ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ–ಜೆಡಿಎಸ್‌ ಮೈತ್ರಿ ಸೋಲಿಗೆ ಪೆನ್‌ಡ್ರೈವ್‌ ಹಂಚಿಕೆ: HD ಕುಮಾರಸ್ವಾಮಿ ಆರೋಪ

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಆರೋಪ
Published 30 ಏಪ್ರಿಲ್ 2024, 21:16 IST
Last Updated 30 ಏಪ್ರಿಲ್ 2024, 21:16 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಬಿಜೆಪಿ– ಜೆಡಿಎಸ್‌ ಮೈತ್ರಿಗೆ ಸೋಲಿಸಲೆಂದೇ ಮಹಾನ್‌ ನಾಯಕರು (ಡಿ.ಕೆ.ಶಿವಕುಮಾರ್‌) ಪೆನ್‌ ಡ್ರೈವ್‌ ಹಂಚಿದ್ದಾರೆ. ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಾರ ಮಾಡಿಸಿದ್ದಾರೆ. ಇದರ ಬಗ್ಗೆಯೂ ಎಸ್‌ಐಟಿ ತನಿಖೆ ಮಾಡಲಿ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.

ಇಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಅಶ್ಲೀಲ ವಿಡಿಯೊದಲ್ಲಿ ಭಾಗಿಯಾದ ಮಹಿಳೆಯರು ದೂರು ನೀಡಿದ್ದಾರೆಯೇ? ಮಹಿಳಾ ಆಯೋಗದ ಅಧ್ಯಕ್ಷೆ ನೀಡಿದ ಸಲಹೆ ಮೇರೆಗೆ ಸರ್ಕಾರ ಎಸ್‌ಐಟಿ ರಚಿಸಿದೆ. ಈ ಅಧ್ಯಕ್ಷೆ ಯಾರು? ಅವರನ್ನು ನೇಮಿಸಿದ್ದು ಯಾರು?’ ಎಂದು ಪ್ರಶ್ನಿಸಿದರು.

‘ಇದು ಮಹಿಳೆಯರ ರಕ್ಷಣೆಗಾಗಿ ಅಲ್ಲ. ನಮ್ಮ ಕುಟುಂಬದ ವರ್ಚಸ್ಸು ಹಾಳು ಮಾಡುವ ಹುನ್ನಾರವಿದೆ. ಈ ಪ್ರಕರಣದಲ್ಲಿ ನನ್ನನ್ನು ಸೇರಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಏಕೆ ತಂದಿದ್ದೀರಿ? ಈ ಪ್ರಕರಣಕ್ಕೂ ನನಗೂ, ಮೋದಿಗೂ ಏನು ಸಂಬಂಧ? ಪ್ರಧಾನಿಯವರ ಪಾತ್ರ ಏನಿದೆ’ ಎಂದು ಅವರು ಪ್ರಶ್ನಿಸಿದರು.

ಅವಮಾನಿಸಿದ್ದು ಇವರೇ:

‘ಅಶ್ಲೀಲ ದೃಶ್ಯಗಳಲ್ಲಿ ಮಹಿಳೆಯರ ಮುಖಗಳನ್ನು ಬ್ಲರ್‌ (ಕಾಣಿಸದಂತೆ) ಮಾಡದೆ, ಅತ್ಯಂತ ಕೀಳಾಗಿ ಪ್ರಸಾರ ಮಾಡಲಾಗಿದೆ. ಇದರಿಂದ ಆ ಹೆಣ್ಣುಮಕ್ಕಳ ಭವಿಷ್ಯ ತೊಂದರೆಗೆ ಸಿಲುಕುವ ಅಪಾಯವಿದೆ. ನಿಜವಾಗಿಯೂ ಮಹಿಳೆಯರನ್ನು ಅವಮಾನಿಸಿದ್ದು ನೀವೇ’ ಎಂದು ಅವರು ಹರಿಹಾಯ್ದರು.

‘ಡಿ.ಕೆ.ಶಿವಕುಮಾರ್ ಅವರೇ, ನಿಮ್ಮ ಕುಟುಂಬದ ಸದಸ್ಯರು ವಿಡಿಯೊದಲ್ಲಿ ಸಿಲುಕಿದ್ದರೆ, ಏನು ಮಾಡುತ್ತಿದ್ದೀರಿ? ನಾವು ಎದುರಿಸುತ್ತೇವೆ. ಎಲ್ಲೂ ಓಡಿ ಹೋಗಲ್ಲ. ಯಾರಾದರೂ ಆತ್ಮಹತ್ಯೆ ಮಾಡಿಕೊಂಡರೆ ಅಥವಾ ಹೆಚ್ಚು ಕಡಿಮೆಯಾದರೆ ಅದಕ್ಕೆ ಸರ್ಕಾರವೇ ಜವಾಬ್ದಾರಿ. ಕಾಂಗ್ರೆಸ್‌ನವರು ಮಹಿಳೆಯರಿಗೆ ಎಷ್ಟು ಗೌರವಿಸುತ್ತಾರೆ ಎಂಬುದನ್ನು ವಿದ್ಯಾರ್ಥಿನಿ ನೇಹಾ ಹಿರೇಮಠ ಪ್ರಕರಣದಲ್ಲಿ ನೋಡಿದ್ದೇವೆ’ ಎಂದರು.

ಮುಖ್ಯಮಂತ್ರಿಗೂ ಗೊತ್ತು:

‘ಪೆನ್‌ಡ್ರೈವ್‌ ವಿಷಯ ಮುಖ್ಯಮಂತ್ರಿಯವರಿಗೆ ಮೊದಲೇ ಗೊತ್ತು. ಅವರ ಗಮನಕ್ಕೆ ಬಾರದೆ ಇಂತಹ ಬೆಳವಣಿಗೆ ನಡೆಯಲ್ಲ. ಪೆನ್‌ಡ್ರೈವ್‌ ಗ್ಯಾರಂಟಿ ಆಧಾರದ ಮೇಲೆ ಅವರು ಜೆಡಿಎಸ್‌ ಎಲ್ಲ ಸ್ಥಾನಗಳಲ್ಲೂ ಸೋಲುತ್ತದೆ ಎನ್ನುತ್ತಿದ್ದರು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿ ಕ್ಯಾಸೆಟ್‌ ಬಿಡುಗಡೆ ಮಾಡಿದ್ದಾರೆ’ ಎಂದು ಅವರು ಆರೋಪಿಸಿದರು.

‘ನಮ್ಮ ವಿರುದ್ಧ ಬೆಂಗಳೂರಿನಲ್ಲಿ ದೂರು ನೀಡಿದ ಮಹಿಳೆ, ಕಾರ್ತಿಕ ಗೌಡ ಮತ್ತು ದೇವರಾಜ್‌ಗೌಡ ಬಗ್ಗೆಯೂ ತನಿಖೆಯಾಗಲಿ’ ಎಂದು ಅವರು ಒತ್ತಾಯಿಸಿದರು.

ನನ್ನ ಪೆನ್‌ಡ್ರೈವ್‌ ಅಶ್ಲೀಲ ಅಲ್ಲ:

‘ನನ್ನ ಬಳಿ ಇರುವ ಪೆನ್‌ಡ್ರೈವ್‌ ಇದೇನಾ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ. ನನ್ನ ಬಳಿ ಇರುವ ಪೆನ್‌ಡ್ರೈವ್‌ ಬಗ್ಗೆ ಯಾವಾಗ ಹೇಳಬೇಕೋ, ಆಗ ಹೇಳುವೆ. ಅದರಲ್ಲಿ ಅಶ್ಲೀಲ ಇಲ್ಲ. ಅವರ ಭ್ರಷ್ಟಾಚಾರದ ವಿವರ ಇದೆ. ಅಶ್ಲೀಲ ಪೆನ್‌ಡ್ರೈವ್‌ ಮಾಡುವ ಸಂಸ್ಕೃತಿ ನಮ್ಮದಲ್ಲ. ಆ ಸಂಸ್ಕೃತಿ ಅವರದ್ದು. ಹಿಂದೆ ಅವರು ಇಂತಹದ್ದನ್ನು ಸಾಕಷ್ಟು ಮಾಡಿದ್ದಾರೆ’ ಎಂದರು.

ನನ್ನ ಕುಟುಂಬ ಬೇರೆ:

‘ನನ್ನ ಕುಟುಂಬವೇ ಬೇರೆ, ರೇವಣ್ಣ ಕುಟುಂಬವೇ ಬೇರೆ. ರೇವಣ್ಣ ಕುಟುಂಬದಲ್ಲಿ ಅವರ ಪತ್ನಿ, ಪ್ರಜ್ವಲ್‌ ಸೇರಿ ಇಬ್ಬರು ಮಕ್ಕಳು ಇದ್ದಾರೆ. ಪಕ್ಷದ ವೇದಿಕೆಯಲ್ಲಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾಗಿ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ತೆಗೆದುಕೊಳ್ಳುವೆ’ ಎಂದರು.

ಸಿ.ಎಂ ಕುಟುಂಬದ ಮರ್ಯಾದೆ ಉಳಿಸಿದ್ದ ಪ್ರಧಾನಿ

‘ಮುಖ್ಯಮಂತ್ರಿಯವರೇ ನಿಮ್ಮ ಕುಟುಂಬದಲ್ಲಿ ದುರ್ಘಟನೆಯೊಂದು ನಡೆದಾಗ ಪ್ರಧಾನಿ ನರೇಂದ್ರ ಮೋದಿ ಅವರು ಮಾನ ಮರ್ಯಾದೆ ಉಳಿಸಿದ್ದರು. ಈಗ ಅವರನ್ನು ಪ್ರಶ್ನಿಸುತ್ತೀರಾ? ಪ್ರಜ್ವಲ್‌ಗೂ ಮೋದಿಗೂ ಏನು ಸಂಬಂಧ? ಪ್ರಜ್ವಲ್‌ಗೆ ಟಿಕೆಟ್‌ ಕೊಟ್ಟಿದ್ದು ನಮ್ಮ ಪಕ್ಷವೇ ಹೊರತು ಬಿಜೆಪಿ ಅಲ್ಲ’ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು. ‘ನಿಮ್ಮ ಮಾನ ಉಳಿಸಿರುವ ಮೋದಿ ಅವರ ಹೆಸರನ್ನು ಈ ಪ್ರಕರಣದಲ್ಲಿ ತರಬೇಡಿ. ನಾವು– ನೀವು ಹೋರಾಟ ಮಾಡೋಣ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT