ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮತ್ತೆ ಹುಟ್ಟುವ ಮಾರ್ಕ್ಸ್

ಅಕ್ಷರ ಗಾತ್ರ

ಮಾರ್ಕ್ಸ್‌ನ ತಾಯಿ ಹೇಳಿದ ಒಂದು ಮಾತು ಮತ್ತೆ ಮತ್ತೆ ನೆನಪಾಗುತ್ತದೆ. ‘ಬಂಡವಾಳಶಾಹಿ ಕುರಿತಂತೆ ಉದ್ಗ್ರಂಥವನ್ನು ಕಾರ್ಲ್ ಮಾರ್ಕ್ಸ್ ಬರೆ
ಯುವ ಬದಲು ಒಂದಿಷ್ಟು ಬಂಡವಾಳಗಾರನಾಗಿರುತ್ತಿದ್ದರೆ ನೆಮ್ಮದಿಯ ಬದುಕು ಸಿಗುತ್ತಿತ್ತು’ ಎಂಬುದು ಆ ಮಾತು. ಬಡತನ, ಸಾಲ, ಹಸಿವು, ಮಗನ ಸಾವು, ಕಾರ್ಮಿಕ ಹೋರಾಟ, ಓದು ಬರಹ, ದೇಶಭ್ರಷ್ಟತೆ... ಇವುಗಳ ನಡುವೆ ಬದುಕಿದ ಮಾರ್ಕ್ಸ್‌ನನ್ನು ಅರ್ಥೈಸುವುದು ಸುಲಭವಲ್ಲ. ಅವನಿಗೆ ಸಂಗಾತಿ ಏಂಗೆಲ್ಸ್ ಸಹಾಯ ಮಾಡದೇ ಇರುತ್ತಿದ್ದರೆ ‘ದಾಸ್ ಕ್ಯಾಪಿಟಲ್’, ‘ಜರ್ಮನ್ ಐಡಿಯಾಲಜಿ’ ಗಳಂತಹ ಉದ್ಗ್ರಂಥಗಳನ್ನು ಬರೆಯಲು ಸಾಧ್ಯ ಆಗುತ್ತಿರಲಿಲ್ಲ.

ವಾಸ್ತವವಾಗಿ ಮಾರ್ಕ್ಸ್‌ನ ಚಿಂತನೆಯ ಬೆಳವಣಿಗೆಯಲ್ಲಿ ಎರಡು ಹಂತಗಳಿರುವುದನ್ನು ಗಮನಿಸಬೇಕು. ಮೊದಲನೇ ಹಂತದಲ್ಲಿ ಮಾರ್ಕ್ಸ್ ಒಬ್ಬ ರೊಮ್ಯಾಂಟಿಕ್, ಯಂಗ್ ಹೆಗೆಲಿಯನ್. ಎರಡನೇ ಹಂತದಲ್ಲಿ ಅವನೊಬ್ಬ ಪ್ರೌಢ ಚಿಂತಕ, ಸಂಕಥನಕಾರ.

ಸಮಾಜವಾದ ಅಥವಾ ಸಮತಾವಾದದ ಚಿಂತನೆಗಳನ್ನು ಸೀಮಿತತೆಯಿಂದ ಜಾಗತಿಕ ಸಿದ್ಧಾಂತವಾಗಿ ಮಾರ್ಕ್ಸ್ ಮಂಡಿಸಿದ ಸಂದರ್ಭದಲ್ಲಿ ಒಂದು ಅಂಶಬಹು ಮುಖ್ಯ. ಮಾರ್ಕ್ಸ್‌ನ ಪೂರ್ವ ಹಾಗೂ ಅವನ ಸಮಕಾಲೀನ ಸಂದರ್ಭದಲ್ಲಿ ಸಮಾಜವಾದಿ ಚಿಂತನೆಗಳು ಸಾಕಷ್ಟು ಪ್ರಚಲಿತವಾಗಿದ್ದವು. ಸೇಂಟ್ ಸೈಮನ್, ಫುರಿಯೆರ್, ಪ್ರಧೋನ್, ಲೂಯಿ ಬ್ಲಾಂಕ್  ಸಮಾಜವಾದವನ್ನು ಪ್ರತಿಪಾದಿಸಿದ್ದರು. ಆದರೆ ಅದು ಒಂದು ಕಾಲ್ಪನಿಕ, ದಾರ್ಶನಿಕ, ಆದರ್ಶವಾದದ ರೂಪದಲ್ಲಿತ್ತು. ಅದಕ್ಕೆ ವೈಜ್ಞಾನಿಕ ಚೌಕಟ್ಟು ನೀಡಿದವನು ಮಾರ್ಕ್ಸ್. ವಾಸ್ತವವಾಗಿ ಜಗತ್ತಿನ ಚಿಂತನೆಗಳಿಗೆ ಒಂದು ಹೊಸ ರೂಪ ಕೊಟ್ಟ ಪುಸ್ತಕ ‘ಕಮ್ಯುನಿಸ್ಟ್ ಮ್ಯಾನಿಫೆಸ್ಟೊ’. ಜಾಗತೀಕರಣದ ಸಂದರ್ಭದಲ್ಲಿ ಅತ್ಯಂತ ಹೆಚ್ಚು ಮಾರಾಟವಾದ ಪುಸ್ತಕವೂ ಹೌದು.

ಮಾರ್ಕ್ಸ್‌ವಾದ ವಿವಿಧ ರೂಪದ ಸಮಾಜವಾದಗಳನ್ನು ಸೃಷ್ಟಿಸಿದ್ದು ದಿಟ. ಪ್ರಜಾಪ್ರಭುತ್ವ ಸಮಾಜವಾದ, ಕ್ರಾಂತಿಕಾರಿ ಸಮಾಜವಾದ, ಉದಾರವಾದಿ ಸಮಾಜವಾದ, ಮಾರುಕಟ್ಟೆ ಸಮಾಜವಾದ, ಪರಿಸರ ಸಮಾಜವಾದ, ಕ್ರಿಶ್ಚಿಯನ್ ಸಮಾಜವಾದ, ಬ್ಲ್ಯಾಕ್ ಸಮಾಜವಾದ... ಮಾರ್ಕ್ಸ್‌ವಾದವು ವಿವಿಧ ದೇಶಗಳಿಗೆ ಹರಡಿದಂತೆಲ್ಲಾ ಬದಲಾಗುತ್ತಾ ಹೋಯಿತು. ಅಂದಿನ ಸೋವಿಯತ್ ಒಕ್ಕೂಟ (ಇಂದಿನ ರಷ್ಯಾ), ಚೀನಾ, ವಿಯೆಟ್ನಾಂ ಇದಕ್ಕೆ ಅಪವಾದವಲ್ಲ. ಲೆನಿನ್, ಪಕ್ಷಕ್ಕೆ ಒತ್ತು ಕೊಟ್ಟ.

ಮಾವೊ, ಬಡ ರೈತರಿಗೆ ಒತ್ತುಕೊಟ್ಟ. ವಿಯೆಟ್ನಾಂನಲ್ಲಿ ಹೊಚಿಮಿನ್ ಬಡ ರೈತರಿಗೆ ಆದ್ಯತೆ ನೀಡಿದ. ವಿಯೆಟ್ನಾಂ ಎಷ್ಟು ಬಲಾಢ್ಯವಾಯಿತೆಂದರೆ ಅದು ಅಮೆರಿಕದಂತಹ ದೈತ್ಯ ರಾಷ್ಟ್ರವನ್ನು ಯುದ್ಧದಲ್ಲಿ ಸೋಲಿಸುವಷ್ಟು ಬಲಶಾಲಿಯಾಯಿತು. ಅಂದಿನ ಸೋವಿಯತ್ ಒಕ್ಕೂಟವು ಸೂಪರ್ ಪವರ್ ಆಗಿ ಹೊರಹೊಮ್ಮಿತು. ಕ್ಯೂಬಾ, ಅಮೆರಿಕದ ನೆರೆಯ ದೇಶವಾದರೂ ಅಮೆರಿಕದ ಆಸಕ್ತಿಗೆ ಬಲಿಯಾಗಲಿಲ್ಲ.

‘ಜಾಗತೀಕರಣದ ಸಂದರ್ಭದಲ್ಲಿ ಹಾಗೂ ಸೋವಿಯತ್ ಒಕ್ಕೂಟದ ಪತನದ ನಂತರ ಮಾರ್ಕ್ಸ್‌ವಾದಪ್ರೇರಿತ ಸಮಾಜವಾದ ಸತ್ತುಹೋಗಿದೆ’ ಎಂದು ವಾದಿಸುವ ಚಿಂತಕರಿದ್ದಾರೆ. ಇದು ಅರ್ಧಸತ್ಯ. ಚೀನಾ ತನ್ನ ಉಳಿವಿಗಾಗಿ ಮಾರುಕಟ್ಟೆ ಸಮಾಜವಾದವನ್ನು ಅಪ್ಪಿಕೊಂಡಿದೆ.

ಅಲ್ಲದೇ ಮಾರ್ಕ್ಸ್‌ವಾದ ಬರೇ ಮಾರ್ಕ್ಸ್‌ನ ಹೇಳಿಕೆಗಳಿಗೆ ಸೀಮಿತಗೊಂಡಿಲ್ಲ. ಅದು ಮಾವೊವಾದದೊಂದಿಗೆ ಡೆಂಗ್ ಸಿಯಾ ಪೆಂಗ್ ಮತ್ತು ಝಿ ಅವರ ಸಿದ್ಧಾಂತ ಒಳಗೊಂಡ ಸಿದ್ಧಾಂತವಾಗಿ ರೂಪುಗೊಂಡಿದೆ. ಸೋವಿಯತ್ ರಷ್ಯಾದಲ್ಲಿ ಅದು ಲೆನಿನ್‌ವಾದದ ಭಾಗವಾಗಿತ್ತು. ಕ್ಯೂಬಾದಲ್ಲಿ ಅದು ಕ್ಯಾಸ್ಟ್ರೊ ಮತ್ತು ಚೆಗೆವಾರರ ಸಿದ್ಧಾಂತದ ಭಾಗವಾಗಿದೆ.

ಮಾರ್ಕ್ಸ್‌ನ ಸಿದ್ಧಾಂತವನ್ನು ರಾಜಕೀಯದ ಶಕ್ತಿಯಾಗಿ ಪರಿವರ್ತಿಸಿದವನು ಲೆನಿನ್. ಅದನ್ನು ಅಳವಡಿಸಿದ ಪ್ರಥಮ ದೇಶ ರಷ್ಯಾ. ತದನಂತರ ಚೀನಾದಲ್ಲಿ ಮಾವೊ. ಯುಗೋಸ್ಲಾವಿಯಾದಲ್ಲಿ ಟಿಟೊ, ಕ್ಯೂಬಾದಲ್ಲಿ ಫಿಡೆಲ್ ಕ್ಯಾಸ್ಟ್ರೊ, ವಿಯೆಟ್ನಾಂನಲ್ಲಿ ಹೋ ಚಿ ಮಿನ್ ಅದನ್ನು ಅಳವಡಿಸಿಕೊಂಡರು. ಒಂದು ಕಾಲದಲ್ಲಿ ಸಮಾಜವಾದಿ ದೇಶಗಳ ಸಂಖ್ಯೆ ಗಣನೀಯವಾಗಿತ್ತು. ಯುರೋಪ್‌ನಲ್ಲಿ ಪೋಲೆಂಡ್, ಪೂರ್ವ ಜರ್ಮನಿ, ಹಂಗೆರಿ, ಬಲ್ಗೇರಿಯಾ, ಲಾತ್ವಿಯಾ, ಎಸ್ಟೋನಿಯ... ಆದರೆ ಇಂದು ಅದು ಮುಖ್ಯವಾಗಿ ಚೀನಾ, ಕ್ಯೂಬಾ, ವಿಯೆಟ್ನಾಂ, ಉತ್ತರ ಕೊರಿಯಾ, ಲಾವೋಸ್ ದೇಶಗಳಿಗೆ ಸೀಮಿತಗೊಂಡಿದೆ. ಮಾರ್ಕ್ಸ್‌ವಾದ ಸೋತಿತು ಅಥವಾ ಸತ್ತುಹೋಗಿದೆ ಎಂಬುದು ಇದರ ಅರ್ಥವೇ?

ಮಾರ್ಕ್ಸ್‌ನ ಸಿದ್ಧಾಂತದ ಪ್ರಕಾರ ಸಮಾಜವಾದಿ ಕ್ರಾಂತಿ ಮೊದಲನೆಯದಾಗಿ ಆಗಬೇಕಾಗಿದ್ದದ್ದು ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿ. ಯಾಕೆಂದರೆ ಅವು ಬಂಡವಾಳಶಾಹಿ ರಾಷ್ಟ್ರಗಳು, ಕಾರ್ಮಿಕ ಹೋರಾಟಗಳ ದೇಶಗಳು, ಮಾರ್ಕ್ಸ್‌ನ ಐತಿಹಾಸಿಕ ಉತ್ಪಾದನೆ, ಬೆಳವಣಿಗೆ ಸಿದ್ಧಾಂತಕ್ಕೆ ಹೇಳಿಮಾಡಿಸಿದ ದೇಶಗಳು. ಪ್ರತೀ ದೇಶ ತನ್ನ ಬೆಳವಣಿಗೆ ಸಂದರ್ಭದಲ್ಲಿ ಸಮಾಜವಾದಿಯಾಗುವ ಮೊದಲು ಮೂರು ಹಂತಗಳನ್ನು ಕ್ರಮಿಸಬೇಕು; ಪ್ರಾಚೀನ, ಊಳಿಗಮಾನ್ಯ, ಬಂಡವಾಳಶಾಹಿ. ವಿಚಿತ್ರವೆಂದರೆ ಈ ದೇಶಗಳಲ್ಲಿ ಕ್ರಾಂತಿ ನಡೆಯಲೇ ಇಲ್ಲ.

ಮಾರ್ಕ್ಸ್ ಹೇಳಿದ ಮಾತು ಬಹುಮುಖ್ಯ. ಬದಲಾವಣೆ ಬರೇ ಕ್ರಾಂತಿಯಿಂದ ನಡೆಯುವುದಿಲ್ಲ, ಪಾರ್ಲಿಮೆಂಟಿನ ಚೌಕಟ್ಟಿನ ಮೂಲಕವೂ ತರಬಹುದು. ಕೈಗಾರಿಕಾ ಕ್ರಾಂತಿಯ ಮೂಲದೇಶವಾದ ಇಂಗ್ಲೆಂಡ್ ಅಪ್ಪಿಕೊಂಡದ್ದು ಮಾತ್ರ ತುಷ್ಟೀಕರಣವಾದ, ರಾಬರ್ಟ್ ಒವನ್‌ನ ಫೇಬಿಯನ್ ಸಮಾಜವಾದ. ಅಮೆರಿಕದಲ್ಲಿ ಕ್ರಾಂತಿ ನಡೆಯುವುದು ಕಷ್ಟ. ಅದು ಬಂಡವಾಳಶಾಹಿ ರಾಷ್ಟ್ರ ಮಾತ್ರವಲ್ಲದೇ ಅಲ್ಲಿನ ಕಾರ್ಮಿಕ ವರ್ಗ ಕೂಡ ಬಂಡವಾಳಶಾಹಿ ಅಥವಾ ಬೂರ್ಜ್ವಾಗಳಿಗಿಂತ ಕಡಿಮೆಯೇನಿಲ್ಲ. ಈಗಲೂ ಅಮೆರಿಕಕ್ಕೆ ಸಮಾಜವಾದ ಒಂದು ಪ್ರೀತಿಯ ವೈರಿ. ಅದಿಲ್ಲದೇ ಅಮೆರಿಕದ ಆರ್ಥಿಕತೆ ಬೆಳೆಯುವುದಿಲ್ಲವೆಂದೂ ಅದಕ್ಕೆ ಚೆನ್ನಾಗಿ ಅರಿವಿದೆ. ಶೀತಲ ಸಮರದ ಕಾಲದಲ್ಲಿ ಇದು ನಿಚ್ಚಳವಾಗಿತ್ತು.

ಮಾರ್ಕ್ಸ್‌ವಾದಿಯಲ್ಲದಿದ್ದರೂ ಸಮಾಜವಾದವನ್ನು ತಮ್ಮ ಸಂವಿಧಾನದ ಭಾಗವನ್ನಾಗಿಸಿದ ದೇಶಗಳನ್ನು ಮರೆಯುವಂತಿಲ್ಲ. ಇವುಗಳಲ್ಲಿ ಬಾಂಗ್ಲಾದೇಶ, ತಾಂಜಾನಿಯ, ನೇಪಾಳ, ಶ್ರೀಲಂಕಾ, ಪೋರ್ಚುಗಲ್, ಭಾರತ, ಗಯಾನ ಬಹುಮುಖ್ಯ. ಇವು ಬಹುಪಕ್ಷ ಪದ್ಧತಿಯ ದೇಶಗಳು. ಸಮಾಜವಾದವು ಇಲ್ಲಿ ಸಂವಿಧಾನದ ಭಾಗವಾಗಿ, ಪಾರ್ಲಿಮೆಂಟಿನ ಮೂಲಕ ಹಂತಹಂತವಾಗಿ ಜಾರಿಗೆ ಬರುತ್ತದೆ. ಇಲ್ಲಿ ಮಾರ್ಕ್ಸ್‌ವಾದದ ಛಾಯೆಗಳಿವೆ. ಈ ಸಂದರ್ಭದಲ್ಲಿ ಒಂದು ಪ್ರಶ್ನೆ ಅನಿವಾರ್ಯ; ಭಾರತದಲ್ಲೇಕೆ ಕ್ರಾಂತಿ ಆಗಲಿಲ್ಲ? ವಾಸ್ತವವಾಗಿ ಮಾರ್ಕ್ಸ್‌ಗೆ ಭಾರತದ ಬಗ್ಗೆ ಪರಿಚಯವಿತ್ತು. ಬ್ರಿಟಿಷ್ ಆಳ್ವಿಕೆ ಎರಡು ರೀತಿಯ ಸಾಧ್ಯತೆಗಳನ್ನು ತೋರಿಸಿತ್ತು ಎಂದು ವಾದಿಸುತ್ತಾನೆ. ನಷ್ಟ, ನಾಶ ಮತ್ತು ಮರು ಹುಟ್ಟು.

ನಾವು ಬ್ರಿಟಿಷ್ ಆಳ್ವಿಕೆಯಲ್ಲಿ ದೌರ್ಜನ್ಯ ಮತ್ತು ನಷ್ಟವನ್ನು ಮಾತ್ರ ನೋಡುತ್ತೇವೆಯೇ ಹೊರತು ರಾಷ್ಟ್ರೀಯ ಹೋರಾಟದ ಹುಟ್ಟುವಿಕೆಯನ್ನಲ್ಲ. ಅಲ್ಲದೇ ಭಾರತಕ್ಕೆ ಮತ್ತು ಚೀನಾಕ್ಕೆ ಸೀಮಿತಗೊಂಡ ಏಷ್ಯಾ ಉತ್ಪಾದನಾ ರೀತಿಯನ್ನು ಕೂಡ ಮರೆತುಬಿಡುತ್ತೇವೆ. ಮಾರ್ಕ್ಸ್‌ವಾದಿ ಎಂ.ಎನ್. ರಾಯ್ ಮತ್ತು ಲೆನಿನ್ ನಡುವಿನ ವಸಾಹತುಶಾಹಿ ಸಂದರ್ಭದ ವಸಾಹತು ಪ್ರಶ್ನೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಅರೆ ಊಳಿಗಮಾನ್ಯ ಮತ್ತು ಅರೆ ಬಂಡವಾಳಶಾಹಿ ಬೆಳವಣಿಗೆ ನಡುವೆ ಸಾಂಪ್ರದಾಯಿಕ ಮಾರ್ಕ್ಸ್‌ಗೆ ಜೋತು ಬೀಳುತ್ತೇವೆ. ಭಾರತದಲ್ಲಿನ ಜಾತಿ ಪ್ರಶ್ನೆಯನ್ನು ಕೂಡ ಎತ್ತುವುದಿಲ್ಲ. ಆದಕಾರಣ ಭಾರತದಲ್ಲಿ ಮಾರ್ಕ್ಸ್‌ವಾದ ಬಡಕಲಾಗುತ್ತಾ ಹೋಗುತ್ತದೆ. ಆದರೆ ಸಾಯುವುದಿಲ್ಲ.

ಈ ಸಂದರ್ಭದದಲ್ಲಿ ಲ್ಯಾಟಿನ್ ಅಮೆರಿಕವನ್ನು ಮರೆಯುವಂತಿಲ್ಲ. ಇವತ್ತು ತೀವ್ರತರ ಮಾರ್ಕ್ಸ್‌ವಾದ ಬದುಕಿದ್ದರೆ ಅದು ಲ್ಯಾಟಿನ್ ಅಮೆರಿಕದಲ್ಲಿ ಮಾತ್ರ. ಈ ತೀವ್ರತರ ಮಾರ್ಕ್ಸ್‌ವಾದದ ಮೊದಲ ಹಂತದಲ್ಲಿ ಸಿಗುವವರು ಕ್ಯೂಬಾದ ಫಿಡೆಲ್ ಕ್ಯಾಸ್ಟ್ರೊ ಮತ್ತು ಚೆಗೆವಾರ ಜೋಡಿ. ಕ್ಯೂಬಾದ ಕ್ರಾಂತಿ ಸಾವಿರಾರು ಜನರಿಂದ ನಡೆಯಲಿಲ್ಲ. ಚೀನಾದ ತರಹ ಸುದೀರ್ಘ ಹೋರಾಟದಂತೆ ನಡೆಯಲಿಲ್ಲ. ಅಥವಾ ಸೋವಿಯತ್ ಒಕ್ಕೂಟದ ತರಹ ಕ್ಷಿಪ್ರ ಕ್ರಾಂತಿಯಾಗಿರಲಿಲ್ಲ. ಅದೊಂದು ಕೆಲವೇ ಕ್ರಾಂತಿಕಾರಿಗಳ ಕ್ರಾಂತಿಯಾಗಿತ್ತು.

1970ರ ದಶಕದಲ್ಲಿ ಎರಡು ಪ್ರಮುಖ ಕ್ರಾಂತಿಗಳು ಲ್ಯಾಟಿನ್ ಅಮೆರಿಕಕ್ಕೆ ಹೊಸ ಆಯಾಮ ನೀಡಿದ್ದವು. ಚಿಲಿಯಲ್ಲಿ ಅಲಂಡೆ ನೇತೃತ್ವದ ಸರ್ಕಾರ ಬಂದರೆ, ನಿಕರಾಗುವಾದಲ್ಲಿ ಸ್ಯಾಂಡಿನಿಸ್ತಾ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂತು. ಅಮೆರಿಕದ ಸಂಚಿನಿಂದ ಅಲಂಡೆ ಕೊಲೆಯಾದರೆ, ಸ್ಯಾಂಡಿನಿಸ್ತಾ ನೇತೃತ್ವದ ಸರ್ಕಾರವು 1990ರಲ್ಲಿ ಅಧಿಕಾರ ಕಳೆದುಕೊಂಡಿತು.

ಜಾಗತೀಕರಣದ ಫಲವಾಗಿ ಲ್ಯಾಟಿನ್ ಅಮೆರಿಕದ ತುಂಬೆಲ್ಲಾ ತೀವ್ರತರ ಎಡಪಂಥೀಯ ಸರ್ಕಾರಗಳು ಅಧಿಕಾರಕ್ಕೆ ಬಂದವು. ಈ ಕಾಲದಲ್ಲಿ ವೆನೆಜುವೆಲಾದಲ್ಲಿ ಹ್ಯೂಗೋ ಶಾವೇಜ್, ಬ್ರೆಜಿಲ್‌ನಲ್ಲಿ ಲೂಲಾ, ಪೆರುಗ್ವೆಯಲ್ಲಿ ಫೆರ್ನಾಂಡೊ ಲೂಗೊ, ಅರ್ಜೆಂಟಿನಾದಲ್ಲಿ ಕ್ರಿಶ್ಟಿನಾ ಕಿಚ್ನರ್, ನಿಕರಾಗುವಾದಲ್ಲಿ ಡೇನಿಯಲ್ ಒರ್ಟೆಗಾ ಅಧಿಕಾರಕ್ಕೆ ಬಂದರು. ಇದು ಅಮೆರಿಕನ್ ಪ್ರೇರಿತ ಜಾಗತೀಕರಣಕ್ಕೆ ಪ್ರತಿರೂಪವಾಗಿ ಹುಟ್ಟಿಕೊಂಡ ತೀವ್ರತರ ಮಾರ್ಕ್ಸ್ ವಾದ.

ಅದರಲ್ಲೂ ಒಂದಿಷ್ಟು ವ್ಯತ್ಯಾಸಗಳಿರುವುದನ್ನು ಒಪ್ಪಲೇಬೇಕು. ಶಾವೇಜ್ ದುಡಿಯುವ ವರ್ಗದ ಕೌನ್ಸಿಲ್ ಮೂಲಕ ಸಮಾಜವಾದ ಕಟ್ಟಲು ಯತ್ನಿಸುತ್ತಾರೆ. ಅದೇ ಸಂದರ್ಭದಲ್ಲಿ ಜಗತ್ತಿನಾದ್ಯಂತ, ಅದರಲ್ಲೂ ಲ್ಯಾಟಿನ್ ಅಮೆರಿಕದ ಸಾಮಾಜಿಕ ಹೋರಾಟಗಳನ್ನು ಗಮನಿಸಬೇಕು. ಜಾಗತಿಕ ಸಾಮಾಜಿಕ ವೇದಿಕೆಗೆ ಪರ್ಯಾಯವಾಗಿ ಹುಟ್ಟಿದ ‘ಲಾ ವಿಯಾಕಂಪಸಿಯ’ ಇದಕ್ಕೊಂದು ಉದಾಹರಣೆ. ಇವುಗಳಲ್ಲಿ ಅತ್ಯಂತ ತೀವ್ರವಾಗಿ ಹರಡಿದ್ದು ಜಪತಿಸ್ತಾ ಹೋರಾಟ, ಚಿಲಿಯಲ್ಲಿ ಹುಟ್ಟಿದ ಜಪತಿಸ್ತಾ ಒಂದು ಮೂಲನಿವಾಸಿಗಳ ಸಾಮಾಜಿಕ ಹೋರಾಟ ಮತ್ತು ಸಂಘಟನೆ.

ಇಂತಹ ಸಾವಿರಾರು ಚಳವಳಿಗಳು, ಹೋರಾಟಗಳು ಲ್ಯಾಟಿನ್ ಅಮೆರಿಕದಲ್ಲಿ ಕಂಡುಬರುತ್ತವೆ. ಕೆಲವು ಹೋರಾಟಗಳು ಜಾಗತೀಕರಣ ವಿರೋಧಿ ಹೋರಾಟದ ಆಯಾಮ ಪಡೆದರೆ, ಇನ್ನು ಕೆಲವು ಹೋರಾಟಗಳು ಭೂಮಿಗಾಗಿ, ಅಸ್ಮಿತೆಗಾಗಿ, ಸಮುದಾಯಗಳ ಉಳಿವಿಗಾಗಿ, ಪರಿಸರಕ್ಕಾಗಿ ನಡೆದ ಹೋರಾಟಗಳ ಆಯಾಮವನ್ನು ಪಡೆಯುತ್ತವೆ.

ಪಾಶ್ಚಾತ್ಯ ದೇಶಗಳಿಗೆ, ಉದಾರವಾದಕ್ಕೆ, ಜಾಗತಿಕ ಬಂಡವಾಳಶಾಹಿಗೆ ಮಾರ್ಕ್ಸ್‌ವಾದ ಒಂದು ಪ್ರತಿರೋಧದ ಸಿದ್ಧಾಂತ ಮತ್ತು ಸಂಕೇತ. ಬಡತನ, ಹಸಿವು, ಕ್ರೌರ್ಯ, ಶೋಷಣೆ, ಬಂಡವಾಳಶಾಹಿ, ಸಾಮ್ರಾಜ್ಯಶಾಹಿ, ಜಾಗತೀಕರಣದ ಹಿಂಸೆ ನಡುವೆ ಮಾರ್ಕ್ಸ್‌ವಾದಮುಕ್ತ ಜಗತ್ತನ್ನು ಕಲ್ಪಿಸುವುದು ಕಷ್ಟ. ಆದಕಾರಣ ಮಾರ್ಕ್ಸ್‌ವಾದವು ಫೀನಿಕ್ಸ್ ಹಕ್ಕಿಯಂತೆ ಮತ್ತೆ ಮತ್ತೆ ಹುಟ್ಟುತ್ತದೆ.

(ಡಾ.ಮುಜಾಪ್ಫರ್ ಅಸ್ಸಾದಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT