ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡಾಲಿ’ಯ ಮನಸಲ್ಲಿ ಹೊಸತನದ ಗಾಳಿ

Last Updated 22 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನಟ ಧನಂಜಯ್‌ ತಮ್ಮ ವೃತ್ತಿಬದುಕಿನ ತಿರುವಿನಲ್ಲಿದ್ದಾರೆ. ಇಂದು (ಫೆ. 23) ಬಿಡುಗಡೆಯಾಗುತ್ತಿರುವ ‘ಟಗರು’ ಚಿತ್ರದಲ್ಲಿ ಡಾಲಿ ಎಂಬ ಖಳಪಾತ್ರದ ಮೂಲಕ ತಮ್ಮೊಳಗಿನ ಖಳನನ್ನು ಹೊರಹಾಕಿ ನಿರಾಳರಾಗಿರುವ ಅವರು, ಇನ್ನು ಮುಂದೆ ಖುಷಿಕೊಡುವ ಪಾತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತೇನೆ ಎಂಬ ದೃಢನಿರ್ಧಾರವನ್ನೂ ಮಾಡಿದ್ದಾರೆ. ‘ನಾನು ನಟಿಸುವ ಪಾತ್ರಗಳು ನನ್ನ ಜೀವನಾನುಭವದಲ್ಲಿಯೇ ಜೀವತಳೆಯಬೇಕು’ ಎಂದು ನಂಬಿರುವ ಈ ಸೂಕ್ಷ್ಮ ಸಂವೇದನೆಯ ನಟನ ಜತೆಗಿನ ಮಾತುಕತೆಯ ಅಕ್ಷರರೂಪ ಇಲ್ಲಿದೆ.

* ನಟನಾವೃತ್ತಿಯ ಮಹತ್ವದ ತಿರುವಿನಲ್ಲಿ ನಿಂತ ನಿಮಗೆ ಹಿಂತಿರುಗಿ ನೋಡಿದರೆ ಏನನಿಸುತ್ತದೆ?

ನಾನು ಪಾತ್ರಗಳಿಗೋಸ್ಕರ ಹುಡುಕುತ್ತಲೇ ಇರುತ್ತೀನಿ. ‘ಅಲ್ಲಮಪ್ರಭು’ವಿನಂಥ ಪಾತ್ರವನ್ನು ಮಾಡಿ ನಂತರ ಅದಕ್ಕೆ ತದ್ವಿರುದ್ಧವಾಗಿ ‘ಟಗರು’ ಚಿತ್ರದ ಡಾಲಿ ಎಂಬ ಖಳನ ಪಾತ್ರ ನನ್ನನ್ನು ಹುಡುಕಿಕೊಂಡು ಬರುವುದೇ ನನಗೊಂದು ಖುಷಿಯ ವಿಷಯ. ನನ್ನೊಳಗಿನ ನಟ ಪಾತ್ರಗಳನ್ನು ಹುಡುಕುತ್ತಿರುವ ಹಾಗೆಯೇ ಪಾತ್ರಗಳೂ ಪಾತ್ರಧಾರಿಯನ್ನು ಹುಡುಕುತ್ತಿರುತ್ತವೆ ಅನಿಸುತ್ತದೆ. ಅಲ್ಲಮ ಮತ್ತು ಡಾಲಿ ಎರಡೂ ಹೀಗೆ ನನ್ನನ್ನು ಹುಡುಕಿಕೊಂಡು ಬಂದ ಪಾತ್ರಗಳಷ್ಟೇ ಅಲ್ಲ, ಬಹುವಾಗಿ ಕಾಡಿದ ಪಾತ್ರಗಳೂ ಹೌದು.

* ಯಾಕೆ ಡಾಲಿ ಎಂಬ ಪಾತ್ರ ನಿಮಗೆ ಅಷ್ಟು ಕಾಡಿತು?

ಇದು ನನಗೆ ಅನಿರೀಕ್ಷಿತವಾಗಿ ಬಂದ ಪಾತ್ರ. ಸೂರಿ ಕೇಳಿದರು, ನಾನೂ ತಕ್ಷಣ ಹೂ ಅಂದುಬಿಟ್ಟೆ. ಅದರ ಬಗ್ಗೆ ಸೂರಿ ಹೇಳುತ್ತ ಹೋದಾಗ ನನ್ನೊಳಗೆ ಬೇರೆಯೇ ಇಮೇಜ್‌ ಬೆಳೆಯುತ್ತ ಹೋಯಿತು. ಡಾಲಿ, ಮಾಮೂಲಿ ಕೂಗಾಟ, ರೇಪ್‌ ಸೀನ್‌ಗಳ ವಿಲನ್‌ ಅಲ್ಲ. ಇದು ಸಿನಿಮಾದ ಇನ್ನೊಂದು ಪ್ರಮುಖ ಪಾತ್ರ.

ನಂದೊಂದಿಷ್ಟು ಕೆಟ್ಟ ಅನುಭವಗಳು, ಅದರಿಂದಾದ ಕಿರಿಕಿರಿಗಳು, ಖಿನ್ನತೆ, ಅವೆಲ್ಲವೂ ಸೇರಿಕೊಂಡು ಬಹುಶಃ ನನ್ನೊಳಗೂ ಒಬ್ಬ ಖಳ ರೂಪುಗೊಳ್ಳುತ್ತಿದ್ದ ಅನಿಸುತ್ತದೆ. ಆ ಖಳ ಡಾಲಿ ಪಾತ್ರದ ರೂಪದಲ್ಲಿ ಆಚೆ ಬಂದುಬಿಟ್ಟಿದಾನೆ. ನನ್ನೊಳಗಿನ ಕೆಟ್ಟ ಮನುಷ್ಯನನ್ನು ಹೊರಹಾಕಲು ಇಂಥದ್ದೊಂದು ಪಾತ್ರ ನನಗೆ ಬೇಕಿತ್ತು. ಅದನ್ನು ಭಗವಂತ ಸರಿಯಾದ ಸಮಯದಲ್ಲಿ ಕೊಟ್ಟಿದ್ದಾನೆ.

* ನಟನೆ ಎನ್ನುವ ಪ್ರಕ್ರಿಯೆಯನ್ನು ನೀವು ಹೇಗೆ ಅರ್ಥೈಸಿಕೊಳ್ಳುತ್ತೀರಿ?

ನಟನೆಯನ್ನು ಹೇಗೆ ಅರ್ಥೈಸಬೇಕೋ ಗೊತ್ತಿಲ್ಲ, ಆದರೆ ಒಂದೊಂದು ಪಾತ್ರಕ್ಕೂ ನಾನು ಹಿಂದೆ ಕಲಿತಿದ್ದನ್ನೆಲ್ಲ ಪೂರ್ತಿ ಮರೆತು ಹೊಸದೇನನ್ನೋ ಕಲಿಯಲು ಪ್ರಯತ್ನಿಸುತ್ತಿರುತ್ತೇನೆ. ಪ್ರತಿ ಪಾತ್ರಕ್ಕೂ ನನ್ನನ್ನು ನಾನು ಖಾಲಿ ಮಾಡಿಕೊಳ್ಳಬೇಕು.

ಈಗ ಬರವಣಿಗೆಯನ್ನೇ ತೆಗೆದುಕೊಳ್ಳಿ, ಎಷ್ಟೇ ಕಾಲ್ಪನಿಕ ಎಂದರೂ ನಾವೇನನ್ನೋ ತೀವ್ರವಾಗಿ ಬರೆಯುತ್ತೇವೆ ಅಂದರೆ ಅದು ನಮ್ಮ ಬದುಕಿನಲ್ಲಿ ಕಂಡಿದ್ದೋ, ಉಂಡಿದ್ದೋ, ನೋಡಿದ್ದೋ, ಕೇಳಿದ್ದೋ ಯಾವುದೋ ರೀತಿ ನಮ್ಮ ಅನುಭವಕ್ಕೆ ಒದಗಿದ್ದೇ ಆಗಿರುತ್ತದೆ. ಪಾತ್ರಗಳ ವಿಷಯದಲ್ಲಿಯೂ ಹಾಗೆಯೇ, ನಾನು ಯಾವುದೇ ಒಂದು ಪಾತ್ರ ಬಂದಾಗ ಅದಕ್ಕೆ ಬೇರೆಲ್ಲೋ ರೆಫರೆನ್ಸ್‌ ಹುಡುಕಲು ಹೋಗುವುದಿಲ್ಲ. ನಿರ್ದೇಶಕರು ವಿವರಣೆ ನೀಡಿದಾಗ ನನ್ನೊಳಗಿನ ಅನುಭವದ ಮೂಸೆಯಲ್ಲಿ ಅದು ರೂಪುಗೊಳ್ಳುತ್ತ ಹೋಗುತ್ತದೆ. ಇದೇ ‘ಡಾಲಿ’ ಪಾತ್ರವನ್ನು ಇನ್ನೆರಡು ವರ್ಷಗಳ ನಂತರ ಮಾಡಿದರೆ, ಆಗಿನ ಅನುಭವಕ್ಕೆ ಅನುಗುಣವಾಗಿ ಈಗ ಮಾಡಿದ್ದಕ್ಕಿಂತ ಬೇರೆ ಥರವೇ ಮಾಡುತ್ತೇನೇನೋ...

* ಡಾಲಿ ಪಾತ್ರಕ್ಕೆ ಯಾವ ರೀತಿ ಸಿದ್ಧಗೊಂಡಿರಿ?

ನನ್ನ ಗಡ್ಡ ಕೂದಲಿನಿಂದ ಹಿಡಿದು, ಹಳೆಯ ಅನುಭವಗಳನ್ನೆಲ್ಲ ಕತ್ತರಿಸಿಕೊಂಡು ಪೂರ್ತಿ ಖಾಲಿಯಾಗಿದ್ದೇ ನನ್ನ ಸಿದ್ಧತೆ. ಬೇರೆ ಥರ ಕಾಣಬೇಕು ಎಂಬ ಕಾರಣಕ್ಕೆ ಕಣ್ಣಿಗೆ ಲೆನ್ಸ್‌ ಹಾಕಿಕೊಂಡೆ. ಈ ಲೆನ್ಸ್‌ ಜನರಿಗೆ ಹೊಸ ಥರ ಕಾಣಲಷ್ಟೇ ಅಲ್ಲ, ನಾನು ಪಾತ್ರವನ್ನು, ಜಗತ್ತನ್ನು ಹೊಸತಾಗಿ ನೋಡಲೂ ಸಹಾಯಕವಾಗಿವೆ.

* ದರ್ಶನ್‌ ಅವರ ಮುಂದಿನ ಸಿನಿಮಾದಲ್ಲಿಯೂ ನೀವು ಖಳನಟ. ನಾಯಕನಾಗಿದ್ದ ಧನಂಜಯ್‌ ಖಳನಟನಾಗಿ ಬದಲಾದ್ರಾ?

ಖಂಡಿತ ಇಲ್ಲ. ದರ್ಶನ್‌ ಅವರ ಸಿನಿಮಾದಲ್ಲಿಯೂ ಮಾಮೂಲಿ ವಿಲನ್‌ ಅಲ್ಲ. ಆ ಪಾತ್ರವನ್ನು ಇನ್ನೊಬ್ಬ ನಾಯಕನಟನೇ ಮಾಡಬೇಕು ಎಂಬ ಕಾರಣಕ್ಕೆ ನನ್ನನ್ನು ಕೇಳಿದ್ದು. ತುಂಬ ಒಳ್ಳೆಯ ಪಾತ್ರ. ಜತೆಗೆ, ಶಿವಣ್ಣ, ದರ್ಶನ್‌ ಅವರೆಲ್ಲ ಸೂಪರ್‌ಸ್ಟಾರ್‌ಗಳು. ಯಾವುದೋ ಹಳ್ಳಿಯಲ್ಲಿ ಕೂತು ಸಿನಿಮಾ ನೋಡುತ್ತಿದ್ದ ನನಗೆ ಅವರ ಜತೆ ನಟಿಸುವುದು ಒಂದು ಅವಕಾಶ. ಜತೆಗೆ ಒಳ್ಳೆಯ ಪಾತ್ರಗಳು. ಆ ಥರದ ಪಾತ್ರಗಳು ಸಿಕ್ಕರೆ ಖಂಡಿತ ಮಾಡ್ತೀನಿ. ಹಾಗೆಯೇ ಅಂಥ ಪಾತ್ರಗಳಿಗೆ ಅಂಟಿಕೊಳ್ಳುವುದಿಲ್ಲ. ನಾಯಕನಾಗಿಯೂ ಮುಂದುವರಿಯುತ್ತೇನೆ.

* ಹಾಗಾದರೆ ನಿಮ್ಮ ಮುಂದಿನ ನಟನಾಜೀವನ ಯಾವ ರೀತಿ ಇರುತ್ತದೆ?

ಒಂದು ಕೆಟ್ಟ ಅನುಭವ ಆದಮೇಲೆ ಸಿನಿಮಾ ಒಪ್ಪಿಕೊಳ್ಳುವುದು ಬೇಡ ಎಂದು ನಿರ್ಧರಿಸಿಬಿಟ್ಟಿದ್ದೆ. ‘ಜಯನಗರ ಪೋರ್ಥ್‌ ಬ್ಲಾಕ್‌’ ಕಿರುಚಿತ್ರ ಮಾಡುವಾಗ ನನ್ನಲ್ಲಿ ಮುಗ್ಧತೆ, ಬೇರೆ ಏನೋ ಮಾಡಬೇಕು ಎಂಬ ಹಂಬಲ ಇತ್ತು. ಆದರೆ ಈ ಮಧ್ಯೆ ನಾನೆಲ್ಲೋ ಕಳೆದುಹೋಗ್ತಿದೀನಿ ಅನಿಸಲು ಶುರುವಾಗಿತ್ತು. ಅದೃಷ್ಟದ ಬಗ್ಗೆಯೆಲ್ಲ ಮಾತು ಶುರುವಾಯ್ತು. ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಮಾತನಾಡಿದರು. ಇದೆಲ್ಲದರಿಂದ ನೊಂದು ‘ನಾನೇನಂದುಕೊಂಡು ಬಂದಿದ್ದೇನೋ ಅದನ್ನು ಮಾಡೋಣ, ಇಲ್ಲವಾದರೆ ಸಿನಿಮಾ ಮಾಡೋದೇ ಬೇಡ’ ಎಂದು ನಿರ್ಧರಿಸಿಬಿಟ್ಟಿದ್ದೆ. ಅಂಥ ಸಮಯದಲ್ಲಿ ಸೂರಿ ಈ ಪಾತ್ರಕ್ಕೆ ಕರೆದರು. ಒಳ್ಳೆಯ ನಿರ್ದೇಶಕ, ಒಳ್ಳೆಯ ತಂಡ ಎನ್ನುವ ಕಾರಣಕ್ಕೆ ಮತ್ತೆ ಸಿನಿಮಾ ಮಾಡಲು ಒಪ್ಪಿಕೊಂಡೆ.

ಈಗಲೂ ಕಥೆ ಕೇಳುತ್ತಲೇ ಇದ್ದೀನಿ. ಆದರೆ ನನಗೆ ನಿಜವಾಗಲೂ ಆ ಪಾತ್ರ ಇಷ್ಟ ಆಗಬೇಕು. ಅದನ್ನು ನಾನು ಜೀವಿಸಲು ಸಾಧ್ಯವಾಗಬೇಕು. ಸಿನಿಮಾ ಮಾಡುವ ಪ್ರಕ್ರಿಯೆ ಖುಷಿಕೊಡಬೇಕು. ಹಾಗಿದ್ರೆ ಮಾತ್ರ ಸಿನಿಮಾ ಮಾಡ್ತೀನಿ. ಇಲ್ಲಾಂದ್ರೆ ಖಂಡಿತ ಮಾಡಲ್ಲ.

* ಸೂರಿ ಜತೆ ಕೆಲಸ ಮಾಡಿದ ಅನುಭವ ಹೇಗಿತ್ತು?

ಅವರ ಜತೆಗಿನ ಕೆಲಸವನ್ನು ತುಂಬ ಖುಷಿಪಟ್ಟಿದೀನಿ ನಾನು. ಅವರು ಸೂಕ್ಷ್ಮ ಸಂವೇದನೆ ಇರುವ ಮನುಷ್ಯ. ನನ್ನನ್ನು ಸ್ವತಂತ್ರವಾಗಿ ನಟಿಸಲು ಬಿಟ್ಟು, ‘ಸಖತ್ತಾಗಿದೆ’ ಎಂದು ಚಪ್ಪಾಳೆ ಹೊಡೆದು, ‘ಇನ್ನೂ ಏನೇನು ಮಾಡ್ತಿಯಾ ಮಾಡು, ಅದನ್ನೆಲ್ಲ ಶೂಟ್‌ ಮಾಡ್ತೀನಿ’ ಎಂದು ಪ್ರೋತ್ಸಾಹಿಸಿದ ಒಬ್ಬರೇ ಒಬ್ಬ ನಿರ್ದೇಶಕ ಸೂರಿ. ಅವರು ಪಾತ್ರವನ್ನು ಅಷ್ಟು ಪ್ರೀತಿಸುವವರು ಅವರು. ಅಷ್ಟು ಸ್ಪಷ್ಟತೆಯೂ ಇರುವ ನಿರ್ದೇಶಕ. ಅವರೊಳಗೊಬ್ಬ ಸ್ನೇಹಿತ ಇದ್ದಾನೆ. ಅಣ್ಣ ಇದಾನೆ.

* ನೀವು ಒಂದಿಷ್ಟು ಕಥೆಗಳನ್ನೂ ಸಿದ್ಧಮಾಡಿಟ್ಟುಕೊಂಡಿದೀರಾ. ಅವು ತೆರೆಯ ಮೇಲೆ ಬರುವುದು ಯಾವಾಗ?

ಓದು ಮತ್ತು ಬರವಣಿಗೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ನನ್ನ ಸ್ನೇಹಿತರೇ ‘ಆರ್ಕೆಸ್ಟ್ರಾ’ ಎಂಬ ಸಿನಿಮಾ ಮಾಡ್ತಿದ್ದಾರೆ. ಅದಕ್ಕೆ ಎಲ್ಲ ಹಾಡುಗಳನ್ನೂ ನಾನೇ ಬರೆಯುತ್ತಿದ್ದೇನೆ. ಒಂದಿಷ್ಟು ಕಥೆಗಳೂ ಇವೆ. ಆದರೆ ನಿರ್ದೇಶನಕ್ಕೆ ತುಂಬ ಕಲಿಯಬೇಕಿದೆ. ಹಲವು ನಿರ್ದೇಶಕರ ಜತೆ ಕೆಲಸ ಮಾಡಬೇಕು. ಯಾವತ್ತು ನಾನೂ ನಿರ್ದೇಶನ ಮಾಡಬಲ್ಲ ಅನಿಸುತ್ತದೆಯೋ ಆಗ ಖಂಡಿತ ಮಾಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT