ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ ಮತ್ತು ಸವಾಲುಗಳು

Last Updated 23 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನಿರಧ್ ಸಿ. ಚೌಧರಿ - ಬ್ರಿಟಿಷರ ಪರ ವಕಾಲತ್ತು ವಹಿಸುತ್ತಿದ್ದ ಭಾರತದ ಬರಹಗಾರ. ಭಾರತೀಯರನ್ನು ಹೀನಾಯವಾಗಿ ಮೂದಲಿಸುತ್ತಿದ್ದರು. ಅವರು ಒಂದೆಡೆ ಹೀಗೆನ್ನುತ್ತಾರೆ: ‘ಭಾರತೀಯರು ಕುಂತರೆ, ನಿಂತರೆ ಉಗುಳುತ್ತಾರೆ. ಕೋಪ ಬಂದರೆ, ಮನಸ್ಸಿಗೆ ಬೇಜಾರಾದರೆ, ಹಾಗೇ ಸುಖಾಸುಮ್ಮನೆಯೂ ಉಗುಳುತ್ತಾರೆ. ಕೆಲವರು ಇದನ್ನು ‘ಸ್ಪಿಟ್ ಪರ್ಸನ್ಯಾಲಿಟಿ’ ಎಂದು ವ್ಯಾಖ್ಯಾನಿಸುವುದೂ ಉಂಟು.’ ಇದೇ ರೀತಿ ಅಮೆರಿಕದ ಲೇಖಕಿ ಕ್ಯಾತರಿನ್ ಮೇಯೋ ‘ಮದರ್ ಇಂಡಿಯಾ’ ಎಂಬ ಪುಸ್ತಕದಲ್ಲಿ ಭಾರತೀಯರನ್ನು ಹಿಗ್ಗಾಮುಗ್ಗ ಮನಸ್ಸಿಗೆ ಬಂದಂತೆ ಹೀಯಾಳಿಸುತ್ತಾರೆ.

ಗಾಂಧೀಜಿ ಈ ಪುಸ್ತಕವನ್ನು ಕುರಿತು ಅದೊಂದು ಚರಂಡಿ ತಪಾಸಾಣಾಧಿಕಾರಿಯ ವರದಿ ಎಂದಿದ್ದರು. ಹಾಗೆಯೇ ಚರಂಡಿ ಇರುವುದಂತೂ ಸತ್ಯವೇ ಎಂದು ಗಾಂಧೀಜಿ ಒಪ್ಪಿಕೊಳ್ಳುತ್ತಾರೆ.  ಕಂಡ ಕಂಡಲ್ಲಿ ಉಗಿಯುವ ನಮ್ಮ ಅಭ್ಯಾಸ ಎಲ್ಲೆಡೆ ಕಂಡುಬರುತ್ತದೆ. ಬಸ್ಸಿನ ಪ್ರಯಾಣಿಕರು ಸುತ್ತಮುತ್ತ ಗಮನಿಸದೇ ಉಗುಳುವುದನ್ನು ಕಾಣುತ್ತೇವೆ. ಟ್ರಾಫಿಕ್‌ ಸಿಗ್ನಲ್‍ಗಳಲ್ಲಿ ಕಾರಿನ ಬಾಗಿಲು ತೆಗೆದು ಒಂದು ರಾಶಿ ಉಗಿಯುವ ದೃಶ್ಯ ಸರ್ವೇಸಾಮಾನ್ಯ.

ಗುಟ್ಕ, ಜರ್ದವನ್ನು ಹಾಕಿ ರಸ್ತೆ, ಕಟ್ಟಡ, ಬಸ್ ನಿಲ್ದಾಣ – ಹೀಗೆ ಎಲ್ಲ ಸಾರ್ವಜನಿಕ ಕಟ್ಟಡಗಳ ಮೂಲೆಮೂಲೆಯೂ ಕೆಂಪು ಕಕ್ಕುವ ಜನರ ಸ್ವಭಾವಕ್ಕೆ ಸಾಕ್ಷಿಯಾಗಿ ನಿಂತಿರುತ್ತವೆ. ಹೀಗೆ ಉಗುಳುವ ಸ್ವಭಾವದಿಂದ ಕ್ಷಯರೋಗದಂತಹ ಅಂಟುರೋಗವನ್ನು ಸುತ್ತಲಿನ ಜಗತ್ತಿಗೆ ಹಂಚಿ ಹರಡುವ ನಮ್ಮ ಅಭ್ಯಾಸ ಈ ಕಾಯಿಲೆಯನ್ನು ತಡೆಗಟ್ಟುವಲ್ಲಿ ಒಂದು ತಡೆಗೋಡೆಯಾಗಿಯೇ ನಿಂತಿದೆ.

ಭಾರತದಿಂದ 2025ಕ್ಕೆ ಕ್ಷಯರೋಗವನ್ನು ತೊಲಗಿಸುವ ಬಗ್ಗೆ ಯೋಜನೆಯನ್ನು ಇತ್ತೀಚೆಗೆ ನಮ್ಮ ಪ್ರಧಾನಮಂತ್ರಿ ಘೋಷಿಸಿದ್ದಾರೆ. ಇದಕ್ಕಾಗಿ ಮೂರು ವರ್ಷಕ್ಕೆ ಸುಮಾರು 12,000 ಕೋಟಿ ಹಣವನ್ನು ವಿನಿಯೋಗ ಮಾಡಲೂ ನಿರ್ಧರಿಸಿದ್ದಾರೆ. ಇಂತಹ ಯೋಜನೆಗಳು ಕಾರ್ಯರೂಪಕ್ಕೆ ಬರಲು ಮತ್ತು ಯಶಸ್ಸು ಕಾಣಲು ಕೇವಲ ವೈದ್ಯಕೀಯ ವ್ಯವಸ್ಥೆ ಮಾತ್ರವೇ ಸಾಲದು, ನಮ್ಮ ವೈಯಕ್ತಿಕ ನಡೆವಳಿಕೆಗಳು ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತವೆ.

ಅದರಲ್ಲಿಯೂ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಸೀನುವುದು – ಇಂಥ ಅಭ್ಯಾಸಗಳನ್ನು ನಾವು ಬದಲಾಯಿಸಿಕೊಳ್ಳದೇ ಹೋದರೆ ಕೋಟಿಗಟ್ಟಲೆ ಹಣ ಖರ್ಚು ಮಾಡಿಯೂ ಪ್ರಯೋಜನವಾಗದೆ ಹೋಗಬಹುದು. ಜಪಾನ್ ದೇಶದಲ್ಲಿ ಉಗುಳುವುದು, ಸೀನುವುದು ಹೋಗಲಿ, ತಮ್ಮಷ್ಟಕ್ಕೆ ತಾವೇ ನೆಗಡಿ, ಜ್ವರ, ಕೆಮ್ಮು ಇದ್ದಾಗ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳುತ್ತಾರೆ. ಜಪಾನಿನ ರೈಲಿನಲ್ಲಿ ಪ್ರಯಾಣ ಮಾಡುವಾಗ, ಇದು ಸಾಮಾನ್ಯವಾಗಿ ಕಾಣುವ ದೃಶ್ಯ. ಎಲ್ಲಿಯೂ ಕಸವನ್ನಾಗಲೀ ಗಲೀಜನ್ನಾಗಲೀ ಕಾಣಲು ಸಾಧ್ಯವೇ ಇಲ್ಲ. ಹೀಗಾಗಿ ಅಲ್ಲಿನ ಜನರ ಸಾವಿನ ವಯೋಮಿತಿಯ ಪ್ರಮಾಣ 85ನ್ನೂ ಮೀರಿರುವುದು.

ಭಾರತದಲ್ಲಿ ಸುಮಾರು 28 ಲಕ್ಷ ಜನರು ಟಿ.ಬಿ., ಎಂದರೆ ಕ್ಷಯರೋಗದಿಂದ ನರಳುತ್ತಿದ್ದಾರೆ. ಅದರಲ್ಲಿ ಪ್ರತಿ ವರ್ಷ 4,23,000 ಜನರು ಸಾವನ್ನಪ್ಪುತ್ತಿದ್ದಾರೆ. ಸುಮಾರು 8.5 ಲಕ್ಷ ಕ್ಷಯರೋಗಿಗಳು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ತಿಳಿಯದೇ ಕ್ಷಯರೋಗವನ್ನು ತಡೆಗಟ್ಟುವ ಕಾರ್ಯಕ್ರಮಕ್ಕೆ ಸವಾಲಾಗಿದ್ದಾರೆ. ಜೊತೆಗೆ ಸುಮಾರು ಒಂದೂವರೆ ಲಕ್ಷ ಕ್ಷಯರೋಗಪೀಡಿತ ಜನರಿಗೆ ಸಾಮಾನ್ಯವಾಗಿ ಕ್ಷಯರೋಗಕ್ಕೆ ಕೊಡುವ ಔಷಧ ಕೆಲಸ ಮಾಡದ ಹಂತ ತಲುಪಿದ್ದಾರೆ. ಇದನ್ನು ‘ಡ್ರಗ್ ರೆಸಿಸ್ಟೆಂಟ್ ಕ್ಷಯರೋಗ’ ಎನ್ನುತ್ತಾರೆ.

ಕ್ಷಯರೋಗವನ್ನು ಪತ್ತೆಹಚ್ಚಿದ ಮೇಲೆ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಬೇಕಾಗಿರುವುದು ನಮ್ಮ ದೇಶದ ಕಾನೂನು ಕೂಡ ಆಗಿದೆ. ನಮ್ಮಲ್ಲಿ ಶೇ 60ಕ್ಕೂ ಹೆಚ್ಚು ಜನರು ಖಾಸಗಿ ವೈದ್ಯಕೀಯ ಸೇವೆಯನ್ನು ಪಡೆಯುತ್ತಿರುವುದರಿಂದ ಖಾಸಗಿ ವೈದ್ಯರು ಮತ್ತು ಔಷಧಾಲಯಗಳು ಕ್ಷಯರೋಗಿಗಳ ವಿವರವನ್ನು ಸರ್ಕಾರದ ಗಮನಕ್ಕೆ ತರುವುದರಲ್ಲಿ ಮತ್ತು ಕಾನೂನು ಪಾಲಿಸುವುದರಲ್ಲಿ ವಿಫಲರಾಗಿದ್ದಾರೆ. ಸರ್ಕಾರದ ಗಮನಕ್ಕೆ ತಂದರೆ, ಅವರ ಚಿಕಿತ್ಸೆಗಾಗಿ ಹಣವನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸುವ ವ್ಯವಸ್ಥೆ ಇದೆ ಮತ್ತು ಉಚಿತ ಸೇವೆ ಲಭ್ಯವಿದೆ. ಅಲ್ಲದೆ, ಮಾಹಿತಿ ಕೊಟ್ಟ ಖಾಸಗಿ ವೈದ್ಯರಿಗೂ ಸರ್ಕಾರದಿಂದ ಪ್ರಯೋಜನಕಾರಿ ಯೋಜನೆಗಳಿವೆ.

ಮಹಾರಾಷ್ಟ್ರದಲ್ಲಿ ಔಷಧ ವ್ಯಾಪಾರಿಗಳ ಸಂಘವು ಇತ್ತೀಚೆಗೆ ಒಟ್ಟಾಗಿ ಇನ್ನು ಮುಂದೆ ಕ್ಷಯರೋಗ ತಗುಲಿದವರನ್ನು ಆರು ತಿಂಗಳ ಕಾಲ ಸರಿಯಾಗಿ ಗಮನದಲ್ಲಿಟ್ಟು ಔಷಧಗಳನ್ನು ತೆಗೆದುಕೊಳ್ಳುವಂತೆ ನೋಡಿಕೊಳ್ಳುವುದು ಮತ್ತು ಸರ್ಕಾರದ ಗಮನಕ್ಕೂ ತರುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಇದು ಇಡೀ ದೇಶದಲ್ಲಿ ಎಲ್ಲ ಔಷಧ ಅಂಗಡಿಗಳು ಮತ್ತು ಖಾಸಗಿ ವೈದ್ಯರು ಸರ್ಕಾರದೊಂದಿಗೆ ಕೈಜೋಡಿಸಲೇ ಬೇಕಾದ ದೇಶಸೇವೆಯೆಂದೇ ಹೇಳಬಹುದು.

ಇತ್ತ  ಕ್ಷಯರೋಗವನ್ನು ಸರ್ಕಾರದ ಗಮನಕ್ಕೆ ತರದೆ ಇದ್ದಲ್ಲಿ, ಭಾರತೀಯ ದಂಡ ಸಂಹಿತೆ 269 ಮತ್ತು 270 ಉಪಯೋಗಿಸಿ ಎರಡು ವರ್ಷ ಜೈಲಿಗೆ ಕಳುಹಿಸುವುದಾಗಿ ಸರ್ಕಾರ ಆಜ್ಞೆ ಹೊರಡಿಸಿದೆ. ಈ ಕಾಯಿಲೆಯನ್ನು ತಡೆಗಟ್ಟಲು ಪ್ರಯತ್ನಿಸದೆ, ಅದನ್ನು ಹರಡುವುದಕ್ಕೆ ಕಾರಣವಾಗುವುದು ಸಾರ್ವಜನಿಕ ಆರೋಗ್ಯಕ್ಕೆ ಕೇಡು ಮಾಡುವ ಪಾತಕಕೃತ್ಯ ಎಂದೇ ಪರಿಗಣಿಸಬೇಕಾಗಿದೆ.

ಭಾರತ 2025ರ ಹೊತ್ತಿಗೆ ಕ್ಷಯರೋಗ ಮುಕ್ತವಾಗಬೇಕಿದ್ದರೆ, ಪ್ರತಿವರ್ಷ ಶೇ 10ರಷ್ಟು ಕ್ಷಯರೋಗಿಗಳ ಸಂಖ್ಯೆಯಲ್ಲಿ ಇಳಿಮುಖವಾಗಬೇಕಾಗಿದೆ. ಆದರೆ ಇಂದು ಕೇವಲ ಶೇ 2ರಷ್ಟು ವಾರ್ಷಿಕ ಇಳಿಮುಖ ಕಾಣುತ್ತಿದೆ. ಇದು ಈ ವೇಗದಲ್ಲಿಯೇ ಮುಂದುವರೆದರೆ, 2100ರ ಹೊತ್ತಿಗೂ ನಾವು ಕ್ಷಯರೋಗದಿಂದ ಮುಕ್ತರಾಗುವುದಿಲ್ಲ ಎಂಬುದು ಕೆಲವು ತಜ್ಞರ ಅಭಿಪ್ರಾಯ. ರೋಗವನ್ನು ತಡೆಗಟ್ಟುವುದು, ರೋಗಾಣು ತೀವ್ರತೆಯನ್ನು ಪಡೆದುಕೊಳ್ಳದಂತೆ ನೋಡಿಕೊಳ್ಳುವುದು ಮತ್ತು ಹರಡದಂತೆ ನೋಡಿಕೊಳ್ಳುವುದು ಪ್ರಮುಖ ಅಂಶಗಳಾಗಿವೆ.

ಮಕ್ಕಳಲ್ಲಿ  ಅಪೌಷ್ಟಿಕತೆಯನ್ನು ಹೋಗಲಾಡಿಸುವುದಕ್ಕೂ  ಈ ರೋಗವನ್ನು ತಡೆಗಟ್ಟುವುದಕ್ಕೂ ನೇರ ಸಂಬಂಧವಿದೆ. ಇಂದಿಗೂ ನಮ್ಮಲ್ಲಿ ಶೇ 30ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದು, ಕ್ಷಯರೋಗಾಣುವಿಗೆ ಸುಲಭವಾಗಿ ತುತ್ತಾಗಬಹುದು. ಶೇ 50ರಷ್ಟು ಭಾರತೀಯರಲ್ಲಿ ಕ್ಷಯರೋಗಾಣು ಇದ್ದೇ ಇರುತ್ತದೆ. ರೋಗವನ್ನು ಉಂಟುಮಾಡುವ ತೀವ್ರತೆ ಶೇ 10ರಷ್ಟು ಜನಸಂಖ್ಯೆಯಲ್ಲಿ ಸಾಧ್ಯತೆ ಇದೆ. ಅಲ್ಲದೆ, ಎಚ್.ಐ.ವಿ. ಸೋಂಕು ಪೀಡಿತರು, ತಂಬಾಕು ಸೇವನೆ ಮಾಡುವವರು, ಮಧುಮೇಹರೋಗದಿಂದ ಬಳಲುವವರು –ಇಂಥವರಿಗೆ ಒಳಗೆ ಅಡಗಿರುವ ಕ್ಷಯರೋಗಾಣು ಉಲ್ಭಣಗೊಂಡು ರೋಗಾವಸ್ಥೆಗೆ ಏರುವ ಸಾಧ್ಯತೆ ಹೆಚ್ಚು. ನಮ್ಮಲ್ಲಿ ಶೇ 15ರಷ್ಟು ವಯಸ್ಕರಲ್ಲಿ ಮಧುಮೇಹವಿದೆ.

ವರ್ಷದಿಂದ ವರ್ಷಕ್ಕೆ ಮಧುಮೇಹರೋಗದ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕ್ಷಯರೋಗವೆಂದರೆ, ನಾವು ಕೇವಲ ಶ್ವಾಸಕೋಶದ ಕ್ಷಯರೋಗವೆಂದು ಗ್ರಹಿಸುವುದು ಸರ್ವೇಸಾಧಾರಣ. ಆದರೆ, ಕ್ಷಯರೋಗಾಣು ಶ್ವಾಸಕೋಶದಿಂದ ಮೂಳೆ, ಲಿವರ್, ಮೂತ್ರಪಿಂಡ, ಸ್ತನ ಮತ್ತು ಮೆದುಳಿಗೂ ಹರಡುವ ಸಾಧ್ಯತೆಗಳುಂಟು. ಹೀಗಾಗಿ ಇನ್ನು ಮುಂದೆ ಕೇವಲ ಉಗುಳನ್ನು ಪರೀಕ್ಷಿಸುವ ಪರೀಕ್ಷಣಾ ವ್ಯವಸ್ಥೆಯಿಂದ ಮುಂದುವರೆದು ಆಧುನಿಕ ‘ಜೀನ್‍ಎಕ್ಸ್‌ಪರ್ಟ್‌’ ಎನ್ನುವ ಆಧುನಿಕ ವಿಧಾನಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಜೊತೆಗೆ ಸಾಧಾರಣ ಔಷಧಗಳ ವಿರುದ್ಧ ಗೆದ್ದಿರುವ ಕ್ಷಯರೋಗಾಣುಗಳಿಗೆ ವಿಶೇಷವಾದ ಹೊಸ ಔಷಧಗಳಾದ ‘ಬೆಡಕ್ವಿಲೈನ್’ ಮತ್ತು ‘ಡೆಲನಾ ಮಿಡ್‍’ಗಳ ಬಳಕೆ ಅವಶ್ಯಕತೆ ಇದೆ.

ದುರಾದೃಷ್ಟವಶಾತ್ ಇವುಗಳ ಲಭ್ಯತೆ ಭಾರತದಲ್ಲಿ ಅತ್ಯಲ್ಪ. ಸುಮಾರು ಒಂದೂವರೆ ಲಕ್ಷ ಕ್ಷಯರೋಗಿಗಳಿಗೆ ಈ ರೀತಿಯ ಔಷಧ ಬೇಕಾಗಿರುತ್ತದೆ. ಆದರೆ ಈ ಹೊಸ ಔಷಧವನ್ನು ತಯಾರು ಮಾಡುವ ‘ಜಾನ್ಸನ್ ಅಂಡ್ ಜಾನ್ಸನ್’ ಮತ್ತು ‘ಒಟ್ಸುಕಾ’ ಕಂಪನಿಗಳು ದಾನ ಕೊಡುವ ಔಷಧಗಳು ಮಾತ್ರ ಲಭ್ಯವಿವೆ. ರೋಗಿಗಳು ಅವನ್ನು ಕೊಳ್ಳಬೇಕಾದರೆ ತಿಂಗಳಿಗೆ  ಸುಮಾರು ಒಂದು ಲಕ್ಷದವರೆಗೆ ಖರ್ಚಾಗುತ್ತದೆ. ಇದು ಜನಸಾಮಾನ್ಯರ ಕೈಗೆಟುಕುವಂತಿಲ್ಲ. ಸರ್ಕಾರ ಇದೇ ಔಷಧವನ್ನು ಭಾರತೀಯ ಕಂಪನಿಗಳಿಗೆ ಕಡ್ಡಾಯವಾಗಿ ಲೈಸೆನ್ಸಿಂಗ್ ಮೂಲಕ ಜನರಿಕ್ ಔಷಧಗಳನ್ನು ತಯಾರಿಸಲು ಅವಕಾಶ ಕೊಡಬಹುದು.

ಈ ಹಿಂದೆ ಏಡ್ಸ್‌ನ ಚಿಕಿತ್ಸೆಗೆ ಪೇಟೆಂಟ್ ಇರುವ ಔಷಧಗಳನ್ನು ಭಾರತೀಯ ಔಷಧ ಕಂಪನಿಗಳಿಗೆ ಜನರಿಕ್ ಆಗಿ ತಯಾರಿಸಲು ಅನುಮತಿ ಕೊಟ್ಟಿರುವ ನಿದರ್ಶನಗಳಿವೆ. ಇದಕ್ಕೆ ತಡಮಾಡದೆ, ಸರ್ಕಾರ ಅವಕಾಶ ಕೊಡುವುದು ಮುಖ್ಯವಾದ ಹೆಜ್ಜೆ. ಹೀಗಾಗಿ ಜನರು ಸಾರ್ವಜನಿಕ ನಡೆವಳಿಕೆಯನ್ನು ಬದಲಾಯಿಸಿಕೊಂಡು, ಜೊತೆಗೆ ವಿಜ್ಞಾನ–ತಂತ್ರಜ್ಞಾನದ ಬಳಕೆಯನ್ನೂ ಪಡೆದು ಕ್ಷಯರೋಗವನ್ನು ಗೆಲ್ಲಬೇಕಿದೆ. ಕ್ಷಯರೋಗವು ಸಾರ್ವಜನಿಕ ಸಮಸ್ಯೆ; ಕ್ಷಯರೋಗದ ವಿರುದ್ಧದ ಸಮರದಲ್ಲಿ ಭಾರತೀಯರೆಲ್ಲರೂ ಒಂದಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT