ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಲುಕೋಸ್‌ನಂತೆ ನೀರು ಹಾಕುವ ಸ್ಥಿತಿ

Last Updated 17 ಏಪ್ರಿಲ್ 2017, 20:01 IST
ಅಕ್ಷರ ಗಾತ್ರ

ದಾವಣಗೆರೆ: ‘15–20 ಎಕರೆಗೆ ಮಾಡುವಷ್ಟು ಖರ್ಚನ್ನು ಒಂದು ಎಕರೆ ತೋಟಕ್ಕೆ ಮಾಡಿದೆವು. ನಾಲ್ಕು ವರ್ಷಗಳಿಂದ ಕೊಳವೆಬಾವಿ ಕೊರೆಸಲು ಪ್ರತಿವರ್ಷ ₹ 2 ಲಕ್ಷ ಖರ್ಚು ಮಾಡಿ ಸುಸ್ತಾದೆವು. ಕೈಪಂಪಿನ ನೀರನ್ನೇ ಕೊಡದಲ್ಲಿ ಹೊತ್ತು ತಂದು ಗಿಡಗಳಿಗೆ ಸುರಿದೆವು. ಆದರೆ, ತೋಟ ಹಸಿರಾಗಿ ಉಳಿಯಲಿಲ್ಲ...’

‘ನೀರಿಗಾಗಿ ಮಾಡಿದ ಸಾಲ ಬೆಟ್ಟದಷ್ಟಾಗಿದೆ. ಪತಿ ವಿರೂಪಾಕ್ಷಪ್ಪ ತೋಟದಲ್ಲೇ ನಡುರಾತ್ರಿ ವಿಷ ಸೇವಿಸಲು ಮುಂದಾಗಿದ್ದರು. ನಾನು, ಮಗ ಅವರನ್ನು ಹೇಗೋ ಉಳಿಸಿಕೊಂಡೆವು’ ಎಂದು ಚನ್ನಗಿರಿ ತಾಲ್ಲೂಕಿನ ಕೊಕ್ಕನೂರು ಗ್ರಾಮದ ಗೀತಾ ಕಣ್ಣೀರಿಟ್ಟರು.

[related]

ಗೀತಾ ಅವರಿಗಿದ್ದ ಒಂದು ಎಕರೆ ಅಡಿಕೆ ತೋಟ ಈಗ ಒಣಗಿ ನಿಂತಿದೆ. ಜಿಲ್ಲೆಯ ಹೆಚ್ಚಿನ ಅಡಿಕೆ ಬೆಳೆಗಾರರ ಸ್ಥಿತಿ ಹೀಗೆಯೇ ಇದೆ. ಚನ್ನಗಿರಿ ಹಾಗೂ ಜಗಳೂರು ತಾಲ್ಲೂಕುಗಳಲ್ಲಿ ಅಡಿಕೆ ಬೆಳೆಗೆ ತೀರಾ ಹಾನಿಯಾಗಿದೆ. ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿ, ಕಾಕನೂರು ಗ್ರಾಮಗಳು, ಜಗಳೂರು ತಾಲ್ಲೂಕಿನ ಮುಗ್ಗಿದ ರಾಗಿಹಳ್ಳಿ, ಬಿಳಿಚೋಡು, ಬೆಂಚಿಕಟ್ಟೆ, ದೇವಿಕೆರೆ, ಮಲ್ಲಾಪುರ, ಚಿಕ್ಕನಹಳ್ಳಿ, ಹೊಸಕೆರೆ ಹಳ್ಳಿಗಳು, ಹೊನ್ನಾಳಿ ತಾಲ್ಲೂಕಿನ ಬೆಳಗುತ್ತಿ ಭಾಗದಲ್ಲಿ ಶೇ 30ರಷ್ಟು ಅಡಿಕೆ ತೋಟಗಳು ನೀರಿಲ್ಲದೇ ಒಣಗಿವೆ.

ದಾವಣಗೆರೆ ತಾಲ್ಲೂಕಿನ ನರಗನಹಳ್ಳಿ, ಕೊಡಗನೂರು, ಮಾಯಕೊಂಡ, ಹುಚ್ಚವ್ವನಹಳ್ಳಿ, ಅಣಜಿ, ಕಂದನಕೋವಿ, ಆನಗೋಡು, ಪವಾರ ರಂಗವ್ವನಹಳ್ಳಿ ಭಾಗದಲ್ಲಿ ಅಡಿಕೆ ಬೆಳೆ ಹೆಚ್ಚು ನಷ್ಟಕ್ಕೆ ತುತ್ತಾಗಿದೆ.

ಗ್ಲುಕೋಸ್‌ನಂತೆ ನೀರು:  ಚನ್ನಗಿರಿಯ ತೋಟಗಳ ಮುಂದೆ ಈಗ ಟಾರ್ಪಲ್‌ ಹೊದಿಸಿದ ಗುಂಡಿ, ಗುಂಡಿಗೆ ನೀರು ತುಂಬಿಸುವ ಟ್ಯಾಂಕರ್‌ಗಳೇ ಕಾಣಸಿಗುತ್ತವೆ. ಐಸಿಯುನಲ್ಲಿರುವ ರೋಗಿಗೆ ಗ್ಲುಕೋಸ್‌ ಹಾಕುವಂತೆ, ಅಡಿಕೆ ಮರಗಳ ಬುಡಕ್ಕೆ ರೈತರು ನೀರು ಹನಿಸುತ್ತಿದ್ದಾರೆ.
‘ಟ್ರ್ಯಾಕ್ಟರ್‌ ಟ್ಯಾಂಕರ್‌ಗಳ ಸಾಮರ್ಥ್ಯ ಕಡಿಮೆ.  ಹೀಗಾಗಿ ಬಿಲ್ಲಹಳ್ಳಿ ಗ್ರಾಮದ ರೈತರು 7 ಪೆಟ್ರೋಲ್‌ ಟ್ಯಾಂಕರ್‌ ಲಾರಿ ಕೊಂಡು ತಂದಿದ್ದಾರೆ. 15 ಕಿ.ಮೀ ದೂರದ ಸೂಳೆಕೆರೆಯಿಂದ ದಿನದ 24 ಗಂಟೆಯೂ ತೋಟಕ್ಕೆ ನೀರು ತರುವುದೇ ಇವುಗಳ ಕೆಲಸ’ ಎಂದರು ಬಿಲ್ಲಹಳ್ಳಿಯ ಗಂಗಾಧರ.

8 ಕೊಳವೆಬಾವಿಗಳು ವಿಫಲವಾಗಿವೆ. 6 ಎಕರೆ ಅಡಿಕೆ ತೋಟ ಸಂಪೂರ್ಣ ಒಣಗಿದೆ. ಮುಂದೆ ಏನು ಮಾಡುವುದೋ ತೋಚುತ್ತಿಲ್ಲ.
-ಲೋಕೇಶ್‌. ಹುಚ್ಚವ್ವನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT