ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಾವತಿ ವಿದ್ಯುತ್‌ ಯೋಜನೆ: ಮೇಲ್ಮನವಿ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

Published 30 ಏಪ್ರಿಲ್ 2024, 15:38 IST
Last Updated 30 ಏಪ್ರಿಲ್ 2024, 15:38 IST
ಅಕ್ಷರ ಗಾತ್ರ

ನವದೆಹಲಿ: ₹8,300 ಕೋಟಿಯ ಬೃಹತ್‌ ಮೊತ್ತದ ಶರಾವತಿ ಪಂಪ್ಡ್‌ ಸ್ಟೋರೇಜ್‌ ವಿದ್ಯುತ್‌ ಯೋಜನೆಯ ಟೆಂಡರ್‌ ಪ್ರಕ್ರಿಯೆ ಪ್ರಶ್ನಿಸಿ ‘ಎಲ್‌ ಆ್ಯಂಡ್‌ ಟಿ’ ಕಂಪನಿ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. 

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಪೀಠವು ಅರ್ಜಿಯ ವಿಚಾರಣೆ ನಡೆಸಿ, ‘ರಾಜ್ಯವು ಸಾಕಷ್ಟು ಸಮಯ ನೀಡಿತ್ತು. ಆದರೆ, ಎಲ್‌ ಆ್ಯಂಡ್‌ ಟಿ ಕಂಪನಿ ಬಿಡ್‌ ಸಲ್ಲಿಸಿರಲಿಲ್ಲ’ ಎಂದು ಅಭಿಪ್ರಾಯಪಟ್ಟಿತು. ಜತೆಗೆ, ಅರ್ಜಿ ವಜಾಗೊಳಿಸಿತು. 

ವಿದ್ಯುತ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕರ್ನಾಟಕ ವಿದ್ಯುತ್‌ ನಿಗಮ (ಕೆಪಿಸಿಎಲ್‌) ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ಜಾರಿಗೆ ಮುಂದಾಗಿತ್ತು. ಈ ಸಂಬಂಧ ಟೆಂಡರ್‌ ಕರೆಯಲಾಗಿತ್ತು. ಕಾಮಗಾರಿ ಆರಂಭಿಸುವ ಪ್ರಕ್ರಿಯೆಯಲ್ಲಿದ್ದ ಸಂದರ್ಭದಲ್ಲಿ ಟೆಂಡರ್‌ ಪ್ರಕ್ರಿಯೆಯಿಂದ ದೂರ ಉಳಿದಿದ್ದ ಎಲ್‌ ಆ್ಯಂಡ್‌ ಟಿ ಕಂಪನಿ, ‘ಟೆಂಡರ್‌ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಲಾಗಿದೆ’ ಎಂದು ಆಕ್ಷೇಪಿಸಿ ಹೈಕೋರ್ಟ್‌ ಮೆಟ್ಟಿಲೇರಿತ್ತು.

ರಿಟ್‌ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಟೆಂಡರ್‌ನಲ್ಲಿ ಪಾಲ್ಗೊಳ್ಳದ ಅರ್ಜಿದಾರರು ಟೆಂಡರ್‌ ಪ್ರಕ್ರಿಯೆ ತಡೆಯುವಂತೆ ಮನವಿ ಮಾಡುವುದು ಸೂಕ್ತವಲ್ಲ’ ಎಂಬ ಅಭಿಪ್ರಾಯದೊಂದಿಗೆ ಅರ್ಜಿಯನ್ನು ವಜಾಗೊಳಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಕಂಪನಿ, ‘ಟೆಂಡರ್‌ ಪ್ರಕ್ರಿಯೆಯನ್ನು 21 ದಿನಗಳಲ್ಲೇ ತರಾತುರಿಯಲ್ಲಿ ಮುಗಿಸಲಾಗಿದೆ. ಬೇರೆ ರಾಜ್ಯಗಳಲ್ಲಿ ಇಂತಹುದೇ ಟೆಂಡರ್‌ ಪ್ರಕ್ರಿಯೆಗೆ ವಿಪುಲ ಕಾಲಾವಕಾಶ ನೀಡಲಾಗಿದೆ’ ಎಂದು ಪ್ರತಿಪಾದಿಸಿತ್ತು.

ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ‘ಟೆಂಡರ್‌ ಪ್ರಕ್ರಿಯೆಯ ಅವಧಿಯನ್ನು ನಿಗದಿಪಡಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪೋರ್ಟಲ್‌ಗೆ (ಕೆಪಿಪಿಪಿ) ಸಂಪೂರ್ಣ ಅಧಿಕಾರವಿದೆ. ವಿಶೇಷ ಕಾರಣಕ್ಕಾಗಿ ಟೆಂಡರ್‌ ಅವಧಿಯನ್ನು ಕಡಿಮೆ ಮಾಡಲು ಅದು ತನ್ನದೇ ಆದ ಸ್ವಯಮಾಧಿಕಾರ ಹೊಂದಿದೆ. ಮೇಲ್ಮನವಿದಾರರು ಪ್ರೀ ಬಿಡ್‌ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಈಗ ತಕರಾರು ವ್ಯಕ್ತಪಡಿಸಿರುವುದು ನೆಪಮಾತ್ರ’ ಎಂಬ ಅಭಿಪ್ರಾಯದೊಂದಿಗೆ ಎಲ್‌ ಆ್ಯಂಡ್‌ ಟಿ ವಾದವನ್ನು ತಳ್ಳಿ ಹಾಕಿತ್ತು. ಬಳಿಕ ಕಂಪನಿಯು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. 

ಟೆಂಡರ್‌ ಅನ್ನು ಕಡಿಮೆ ದರ ನಮೂದಿಸಿದ್ದ ಮೇಘ ಎಂಜಿನಿಯರಿಂಗ್‌ ಮತ್ತು ಇನ್‌ಫ್ರಾಸ್ಟ್ರಕ್ಚರ್ಸ್‌ ಲಿಮಿಟೆಡ್‌ (ಎಂಇಐಎಲ್‌) ಕಂಪನಿ ತನ್ನದಾಗಿಸಿಕೊಂಡಂತಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT