ಶನಿವಾರ, 1 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು: ಕೊನೆಗಾಲದ ಬದುಕು ಬದಲಿಸಲಾಗದು

Published 14 ಮೇ 2024, 21:00 IST
Last Updated 14 ಮೇ 2024, 21:00 IST
ಅಕ್ಷರ ಗಾತ್ರ

ನಮ್ಮವರಿಗೆ ಈಗ ಎಪ್ಪತ್ತು ವರ್ಷ. ಬೇಡವೆಂದರೂ ದುಡಿಯಲು ಹೋಗುತ್ತಾರೆ. ಮನೆಯಲ್ಲಿ ಸುಖವಾಗಿ ತಿಂದುಂಡುಕೊಂಡು ಇರಿ ಎಂದರೂ ಕೇಳುವುದಿಲ್ಲ. ಮೊನ್ನೆ ಬಿಸಿಲಲ್ಲಿ ಸೈಕಲ್‌ನಲ್ಲಿ ಹೋಗುವಾಗ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಯಾರೋ ಪರಿಚಯಸ್ಥರು ನೋಡಿ ತಂದು ಮನೆಗೆ ಬಿಟ್ಟರು. ಹೆಚ್ಚು ಕಡಿಮೆಯಾಗಿದ್ರೆ ಏನು ಗತಿ? ಇವರು ದುಡಿದು ತಂದು ನಾವು ತಿನ್ನಬೇಕು ಅಂತೇನೂ ಇಲ್ಲ. ಮಗ
ಮನೆಗೆ ಬೇಕಾದ್ದು ತಂದು ಹಾಕುತ್ತಾನೆ. ಇವರದು ಅದೇನೋ ಸ್ವಾಭಿಮಾನವಂತೆ. ಜೀವ ಇರೋ ತನಕ ತಾವೇ ತಮ್ಮ ಊಟ ದುಡಿದು ತಿನ್ನಬೇಕಂತೆ. ಇಷ್ಟು ವರ್ಷ ಮಾಡಿದ್ದು ಸಾಲದೇ? ಸುಮ್ಮನೆ ಮನೇಲಿ ಇರೋಕೆ ಏನು ರೋಗ ಇವರಿಗೆ? ನೀವಾದರೂ ಬುದ್ಧಿ ಹೇಳಿ ಎಂದು ಅವರ ಹೆಂಡತಿ ನನಗೆ ಹೇಳಿದರು.
ನಾ ಬಲ್ಲಂತೆ ಇವರು ಒಂದು ಕಡೆ ಕೂಡುವ ಮನುಷ್ಯರಲ್ಲ. ಸದಾ ಯಾವುದಾದರೂ ಒಂದು ಕೆಲಸದಲ್ಲಿ ಬ್ಯುಸಿ ಇರುವ ಗುಣದವರು. ಕೊರೊನಾ ಕಾಲದಲ್ಲಿ ಮನೇಲಿ ಕೂರಲಾಗದೆ ಚಡಪಡಿಸಿದವರು. ಮಾಡಿದ ಕೆಲಸವನ್ನೇ ಮತ್ತೆ ತಿರುಗಿ ಮಾಡುತ್ತಿದ್ದರಂತೆ. ಮನೆ ಒರೆಸುವುದು, ಬಣ್ಣ ಬಳಿಯಲು ಹೋಗುವುದು, ತೋಟದ ಗಿಡಗಳಿಗೆ ಆರೈಕೆ ಮಾಡುವುದು, ಬಟ್ಟೆ ಒಗೆದು ಹಾಕುವುದು ಹೀಗೆ ಪುರುಸೊತ್ತಿಲ್ಲದಂತೆ ಚಟುವಟಿಕೆ ನಡೆಸುತ್ತಿದ್ದರೆಂದು ಗೊತ್ತಿತ್ತು. ದಿನವೂ ಹತ್ತಾರು ಪರಿಚಿತ ಜನರ ಬಳಿ ಹೋಗಿ ಮಾತಾಡದಿದ್ದರೆ ಅವರ ದಿನ ಮುಗಿಯುವುದಿಲ್ಲ.

ಒಮ್ಮೆ ಹೀಗೆ ಎಲ್ಲರೂ ಬಲವಂತ ಮಾಡಿ ಮನೆಯಲ್ಲೇ ಇರುವಂತೆ ಕೂಡಿ ಹಾಕಿದರು. ಗುಳಿಗೆ ನುಂಗಿ, ಊಟ ಮಾಡಿ, ಟಿವಿ ನೋಡುತ್ತಾ ಇರುವುದು ಉಳಿದವರ ಪ್ರಕಾರ ಸುಖದ ಜೀವನವಂತೆ. ಆದರೆ ಬಾಲ್ಯದಿಂದ ಕಷ್ಟಬಿದ್ದು ದುಡಿದು, ಹತ್ತಾರು ಜನರ ಜೊತೆ ಒಡನಾಡಿ, ಎಲ್ಲರನ್ನೂ ಕಂಡು ಮಾತಾಡುವ ಜೀವನ ಶೈಲಿ ರೂಢಿಸಿಕೊಂಡ ಅವರು ಮಂಕಾದರು. ಒಂಟಿತನ ಹೆಚ್ಚಾಯಿತು. ಸಾಹಿತ್ಯ, ಸಂಗೀತ, ಚಿತ್ರಕಲೆ, ಅಧ್ಯಾತ್ಮ ಯಾವುದೂ ಗೊತ್ತಿಲ್ಲದ ಅವರು ಕಾಯಿಲೆಗೆ ಬಿದ್ದರು. ಮನೆಯಿಂದ ಹೊರಗೆ ಬಿಟ್ಟರಷ್ಟೇ ಜೀವ ಚೈತನ್ಯವಾಗಿರಬಲ್ಲ ಇವರನ್ನು ಕೊನೆಗೆ ಮನೆ ಜೈಲಿನಿಂದ ಬಿಡುಗಡೆ ಮಾಡಲಾಯಿತು. ಆಮೇಲೆ ಯಜಮಾನರು ಮಾಮೂಲಿಯಾಗಿ ಸರಿ ಹೋದರು. ವಯಸ್ಸಾದವರು ಹೀಗೇ ಇರಬೇಕು ಎಂದು ನಾವು ನಿರ್ಧರಿಸುತ್ತೇವೆ. ಅವರ ನಡವಳಿಕೆಗಳು ಈ ತರಹ ಬದಲಾದರೆ ಚೆನ್ನ ಎಂದು ಬಯಸುತ್ತೇವೆ. ಸತತ ದುಡಿದು ದಣಿದ ಜೀವ ಕೂತು ಸುಖ ಪಡೆಯುವುದು ಸರಿ ಎಂದು ಭಾವಿಸುತ್ತೇವೆ. ಇಷ್ಟೇ ಮಾತಾಡಬೇಕು, ಹೀಗೇ ಇರಬೇಕು ಎಂದು ತಾಕೀತು ಮಾಡುತ್ತೇವೆ. ತಮ್ಮ ಯೌವನ, ಆರ್ಥಿಕ ತಾಕತ್ತು ಖಾಲಿಯಾದ ಇವರನ್ನು ಥರಾವರಿಯಾಗಿ ಬಗ್ಗಿಸಲು ನೋಡುತ್ತೇವೆ. ಆದರೆ ಬದುಕಿನ ಕೊನೆಯಲ್ಲಿ ಬದಲಾವಣೆಗಳು ಸಾಧ್ಯವಿಲ್ಲ. ಈಗಾಗಲೇ ಬೆಳೆದು ನಿಂತ ಮರ ಸಣ್ಣಗೆ ಒಣಗುತ್ತಿದೆ ನಿಜ. ಈಗ ಮಾರ್ಪಾಡುಗಳು ಮಾಡಲು ಹೋದರೆ ಮುರಿಯುತ್ತದೆ. ಮರ ಮುದಿಯಾದರೂ ಅನುಭವಗಳ ಖಣಜವದು. ಮಕ್ಕಳಂತೆ ಹಟ ಮಾಡುವುದು, ಹೇಳಿದ್ದೇ ಹೇಳುವುದು, ತಾವು ಪಟ್ಟ ಕಷ್ಟಗಳ ಪುನಾರಾವರ್ತಿಸುವುದು ಅವರ ಈಗಿನ ಸಹಜ ಸ್ವಭಾವ. ಬಹಳಷ್ಟು ಅವರ ಮಾತು, ನಡವಳಿಕೆ, ವರ್ತನೆ ಇಷ್ಟವಾಗದಿರಬಹುದು. ಅರ್ಥವಾಗದಿರಬಹುದು. ಬದುಕೆಂಬುದೇ ಹೀಗೆ. ಅದರ ಪಾಡಿಗೆ ಅದು ಚಲಿಸಬೇಕು. ನದಿಯ ಚಲನೆಯ ದಿಕ್ಕು ಪ್ರಕೃತಿಯ ನಿಯಮ. ಇದನ್ನು ಸುಲಭಕ್ಕೆ ಬದಲಿಸಲಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT