ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು: ಸಣ್ಣ ಮಾತಿನ ದೊಡ್ದ ಅರ್ಥ

Published 26 ಮಾರ್ಚ್ 2024, 2:34 IST
Last Updated 26 ಮಾರ್ಚ್ 2024, 2:34 IST
ಅಕ್ಷರ ಗಾತ್ರ

ಸಂತನಿಗೆ ದೇವರ ಹುಚ್ಚು; ಸದಾ ದೇವರಲ್ಲಿ ತನ್ನ ಮನಸ್ಸನ್ನು ಇರಿಸಿಕೊಂಡೇ ಇರುತ್ತಿದ್ದ, ‘ಪ್ರಾರ್ಥನೆ ನನ್ನ ಒಳಗನ್ನು ಶುದ್ಧಗೊಳಿಸುತ್ತದೆ’ ಎಂದು ನಂಬಿದ್ದ. ಎಲ್ಲರಿಗೂ ಆತನ ಬಗ್ಗೆ ಅಪಾರವಾದ ಗೌರವ ಇತ್ತು. ಅದು ಅವನನ್ನು ಸಂತೋಷಗೊಳಿಸುವುದೇ ಅಲ್ಲದೆ ಅವನಲ್ಲಿ ಹೆಮ್ಮೆಗೂ ಕಾರಣವಾಗಿತ್ತು. 

ಒಮ್ಮೆ ಅವನು ಹೀಗೇ ಪ್ರಾರ್ಥನೆಗೆ ಕುಳಿತಿದ್ದಾಗ ಒಬ್ಬ ಯುವತಿ ಅವನಿಗೆ ತನ್ನ ಕಾಲನ್ನು ತಾಕಿಸಿಕೊಂಡು ಓಡಿ ಹೋದಳು. ಇದರಿಂದ ಆ ಸಂತನಿಗೆ ಕೋಪಬರುತ್ತದೆ. ‘ಜಗತ್ತೇ ಗೌರವಿಸುವ ನಾನಿಲ್ಲಿ ದೇವರ ಪ್ರಾರ್ಥನೆಯಲ್ಲಿ ಕುಳಿತಿರುವಾಗ ಕೆಲಸಕ್ಕೇ ಬಾರದ ಹುಡುಗಿ ನನಗೆ ತನ್ನ ಕಾಲನ್ನು ತಾಗಿಸಿಕೊಂಡು ಹೋಗುವುದು ಎಂದರೆ ಏನು?’ ಎಂದು. ಆಕೆಯ ನಡುಗೆಯಲ್ಲಿ ಹಗುರತನವಿತ್ತು, ಲಾಲಿತ್ಯವಿತ್ತು, ಅಪೂರ್ವವಾದದ್ದನ್ನು ಸಂಧಿಸುತ್ತೇನೆ ಎನ್ನುವ ಅದಮ್ಯ ಉತ್ಸಾಹವಿತ್ತು. ಅದನ್ನು ಕಂಡ ಸಂತನಿಗೆ ಸೃಷ್ಟಿಯ ಅತ್ಯಂತ ಸೌಂದರ್ಯವೆಲ್ಲ ಅವಳಲ್ಲೇ ಇದೆ ಎನ್ನಿಸಿತ್ತು. ಆಗ ಸಂತನಿಗೂ ಒಂದು ಕುತೂಹಲ ಮೂಡಿತು, ಅವಳ ಇಷ್ಟೆಲ್ಲಾ ಉತ್ಸಾಹಕ್ಕೆ ಕಾರಣ ಏನಿರಬಹುದು ಎಂದು ಹಿಂಬಾಲಿಸಿ ಹೊರಡುತ್ತಾನೆ. 

ಆ ಯುವತಿ ಸೇನೆಯಲ್ಲಿದ್ದ ತನ್ನ ಪ್ರಿಯಕರ ಯುದ್ಧಕ್ಕಾಗಿ ಆ ಮಾರ್ಗದಲ್ಲಿ ಹೊರಟಿದ್ದನ್ನು ತಿಳಿದು ಅವನನ್ನು ಸಂಧಿಸಲು ಹೊರಟಿದ್ದಳು. ಅವರಿಬ್ಬರು ಒಬ್ಬರನ್ನೊಬ್ಬರು ನೋಡಿ ಸುಮಾರು ಐದು ವರ್ಷಗಳೇ ಕಳೆದಿದ್ದವು. ಅವನನ್ನು ಸಂಧಿಸುತ್ತಿರುವ ಉದ್ವಿಗ್ನತೆ ಅವಳಲ್ಲಿ ಮನೆ ಮಾಡಿತ್ತು. ಅವರಿಬ್ಬರೂ ಸಂಧಿಸಿದ ಆ ಉತ್ಕಟವಾದ ಕ್ಷಣವನ್ನು ಹಿಂಬಾಲಿಸಿದ ಸಂತ ಕಣ್ಣುತುಂಬಿಕೊಂಡ. ಆ ಸಂಧಿಸುವಿಕೆಯ ಅಪೂರ್ವ ಕ್ಷಣದಲ್ಲಿ ಸಂತನೂ ಮೈಮರೆತ. ನಿಜಕ್ಕೂ ಅದೊಂದು ದಿವ್ಯಾನುಭೂತಿಯೇ ಆಗಿತ್ತು. 

ಯುವತಿ ಪ್ರಿಯಕರನನ್ನು ಬೀಳ್ಕೊಟ್ಟು ಮನೆಗೆ ಹಿಂದಿರುಗುವಾಗ ಸಂತ ಅವಳನ್ನು ತಡೆದು, ‘ನೀನು ನಿನ್ನ ಪ್ರಿಯಕರನ ಭೇಟಿಯಾಗುವ ಉತ್ಕಟತೆಯಲ್ಲಿ ಪ್ರಾರ್ಥನೆಯಲ್ಲಿದ್ದ ನನಗೆ ಕಾಲನ್ನು ತಗುಲಿಸಿದೆ ಯಲ್ಲಾ?’ ಎನ್ನುತ್ತಾನೆ. ಆಗ ಯುವತಿ ಅಚ್ಚರಿಯಿಂದ, ‘ಹೌದಾ? ನಾನು ಹಾಗೆ ಮಾಡಿದೆನಾ’ ಎಂದು ಕೇಳುತ್ತಾಳೆ. ಆಗ ಸಂತ, ‘ಇಲ್ಲದಿದ್ದರೆ ನಾನು ಪ್ರಾಆರ್ಥನೆಯನ್ನು ಬಿಟ್ಟು ನಿನ್ನ ಹುಡುಕಿಕೊಂಡು ಬರುತ್ತಿದ್ದೆನಾ?’ ಎನ್ನುತ್ತಾನೆ. ಆಗ ಯುವತಿ ನಕ್ಕು, ‘ಪ್ರೇಮದಲ್ಲಿರುವ ನನಗೆ ಸುತ್ತಲು ಏನಾಗುತ್ತಿದೆ ಎಂದು ಗೊತ್ತಾಗಲಿಲ್ಲ. ಪ್ರಾರ್ಥನೆಯಲ್ಲಿ ತೊಡಗಿದ್ದ ನಿನಗೆ ನಾನು ಓಡಿ ಹೋಗಿದ್ದು, ಕಾಲು ತಗುಲಿದ್ದೂ ಎಲ್ಲವೂ ಗೊತ್ತಾಯಿತು ಎಂದರೆ, ನೀನು ಎಂಥಾ ಪ್ರಾರ್ಥನೆಯಲ್ಲಿ ತೊಡಗಿದ್ದೆ, ಎನ್ನುವುದನ್ನು ನೀನೇ ಲೆಕ್ಕ ಹಾಕು’ ಎನ್ನುತ್ತಾಳೆ. ಅವಳ ಮಾತನ್ನು ಕೇಳಿ ಆ ಸಂತನಿಗೆ ನಾಚಿಕೆ ಎನ್ನಿಸಿತು. ಮತ್ತೂ ಯುವತಿ ಮಾತನ್ನು ಮುಂದುವರಿಸಿ ‘ಪ್ರಾರ್ಥನೆ ಎಂದರೆ ಸರ್ವಸಮರ್ಪಣೆ ನನ್ನ ಪ್ರೀತಿಗೆ ಇರುವ ಸಮರ್ಪಣಾ ಭಾವ ನಿನ್ನ ಪ್ರಾರ್ಥನೆಗೆ ಇಲ್ಲವಲ್ಲ. ದೇವರು ನಿನ್ನ ಬಳಿಗೆ ಹೇಗೆ ಬರುತ್ತಾನೆ?’ ಎನ್ನುತ್ತಾ ಹೊರಟುಹೋಗುತ್ತಾಳೆ. ಅವಳ ಮಾತನ್ನು ಕೇಳಿ ಸಂತ ದಂಗು ಬಡಿಯುತ್ತಾನೆ. ಆ ಉನ್ಮತ್ತತೆ ಆ ಲೀನವಾಗುವಿಕೆ ತನಗೇಕೆ ಬರಲಿಲ್ಲ ಎಂದು ಚಿಂತಿಸತೊಡಗುತ್ತಾನೆ. ಎಲ್ಲದರ ನಡುವೆ ಪ್ರಾರ್ಥನೆ ಎಂದರೆ ಏನೆನ್ನುವ ಅರ್ಥ ಹೊಳೆದು ತನ್ನ ಹಾದಿಯನ್ನು ನಿಖರಗೊಳಿಸಿಕೊಳ್ಳುತ್ತಾನೆ. ಒಂದು ಸಣ್ಣ ಮಾತು ಅವನಲ್ಲಿ ಜ್ಞಾನದ ಕಿಡಿಯನ್ನು ಹೀಗೆ ಹಚ್ಚಿಸಿಬಿಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT