ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ವಿಚಾರದಲ್ಲಿ ಭಾರತಕ್ಕೆ ಹಿನ್ನೆಡೆ; ಕೇಂದ್ರದಿಂದ ಮರೆಮಾಚುವ ಯತ್ನ– ಜೈರಾಮ್‌

Published 28 ಡಿಸೆಂಬರ್ 2023, 13:48 IST
Last Updated 28 ಡಿಸೆಂಬರ್ 2023, 13:48 IST
ಅಕ್ಷರ ಗಾತ್ರ

ನವದೆಹಲಿ: ‘ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ದೇಶವು ಕಳೆದ ಆರು ದಶಕಗಳಿಗೆ ಹೋಲಿಸಿದರೆ ಈಗ ತೀವ್ರ ಹಿನ್ನೆಡೆ ಅನುಭವಿಸುತ್ತಿದೆ. ಆದರೆ ಇದನ್ನು ಮರೆಮಾಚಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ಗುರುವಾರ ಆರೋಪಿಸಿದ್ದಾರೆ.

ಡೆಪ್‌ಸಂಗ್‌ ಬಯಲು ಭೂಮಿ, ಡೆಮ್‌ಚಾಕ್‌, ಪೂರ್ವ ಲಡಾಕ್‌ನ ಮತ್ತಿತರ ಆಯಕಟ್ಟಿನ ಸ್ಥಳಗಳಲ್ಲಿ ಪಹರೆ ಕಾರ್ಯ ನಿರ್ವಹಿಸಲು ಭಾರತೀಯ ಸೇನೆಗೆ ಚೀನಾ ಪಡೆಗಳು 2020ರ ಮೇನಿಂದಲೇ ಅವಕಾಶ ನಿರಾಕರಿಸಿದೆ ಎಂದು ಅವರು ಹೇಳಿದ್ದಾರೆ.

ಲಡಾಕ್‌ ಮೂಲದ ರಾಜಕಾರಣಿ ಕೊನ್‌ಚೋಕ್‌ ಸ್ಟಾನ್‌ಝಿನ್‌ ಅವರ ಪೋಸ್ಟ್‌ಅನ್ನು ರಮೇಶ್‌ ಅವರು ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದಾರೆ. ‘ಲಡಾಕ್‌ನ ರೇಝಾಂಗ್‌ ಲಾದಲ್ಲಿ ನಿರ್ಮಿಸಲಾಗಿದ್ದ 1962ರ ಭಾರತ– ಚೀನಾ ಯುದ್ಧದ ಸ್ಮಾರಕವನ್ನು ಚೀನಾದ ಜೊತೆಗಿನ ಒಪ್ಪಂದದ ಕಾರಣಕ್ಕೆ ನೆಲಸಮ ಮಾಡಲಾಗಿದೆ’ ಎಂದು ಲಡಾಕ್‌ನ ಚುಶುಲ್‌ನ ಕೌನ್ಸಿಲರ್‌ ಕೂಡಾ ಆಗಿರುವ ಸ್ಟಾನ್‌ಝಿನ್‌ ಹೇಳಿದ್ದಾರೆ. 

‘ಭಾರತ– ಚೀನಾ ಯುದ್ಧದಲ್ಲಿ ಭಾರತದ ಪಡೆಯನ್ನು ಮುನ್ನಡೆಸಿದ್ದ ಮೇಜರ್‌ ಶೈತಾನ್‌ ಸಿಂಗ್‌ ಮೃತಪಟ್ಟಿದ್ದ ಸ್ಥಳದಲ್ಲಿ ನಿರ್ಮಿಸಲಾಗಿದ್ದ ಸ್ಮಾರಕವು ಬಫರ್‌ ವಲಯದಲ್ಲಿದೆ ಎಂಬ ಕಾರಣಕ್ಕೆ ನೆಲಸಮ ಮಾಡಲಾಗಿದೆ. 2021ರಲ್ಲಿ ಚೀನಾದಲ್ಲಿ ನಡೆದ ಸಂಧಾನದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಚುಶುಲ್‌ ಕೌನ್ಸಿಲ್‌ ಕೌನ್ಸಿಲರ್‌ ಹೇಳಿದ್ದಾರೆ. ಇದು ಮೇಜರ್‌ ಸಿಂಗ್‌ ಮತ್ತು ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಮಾಡಿದ ಘೋರ ಅವಮಾನ’ ಎಂದು ರಮೇಶ್‌ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಯಾವ ಬಫರ್‌ ವಯಲಗಳ ಕುರಿತು ಚೀನಾದ ಜೊತೆ ಸಂಧಾನ ನಡೆಸಿದ್ದರೋ, ಅವು ಈ ಮೊದಲು ಭಾರತೀಯ ಭೂಪ್ರದೇಶದ ಭಾಗವಾಗಿದ್ದವು ಎಂಬುದಕ್ಕೆ ಬೇರೆ ಸಾಕ್ಷಿ ಬೇಕೆ ಅವರು ಪ್ರಶ್ನಿಸಿದ್ದಾರೆ.

ಗಡಿ ಪ್ರದೇಶದ ವಿಚಾರವಾಗಿ ಭಾರತವು ಕಳೆದ ನಾಲ್ಕು ವರ್ಷಗಳಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವುದನ್ನು ಮರೆಮಾಚಲು ಮೋದಿ ಅವರು ಪ್ರಯತ್ನಿಸುತ್ತಿದ್ದಾರೆ. ಡಿನೈ (ನಿರಾಕರಣೆ), ಡಿಸ್ಟ್ರಾಕ್ಟ್‌ (ಗಮನ ಬೇರೆಡೆ ತಿರುಗಿಸುವುದು), ಲೈ (ಸುಳ್ಳು ಹೇಳು) ಮತ್ತು ಜಸ್ಟಿಫೈ (ಸಮರ್ಥನೆ ಮಾಡು) ಎಂಬ ತಮ್ಮ ಡಿಡಿಎಲ್‌ಜೆ ಕ್ರಮವನ್ನು ಈ ವಿಚಾರದಲ್ಲೂ ಪ್ರಯೋಗಿಸುತ್ತಿದ್ದಾರೆ ಎಂದರು.

ಡೊಕಲಾಮ್‌ನಲ್ಲಿ ಚೀನಾ ಸೇನೆಯನ್ನು 2017ರಲ್ಲಿ ಹಿಮ್ಮೆಟ್ಟಿದ್ದಾಗಿ ಕೇಂದ್ರವು ಹೇಳಿಕೊಳ್ಳುತ್ತದೆ. ಆದರೆ ಕಳೆದ ಆರು ವರ್ಷಗಳಲ್ಲಿ ಚೀನಾ ಭೂತಾನ್‌ ಮೇಲಿನ ತನ್ನ ಹಿಡಿತವನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಭಾರತದ ಸಿಲಿಗುರಿ ಕಾರಿಡಾರ್‌ಗೆ ಒಡ್ಡುತ್ತಿರುವ ಬೆದರಿಕೆಯನ್ನು ತೀವ್ರಗೊಳಿಸಿದೆ ಎಂದು ರಮೇಶ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT