ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು | ಕಾಲು ಚಾಚಿ ಕೂತವನು

Published 22 ಮಾರ್ಚ್ 2024, 0:09 IST
Last Updated 22 ಮಾರ್ಚ್ 2024, 0:09 IST
ಅಕ್ಷರ ಗಾತ್ರ

ಅವನ್ಯಾರೋ ಒಬ್ಬ ರೈತ, ಶ್ರಮಜೀವಿ ಪಾಪ. ಹಳ್ಳಿಕಟ್ಟೆಯ ಮೇಲೆ ಕಾಲು ಚಾಚಿಕೊಂಡು ಆರಾಮವಾಗಿ ಕೂತಿದ್ದ. ಅವನು ಹಾಗೆ ಕೂತಿರುವಾಗಲೇ ಅಲ್ಲಿಗೆ ಆ ದೇಶದ ರಾಜ ಕುದುರೆಯ ಮೇಲೆ ಬಂದ. ರೈತ ಕುದುರೆಯ ಟಕ ಟಕ ಸದ್ದನ್ನು ಕೇಳಿ ಒಂದು ಸಲ ಆ ಕಡೆ ನೋಡಿದ. ಮತ್ತೆ ತಿರುಗಿ ತನ್ನ ಪಾಡಿಗೆ ತಾನು ಕೂತ. ಕಟ್ಟೆಯ ಮೇಲೆ ಕೂತಿದ್ದವನನ್ನು ನೋಡಿ ಅವನನ್ನು ಮಾತಾಡಿಸೋಣ, ಕುಶಲ ಕ್ಷೇಮ ಮಳೆ ಬೆಳೆ ವಿಚಾರಿಸೋಣ ಅಂತ ರಾಜ ಹಾಗೇ ಕುದುರೆಯ ಮೇಲೇ ಅವನ ಸಮೀಪಕ್ಕೆ ಬಂದ. ವಿಚಿತ್ರ ಅಂದರೆ ಆಗಲೂ ಆ ವ್ಯಕ್ತಿ ಹಾಗೇ ಕಾಲು ಚಾಚಿಕೊಂಡೇ ಕೂತಿದ್ದ. ಸಿಟ್ಟು ಬರಬಾರದಾ ರಾಜನಿಗೆ, ಬಂತು.
‘ಏಯ್’ ಅಂದ. ಆ ವ್ಯಕ್ತಿ ಅವನು ಕೂತಿದ್ದ ಭಂಗಿಯನ್ನು ಬದಲಾಯಿಸದೆ ತಲೆಯೆತ್ತಿ ‘ಏನು?’ ಅಂದ.

ರಾಜ: ‘ನಾನ್ಯಾರು ಗೊತ್ತಾ?’

ರೈತ: ‘ನಿಮ್ಮನ್ನ, ನಿಮ್ಮ ಕುದುರೆಯನ್ನ, ನಿಮ್ಮ ವೇಷಭೂಷಣಗಳನ್ನ ಎಲ್ಲಾ ನೋಡಿದರೆ ನೀವು ಈ ದೇಶದ ರಾಜ ಇರಬಹುದು.

ರಾಜ: ‘ಹೌದು, ಮತ್ತೆ?’

ವ್ಯಕ್ತಿ: ‘ಸರಿ, ಏನೀಗ?’

ಈಗ ರಾಜನ ಪಿತ್ಥ ಕೆರಳಿತು. ‘ಅವಿವೇಕಿ, ನಾನು ನಾಡಿನ ದೊರೆ ಬಂದು ನಿಂತಿದ್ದೀನಿ, ನೀನು ಕಾಲು ಚಾಚಿಕೊಂಡೇ ಕೂತಿದ್ದೀಯ?’ ಅಂತ ಅಬ್ಬರಿಸಿದ.

ಆ ವ್ಯಕ್ತಿ ಸಣ್ಣಗೆ ನಕ್ಕು ತಣ್ಣಗೆ ಹೇಳಿದ: ‘ಅಷ್ಟೇನಾ? ನಾನು ಯಾರ ಮುಂದೆಯೂ ಕೈ ಚಾಚುವುದನ್ನು ಬಿಟ್ಟುಬಿಟ್ಟಿದ್ದೀನಿ. ಆದ್ದರಿಂದ ಕಾಲು ಚಾಚಿಕೊಂಡು ಕೂತಿದ್ದೀನಿ’.

ಈಗ ಈ ಕತೆ ಯಾಕೆ ನೆನಪಾಯಿತೆಂದರೆ, ನಮ್ಮ ದೇಶದಲ್ಲಿ ಈಗ ಮಹಾ ಚುನಾವಣೆ ಬಂದಿದೆ. ಚುನಾವಣೆ ಅಂದರೆ ಅದು ಪ್ರಜಾಪ್ರಭುತ್ವದ ಹಬ್ಬ ಅನ್ನುತ್ತಾರೆ. ಆದರೆ ದೇಶದ ಮಾನ್ಯ ಮತದಾರರೆಷ್ಟೋ ಮಂದಿ ಇನ್ನು ಮೇಲೆ ಕೈ ಚಾಚಿಕೊಂಡೇ ಓಡಾಡುತ್ತಾರೆ. ದುಡ್ಡಿರುವ ಧಣಿಗಳು ಅವರ ಚಾಚಿದ ಕೈಗೊಂದಿಷ್ಟು ಕಾಸೆರಚುತ್ತಾರೆ. ಮಾನ್ಯ ಮತದಾರ ಧರ್ಮಸ್ಥಳದ ಮಂಜುನಾಥನ‌ ಮೇಲೋ, ತಿರುಪತಿ ವೆಂಕಟೇಶ್ವರನ ಮೇಲೋ, ಶಿರಡಿ ಸಾಯಿಬಾಬಾನ ಮೇಲೋ ಆಣೆ ಭಾಷೆ ಮಾಡಿ ನಿಯತ್ತುಳಿಸಿಕೊಳ್ಳುತ್ತಾನೆ. ಊರೂರಿನಲ್ಲಿ ಲಕ್ಷಾಂತರ ಜನ ಸೇರುವ ಸಭೆಗಳಾಗುತ್ತವೆ. ಅಬ್ಬರದ ಭಾಷಣ, ನಿಂದೆ, ಪ್ರತಿನಿಂದೆ, ಎಲ್ಲವೂ ನಡೆಯುತ್ತವೆ. ಆಚ್ಚರಿ ಏನು ಗೊತ್ತಾ? ಗದ್ದೆ ಕೆಲಸಕ್ಕೆ, ಗಾರೆ ಕೆಲಸಕ್ಕೆ, ಮನೆಕೆಲಸಕ್ಕೆ ಜನ ಸಿಗುವುದಿಲ್ಲ, ಆದರೆ ಈ ಭಾಷಣಗಳನ್ನು ಕೇಳುವುದಕ್ಕೆ ಅದೆಲ್ಲಿಂದ ಜನ ಸಿಗುತ್ತಾರೋ ಗೊತ್ತಿಲ್ಲ. ಅವರಲ್ಲಿ ಎಷ್ಟೋ ಕೈಗಳು ಚಪ್ಪಾಳೆ ಹೊಡೆಯುವುದು ಮಾತ್ರವಲ್ಲ, ಬರುವಾಗಲೂ ಹೋಗುವಾಗಲೂ ಚಾಚಿಕೊಂಡೇ ಇರುತ್ತವೆ. ಇದನ್ನೆಲ್ಲಾ ಮರೆತಂತೆ ಮಾಡಿ ನಮ್ಮ ಮಾಧ್ಯಮಗಳು ಜಾತಿ, ಒಳಜಾತಿ, ಮತ, ಧರ್ಮ ಅಂತ ಚರ್ಚೆ ಮಾಡುತ್ತವೆ.

ಅಂತೂ ನಾವು ಜಾತಿ ಲೆಕ್ಕಾಚಾರಗಳನ್ನು ಹಾಕಿಕೊಂಡೇ ಜಾತ್ಯತೀತ ಭಾರತವನ್ನು ಕಟ್ಟುತ್ತಿದ್ದೇವೆ... ⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT