ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

KEA ಚೆಲ್ಲಾಟ: ವಿದ್ಯಾರ್ಥಿಗಳಿಗೆ ಸಂಕಟ- ಪಠ್ಯಕ್ಕೆ ಹೊರತಾದ ಪ್ರಶ್ನೆಪತ್ರಿಕೆ ಕೇಸ್

ಪಠ್ಯಕ್ಕೆ ಹೊರತಾದ ಪ್ರಶ್ನೆಪತ್ರಿಕೆ* ಪಿಯು ಪಠ್ಯ ಪರಿಷ್ಕರಣೆಯ ಮಾಹಿತಿಯೇ ಇಲ್ಲ* ಸಮನ್ವಯ ಸಭೆ ನಡೆದೇ ಇಲ್ಲ
Published 20 ಏಪ್ರಿಲ್ 2024, 20:59 IST
Last Updated 20 ಏಪ್ರಿಲ್ 2024, 20:59 IST
ಅಕ್ಷರ ಗಾತ್ರ

ಬೆಂಗಳೂರು: ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದಿದ್ದ ಸಿಇಟಿಯಲ್ಲಿ ಪಠ್ಯಕ್ಕೆ ಹೊರತಾದ ಪ್ರಶ್ನೆಗಳು ಸೇರಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನಿರ್ಲಕ್ಷ್ಯವೇ ಕಾರಣ ಎನ್ನುವುದು ಸಾಬೀತಾಗಿದೆ.

ಇದೇ ಏ.18 ಮತ್ತು 19ರಂದು ಜೀವ ವಿಜ್ಞಾನ, ಗಣಿತ, ಭೌತವಿಜ್ಞಾನ ಹಾಗೂ ರಸಾಯನ ವಿಜ್ಞಾನ ವಿಷಯಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲಾಗಿತ್ತು. ನಾಲ್ಕು ವಿಷಯಗಳಿಂದ ಒಟ್ಟು 59 ಪ್ರಶ್ನೆಗಳು 2022–24ನೇ ಸಾಲಿನ (ಪ್ರಥಮ ಹಾಗೂ ದ್ವಿತೀಯ ಪಿಯು) ಪಠ್ಯಕ್ರಮದ ಹೊರತಾಗಿದ್ದವು. ಪಠ್ಯಕ್ಕೆ ಹೊರತಾದ ಪ್ರಶ್ನೆಗಳಿಂದಾಗಿ ಹಲವು ವಿದ್ಯಾರ್ಥಿಗಳು ವಿಚಲಿತರಾಗಿದ್ದರು. ಕೆಲವರು ಅರ್ಥವಾಗದ ಪ್ರಶ್ನೆಗಳನ್ನು ಬಿಡಿಸಲು ಸಮಯ ವ್ಯರ್ಥಮಾಡಿಕೊಂಡು ಪರದಾಡಿದ್ದರು. ಒತ್ತಡಕ್ಕೂ ಒಳಗಾಗಿದ್ದರು. 

ಪ್ರಶ್ನೆಪತ್ರಿಕೆಗಳಲ್ಲಿ ಪಠ್ಯಕ್ಕೆ ಹೊರತಾದ ಪ್ರಶ್ನೆಗಳು ನುಸುಳಿದ ‍ಪ್ರಕರಣ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಪದವಿಪೂರ್ವ ಶಿಕ್ಷಣ ಇಲಾಖೆಯತ್ತ ಕೆಇಎ ಬೊಟ್ಟು ಮಾಡಿತ್ತು. ಆದರೆ, ಕೆಇಎ ಆರೋಪವನ್ನು ಪದವಿ ಪೂರ್ವ ಶಿಕ್ಷಣ ನಿರ್ದೇಶನಾಲಯ ನಿರಾಕರಿಸಿತ್ತು. ವಾಸ್ತವದ ಬೆನ್ನುಹತ್ತಿದ ‘ಪ್ರಜಾವಾಣಿ’ಗೆ ದೊರೆತ ಪ್ರಾಧಿಕಾರ ಹಾಗೂ ನಿರ್ದೇಶನಾಲಯದ ಪತ್ರ ವ್ಯವಹಾರಗಳು ಕೆಇಎ ನಿರ್ಲಕ್ಷ್ಯವನ್ನು ಅನಾವರಣ ಮಾಡಿವೆ. 

ಕೆಇಎಗೆ ಪಠ್ಯ ಪರಿಷ್ಕರಣೆಯಾಗಿದ್ದು ಗೊತ್ತೇ ಇಲ್ಲ:

ಪಠ್ಯಕ್ಕೆ ಹೊರತಾದ ಪ್ರಶ್ನೆಗಳ ಕುರಿತು ಮೊದಲ ದಿನ (ಏ.18) ವಿದ್ಯಾರ್ಥಿಗಳು, ಉಪನ್ಯಾಸಕರು, ಪೋಷಕರಿಂದ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಮರು ದಿನವೇ (ಏ. 19) ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಪತ್ರ ಬರೆದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌. ರಮ್ಯಾ, ಪಠ್ಯಕ್ರಮ ಪರಿಷ್ಕರಿಸಿದ ಮಾಹಿತಿ ಹಾಗೂ ಅದಕ್ಕೆ ಸಂಬಂಧಿಸಿದ ಆದೇಶಗಳನ್ನು ಸಲ್ಲಿಸುವಂತೆ ಕೋರಿದ್ದಾರೆ. ಅಂದರೆ, ಪಠ್ಯ ಪರಿಷ್ಕರಣೆ ಮಾಡಿದ ಬಳಿಕ, ಯಾವ ಯಾವ ಪಾಠಗಳನ್ನು ಪಠ್ಯದಿಂದ ಕೈಬಿಡಲಾಗಿದೆ ಎಂಬ ಮಾಹಿತಿಯೇ ಪ್ರಾಧಿಕಾರಕ್ಕೆ ಇರಲಿಲ್ಲ ಎಂಬುದು ಖಚಿತವಾಗಿದೆ.

ಅಂದೇ ಪ್ರಾಧಿಕಾರದ ಪತ್ರಕ್ಕೆ ಉತ್ತರ ನೀಡಿರುವ ಪಿಯು ನಿರ್ದೇಶನಾಲಯವು ‘ಜೀವ ವಿಜ್ಞಾನ, ಗಣಿತ, ಭೌತ ವಿಜ್ಞಾನ ಹಾಗೂ ರಸಾಯನ ವಿಜ್ಞಾನ ವಿಷಯಗಳ ಪಠ್ಯವನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಕಾಲಕಾಲಕ್ಕೆ ಮಾಡುವ ಪರಿಷ್ಕರಣೆಯಂತೆ ಪಠ್ಯಕ್ರಮ ಅಳವಡಿಸಿಕೊಳ್ಳಲಾಗುತ್ತದೆ. ಅದೇ ರೀತಿ 2023–24ನೇ ಸಾಲಿಗೂ ಕೆಲ ಪಾಠಗಳನ್ನು ಕೈ ಬಿಡಲಾಗಿತ್ತು’ ಎಂದು ಸ್ಪಷ್ಟಪಡಿಸಿದೆ.

ಸ್ಪಷ್ಟನೆ ಬಳಿಕ ಬೋಧನಾ ಆದೇಶ

ಖಾಸಗಿ ಕಾಲೇಜುಗಳಂತೆಯೇ ಸರ್ಕಾರಿ ಹಾಗೂ ಅನುದಾನಿತ ಪದವಿಪೂರ್ವ ವಿಜ್ಞಾನ ಕಾಲೇಜುಗಳಲ್ಲೂ ಸಿಇಟಿ ಕುರಿತು ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಯಾವ ಪಠ್ಯಕ್ರಮದ ಆಧಾರದಲ್ಲಿ 2024ನೇ ಸಾಲಿನ ಸಿಇಟಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಾಗುತ್ತದೆ ಎಂದು ಸ್ಪಷ್ಟನೆ ಕೋರಿ 2023 ಜೂನ್‌ 13ರಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಸಿಂಧೂ ರೂಪೇಶ್ ಅವರು ಕೆಇಎಗೆ ಪತ್ರ ಬರೆದಿದ್ದಾರೆ. ಅದೇ ಜೂನ್‌ 29ರಂದು ಪ್ರತಿಕ್ರಿಯೆ ನೀಡಿದ್ದ ಕೆಇಎ, ‘ನಿಯಮದಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಅಳವಡಿಸಿಕೊಳ್ಳುವ ಪಠ್ಯಕ್ರಮದಂತೆ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಾಗುತ್ತದೆ’ ಎಂದು ಮರು ಪತ್ರ ಬರೆದಿತ್ತು. ಕೆಇಎ ಸ್ಪಷ್ಟೀಕರಣದ ನಂತರ 2023ರ ಆಗಸ್ಟ್‌ 12ರಂದು ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರಿಗೆ ಸುತ್ತೋಲೆ ಹೊರಡಿಸಿದ್ದ ಪಿಯು ನಿರ್ದೇಶಕರು ಪ್ರಸಕ್ತ ವರ್ಷದ ಪಠ್ಯಕ್ರಮದಂತೆ ಮಕ್ಕಳಿಗೆ ಸಿಇಟಿಗೂ ಮಾರ್ಗದರ್ಶನ ನೀಡುವಂತೆ ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT