ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಟಲ್: ಬಯಸಿದಂತೆ ಬದುಕಿದ ಚೇತನ

Last Updated 23 ಆಗಸ್ಟ್ 2018, 4:03 IST
ಅಕ್ಷರ ಗಾತ್ರ

ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದ ನಂತರ, ಭಾರತದ ರಾಜಕಾರಣದಲ್ಲಿ ಅವರ ಸ್ಥಾನ, ಅವರು ವಹಿಸಿದ ಪಾತ್ರ ಹಾಗೂ ರಾಷ್ಟ್ರದ ಸಾರ್ವಜನಿಕ ಜೀವನದ ಬಗ್ಗೆ ಸಾಕಷ್ಟು ಚರ್ಚೆಗಳು ಮತ್ತು ಬರಹಗಳು ಕಂಡುಬರುತ್ತಿವೆ. ಈ ಪ್ರತಿಯೊಂದೂ ಅವರ ಬಹುಮುಖ ವ್ಯಕ್ತಿತ್ವ ಹಾಗೂ ಒಬ್ಬ ಮುತ್ಸದ್ದಿಯಾಗಿ ಅವರ ಸಾಧನೆಗಳನ್ನು ಆಧರಿಸಿ ಸಮಾಜದ ವಿವಿಧ ಕ್ಷೇತ್ರಗಳು ಅವರನ್ನು ಗೌರವಿಸಿದ ರೀತಿ ಹಾಗೂ ಒಬ್ಬ ವ್ಯಕ್ತಿಯಾಗಿ ಅವರು ಎಷ್ಟು ಪ್ರೇರಣಾದಾಯಕವಾಗಿದ್ದರು ಎಂಬುದನ್ನು ಎಳೆಎಳೆಯಾಗಿ ಅನಾವರಣಗೊಳಿಸುತ್ತಿವೆ. ವಾಜಪೇಯಿ ಅವರು ತಾವು ಬಯಸಿದಂತೆ ಬದುಕು ಸಾಗಿಸಿದ ಚೇತನವಾಗಿದ್ದರು ಎಂದು ಈ ಲೇಖನದಲ್ಲಿ ನಾನು ಪ್ರತಿಪಾದಿಸಬಯಸುತ್ತೇನೆ.

ವಾಜಪೇಯಿ ಅವರನ್ನು ನಾನು ಮೊದಲ ಸಲ ನೋಡಿದ್ದು 1967ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ. ಆಗ ಅವರು ನವದೆಹಲಿ ಲೋಕಸಭಾ ಸ್ಥಾನಕ್ಕಾಗಿ ಎಂ.ಎಲ್.ಸೋಂಧಿ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಆಗ ನಾನು ಮಾಧ್ಯಮಿಕ ಶಾಲಾ ವಿದ್ಯಾರ್ಥಿಯಾಗಿದ್ದೆ. ವಾಜಪೇಯಿ ಅವರು ರಸ್ತೆಯ ಚೌಕವೊಂದರಲ್ಲಿ ನಿಂತು ಆಶುಭಾಷಣ ಮಾಡಿ ಹೇಗೆ ಜನರನ್ನು ಸಮ್ಮೋಹಕಗೊಳಿಸಿದ್ದರು ಎಂಬುದನ್ನು ನಾನು ದೆಹಲಿಯ ಕಿದ್ವಾಯಿ ನಗರದ ಸರ್ಕಾರಿ ವಸತಿ ಗೃಹದ ಕಿಟಕಿಯೊಳಗಿನಿಂದ ನೋಡಿದ್ದೆ. ಕಾಂಗ್ರೆಸ್ ಆಡಳಿತ ವ್ಯವಸ್ಥೆಯ ವಿರುದ್ಧದ ದಾಳಿಯಾಗಿದ್ದ ಆ ಭಾಷಣದ ವೇಳೆಯ ಅವರ ಆಂಗಿಕ ಹಾವಭಾವ, ಕಣ್ಣುಗಳಲ್ಲಿನ ಮಿಂಚುಗಳೆಲ್ಲವೂ ನನ್ನ ಕಣ್ಣಿಗೆ ಈಗಲೂ ಕಟ್ಟಿದಂತಿವೆ. ಇದಾದ ಒಂದು ದಶಕದ ಅವಧಿಯಲ್ಲಿ, ಅಂದರೆ 1977ರ ಚಾರಿತ್ರಿಕ ಚುನಾವಣೆಯಲ್ಲಿ ನವದೆಹಲಿಯ ಅದೇ ಲೋಕಸಭಾ ಕ್ಷೇತ್ರದಿಂದ ನನಗೆ ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸುವ ಅವಕಾಶ ಒದಗಿ ಬಂದಿತ್ತು. ಆಗ ತಾನೇ ಪ್ರೌಢಶಾಲೆ ಮುಗಿಸಿದ್ದ ನಾನು ಪದವಿ ಕಾಲೇಜು ಸೇರುವ ಮುಂಚಿನ ಬಿಡುವಿನ ಅವಧಿಯಲ್ಲಿ ಚುನಾವಣಾ ಪ್ರಚಾರ ಕಾರ್ಯ ಮಾಡಲು ನಿರ್ಧರಿಸಿದ್ದೆ. ತುರ್ತು ಪರಿಸ್ಥಿತಿ ವಿರುದ್ಧದ ಆಕ್ರೋಶ, ಜೆಪಿ ಆಂದೋಲನದ ಕರೆ ಹಾಗೂ ಪ್ರಜಾತಂತ್ರವನ್ನು ಕರಾಳ ಅವಧಿಯಿಂದ ಮುಕ್ತಗೊಳಿಸುವ ಬಯಕೆಯಿಂದಾಗಿ ಸ್ವಯಂಪ್ರೇರಿತವಾಗಿ ಪ್ರಚಾರಕರ್ತನಾಗಲು ಹೋಗಿದ್ದ ನನಗೆ ವಾಜಪೇಯಿಜಿ ಅವರ ಕ್ಷೇತ್ರದ ಕೆಲಸವನ್ನು ವಹಿಸಲಾಗಿತ್ತು. ಪ್ರತಿಯೊಂದು ದೃಷ್ಟಿಯಿಂದಲೂ ಅಮೂಲ್ಯ ಅನುಭವಗಳನ್ನು ನೀಡಿದ ಕಾರ್ಯ ಅದಾಗಿತ್ತು. ಇದೆಲ್ಲಕ್ಕೂ ಕಳಶವಿಟ್ಟಂತೆ, ಪ್ರಚಾರದ ಕಡೆಯ ಹಂತದಲ್ಲಿ ಸ್ವತಃ ವಾಜಪೇಯಿ ಅವರನ್ನೇ ಭೇಟಿಯಾಗುವ ಅವಕಾಶ ಒದಗಿಬಂದಿತ್ತು. ತಮ್ಮ ಹೆಗ್ಗುರುತಾದ ಅದೇ ಎಂದಿನ ಮಂದಹಾಸದಿಂದ ನಮ್ಮೆಡೆಗೆ ನಡೆದುಬಂದು, ಎಲ್ಲಾ ಯುವ ಪ್ರಚಾರಕರ ಬೆನ್ನುತಟ್ಟಿ ಅವರು ಹೇಳಿದ್ದು ಒಂದೇ ಒಂದು ವಾಕ್ಯ- ಆಪ್ ಸಬ್ ನೆ ಮೇರೆ ಚುನಾವ್ ಪ್ರಚಾರ್ ಮೇಂ ಭಾಗ್ ಲಿಯಾ... ಧನ್ಯವಾದ್ (ನನ್ನ ಚುನಾವಣಾ ಪ್ರಚಾರ ಕಾರ್ಯದಲ್ಲಿ ನೀವೆಲ್ಲರೂ ಭಾಗಿಯಾಗಿದ್ದೀರಿ, ಧನ್ಯವಾದ). ಆ ಒಂದೇ ಒಂದು ವಾಕ್ಯ ಮತ್ತು ಬೆನ್ನುತಟ್ಟಿದ ಮೆಚ್ಚುಗೆಯೇ ನಮ್ಮೆಲ್ಲರಿಗೂ ಸಾಕಾಗಿತ್ತು.

ಅದಾದ ಒಂದು ವರ್ಷದ ತರುವಾಯ ನನಗೆ ಅವರ ಬಗ್ಗೆ ಭ್ರಮನಿರಸನವಾಯಿತು. ಭಾರತದ ವಿದೇಶಾಂಗ ಸಚಿವರಾಗಿದ್ದ ವಾಜಪೇಯಿಜಿ ಅವರು ವಿಶ್ವಸಂಸ್ಥೆಯ ಮಹಾಧಿವೇಶನವನ್ನು ಉದ್ದೇಶಿಸಿ ಹಿಂದಿ ಭಾಷೆಯಲ್ಲಿ ಮಾತನಾಡಿ ದೇಶದಲ್ಲಿ ಹೆಮ್ಮೆ ಮೂಡಿಸಿದ್ದರು. ಇದು ಶ್ಲಾಘನಾರ್ಹವಾದದ್ದೇ. ಆದರೆ ಇದೇ ವೇಳೆ ನಡೆದ ಮತ್ತೊಂದು ಪ್ರಸಂಗ ಹಾಗೆ ಇರಲಿಲ್ಲ. ದೂರದರ್ಶನಕ್ಕೆ ನೀಡಿದ್ದ ಸಂದರ್ಶನವೊಂದರಲ್ಲಿ, ಹಿಂದಿ ಭಾಷೆಯನ್ನು ಅಂತರರಾಷ್ಟ್ರೀಯ ವೇದಿಕೆಗೆ ಕೊಂಡೊಯ್ದಿದ್ದನ್ನು ಅವರು ಸಮರ್ಪಕವಾಗಿಯೇ ಸಮರ್ಥಿಸಿಕೊಂಡಿದ್ದರು. ಇದೇ ಸಂದರ್ಶನದಲ್ಲಿ ಮತ್ತೊಂದು ಪ್ರಶ್ನೆಗೆ ಉತ್ತರಿಸುತ್ತಾ, ದಕ್ಷಿಣ ಭಾರತದವರೊಬ್ಬರು ಭವಿಷ್ಯದಲ್ಲಿ ವಿದೇಶಾಂಗ ಮಂತ್ರಿಯಾದರೆ, ಅವರು ವಿಶ್ವಸಂಸ್ಥೆಯಲ್ಲಿ ತಮಿಳಿನಲ್ಲಿ ಮಾತನಾಡಲಿ ಎಂದು ಹೇಳಿದ್ದರು. ದಕ್ಷಿಣ ಭಾರತದಲ್ಲಿ ತಮಿಳು ಭಾಷೆಯನ್ನು ಹೊರತುಪಡಿಸಿ ಬೇರೆ ಭಾಷೆಗಳೂ ಇವೆ ಎಂಬ ಅರಿವಿಲ್ಲದೆ ಅವರು ಆಡಿದ್ದ ಈ ಮಾತುಗಳನ್ನು ಕೇಳಿ ಪದವಿ ವಿದ್ಯಾರ್ಥಿಯಾಗಿದ್ದ ನಾನು ಆಘಾತಗೊಂಡಿದ್ದೆ. ಅವರ ಈ ಹೇಳಿಕೆಯಿಂದ ನನಗಾದ ಆಘಾತ ಮತ್ತು ಅಸಮಾಧಾನವನ್ನು ಹೊರಹಾಕಿ ಕೋಪಾವೇಶದಲ್ಲಿ ವಿದೇಶಾಂಗ ಸಚಿವರಿಗೆ ಒಂದು ಪತ್ರವನ್ನೂ ಬರೆದಿದ್ದೆ. ಇದಾದ ಕೆಲವು ವಾರಗಳಲ್ಲಿ, ಕ್ಷಮಾಪಣೆ ಕೋರಿದ ಪತ್ರವೊಂದು ನನಗೆ ಬಂದಿತ್ತು. ನನ್ನ ಹೇಳಿಕೆಯು, ತಮಿಳು ಮಾತೃಭಾಷೆಯಲ್ಲದ ದಕ್ಷಿಣ ಭಾರತದ ಇತರರ ಭಾವನೆಗಳನ್ನು ನೋಯಿಸುವ ಉದ್ದೇಶ ಹೊಂದಿರಲಿಲ್ಲ ಎಂಬ ಒಕ್ಕಣೆ ಅದರಲ್ಲಿತ್ತು. ಅದಾದ ಕೆಲವು ತಿಂಗಳುಗಳ ನಂತರ ಅವರು, ಬೆಂಗಳೂರಿನ ನನ್ನ ಕಾಲೇಜಿಗೆ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲು ಬಂದರು. ಹಿಂದಿಯಲ್ಲಿ ಮಾತನಾಡುವುದು ನನಗೆ ಹೆಚ್ಚು ಸುಲಭ. ಆದರೆ ಇದು ದಕ್ಷಿಣ ಭಾರತವಾದ್ದರಿಂದ ಕನ್ನಡದಲ್ಲಿ ಮಾತನಾಡುವುದು ನನಗೆ ಹೆಚ್ಚು ಸಂತಸದ ಸಂಗತಿ. ಆದರೆ, ಆ ಭಾಷೆ ನನಗೆ ಬರುವುದಿಲ್ಲವಾದ್ದರಿಂದ ಇಂಗ್ಲಿಷ್‌ನಲ್ಲಿ ಮಾತನಾಡುತ್ತೇನೆ! ಎಂದೇ ಅವರು ತಮ್ಮ ಭಾಷಣ ಶುರು ಮಾಡಿದರು. ನಾನು ತುಂಬಾ ಹತ್ತಿರದಿಂದ ಅವರನ್ನು ನೋಡಿದ್ದು ಅದೇ ಕೊನೆಯ ಸಲ. ಅದಾದ ಮೇಲೆ ಅವರು ಪ್ರತಿಪಕ್ಷದ ನಾಯಕನಾಗಿ ಹಾಗೂ ರಾಷ್ಟ್ರದ ಮೊದಲ ಅಪ್ಪಟ ಕಾಂಗ್ರೇಸ್ಸೇತರ ಪ್ರಧಾನಿಯಾಗಿ ಹೊರಹೊಮ್ಮಿದ್ದನ್ನು ನಾನು ಕಂಡೆ. ಅದಾದ ನಂತರ ಏನೇನಾಯಿತು ಎಂಬುದೆಲ್ಲಾ ಈಗ ಇತಿಹಾಸ.

ವಾಜಪೇಯಿಜಿ ಅವರು ತಾವು ಬಯಸಿದಂತೆ ಬದುಕಿದ ವ್ಯಕ್ತಿಯಾಗಿದ್ದರು ಎಂದು ಈ ಲೇಖನದ ಆರಂಭದಲ್ಲಿ ನಾನು ಹೇಳಿದ್ದೇನೆ. ತಮ್ಮ ರಾಜಕೀಯ ಪಾಳಯದಲ್ಲಿ ಬಹುತೇಕರಿಗೆ ಮುಜುಗರ ಎನ್ನಿಸುವ ಸಂಭವವಿದ್ದರೂ ಅವರು ತಮ್ಮ ಅಂತರಂಗಕ್ಕೆ ಅನ್ನಿಸಿದ್ದನ್ನು ವ್ಯಕ್ತಪಡಿಸುತ್ತಿದ್ದರು.

ಈ ಹೇಳಿಕೆಗೆ ಪೂರಕವಾಗಿ ನಾನು ಕೆಲವು ನಿದರ್ಶನಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಜನತಾ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದಾಗ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪಾಕಿಸ್ತಾನದ ನಾಯಕರೊಬ್ಬರು, ಜನಸಂಘದ ಮುಖಂಡರಾಗಿ ವಾಜಪೇಯಿ ಅವರು ಪಾಕಿಸ್ತಾನದ ವಿರುದ್ಧ ನೀಡಿದ್ದ ರೋಷಾವೇಶದ ಹೇಳಿಕೆಗಳ ಕಡತವನ್ನೇ ಮುಂದಿಟ್ಟಿದ್ದರು. ಇದನ್ನು ನೋಡಿ ನಸುನಕ್ಕ ವಾಜಪೇಯಿಜಿ, ನನ್ನ ಹಿಂದಿನದ್ದನ್ನು ನಾನು ಮರೆತಿದ್ದೇನೆ. ನೀವು ಸಹ ನಿಮ್ಮ ಹಿಂದಿನದ್ದನ್ನು ಮರೆತಿದ್ದೀರೆಂದು ಭಾವಿಸಿದ್ದೇನೆ! ಎಂದು ಪ್ರತಿಕ್ರಿಯಿಸಿದ್ದರು. ಇದರಿಂದ ಮಾತುಕತೆಗೆ ಇದ್ದ ಭಂಗ ನಿವಾರಣೆಯಾಗಿ ದ್ವಿಪಕ್ಷೀಯ ಮಾತುಕತೆ ಯಶಸ್ಸಿನೊಂದಿಗೆ ಮಾರ್ದನಿಸಿತ್ತು.

ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮ ಅವರನ್ನು 1996 ರಲ್ಲಿ ಭೇಟಿಯಾಗಲು ಹೋದ ಸಂದರ್ಭ ಮತ್ತೊಂದು. ಏಕೈಕ ದೊಡ್ಡ ಪಕ್ಷವಾಗಿದ್ದ ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡದೇ ಇದ್ದುದನ್ನು ಪ್ರತಿಭಟಿಸಲು ತೆರಳಿದ್ದ ಸನ್ನಿವೇಶ ಅದಾಗಿತ್ತು. ಭೇಟಿ ಮುಗಿಸಿಕೊಂಡು ಹೊರಬಂದ ವಾಜಪೇಯಿ ಅವರು ಕಾದು ಕುಳಿತಿದ್ದ ಮಾಧ್ಯಮದವರಿಗೆ, ರಾಷ್ಟ್ರಪತಿ ಅವರು ತನ್ನನ್ನು ಸರ್ಕಾರ ರಚಿಸಲು ಆಹ್ವಾನಿಸಿದ್ದು ಅದನ್ನು ತಾನು ಒಪ್ಪಿಕೊಂಡಿರುವುದಾಗಿ ತಿಳಿಸಿದರು. ವಾಜಪೇಯಿ ಅವರು ಈ ಆಹ್ವಾನವನ್ನು ತಕ್ಷಣ ಒಪ್ಪಿಕೊಳ್ಳದೆ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಒಂದಷ್ಟು ಸಮಯಾವಕಾಶ ಕೋರಬೇಕಿತ್ತು ಎಂದು ಬಿಜೆಪಿಯ ಕೆಲವು ನಾಯಕರು ಇತ್ತ ಪಕ್ಷದ ಕಚೇರಿಯಲ್ಲಿ ಮಣಮಣ ಎಂದುಕೊಂಡದ್ದುಂಟು. ಆಗ ವಾಜಪೇಯಿ ಅವರು ತತ್‌ಕ್ಷಣವೇ, ಪಕ್ಷಕ್ಕೆ ಆಹ್ವಾನ ನೀಡದ್ದನ್ನು ಪ್ರತಿಭಟಿಸಲು ನೀವು ನನ್ನನ್ನು ರಾಷ್ಟ್ರಪತಿ ಬಳಿಗೆ ಕಳುಹಿಸಿದಿರಿ. ಆದರೆ, ಅವರು ಆಹ್ವಾನಿಸಿದಾಗ ನಾನು ಒಪ್ಪಿಕೊಳ್ಳಬಾರದಿತ್ತು ಎನ್ನುತ್ತೀರಿ! ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. ಅವರು ಹೀಗೆ ಹೇಳುತ್ತಿದ್ದಂತೆ ಇಡೀ ಸಭೆ ಸ್ತಬ್ಧವಾಗಿ ಹೋಗಿತ್ತು. ವಾಜಪೇಯಿಜಿ ತಮ್ಮ ನಿಲುವನ್ನು ಸೂಕ್ತವಾಗಿ ಸಮರ್ಥಿಸಿಕೊಂಡಿದ್ದರು.

ತಮ್ಮ 13 ದಿನಗಳ ಸರ್ಕಾರ ಪದಚ್ಯುತಗೊಂಡ ಸಂದರ್ಭದಲ್ಲಿ ಲೋಕಸಭೆಯಲ್ಲಿ ಅವರು ಮಾಡಿದ ಭಾಷಣ ನಾಲ್ಕನೆಯದು. ಈ ವ್ಯಕ್ತಿ (ವಾಜಪೇಯಿ) ಒಳ್ಳೆಯವನು, ಆದರೆ ಅವರ ಪಕ್ಷ ಒಳ್ಳೆಯದಲ್ಲ ಎಂದು ನಿಮ್ಮಲ್ಲಿ ಕೆಲವರಿಗೆ ಅನ್ನಿಸುತ್ತಿದೆ ಎಂದು ಪ್ರತಿಪಕ್ಷವನ್ನು ನೋಡುತ್ತಾ ಅವರು ಉದ್ಗರಿಸಿದರು. ಅವರು ಹೆಣೆದಿದ್ದ ಮಾತಿನ ಬಲೆಗೆ ನೇರವಾಗಿ ಬಿದ್ದ ಪ್ರತಿಪಕ್ಷದ ಕೆಲವರು, ಹೌದು, ನೀವು ಹೇಳುತ್ತಿರುವುದು ಸರಿಯಾಗಿಯೇ ಇದೆ ಎಂದು ಪ್ರತಿಕ್ರಿಯಿಸಿದ್ದು ಕೇಳಿಸಿತ್ತು. ಆ ಸನ್ನಿವೇಶವನ್ನು ಯಥೋಚಿತವಾಗಿ ಬಳಸಿಕೊಂಡ ವಾಜಪೇಯಿಜಿ, ಯಾವುದೇ ವ್ಯಕ್ತಿಯು ಪಕ್ಷಕ್ಕಿಂತ ದೊಡ್ಡವನಲ್ಲ ಎಂಬುದನ್ನು ದೃಢವಾಗಿ ಪ್ರತಿಪಾದಿಸಿದರು.

ವಾಜಪೇಯಿ ಅವರು ಪ್ರಧಾನಿ ಪದವಿಯಿಂದ 2004ರಲ್ಲಿ ಕೆಳಗಿಳಿದ ನಂತರ ಹಿನ್ನೆಲೆಗೆ ಸರಿದರು. 2008ರಲ್ಲಿ ತಮ್ಮ ಆರೋಗ್ಯ ಹದಗೆಟ್ಟ ಮೇಲೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ನಿಲ್ಲಿಸಿದರು. ವಾಜಪೇಯಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿತ್ತು; ವಿಶೇಷವಾಗಿ ತಮ್ಮ ಆಹಾರಾಭ್ಯಾಸಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಿತ್ತು ಎಂದು ಅನೇಕರು ಬರೆಯುತ್ತಿರಬಹುದು. ಆದರೆ ವಾಜಪೇಯಿಜಿ ಇತರರ ಇಚ್ಛೆಗೆ ಅನುಸಾರವಾಗಿ ಬದುಕು ನಡೆಸುವಂತಹ ವ್ಯಕ್ತಿಯಾಗಿರಲಿಲ್ಲ. ಅವರು ತಮ್ಮ ಬದುಕಿನ ಕಡೆಯ 10 ವರ್ಷಗಳ ಅವಧಿಯನ್ನು ಸಾರ್ವಜನಿಕ ಜೀವನದಿಂದ ದೂರವಿದ್ದು ಬದುಕಿದರು. ಇದು ಕೂಡ ಪ್ರಚಾರವೆಂದರೆ ಹಿಂಜರಿಯುತ್ತಿದ್ದ, ಖಾಸಗಿತನವನ್ನು ಬಯಸುತ್ತಿದ್ದ, ಕೆಲವೊಮ್ಮೆ ಏಕಾಂತವನ್ನೂ ಅಪೇಕ್ಷಿಸುತ್ತಿದ್ದ ಅವರ ಮನೋದೃಷ್ಟಿಗೆ ಪೂರಕವೇ ಆಗಿತ್ತು. ಈ ವಿಷಯದಲ್ಲಿ ಕೂಡ ಅವರು ತಮ್ಮ ಬಯಕೆಯಂತೆಯೇ ಜೀವಿಸುವುದರ ಜೊತೆಗೆ ನಮ್ಮೆಲ್ಲರನ್ನೂ ನಮ್ಮಂತೆಯೇ ಇರಲು ಬಿಡಗೊಟ್ಟರು. ಅಂತಹ ಉದಾತ್ತ ಮನೋಭಾವ ಮೇಳೈಸಿದ ವ್ಯಕ್ತಿತ್ವದ ಮತ್ತೊಂದು ಉದಾಹರಣೆ ಬಹುಶಃ ಸದ್ಯಕ್ಕೆ ಕಾಣಸಿಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT