ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಸಂಸ್ಥೆ ಚುನಾವಣೆ: ಚಿತ್ರದುರ್ಗ ಜಿಲ್ಲೆ, ಮೈಸೂರಿನಲ್ಲಿ ಮತಯಂತ್ರ ದೋಷ

Last Updated 31 ಆಗಸ್ಟ್ 2018, 4:42 IST
ಅಕ್ಷರ ಗಾತ್ರ

ಚಿತ್ರದುರ್ಗ, ಬೆಳಗಾವಿ, ಶಿರಸಿ, ಮೈಸೂರು, ತುಮಕೂರು:ಮೈಸೂರು, ತುಮಕೂರು ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆಗಳು ಹಾಗೂ ಇತರ 102 ನಗರ ಸ್ಥಳೀಯ ಸಂಸ್ಥೆಗಳಿಗೆ ಶುಕ್ರವಾರ ಬೆಳಿಗ್ಗೆ ಮತದಾನ ಆರಂಭವಾಗಿದೆ. ಚಿತ್ರದುರ್ಗ ಜಿಲ್ಲೆ, ಮೈಸೂರಿನ ಮನಗಟ್ಟಿಯೊಂದ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿವೆ. ಹಲವೆಡೆ ವೃದ್ಧರು, ಅಂಗವಿಕಲರು ಆಸಕ್ತಿಯಿಂದ ಬಂದು ಮತ ಚಲಾಯಿಸುತ್ತಿದ್ದಾರೆ.

ಮೈಸೂರು: ಮತಯಂತ್ರ ದೋಷ

ಮೈಸೂರು:ಮಹಾನಗರ ಪಾಲಿಕೆ ಚುನಾವಣೆ ಮತದಾನಕ್ಕೆ ಆರಂಭದಲ್ಲೇ ಇವಿಎಂನಲ್ಲಿ ದೋಷ ಕಾಣಿಸಿಕೊಂಡಿದ್ದು, ಮತ ಚಲಾವಣೆಗೆಅಡ್ಡಿಯಾಗಿದೆ.

ವಾರ್ಡ್ ನಂ 64ರ ಅರವಿಂದ ನಗರದ ಬೂತ್ ಸಂಖ್ಯೆ 11ರಲ್ಲಿ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿತ್ತು. ಇದರಿಂದ ಅರ್ಧಗಂಟೆಯಿಂದ ಮತದಾನ ಸ್ಥಗಿತವಾಗಿತ್ತು. 11 ಜನ ಮತ ಚಲಾಯಿಸಿದ ನಂತರ ಮತಯಂತ್ರ ಸ್ಥಗಿತವಾಗಿದೆ. ಸಿಬ್ಬಂದಿ ಮತಯಂತ್ರ ಪರಿಶೀಲನೆ ನಡೆಸಿದರು.

ಕಣದಲ್ಲಿ 393 ಅಭ್ಯರ್ಥಿಗಳು
ಮಹಾನಗರ ಪಾಲಿಕೆಯ 65 ವಾರ್ಡ್ಗಳಲ್ಲಿ ಕಣದಲ್ಲಿ 393 ಅಭ್ಯರ್ಥಿಗಳಿದ್ದಾರೆ. ಅಭ್ಯರ್ಥಿಗಳ ಭವಿಷ್ಯ ನಿರ್ಧಾರಕ್ಕೆ 7.98 ಲಕ್ಷ ಮತದಾರರು 815 ಮತಗಟ್ಟೆಗಳಲ್ಲಿ ಮತ ಚಲಾವಣೆ ಮಾಡಬೇಕಿದೆ‌. 2013ರಲ್ಲಿ ನಡೆದ ಪಾಲಿಕೆ ಚುನಾವಣೆಯಲ್ಲಿ ಶೇ. 59.76 ರಷ್ಟು ಮಂದಿ ಮತದಾನ ಮಾಡಿದ್ದರು.

ಇದು ಮೈಸೂರಿನ ಅಗ್ರಹಾರದ ಆಯುರ್ವೇದ ಆಸ್ಪತ್ರೆಯ ಮತಗಟ್ಟೆ. ಇಲ್ಲಿ 9 ಗಂಟೆಯವರೆಗೆ ಕೇವಲ‌4 ಮಂದಿ ಮಾತ್ರ ಮತ ಚಲಾವಣೆ ಮಾಡಿದ್ದರು‌.

ಚಿತ್ರದುರ್ಗ ಜಿಲ್ಲೆಯ ಮತಗಟ್ಟೆಯೊಂದಕ್ಕೆ ಮತ ಚಲಾಯಿಸಲು ಬಂದ ವೃದ್ಧರು.
ಚಿತ್ರದುರ್ಗ ಜಿಲ್ಲೆಯ ಮತಗಟ್ಟೆಯೊಂದಕ್ಕೆ ಮತ ಚಲಾಯಿಸಲು ಬಂದ ವೃದ್ಧರು.

ಚಿತ್ರದುರ್ಗ: ಮತಯಂತ್ರದಲ್ಲಿ ದೋಷ
ಸ್ಥಳೀಯ ಸಂಸ್ಥೆಗೆ ನಡೆಯುತ್ತಿರುವ ಮತದಾನ ಚಿತ್ರದುರ್ಗ ಜಿಲ್ಲೆಯಲ್ಲಿ ಶಾಂತಿಯುತವಾಗಿ ಆರಂಭವಾಗಿದೆ. ಚಿತ್ರದುರ್ಗ, ಚಳ್ಳಕೆರೆ ನಗರಸಭೆ ಹಾಗೂ ಹೊಸದುರ್ಗ ಪುರಸಭೆಗೆ ಮತದಾನ ನಡೆಯುತ್ತಿದೆ.

ಚಿತ್ರದುರ್ಗದ ವಾರ್ಡ್ ನಂಬರ್ 5ರ 15ನೇ ಮತಗಟ್ಟೆಯಲ್ಲಿ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿತ್ತು. ಹಳೆ ಮಾಧ್ಯಮಿಕ ಶಾಲೆಯ ಈ ಮತಗಟ್ಟೆಯಲ್ಲಿ 870 ಮತಗಳು ಇದ್ದು, ಬೆಳಿಗ್ಗೆ 7ಕ್ಕೆ ಅನೇಕರು ಹಕ್ಕು ಚಲಾಯಿಸಲು ಬಂದಿದ್ದವರು ಸುಮಾರು 45 ನಿಮಿಷ ಕಾಯಬೇಕಾಯಿತು.

ಜೆಸಿಆರ್ ಬಡಾವಣೆಯ ಮತಗಟ್ಟೆ ಸಮೀಪ ಮತಯಾಚನೆ ಮಾಡಿದ ಆರೋಪದ ಮೇರೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಮಧ್ಯ ಪ್ರವೇಶ ಮಾಡಿದ ಪೋಲಿಸರು ಪರಿಸ್ಥಿತಿ ನಿಯಂತ್ರಿಸಿದರು.

ಶಿರಸಿಯ ಮತಗಟ್ಟೆಯೊಂದರ ಹೊರಗಿನ ದೃಶ್ಯ.
ಶಿರಸಿಯ ಮತಗಟ್ಟೆಯೊಂದರ ಹೊರಗಿನ ದೃಶ್ಯ.

ಶಿರಸಿ: ಆರಂಭದಲ್ಲಿ ಅಣಕು ಮತದಾನ
ಶಿರಸಿ ನಗರಸಭೆಯ 31 ವಾರ್ಡ್‌ಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಬೆಳಿಗ್ಗೆ 6.15ಕ್ಕೆ ಮತಗಟ್ಟೆ ಅಧಿಕಾರಿಗಳು ಅಣಕು ಮತದಾನ ನಡೆಸಿದರು. ‌

7 ಗಂಟೆಯಿಂದ ಮತದಾನ ಆರಂಭವಾಗಿದ್ದು ಕೆಲವು ಮತಗಟ್ಟೆಗಳಲ್ಲಿ ಮತದಾರರು ಮತ ಹಾಕಲು ಸರದಿಯಲ್ಲಿ ನಿಂತಿದ್ದಾರೆ. ಕೆಲವೆಡೆ 2-3 ಮತದಾರರು ಮಾತ್ರ ಇದ್ದರು.

ಅಂಗವಿಕಲರಿಗೆ ಗಾಲಿ ಕುರ್ಚಿ ವ್ಯವಸ್ಥೆಗೊಳಿಸುವಂತೆ ಮತದಾರರೊಬ್ಬರು ಬೇಡಿಕೆಯ ಇಟ್ಟಾಗ ತಕ್ಷಣ ಅಧಿಕಾರಿಗಳು ಸ್ಪಂದಿಸಿದರು.

ಹಾವೇರಿಯಲ್ಲಿ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮತದಾನ ಮಾಡಿದರು.
ಹಾವೇರಿಯಲ್ಲಿ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮತದಾನ ಮಾಡಿದರು.

ತುಮಕೂರು: ನಿಧಾನಗತಿಯಲ್ಲಿ ಮತದಾನ ಆರಂಭ
ತುಮಕೂರು:
ಮಹಾನಗರ ಪಾಲಿಕೆ, ಮಧುಗಿರಿ, ಚಿಕ್ಕನಾಯಕನಹಳ್ಳಿ ಪುರಸಭೆ, ಕೊರಟಗೆರೆ ಮತ್ತು ಗುಬ್ಬಿ ಪಟ್ಟಣ ಪಂಚಾಯಿತಿ ಚುನಾವಣೆ ಮತದಾನ ಬೆಳಿಗ್ಗೆ ನಿಧಾನಗತಿಯಲ್ಲಿ ಆರಂಭವಾಯಿತು.
ತುಮಕೂರಿನಲ್ಲಿ ಮತಗಟ್ಟೆಗಳ ಬಳಿ ಅಭ್ಯರ್ಥಿಗಳ ಬೆಂಬಲಿಗರು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದರು.

ಬೆಳಿಗ್ಗೆ ಬೇಗ ಉದ್ಯೋಗದ ಮೇಲೆ ತೆರಳುವವರು ಬಂದು ಮತ ಚಲಾಯಿಸಿದರು.

5 ಸ್ಥಳೀಯ ಸಂಸ್ಥೆಗೆ 484 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 3 ಲಕ್ಷಕ್ಕೂ ಅಧಿಕ ಮತದಾರರು ಮತ ಚಲಾಯಿಸಲಿದ್ದಾರೆ. ತುಮಕೂರು ಪಾಲಿಕೆ 35 ವಾರ್ಡ್ಗೆ 215 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

2013ರವರೆಗೆ ತುಮಕೂರು ನಗರ ಸಭೆಯಾಗಿತ್ತು. 2014 ರಲ್ಲಿ ಮಹಾನಗರ ಪಾಲಿಕೆಯಾಗಿ ಅಸ್ತಿತ್ವಕ್ಕೆ ಬಂದಿತು.ಈ ಚುನಾವಣೆ ಪಾಲಿಕೆಯಾದ ಬಳಿಕ ನಡೆಯುತ್ತಿರುವ ಪ್ರಪ್ರಥಮ ಚುನಾವಣೆ ಇದಾಗಿದೆ.

ತುಮಕೂರಲ್ಲಿ ಕನಿಷ್ಠ ಮತದಾನ

ಜಿಲ್ಲೆಯ 5 ಸ್ಥಳೀಯ ಸಂಸ್ಥೆಗಳಲ್ಲಿ ತುಮಕೂರು ನಗರದಲ್ಲಿ ಬೆಳಿಗ್ಗೆ 9 ಗಂಟೆ ವೇಳೆ ಶೇ8.57 ಮತದಾನವಾಗಿದೆ. ಮಧುಗಿರಿ ಪುರಸಭೆ 10.9, ಚಿಕ್ಕನಾಯಕನಹಳ್ಳಿ ಪುರಸಭೆ 10.59, ಗುಬ್ಬಿ ಪಟ್ಟಣ ಪಂಚಾಯಿತಿ 12.96, ಕೊರಟಗೆರೆ ಪಟ್ಟಣ ಪಂಚಾಯಿತಿಗೆ 8.72 ಮತದಾನವಾಗಿದೆ.

ತುಮಕೂರಿನ 21 ನೇ ವಾರ್ಡ್ ನಲ್ಲಿ ಮತದಾನ ಮಾಡಿ ಬಂದವರಿಗೆ ಅಭ್ಯರ್ಥಿಗಳ ಬೆಂಬಲಿಗರು ಧನ್ಯವಾದ ಹೇಳಿದರು.
ತುಮಕೂರಿನ 21 ನೇ ವಾರ್ಡ್ ನಲ್ಲಿ ಮತದಾನ ಮಾಡಿ ಬಂದವರಿಗೆ ಅಭ್ಯರ್ಥಿಗಳ ಬೆಂಬಲಿಗರು ಧನ್ಯವಾದ ಹೇಳಿದರು.

ಕಾರವಾರ: ವಿರಳ ಮತದಾರರು

ಕಾರವಾರ: ನಗರಸಭೆಯ 31 ವಾರ್ಡ್ ಗಳಿಗೆ ಮತದಾನ ಆರಂಭವಾಗಿದ್ದು, ಮೊದಲ ಎರಡು ಗಂಟೆಗಳಲ್ಲಿ ಮತದಾರರ ಸಂಖ್ಯೆ ಸಾಧಾರಣವಾಗಿತ್ತು.

ನಗರದಲ್ಲಿ ಬಿಜೆಪಿಯಿಂದ 31, ಕಾಂಗ್ರೆಸ್ ನಿಂದ 29, ಜೆಡಿಎಸ್ ನಿಂದ 26 ಹಾಗೂ 52 ಪಕ್ಷೇತರರು ಕಣದಲ್ಲಿದ್ದಾರೆ.

ನಗರದ ವಿವಿಧೆಡೆ 55 ಮತಗಟ್ಟೆಗಳನ್ನು ತೆರೆಯಲಾಗಿದೆ. ಪ್ರತಿ ಮತಗಟ್ಟೆಗೂ ತಲಾ ಒಬ್ಬರು ಪಿಆರ್ ಒ, ಎಪಿಆರ್ ಒ, ಡಿ ದರ್ಜೆ ಸಿಬ್ಬಂದಿ ಮತ್ತು ಇಬ್ಬರು ಬೂತ್ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ.

ಕಾರವಾರದ ಉರ್ದು ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಲು ಮತದಾರರು ಸಾಲಿನಲ್ಲಿ ನಿಂತಿರುವುದು.
ಕಾರವಾರದ ಉರ್ದು ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಲು ಮತದಾರರು ಸಾಲಿನಲ್ಲಿ ನಿಂತಿರುವುದು.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪುರಸಭೆ 4ನೇ ವಾರ್ಡ್ ಚುನಾವಣೆಗೆ ವೃದ್ಧೆ ರುಕ್ಮಿಣಿ ಜೋಶಿ ಕುಟುಂಬದವರ ಸಹಾಯದೊಂದಿಗೆ ಹೊಸಪೇಠ ಗಲ್ಲಿಯಲ್ಲಿರುವ ಗಂಡು ಮಕ್ಕಳ ಸರ್ಕಾರಿ ಶಾಲೆಯ ಮತಗಟ್ಟೆಗೆ ಮತದಾನ ಮಾಡಲು ಬಂದರು.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪುರಸಭೆ 4ನೇ ವಾರ್ಡ್ ಚುನಾವಣೆಗೆ ವೃದ್ಧೆ ರುಕ್ಮಿಣಿ ಜೋಶಿ ಕುಟುಂಬದವರ ಸಹಾಯದೊಂದಿಗೆ ಹೊಸಪೇಠ ಗಲ್ಲಿಯಲ್ಲಿರುವ ಗಂಡು ಮಕ್ಕಳ ಸರ್ಕಾರಿ ಶಾಲೆಯ ಮತಗಟ್ಟೆಗೆ ಮತದಾನ ಮಾಡಲು ಬಂದರು.

ಬಿರುಸಿನ ಮತದಾ‌ನ
ಬೆಳಗಾವಿ: ಜಿಲ್ಲೆಯ ಗೋಕಾಕ, ನಿಪ್ಪಾಣಿ ನಗರಸಭೆ ಸೇರಿದಂತೆ 14 ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಮತದಾನ ಬಿರುಸಿನಿಂದ ನಡೆದಿದೆ.

ಜಿಲ್ಲೆಯ 14 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬೆಳಿಗ್ಗೆ 9ರವರೆಗೆ ಶೇ 12ರಷ್ಟು ಮತದಾನ ನಡೆದಿದೆ.

ಹಾವೇರಿ ನಗರ ಸಭೆ ಮತಗಟ್ಟೆಯಲ್ಲಿ ಶಾಸಕ ನೆಹರು ಓಲೇಕಾರ ಮತ ಚಲಾಯಿಸಿ ಹೊರ ಬಂದು, ಬೆರಳಿನ ಶಾಹಿಯ ಗುರುತು ತೋರಿಸಿದರು.
ಹಾವೇರಿ ನಗರ ಸಭೆ ಮತಗಟ್ಟೆಯಲ್ಲಿ ಶಾಸಕ ನೆಹರು ಓಲೇಕಾರ ಮತ ಚಲಾಯಿಸಿ ಹೊರ ಬಂದು, ಬೆರಳಿನ ಶಾಹಿಯ ಗುರುತು ತೋರಿಸಿದರು.

ಬಾಗಲಕೋಟೆ: ಮತ ಯಂತ್ರದಲ್ಲಿ ದೋಷ

ಬಾಗಲಕೋಟೆ ಸೇರಿದಂತೆ ಜಿಲ್ಲೆಯ ಐದು ನಗರ, ಐದು ಪುರಸಭೆ ಹಾಗೂ ಎರಡು ಪಟ್ಟಣ ಪಂಚಾಯ್ತಿಗಳ ಚುನಾವಣೆಗೆ ಮತದಾನ ಪ್ರಕ್ರಿಯೆ ಆರಂಭವಾದ್ದು,ಬಾಗಲಕೋಟೆ ನಗರಸಭೆ ವ್ಯಾಪ್ತಿಯ ನವನಗರ 8ನೇ ಸೆಕ್ಟರ್‌ನ ವಾರ್ಡ್ ಸಂಖ್ಯೆ 25ರಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣ ಮತದಾನ ಒಂದು ಗಂಟೆ ತಡವಾಗಿ ಆರಂಭವಾಗಿದೆ.

ಬಾಗಲಕೋಟೆಯ ಮೂರನೇ ವಾರ್ಡ್ ವ್ಯಾಪ್ತಿಯ ಅಂಗನವಾಡಿ ಕೇಂದ್ರದಲ್ಲಿನ ಮತಗಟ್ಟೆಗೆ ಗಾಲಿ ಕುರ್ಚಿ ಸಹಾಯದಿಂದ ಬಂದ ಅಂಗವಿಕಲೆ ಅಶ್ವಿನಿ ಕುರುಬರ ಮತಹಾಕಿ ತೆರಳಿದರು.
ಬಾಗಲಕೋಟೆಯ ಮೂರನೇ ವಾರ್ಡ್ ವ್ಯಾಪ್ತಿಯ ಅಂಗನವಾಡಿ ಕೇಂದ್ರದಲ್ಲಿನ ಮತಗಟ್ಟೆಗೆ ಗಾಲಿ ಕುರ್ಚಿ ಸಹಾಯದಿಂದ ಬಂದ ಅಂಗವಿಕಲೆ ಅಶ್ವಿನಿ ಕುರುಬರ ಮತಹಾಕಿ ತೆರಳಿದರು.

ಕಲಬುರ್ಗಿ: ಶೇ 13.37ರಷ್ಟು ಮತದಾನ
ಕಲಬುರ್ಗಿ:
ಜಿಲ್ಲೆಯ 6 ಪುರಸಭೆ ಹಾಗೂ ಒಂದು ನಗರಸಭೆಗೆ ಬೆಳಿಗ್ಗೆ 9 ಗಂಟೆಯವರೆಗೆ ಶೇ 13.37ರಷ್ಟು ಮತದಾನವಾಗಿದೆ.

ವಿವರ: ಶಹಾಬಾದ್ ಶೇ 17.20. ಸೇಡಂ ಶೇ 11.45. ಚಿತ್ತಾಪುರ ಶೇ 14.73. ಆಳಂದ ಶೇ 7.18. ಜೇವರ್ಗಿ ಶೇ 14.56. ಚಿಂಚೋಳಿ ಶೇ 12.91 ಹಾಗೂ ಅಫಜಲಪುರ ಶೇ 15.57.

ಜಿಲ್ಲೆಯಲ್ಲಿರುವ ಒಟ್ಟು 167 ಸ್ಥಾನಗಳಿಗೆ 535 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಜೇವರ್ಗಿ 23, ಅಫಜಲಪುರ 21, ಆಳಂದ 27, ಸೇಡಂ 23, ಚಿತ್ತಾಪುರ 23, ಚಿಂಚೋಳಿ 23 ಹಾಗೂ ಶಹಾಬಾದ್ ನಗರಸಭೆಯ 27 ವಾರ್ಡ್ ಗಳಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಗಳಲ್ಲಿ ಮತದಾನ ಸುಗಮವಾಗಿ ನಡೆದಿದೆ.

ಕಲಬುರ್ಗಿ ಮತಗಟ್ಟೆಯೊಂದರಲ್ಲಿ ಮತದಾರರು ಸರದಿಯಲ್ಲಿ ನಿಂತಿದ್ದರು.
ಕಲಬುರ್ಗಿ ಮತಗಟ್ಟೆಯೊಂದರಲ್ಲಿ ಮತದಾರರು ಸರದಿಯಲ್ಲಿ ನಿಂತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT