ್ನತ ಶಿಕ್ಷಣದ ಕಡೆ ಮನಸ್ಸು ಮಾಡಿದ್ದೀರಿ, ಸಂತೋಷ. ನೀವು ಏನು ಮಾಡಬೇಕು ಅನ್ನುವ ವಿಷಯದಲ್ಲಿ ತುಮುಲ ವ್ಯಕ್ತವಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆ ಯಾವುದು? ಯಾವ ಕಾರಣಕ್ಕೆ? ಎಲ್ಲಿ ಬರೆಯುತ್ತಿದ್ದೀರಾ? – ಎನ್ನುವುದನ್ನು ಸ್ಪಷ್ಟಪಡಿಸಿಲ್ಲ. ಪ್ರಶ್ನೆಗಳು ಪೂರ್ಣ ವಿವರದೊಂದಿಗೆ ಇದ್ದರೆ, ಸರಿಯಾದ ಸಲಹೆ ಲಭಿಸುತ್ತದೆ.

ನಿಮ್ಮ ಆಸಕ್ತಿ ಭೂಗೋಳಶಾಸ್ತ್ರ ಎಂದಿದ್ದೀರಿ. ಭೂಗೋಳಶಾಸ್ತ್ರ ಹಲವಾರು ವಿಜ್ಞಾನದ ಕವಲುಗಳನ್ನು ಒಳಗೊಂಡ ಅಂತರ್‌ಶಿಸ್ತೀಯ ಶಾಸ್ತ್ರ. ಭೂಗೋಳಶಾಸ್ತ್ರ ಪ್ರಪಂಚದ ಹಲವಾರು ವ್ಯಾಸಂಗದಲ್ಲಿ ಭಾಗಿಯಾಗಿದೆ. ಸ್ಪೇಸ್‌ ಸೈನ್ಸ್‌, ಅರ್ತ್‌ ಸೈನ್ಸ್‌,  ಅಟ್‌ಮಾಸ್‌ಫಿಯರ್‌ ಸೈನ್ಸ್‌, ಎನ್ವಿರಾನ್‌ಮೆಂಟಲ್‌ ಸೈನ್ಸ್‌, ಜಿಯೋಗ್ರಾಫಿಕ್‌ ಇನ್ಫರ್‌ಮೇಷನ್‌ ಸಿಸ್ಟಮ್‌ ಮತ್ತು ರೆಮೋಟ್‌ ಸೈನ್ಸಿಂಗ್‌, ಜಿಯೋ ಇನ್ಫರ್‌ಮೆಟಿಕ್‌ ಹೀಗೆ ಹಲವಾರು ಶಾಖೆಗಳಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶವಿದೆ.

ದೂರಶಿಕ್ಷಣ ಕೋರ್ಸ್‌ ಇದ್ದು, ನೀವು ಉತ್ತಮವಾದ ಕಾಲೇಜಿನಲ್ಲಿ 2 ವರ್ಷದ ಸ್ನಾತಕೋತ್ತರ ಡಿಗ್ರಿ ಪಡೆದರು ಉದ್ಯೋಗಾವಕಾಶಗಳು ಇದೆ.

ಕರ್ನಾಟಕದಲ್ಲಿ ಮಾಡಬೇಕು ಎನ್ನುವ ಭಾವನೆಗಳನ್ನು ದೂರಸರಿಸಿ, ಉತ್ತಮ ಕಾಲೇಜು ಯಾವುದು, ಅದಕ್ಕೆ ತಕ್ಕ ಸಿದ್ಧತೆ ನಡೆಸಿ.

ಭಾರತದಲ್ಲಿ ಎನ್ವಿರಾನ್‌ಮೆಂಟಲ್‌ ಸೈನ್ಸ್‌ / ಎಂಜಿನಿಯರಿಂಗ್‌, ಸ್ನಾತಕೋತ್ತರ ಪದವಿಗಳು ಹಲವಾರು ಕಡೆ ಇದೆ. ಪ್ರತಿಯೊಂದಕ್ಕೂ ಬೇರೆ ಬೇರೆ ಪ್ರವೇಶ ಪರೀಕ್ಷೆ ಬರೆಯಬೇಕು.

ಭಾರತದಲ್ಲಿ ಕೆಲವು ಕಡೆ ಕೋರ್ಸ್‌ಗಳು

1. ಐ.ಐ.ಟಿ., ಮುಂಬೈ, ದೆಹಲಿ, (ಗೇಟ್‌ ಪರೀಕ್ಷೆ)

2. ಎಂ.ಐ.ಟಿ. (ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಮಣಿಪಾಲ)

3. ದೆಹಲಿ ವಿಶ್ವವಿದ್ಯಾಲಯ, ನವದೆಹಲಿ.

4. ಜವಹರಲಾಲ್‌ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು), ನವದೆಹಲಿ.

5. ಅಣ್ಣಾ ವಿಶ್ವವಿದ್ಯಾಲಯ, ಚೆನ್ನೈ

6. ಆಂಧ್ರ ವಿಶ್ವವಿದ್ಯಾಲಯ, ವಿಶಾಖಪಟ್ಟಣಂ ಇನ್ನೂ ಹಲವು...

ಹೊರದೇಶದಲ್ಲಿ ಅನೇಕ ಕಡೆ ಈ ವ್ಯಾಸಂಗಕ್ಕೆ ಅವಕಾಶವಿದೆ.

1. University of California (UCB), Berkeley USA

2. Harvard University, Boston, USA

3. Cornell University, New York, USA

4. University Of California, Los Angeles (UCLA) US

5. University Of Cambridge, UK

6. National University Of Singapore (NUS), Singapore

ಮತ್ತು ಇನ್ನೂ ಅನೇಕ.

ಕೆಎಸ್‌ಇಟಿ ಪರೀಕ್ಷೆಗೆ ಅರ್ಹತೆ ಇದೆಯೇ ಅಂತ ಕೇಳಿದ್ದೀರಿ. ಇದು ಕರ್ನಾಟಕದಲ್ಲಿ, ಉಪನ್ಯಾಸಕರಾಗಿ ಕೆಲಸ ಮಾಡಲು ಬಯಸಿದಲ್ಲಿ, ಸಂಬಂಧಿಸಿದ ಪರೀಕ್ಷೆ. ನೀವು ಖಚಿತವಾಗಿ ಏನು ಮಾಡಲು ಆಸಕ್ತಿ ಇದೆ ಅನ್ನುವುದನ್ನು ಗುರುತಿಸಿ, ಮುಂದುವರಿಯಿರಿ.

ಪೂಜಿತಾ ಬಿ. ಆರ್‌, ಊರು ಬೇಡ

3. ದ್ವಿತೀಯ ಪಿಯುಸಿ ಪರೀಕ್ಷೆಯ ನಂತರ ಸರ್ಕಾರಿ ಕೆಲಸ ಪಡೆಯಲು ಯಾವ ರೀತಿಯ ಪರೀಕ್ಷೆಗಳು ಇವೆ ತಿಳಿಸಿ.

ಪಿ.ಯು.ಸಿ. ನಂತರವೇ ಏಕೆ ಕೆಲಸ? ನಿಮಗೆ ಆರ್ಥಿಕವಾದ ತೊಂದರೆ ಇದ್ದಲ್ಲಿ, ನೀವು ಕೆಲಸವನ್ನು ಹುಡುಕಬಹುದು. ಅದರ ಜೊತೆಯಲ್ಲೇ ದೂರಶಿಕ್ಷಣದ ಮೂಲಕ ಡಿಗ್ರಿ ಪಡೆಯಿರಿ. ಡಿಗ್ರಿಯ ನಂತರ ಮಾಡಬಹುದಾದ ಕೆಲಸಗಳು, ಸರ್ಕಾರಿ ಉದ್ಯೋಗಗಳು ಬಹಳವಿದೆ.

ಪಿಯುಸಿ ನಂತರ ಸರ್ಕಾರದ ಹಲವಾರು ವಿವಿಧ ವಿಭಾಗಗಳಲ್ಲಿ ಸ್ಟೈನೋಗ್ರಾಫರ್, ಅಕೌಂಟ್ಸ್ ಕ್ಲರ್ಕ್... ಈ ರೀತಿಯ ಹುದ್ದೆಗಳಿಗೆ ಪರೀಕ್ಷೆ ಬರೆದು, ಉತ್ತೀರ್ಣರಾದರೆ ಸರ್ಕಾರಿ ನೌಕರಿಗೆ ಸೇರಬಹುದು.

ಸರ್ಕಾರಿ ನೌಕರಿ ಅಲ್ಲದೆ, ಫಾರಿನ್ ಲ್ಯಾಂಗ್ವೇಜ್‌, ಆಫೀಸ್ ಮ್ಯಾನೇಜ್‌ಮೆಂಟ್, ಬ್ಯೂಟಿಷಿಯನ್, ಅನಿಮೇಷನ್, ಯೋಗ ಟ್ಯೂಷನ್, ಟೀಚರ್, ಅಡ್‌ಮಿನಿಸ್ಟ್ರೇಷನ್, ಶಾಲೆ ಕಾಲೇಜುಗಳಲ್ಲಿ, ಬ್ಯಾಂಕ್ ಕೆಲಸಗಳು, ಮಾರ್ಕೆಟಿಂಗ್, ರೀಟೇಲ್ ಮ್ಯಾನೇಜ್‌ಮೆಂಟ್ ಮತ್ತು ಇನ್ನೂ ಅನೇಕ ಕ್ಷೇತ್ರದಲ್ಲಿ ಉದ್ಯೋಗ ಅವಕಾಶಗಳಿವೆ. ಸಂಪೂರ್ಣ ಮಾಹಿತಿ ಇರುವ ಪುಸ್ತಕಗಳು ಅಂಗಡಿಗಳಲ್ಲಿ ಸಿಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT