ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಪತ್ತಿಯಾಗದ ರಕ್ತ: ಬದುಕಿಗಾಗಿ ವೃದ್ಧನ ಸೆಣಸಾಟ

Last Updated 17 ಜುಲೈ 2013, 19:45 IST
ಅಕ್ಷರ ಗಾತ್ರ

ದಾವಣಗೆರೆ: ಈ ವೃದ್ಧರೊಬ್ಬರ ದೇಹದಲ್ಲಿ ರಕ್ತವೇ ಉತ್ಪತ್ತಿಯಾಗುತ್ತಿಲ್ಲ. ವೈದ್ಯರು ನಾನಾ ಪರೀಕ್ಷೆ ಮಾಡಿ ಕೈ ಚೆಲ್ಲಿದ್ದಾರೆ. ಸಾವು -ಬದುಕಿನೊಂದಿಗೆ ಸೆಣಸಾಡುತ್ತಿರುವ ಅವರು ಎದೆಗುಂದದೇ  ಬದುಕಬೇಕು ಎಂಬ ಆದಮ್ಯ ಬಯಕೆಯಿಂದ ದಿನ ದೂಡುತ್ತಿದ್ದಾರೆ. 

ವೈದ್ಯಕೀಯ ಲೋಕಕ್ಕೆ ಸವಾಲಾಗಿರುವ ಈ ವೃದ್ಧರ ಹೆಸರು ತಿಪ್ಪೇರುದ್ರಪ್ಪ. ವಯಸ್ಸು 66. ಮೂಲತಃ ಭದ್ರಾವತಿ ತಾಲ್ಲೂಕಿನ ಅರಹತೊಳಲು ಗ್ರಾಮದವರು. ಹೊಟ್ಟೆಪಾಡಿಗಾಗಿ ದಾವಣಗೆರೆ ಜಿಲ್ಲೆ ಹರಿಹರಕ್ಕೆ ವಲಸೆ ಬಂದು, ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು. ಕಂಪೆನಿ ಮುಚ್ಚಿದ ಮೇಲೆ ಇಲ್ಲಿಯೇ ನೆಲೆಸಿದ್ದಾರೆ. ಐದು ವರ್ಷದ ಹಿಂದೆ, ಹಠಾತ್ತನೇ ಆರೋಗ್ಯದಲ್ಲಿ ಏರುಪೇರು ಆಗಿದೆ.

ಆರಂಭದಲ್ಲಿ ಸ್ಥಳೀಯವಾಗಿ ಚಿಕಿತ್ಸೆ ಪಡೆದರೂ ಯಾವುದೇ ಪ್ರಯೋಜವಾಗಿಲ್ಲ. ದಿನೇ ದಿನೇ ಆಯಾಸ ಹೆಚ್ಚಾದಂತೆ ಆರೋಗ್ಯ ಹದಗೆಡತೊಡಗಿತು. ಸಂಪೂರ್ಣ ನಿಶ್ಯಕ್ತರಾಗಿ ಏನೂ ಕೆಲಸ ಮಾಡಲಾಗದ ಸ್ಥಿತಿಗೆ ತಲುಪಿ ಹಾಸಿಗೆ ಹಿಡಿದಿದ್ದಾರೆ. ಇದರಿಂದ ಕಂಗಾಲಾದ  ಕುಟುಂಬ ಆರಂಭದಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದಾಗ ಹಿಮೋಗ್ಲೋಬಿನ್ ಪ್ರಮಾಣ 3.5ರಷ್ಟು ಇರುವುದು ಕಂಡು ಬಂದಿದೆ. ಸಾಮಾನ್ಯವಾಗಿ ಆರೋಗ್ಯವಂತ ಮನುಷ್ಯನ ಹಿಮೋಗ್ಲೊಬಿನ್ ಪ್ರಮಾಣ 12.5 ರಿಂದ 18 ರಷ್ಟು ಇರಬೇಕು. ಇಷ್ಟೊಂದು ಕಡಿಮೆ ಪ್ರಮಾಣ ನೂರರಲ್ಲಿ ಒಬ್ಬರಿಗೆ ಮಾತ್ರ ಕಂಡು ಬರುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.

`ಮೈಲೋಫೈಬ್ರೋಸಿಸ್' (myelofibrosis)ಎಂದು ಕರೆಯಲಾಗುವ ಈ ಕಾಯಿಲೆ ಅತಿ ವಿರಳ ಎಂದು ಬೆಂಗಳೂರಿನ ಅಪೊಲೊ  ಆಸ್ಪತ್ರೆಯ ವೈದ್ಯ ಡಾ.ಸಿ.ಎನ್ ಪಾಟೀಲ್ ಅಭಿಪ್ರಾಯಪಡುತ್ತಾರೆ. ಐದು ವರ್ಷದಿಂದ ತಿಪ್ಪೇರುದ್ರಪ್ಪ ಅವರಿಗೆ ಚಿಕಿತ್ಸೆ ನೀಡುತ್ತಿರುವ ಅವರು, ರಕ್ತಹೀನತೆಯಿಂದ ಬಳಲುತ್ತಿರುವ ದೇಹಕ್ಕೆ ರಕ್ತ ನೀಡಿದರೆ ಮಾತ್ರ ಬದುಕಲು ಸಾಧ್ಯ ಎನ್ನುತ್ತಾರೆ.   

ನುರಿತ ವೈದ್ಯರನ್ನು ಕಂಡರೂ ಕಾಯಿಲೆಗೆ ಮಾತ್ರ ಪರಿಹಾರ ಸಿಗಲಿಲ್ಲ. ದುಡಿಮೆಯಲ್ಲಿ ಗಳಿಸಿದ ಹಣ ನೀರಿನಂತೆ ಖರ್ಚಾಗಿದೆ ಎಂದು ತಿಪ್ಪೇರುದ್ರಪ್ಪ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಈಗ ಆರೋಗ್ಯ ಮತ್ತಷ್ಟು ಬಿಗಡಾಯಿಸುತ್ತಿದೆ. ಪ್ರಾರಂಭದಲ್ಲಿ ತಿಂಗಳಿಗೆ ಒಂದು ಸಲ ರಕ್ತ ಹಾಕಿಸಿಕೊಳ್ಳಬೇಕಿತ್ತು. ಈಗ, ವಾರಕ್ಕೊಮ್ಮೆ 250 ಎಂ.ಎಲ್ ರಕ್ತ ಪಡೆದುಕೊಳ್ಳಬೇಕು. ರಕ್ತದ ಗುಂಪು `ಎ' ನೆಗೆಟಿವ್‌ಆಗಿರುವುದರಿಂದ ಇದನ್ನು ಪಡೆಯವುದೂ ಕಷ್ಟ.

ನೆಗೆಟಿವ್ ಗುಂಪಿನ ರಕ್ತಕ್ಕೆ ಬಹಳ ಬೇಡಿಕೆ ಇರುವುದರಿಂದ ಸ್ಥಳೀಯವಾಗಿ ಸಿಗುವುದಿಲ್ಲ. ಪ್ರತಿವಾರದ ಕೊನೆಯ ದಿನ ಬೆಂಗಳೂರಿಗೆ ಹೋಗಬೇಕು. ಅಲ್ಲಿ   ಮತ್ತೊಬ್ಬರಿಂದ ರಕ್ತ ಕೊಡಿಸಿ ಪಡೆದುಕೊಳ್ಳಬೇಕು. ರಕ್ತ ಪಡೆದ ಮೊದಲೆರಡು ದಿನ ಲವಲವಿಕೆಯಿಂದ ಇರುತ್ತೇನೆ. ರಕ್ತ ನೀಡಲು ಒಂದು ದಿನ ತಡವಾದರೆ ದೇಹ ನಿತ್ರಾಣಗೊಳ್ಳುತ್ತದೆ. ಕೈ -ಕಾಲು ಊದಿಕೊಳ್ಳುತ್ತದೆ. ಮಾತನಾಡಲು ಆಯಾಸವಾಗುತ್ತದೆ. ಚಿಕಿತ್ಸೆಯ ವೆಚ್ಚದಿಂದ ಕುಟುಂಬ ಆರ್ಥಿಕವಾಗಿ ಕುಸಿದುಹೋಗಿದೆ ಎಂದು ತಿಪ್ಪೇರುದ್ರಪ್ಪ ಕಣ್ಣೀರಿಟ್ಟರು.

'ಯೋಗ, ಧ್ಯಾನದಿಂದ ಮನಸ್ಸಿನಲ್ಲಿ ಆವರಿಸಿದ್ದ ಭಯ ದೂರವಾಗಿದೆ. ಇದ್ದಷ್ಟು ದಿನ ಜೀವನವನ್ನು ಖುಷಿಯಿಂದ ಕಳೆಯಬೇಕು ಎಂದು ನಿರ್ಧರಿಸಿದ್ದೇನೆ' ಎನ್ನುತ್ತಾರೆ ಅವರು.

`ಕುಟುಂಬ ಸದಸ್ಯರಿಗೆ ಹೊರೆಯಾಗಿ ಬದುಕಿದ್ದೇನೆ. ಸಾವಿನ ನಂತರವಾದರೂ, ಈ ದೇಹದಿಂದ ಉಪಯೋಗವಾಗಲಿ ಎನ್ನುವ ಉದ್ದೇಶದಿಂದ ದೇಹದಾನಕ್ಕೆ ನೋಂದಾಯಿಸಿಕೊಂಡಿದ್ದೇನೆ' ಎಂದು ಅವರು ಗದ್ಗಿತರಾದರು. ಸಹಾಯ ಮಾಡಲು ಇಚ್ಛಿಸುವವರು 7204308180 ಸಂರ್ಪಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT