ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ, ಪಟ... ನೋಡ ಬನ್ನಿ ಭೂಪಟ!

Last Updated 21 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ವೀರಣ್ಣ ಕಮ್ಮಾರ

ಮೊನ್ನೆ ಶನಿವಾರ, ಭಾನುವಾರ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ (‘ಟಾಟಾ ಇನ್‌ಸ್ಟಿಟ್ಯೂಟ್’ ಎಂದೇ ಜನಜನಿತವಾಗಿರುವ ಐಐಎಸ್‌ಸಿ) ಮುಖ್ಯ ಕಟ್ಟಡದ ಬಳಿ ಒಂದೆರಡು ಲಾರಿಗಳು ಬಂದವು. ಲಾರಿಗೆ ಹೊದಿಸಿದ್ದ ತಾಡಪತ್ರಿಯನ್ನು ಸರಿಸಿ, ಕುಶಲಕರ್ಮಿಗಳು ಅದರೊಳಗಿಂದ ವಸ್ತುಗಳನ್ನು ಹೊರ ತೆಗೆಯತೊಡಗಿದರು. ಮೊದಮೊದಲು ಸುಮಾರು ಮೂವರು-ನಾಲ್ವರು ವ್ಯಕ್ತಿಗಳು ಎತ್ತಬಹುದಾದ ವಿವಿಧ ಅಳತೆಯ, ಆಯತ, ಚೌಕಾಕಾರದ ಪ್ಲೈವುಡ್ ಪೆಟ್ಟಿಗೆಗಳು ಹೊರಬಂದವು.

ತದನಂತರ ಕೆಲವು ಕಲಾಕೃತಿಗಳು. ಆಮೇಲೆ ದೊಡ್ಡ ದೊಡ್ಡ ಪ್ರಮಾಣದ ಹತ್ತಾರು ಕಲಾಕೃತಿಗಳು ಲಾರಿಗಳಿಂದ ಹೊರಬಂದವು.

ನೋಡನೋಡುತ್ತಿದ್ದಂತೇ ಐಐಎಸ್‍ಸಿಯ ಮುಖ್ಯಕಟ್ಟಡದ ಮೊದಲ ಮಹಡಿಯಲ್ಲಿರುವ ವಿಶಾಲವಾದ ರಿಸೆಪ್ಶನ್ ಹಾಲ್‍ನಲ್ಲಿ ಹೊಸದೊಂದು ಲೋಕವೇ ತೆರೆದುಕೊಂಡಿತು. ಅದು ಭಾರತೀಯ ಭೂಪಟಗಳ ವಿಭಿನ್ನ ಲೋಕ. ಸುಮಾರು 74ಕ್ಕೂ ಅಧಿಕ ನಕ್ಷೆಗಳು. ಅವುಗಳನ್ನು ಡಿಸ್‍ಪ್ಲೇ ಮಾಡಲು ವಿವಿಧ ಆಕಾರದ ಬೋರ್ಡ್‌ಗಳು, ಟೇಬಲ್‍ಗಳು. ಭೂಪಟಗಳೆಂದು ಕರೆಯಲಾಗುವ ಕಲಾಕೃತಿಗಳಲ್ಲಿ ಏನಿದೆ ಎಂದು ನೋಡಲು ಸುಂದರ ಭೂತಗನ್ನಡಿಗಳು. ರಿಸೆಪ್ಶನ್ ಹಾಲ್‍ನ ಕಿಟಕಿಯ ಗಾಜುಗಳಿಗೂ ವಿವಿಧ ರೀತಿಯ ನಕ್ಷೆಗಳ ಅಲಂಕಾರ. ಅಲ್ಲಿನ ವಾತಾವರಣ ನಮ್ಮನ್ನು 15-19ನೇ ಶತಮಾನಕ್ಕೆ ಕರೆದೊಯ್ಯುತ್ತಿತ್ತು.

ಯಾಕೆಂದರೆ, ಇಲ್ಲಿ ಪ್ರದರ್ಶನಕ್ಕೆ ಇರಿಸಲಾಗಿರುವ ನಕ್ಷೆಗಳು, ಕೇವಲ ‘ಅಟ್ಲಾಸ್’ನಂಥ ಮ್ಯಾಪುಗಳಷ್ಟೇ ಅಲ್ಲ. ಈ ನಕ್ಷೆಗಳು ಜಗತ್ತಿನ ಬಗ್ಗೆ ನಮ್ಮ ಪೂರ್ವಜರಿಗೆ ಇದ್ದ ಪೌರಾಣಿಕ ಪರಿಕಲ್ಪನೆ, ಧಾರ್ಮಿಕತೆ, ಆರ್ಥಿಕತೆ, ಅಂದಿನ ರಾಜಕೀಯ ಇತಿಹಾಸ ಕುರಿತಾದ ತಿಳಿವಳಿಕೆಗಳನ್ನು ಬಿಂಬಿಸುತ್ತವೆ. ಧಾರ್ಮಿಕತೆಯ ಭಾಗವಾದ ತೀರ್ಥಯಾತ್ರೆ, ಅಂದಿನ ಪವಿತ್ರ ಯಾತ್ರಾ ಸ್ಥಳಗಳು ಹಾಗೂ ಆಗ ಭಾರತವನ್ನು ನಿಖರವಾಗಿ ಮತ್ತು ವೈಜ್ಞಾನಿಕವಾಗಿ ಪರಿಭಾವಿಸಿದ ಮೂಲ ಕಲಾಕೃತಿಗಳಿವು.

‘ಇಂಡಿಯಾ ಆನ್ ಅವರ್ ಮೈಂಡ್’ ಎಂದು ಹೆಸರಿಸಲಾಗಿರುವ ಈ ಭೂಪಟಗಳ ಪ್ರದರ್ಶನದಲ್ಲಿ 15ರಿಂದ 19ನೇ ಶತಮಾನದ ಧಾರ್ಮಿಕ ಸಂಕೇತಗಳನ್ನು ಪ್ರತಿನಿಧಿಸುವ ಮೂಲ ನಕ್ಷೆಗಳ ಕಲಾಕೃತಿಗಳೂ, ಆ ಕಾಲಘಟ್ಟದ ನೈಜ ಐತಿಹಾಸಿಕ ವಿವರಗಳನ್ನು ಒದಗಿಸುವ ನಕ್ಷೆಗಳೂ ಇವೆ. ಈ ಎಲ್ಲ ಭೂಪಟಗಳನ್ನು ಹೈದರಾಬಾದ್‍ನ ‘ಕಲಾಕೃತಿ’ ಸಂಸ್ಥೆಯ ಪ್ರಶಾಂತ್ ಲಾಹೋಟಿ ಅವರು ಸಂಗ್ರಹಿಸಿದ್ದು, ಐಐಎಸ್‍ಸಿಯ ಪತ್ರಾಗಾರ ವಿಭಾಗ (ಎಪಿಸಿ) ಮತ್ತು ಸೆಂಟರ್ ಫಾರ್ ಕಂಟೆಂಪ್ರರಿ ಸ್ಟಡೀಸ್‌ಗೆ(ಸಿಸಿಎಸ್) ಪ್ರದರ್ಶನಕ್ಕೆಂದು ಒದಗಿಸಿದ್ದಾರೆ.

ಕಾರ್ಟೋಗ್ರಫಿ
ಭೂಪಟಗಳು ಬೆಳೆದುಬಂದ ಬಗೆಯೇ ಒಂದು ಅದ್ಭುತ. ಮೊದಮೊದಲು ಇವುಗಳು ‘ವರ್ಲ್ಡ್‌ ಆಫ್ ಮಾರ್ಟಲ್ಸ್’ನಂಥ ಕಾಸ್ಮಾಲಾಜಿಕಲ್ ಪ್ರಾತಿನಿಧಿಕತೆಯಿಂದ ಆರಂಭವಾಗಿ, ನಂತರ ವಿವಿಧ ಧಾರ್ಮಿಕ ಆಚಾರ-ವಿಚಾರ-ಸಂಪ್ರದಾಯಗಳನ್ನು ಬಿಂಬಿಸುವ ಲ್ಯಾಂಡ್‍ಸ್ಕೇಪ್‍ಗಳಾಗಿ ಬೆಳೆದುಬಂದವು. ಆಮೇಲೆ ರಾಜ್ಯ, ಸಾಮ್ರಾಜ್ಯಗಳ ಉದಯ-ಅಸ್ತಮಾನಗಳಿಂದಾಗಿ ಪಕ್ಕಾ ವೈಜ್ಞಾನಿಕ, ಭೌಗೋಳಿಕ ಭೂಪಟ ರಚನಾಶಾಸ್ತ್ರವಾಗಿ (ಕಾರ್ಟೋಗ್ರಫಿ) ಬೆಳೆದು ಬಂತು. ಭಾರತದ ಸಂಸ್ಕೃತಿಯೇ ನದಿಮೂಲ-ಧಾರ್ಮಿಕ ಕೇಂದ್ರಿತವಾದದ್ದು. ಅದನ್ನು ಈ ಭೂಪಟಗಳು ಬೆಳೆದು ಬಂದ ಬಗೆಯಲ್ಲಿಯೂ ಸ್ಪಷ್ಟವಾಗಿ ಕಾಣಬಹುದು. ಹೀಗಾಗಿ ಭಾರತವನ್ನು ಪರಿಭಾವಿಸುವ ರೀತಿಗೆ ಈ ಭೂಪಟಗಳು ಇನ್ನಷ್ಟು ಸಾಮಗ್ರಿ ಒದಗಿಸುತ್ತವೆ.

ಭಾರತದಲ್ಲಿ ಕಾರ್ಟೋಗ್ರಫಿಯು ಹಲವಾರು ವೈರುಧ್ಯಗಳಿಂದ ಕೂಡಿದೆ. ಪ್ರತಿಯೊಬ್ಬ ಭೂಪಟ ರಚನಾಕಾರನು ನಿಖರತೆಗೆ ಒತ್ತು ನೀಡಿರುವುದು ಎದ್ದು ಕಾಣುತ್ತದೆ. ಪ್ರಾರಂಭದಲ್ಲಿ ಅವರು ಧಾರ್ಮಿಕತೆಗೆ ಒತ್ತು ನೀಡಿದ್ದರು. ನಂತರ ಅದು ನಿಧಾನಕ್ಕೆ ರಾಜಕೀಯಕ್ಕೆ ಹೊರಳಿಕೊಂಡಿತು. 15ನೇ ಶತಮಾನದ ನಂತರದಲ್ಲಿ ಭೂಪಟ ರಚನಾಕಾರರಿಗೆ ಇದ್ದ ಆದ್ಯತೆಗಳು, ಮಾಹಿತಿಯ ಕೊರತೆ, ಸಾಂಸ್ಕೃತಿಕ ದೃಷ್ಟಿಕೋನಗಳೆಲ್ಲವೂ ಅವರು ರಚಿಸಿದ ಭೂಪಟಗಳ ಮೇಲೆ ಪ್ರಭಾವ ಬೀರಿವೆ. ಆ ಕಾಲಘಟ್ಟದಲ್ಲಿ ಭೂಪಟ ತಯಾರಕರೆಲ್ಲರೂ ಬಹುತೇಕ ಯುರೋಪಿಯನ್ನರೇ ಆಗಿದ್ದರು. ಹೀಗಾಗಿ ಅವರು ಭಾರತವನ್ನು ತಮ್ಮ ದೃಷ್ಟಿಕೋನದಲ್ಲಿಯೇ ಪರಿಭಾವಿಸಿದ್ದು ಈ ನಕಾಶೆಗಳಿಂದ ವ್ಯಕ್ತವಾಗುತ್ತದೆ. ಹೀಗಾಗಿ ಎಷ್ಟೋ ಭೂಪಟಗಳು ಆ ಕಾಲಘಟ್ಟದ ನೈಜ ಭಾರತವನ್ನು ತೋರಿಸುವಲ್ಲಿ ವಿಫಲವಾಗಿರುವುದು ಸತ್ಯ. ಆದಾಗ್ಯೂ ಭೂಪಟ ರಚನಾಕಾರರು ಮಾಹಿತಿಗಾಗಿ ಹೆಚ್ಚಾಗಿ ಭಾರತೀಯರನ್ನೇ ಅವಲಂಬಿಸಿದ್ದರಿಂದ ಅವರ ನಡುವೆ ಸಾಕಷ್ಟು ಕೊಡುಕೊಳ್ಳುವಿಕೆ ಸಂಭವಿಸಿದೆ ಎಂಬುದು ವಿದ್ವಾಂಸರ ಅಭಿಪ್ರಾಯ.

16ನೇ ಶತಮಾನದಲ್ಲಿ ಭಾರತದೊಂದಿಗೆ ಪೋರ್ಚುಗೀಸರ ಸಂಪರ್ಕ ಅಧಿಕವಾಗಿದ್ದು, ಎಲ್ಲ ಕೊಡುಕೊಳ್ಳುವಿಕೆಯಲ್ಲಿಯೂ ಅವರದ್ದೇ ಏಕಸ್ವಾಮ್ಯವಿತ್ತು. ಕ್ರಿ.ಶ. 1600 ನಂತರದ ಅವಧಿಯಲ್ಲಿ ಭಾರತದೊಂದಿಗೆ ಬ್ರಿಟಿಷರು, ಡಚ್ಚರು, ಫ್ರೆಂಚರ ಸಂಪರ್ಕ ಅಧಿಕವಾಯಿತು. ಇಡೀ ಭಾರತವನ್ನು ಬ್ರಿಟಿಷರು ಆಕ್ರಮಿಸಿಕೊಂಡ ನಂತರ ಅವರು, ಭೂಪಟ ತಯಾರಿಕೆಯಲ್ಲಿ ಆಧುನಿಕತೆ ರೂಢಿಸಿಕೊಂಡರು. ಭೂಪಟಗಳನ್ನು ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಹಾಗೂ ನ್ಯಾಯಾಂಗದ ವಿಚಾರದಲ್ಲಿ ಅಧಿಕ ಪ್ರಮಾಣದಲ್ಲಿ ಬಳಕೆ ಮಾಡಲು ಪ್ರಾರಂಭಿಸಿದರು. ಹೀಗಾಗಿ ಭೂಪಟ ರಚನಾಶಾಸ್ತ್ರಕ್ಕೆ ಮಹತ್ವ ದೊರೆಯಿತು. ಆದಾಗ್ಯೂ 1947ರಲ್ಲಿ ಸ್ವಾತಂತ್ರ್ಯ ಬರುವವರೆಗೂ ಭಾರತೀಯರಿಗೆ ಭೂಪಟ ರಚನಾ ವಿಧಾನದಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬುದು ಇತಿಹಾಸಕಾರರ ವಿವರಣೆ.

ಹಸ್ತಪ್ರತಿ ಭೂಪಟಗಳು
ಇಲ್ಲಿ ಪ್ರದರ್ಶನಕ್ಕೆ ಇಡಲಾಗಿರುವ ಭೂಪಟಗಳಲ್ಲಿ ಕುಂಚಗಳಲ್ಲಿ ಒಡಮೂಡಿದ ಕಲಾಕೃತಿಗಳು ಹಾಗೂ ಮುದ್ರಿಸಿದ ಕಲಾಕೃತಿಗಳೂ ಸೇರಿವೆ. ಈ ಎಲ್ಲ ಕಲಾಕೃತಿಗಳು ಮೂಲ (ಒರಿಜಿನಲ್) ಕಲಾಕೃತಿ ಗಳಾಗಿರುವುದು ಒಂದು ವಿಶೇಷ. ಅವುಗಳಲ್ಲಿ ಕೆಲವು 15ನೇ ಶತಮಾನದಲ್ಲಿ ಸಿದ್ಧಪಡಿಸಿದ ಮೂಲ ಹಸ್ತಪ್ರತಿಗಳೂ ಇವೆ. ಇಲ್ಲಿ ಪ್ರಮುಖವಾಗಿ ಪ್ರದರ್ಶನಕ್ಕಿಡಲಾಗಿರುವ ಭೂಪಟಗಳೆಂದರೆ, ಕಾಸ್ಮಿಕ್ ಮ್ಯಾಪ್ ಆಫ್ ಮಾರ್ಟಲ್ ವರ್ಲ್ಡ್‌ (ಇದು 17ನೇ ಶತಮಾನದ ಮಧ್ಯಭಾಗದಲ್ಲಿ ರಚಿತವಾದ ಭೂಪಟ); ‘ಅಂಧೈ ದ್ವೀಪ ಪಟ’ (15ನೇ ಶತಮಾನದ ಆದಿಯಲ್ಲಿ ಹತ್ತಿಬಟ್ಟೆಯ ಮೇಲೆ ಜಲವರ್ಣದಲ್ಲಿ ರಚಿಸಿದ ಭೂಪಟ, ಗುಜರಾತಿನದು); ಹಾಗೂ ಕೃಷ್ಣ ಲೀಲೆಯನ್ನು ವರ್ಣಿಸುವ ವ್ರಜ್‍ಭೂಮಿಯ ಸುಮಾರು 16 ಅಡಿ ಎತ್ತರದ ಭೂಪಟ ಸೇರಿದೆ. ಇದು ಎಲ್ಲರನ್ನೂ ಆಕರ್ಷಿಸುತ್ತದೆ.

ಇಡೀ ಪ್ರದರ್ಶನದಲ್ಲಿ ಅತ್ಯಂತ ಮಹತ್ವದ ಭೂಪಟವೆಂದರೆ, ಕಾಟಿಬ್ ಸೆಲೆಬಿ ಎಂಬಾತನು ರಚಿಸಿದ, 1732ರಲ್ಲಿ ಇಬ್ರಾಹಿಂ ಮುತೆಫೆರಿಕ್ಕಾ ಎಂಬಾತನು ಪ್ರಕಟಿಸಿದ ಉತ್ತರ ಭಾರತದ ನಕ್ಷೆಯಾಗಿದೆ. ಇದು ಇಸ್ಲಾಮಿ ಜಗತ್ತಿನಲ್ಲಿ ಪ್ರಕಟ ವಾದ ಮೊಟ್ಟಮೊದಲ ಭೂಪಟ. ಇದರಲ್ಲಿರುವ ಎಲ್ಲ ಅಕ್ಷರಗಳೂ ಅರೆಬಿಕ್‍ನಲ್ಲಿ ಇರುವುದು ಒಂದು ವಿಶೇಷ. ಒಬ್ಬ ಇಂಗ್ಲಿಷ್‍ಮನ್ ರಚಿಸಿದ ಈ ಭೂಪಟವು, ಮೊಘಲ್ ಸಾಮ್ರಾಜ್ಯದ ಮಾಹಿತಿಗಳನ್ನು ಮೈದುಂಬಿಕೊಂಡಿರುವ ಟರ್ಕಿಶ್ ನಕಾಶೆಯಾಗಿದೆ. ಇದು ವಿವಿಧ ಸಂಸ್ಕೃತಿಗಳ ಸಂಗಮಕ್ಕೊಂದು ಪಕ್ಕಾ ಉದಾಹರಣೆ.


-ಭಾರತ ಹಾಗೂ ಮಧ್ಯಪ್ರಾಚ್ಯ ದೇಶಗಳ ಅಪರೂಪದ ಭೂಪಟ. 1596ರಲ್ಲಿ ಇದನ್ನು ಸಿದ್ಧಪಡಿಸಲಾಗಿದೆ. ಕಾಟಿಬ್ ಸೆಲೆಬಿ 1732ರಲ್ಲಿ ರಚಿಸಿದ ಉತ್ತರ ಭಾರತದ ನಕ್ಷೆ

ಭಾರತ ಮತ್ತು ಮಧ್ಯಪ್ರಾಚ್ಯ ದೇಶಗಳನ್ನೊಳಗೊಂಡ ಭೂಪಟವೊಂದನ್ನು 1596ರಲ್ಲಿ ತಾಮ್ರಪತ್ರದ ಮೇಲೆ ಸಿದ್ಧಪಡಿಸಲಾಯಿತು. ಡಚ್ ಸಾಹಸಿ ಮತ್ತು ಗೂಢಚಾರ ಜಾನ್ ಹ್ಯೂಗೆನ್ ವ್ಯಾನ್ ಲಿನ್ಸ್‍ಚೋಟೆನ್ ಎಂಬಾತನು ಪೋರ್ಚುಗೀಸರಿಂದ ಗೌಪ್ಯ ಮಾಹಿತಿ ಸಂಗ್ರಹಿಸಿ ಸಿದ್ಧಪಡಿಸಿದ ಈ ಭೂಪಟವು, ಭಾರತದ ಮೇಲೆ ಪೋರ್ಚುಗೀಸರಿಗಿದ್ದ ಏಕಸ್ವಾಮ್ಯವನ್ನು ಕಿತ್ತೊಗೆಯುವಲ್ಲಿ ಸಹಾಯ ಮಾಡಿತು. ಇದರಲ್ಲಿ ಒದಗಿಸಿದ ನಿಖರ ಮಾಹಿತಿಗಳು ಸಾಗರದ ಮೂಲಕ ನಡೆಯುವ ವಾಣಿಜ್ಯ ವಹಿವಾಟುಗಳ ಅನೇಕ ಸೂಕ್ಷ್ಮಗಳನ್ನು ಬೇಧಿಸಿ, ಇಂಗ್ಲಿಷರು, ಫ್ರೆಂಚರು, ಡಚ್ಚರು ಭಾರತಕ್ಕೆ ಬರಲು ಅವಕಾಶ ಮಾಡಿಕೊಟ್ಟಿತು ಎಂದು ವಿವರಿಸಲಾಗಿದೆ.

ಉತ್ತರ ಭಾರತದ ನಿಖರವಾದ ನಕಾಶೆಯನ್ನು ಮೊತ್ತಮೊದಲ ಬಾರಿಗೆ ಸೃಜಿಸಿದವನು ವಿಲಿಯಂ ಬ್ಯಾಫಿನ್. 1619ರಲ್ಲಿ ರಚಿಸಿದ ಈ ಭೂಪಟವು ಮೊಘಲ್ ಸಾಮ್ರಾಜ್ಯದಲ್ಲಿ ಲಭ್ಯವಾದ ಭೌಗೋಳಿಕ ಮಾಹಿತಿಯನ್ನು ಆಧರಿಸಿ ಸಿದ್ಧಪಡಿಸಿದ ತಾಮ್ರಪತ್ರದ ನಕಾಶೆಯಾಗಿದೆ. ಇದನ್ನು 1625ರಲ್ಲಿ ಮೊತ್ತಮೊದಲ ಬಾರಿಗೆ ಲಂಡನ್‍ನಲ್ಲಿ ಮುದ್ರಣ ಮಾಡಲಾಯಿತು. ಇದು ಇಡೀ ಮೊಘಲ್ ಸಾಮ್ರಾಜ್ಯದ ಸಮಗ್ರ ಚಿತ್ರಣ ನೀಡುತ್ತದೆ.

1646ರಲ್ಲಿ ತಾಮ್ರಪತ್ರದ ಮೇಲೆ ರಚಿಸಿ, ನಂತರ ಮುದ್ರಣ ಮಾಡಲಾದ ಇನ್ನೊಂದು ಪ್ರಮುಖ ನಕಾಶೆಯೆಂದರೆ ದಕ್ಷಿಣ ಭಾರತ- ಶ್ರೀಲಂಕಾ ಮತ್ತು ಮಾಲ್ಡೀವ್‍ಗಳನ್ನೊಳಗೊಂಡ ರಾಬರ್ಟ್ ಡುಡ್ಲೇ ತಯಾರಿಸಿದ ‘ದಿ ಮಿಸ್ಟರಿ ಆಫ್ ದಿ ಸೀ’ ಎಂಬ ಹೆಸರಿನ ಭೂಪಟ. ಇದು ಮೊಟ್ಟಮೊದಲ ಮೆರಿಟೈಮ್ ಅಟ್ಲಾಸ್ ಎನಿಸಿಕೊಂಡಿರುವ ಅಪರೂಪದ ಭೂಪಟಕೃತಿ.

ಕೊನೆ ಮಾತು
ಇಡೀ ಭಾರತವನ್ನು ಭೂಪಟಗಳ ಮೂಲಕವೂ ಪರಿಭಾವಿಸ ಬಹುದು. ಅವುಗಳು ನೀಡುವ ಎಷ್ಟೋ ಮಾಹಿತಿಗಳು ನಮ್ಮನ್ನು ನಮ್ಮ ಪೂರ್ವಜರೊಂದಿಗೆ ಜೋಡಿಸಿ,

ಭಾರತವು ಮೊದಲಿನಿಂದಲೂ ಇಡೀ ವಿಶ್ವದ ರಾಜಕೀಯ, ವಾಣಿಜ್ಯ ಹಾಗೂ ವಿದೇಶಿ ರಾಯಭಾರದ ಕೇಂದ್ರವಾಗಿತ್ತು ಎಂಬುದನ್ನು ಅವುಗಳು ಮತ್ತೊಮ್ಮೆ ಪ್ರತಿಷ್ಠಾಪಿಸುತ್ತವೆ. ಅಲ್ಲದೇ, ವಿದೇಶಿಯರು ಭಾರತಕ್ಕೆ ಬರುವುದಕ್ಕೆ ಮೊದಲೇ ನಮ್ಮಲ್ಲೂ ಭೂಪಟಗಳ ರಚನೆ ಮಾಡುವ ಕಲೆ ಕರಗತವಾಗಿತ್ತು. ಅವುಗಳನ್ನು ಧಾರ್ಮಿಕ ಮನೋಭಾವದಿಂದಲೇ ನೋಡಲಾಗುತ್ತಿತ್ತು ಎಂಬುದು ಸ್ಪಷ್ಟವಾಗಿ ತಿಳಿದುಬರುತ್ತದೆ. ಭೂಪಟಗಳ ಅಧ್ಯಯನ ಮಾಡುವವರಿಗೆ ಈ ಪ್ರದರ್ಶನವೊಂದು ಅಪರೂಪದ ಸಾಮಗ್ರಿಗಳನ್ನು ಒದಗಿಸುತ್ತದೆ.

ಐಐಎಸ್‍ಸಿಯಲ್ಲಿ ಏಪ್ರಿಲ್ 18ರವರೆಗೆ ಪ್ರದರ್ಶನ ನಡೆಯಲಿದೆ. ಪ್ರವೇಶ ಉಚಿತ. ವಿವರಕ್ಕೆ ಭಾರತೀಯ ವಿಜ್ಞಾನ ಸಂಸ್ಥೆಯ ಕಚೇರಿ: 080-22932066/22932750.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT