ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಮದ್ಯದಂಗಡಿ: ಭಾವುಕ ನೈತಿಕತೆಯಾಚೆಗೆ…

Published 27 ಸೆಪ್ಟೆಂಬರ್ 2023, 23:42 IST
Last Updated 27 ಸೆಪ್ಟೆಂಬರ್ 2023, 23:42 IST
ಅಕ್ಷರ ಗಾತ್ರ

ಮದ್ಯದ ಅಂಗಡಿಗಳಿಗೆ ಹೊಸದಾಗಿ ಪರವಾನಗಿ ನೀಡುವ ಪ್ರಸ್ತಾವವನ್ನು ನೀತಿ ನಿರೂಪಣೆಯ ಮಸೂರದಲ್ಲಿ ಕಾಣಲು ಪ್ರಯತ್ನಿಸಿದರೆ ಇಲ್ಲಿರುವ ನಿಜ ಸಂಗತಿ ಅರ್ಥವಾದೀತು.

ಮದ್ಯ ಮಾರಾಟ ನೀತಿಗೆ ಸಂಬಂಧಿಸಿದ ಸುಧಾರಣೆಗಳ ಪ್ರಸ್ತಾಪವಾದ ತಕ್ಷಣ ಅದಕ್ಕೆ ಬರುವ ಬಹುತೇಕ ಪ್ರತಿಕ್ರಿಯೆಗಳು ಮುಗ್ಧ ಮತ್ತು ಭಾವುಕ ಮೇಲರಿಮೆಯಿಂದಲೇ ಹುಟ್ಟಿರುತ್ತವೆ. ಇದು ಹೊಸ ವಿಚಾರವೇನೂ ಅಲ್ಲ. 1948ರಷ್ಟು ಹಿಂದೆಯೇ ಈ ವಿದ್ಯಮಾನವನ್ನು ಮಾನವಶಾಸ್ತ್ರಜ್ಞ ಎಂ.ಎನ್.ಶ್ರೀನಿವಾಸ್ ಅವರು ಗುರುತಿಸಿ ‘ಮದ್ಯಪಾನ ನಿಷೇಧದಂಥ ಪರಿಕಲ್ಪನೆಯೇ ಸಂಸ್ಕೃತೀಕರಣದ ಉತ್ಪನ್ನ’ ಎಂದಿದ್ದರು. ಈಗಲೂ ಆ ಪರಿಸ್ಥಿತಿ ಏನೂ ಭಿನ್ನವಲ್ಲ. ಸರ್ಕಾರವು ಮದ್ಯ ಮಾರಾಟದ ಹೊಸ ಅಂಗಡಿಗಳಿಗೆ ಪರವಾನಗಿ ನೀಡುವ ವಿಷಯ ಪ್ರಸ್ತಾಪಿಸಿದ ತಕ್ಷಣವೇ ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಚಿಂತಿತರಾಗಿರುವ ದೊಡ್ಡ ವರ್ಗವೇ ಸರ್ಕಾರದ ಮೇಲೆ ಮುಗಿಬಿದ್ದಿದೆ.

ಮದ್ಯದ ಅಂಗಡಿಗಳಿಗೆ ಹೊಸದಾಗಿ ಪರವಾನಗಿ ನೀಡುವ ವಿಚಾರವನ್ನು ನೀತಿ ನಿರೂಪಣೆಯ ಮಸೂರದಲ್ಲಿ ಕಾಣಲು ಪ್ರಯತ್ನಿಸಿದರೆ ಇಲ್ಲಿರುವ ನಿಜ ಸಂಗತಿ ಅರ್ಥವಾದೀತು. ಹೊಸದಾಗಿ ಮದ್ಯದಂಗಡಿಗಳಿಗೆ ಪರವಾನಗಿ ನೀಡದೇ ಇದ್ದರೂ ರಾಜ್ಯದಲ್ಲಿ ಮದ್ಯ ಮಾರಾಟದ ಪ್ರಮಾಣ ಹೆಚ್ಚುತ್ತಲೇ ಬಂದಿದೆ. ಕರ್ನಾಟಕ ಸರ್ಕಾರವೇ ನೀಡಿರುವ ಅಂಕಿ-ಅಂಶಗಳಂತೆ 2015ರ ನಂತರ ಮದ್ಯ ಮಾರಾಟದ ಜಿಲ್ಲಾವಾರು ಪ್ರಮಾಣ ವಾರ್ಷಿಕ ಸರಾಸರಿ ಶೇಕಡ 8ರಿಂದ 24ರ ತನಕ ಏರಿಕೆ ಕಂಡಿದೆ. ಕುತೂಹಲಕಾರಿ ಸಂಗತಿಯೆಂದರೆ 1992ರ ನಂತರ ಮದ್ಯದ ಅಂಗಡಿಗಳು (ಸಿಎಲ್-2) ಮತ್ತು ಬಾರ್ ಅಂಡ್ ರೆಸ್ಟೊರೆಂಟ್ (ಸಿಎಲ್-9) ಪರವಾನಗಿಗಳನ್ನು ಸರ್ಕಾರ ನೀಡಿಯೇ ಇಲ್ಲ. ಮೂವತ್ತು ವರ್ಷಗಳ ಕಾಲ ಹೊಸ ಪರವಾನಗಿಗಳನ್ನು ನೀಡದೇ ಇದ್ದುದರಿಂದ ಮದ್ಯದಂಗಡಿ ಪರವಾನಗಿಗಳ ಮರು ಮಾರಾಟವೇ ಬೃಹತ್ ಉದ್ದಿಮೆಯಾಯಿತು. ಈ ಒಂದು ಮದ್ಯದಂಗಡಿ ಪರವಾನಗಿಯ ಬೆಲೆ ₹ 50 ಲಕ್ಷದಿಂದ ₹ 1 ಕೋಟಿಯಷ್ಟಿದೆ. ಇಡೀ ವ್ಯವಹಾರದಲ್ಲಿ ಬಳಕೆಯಾಗುವ ಲಂಚದ ಪ್ರಮಾಣವೂ ಇಷ್ಟೇ ದೊಡ್ಡದು. ಈ ಬಗೆಯ ಪರವಾನಗಿಗಳ ನವೀಕರಣದ ಮೂಲಕ ಸರ್ಕಾರಕ್ಕೆ ಸಿಗುವ ಮೊತ್ತ ಬಹಳ ಕಡಿಮೆ. ಸಿಎಲ್-2 ನವೀಕರಣಕ್ಕೆ ₹ 4 ಲಕ್ಷದಿಂದ ₹ 6 ಲಕ್ಷದವರೆಗೆ ಶುಲ್ಕ ಸರ್ಕಾರಕ್ಕೆ ದೊರೆತರೆ, ಸಿಎಲ್-9 ನವೀಕರಣದಲ್ಲಿ ₹ 4 ಲಕ್ಷದಿಂದ ₹ 7.5 ಲಕ್ಷದವರೆಗೆ ಶುಲ್ಕ ದೊರೆಯುತ್ತದೆ.

ಮದ್ಯದ ಅಂಗಡಿಗಳು ಮತ್ತು ಬಾರ್ ಅಂಡ್ ರೆಸ್ಟೊರೆಂಟ್‌ಗಳಿಗೆ ಹೊಸದಾಗಿ ಪರವಾನಗಿ ದೊರೆಯುವುದಿಲ್ಲ ಎಂಬ ಕಾರಣಕ್ಕೆ ಅದನ್ನು ಪಡೆಯುವ ಹೊಸ ಉಪಾಯಗಳೂ ಹುಟ್ಟಿಕೊಂಡಿವೆ. ನಿರ್ದಿಷ್ಟ ಸಂಖ್ಯೆಯ ವಸತಿ ಕೋಣೆಗಳಿರುವ ಹೊಟೇಲುಗಳಿಗೆ ಮದ್ಯ ಮಾರಾಟದ ಪರವಾನಗಿ ದೊರೆಯುತ್ತದೆ. ಅದನ್ನೇ ಬಳಸಿಕೊಂಡು ರಾಜ್ಯವ್ಯಾಪಿಯಾಗಿ ಹೆದ್ದಾರಿಗಳ ಬದಿಯಲ್ಲಿ ‘ಲಾಡ್ಜ್ ಅಂಡ್ ಬಾರ್’ಗಳು ಆರಂಭವಾಗಿವೆ. ಮದ್ಯದ ಅಂಗಡಿಗಳ ಪರವಾನಗಿಗಳ ವಿರುದ್ಧ ಕ್ರುದ್ಧರಾಗುವವರು ಈ ವಿಷಯದಲ್ಲಿ ಮಾತನಾಡಿದ್ದೇ ಇಲ್ಲ. ಈಗಿರುವ ಮದ್ಯಮಾರಾಟ ನೀತಿಯನ್ನು ಸುಧಾರಣೆಗೆ ಒಳಪಡಿಸುವ ಪ್ರಯತ್ನವನ್ನು ಕೇವಲ ಮದ್ಯಪಾನದ ಒಳಿತು– ಕೆಡುಕುಗಳ ದೃಷ್ಟಿಯಿಂದಷ್ಟೇ ನೋಡಲು ಸಾಧ್ಯವಿಲ್ಲ. ಇದನ್ನೊಂದು ಆಡಳಿತಾತ್ಮಕ ವಿಷಯವಾಗಿಯೂ ಗಮನಿಸಬೇಕಾದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ.

ಅಬಕಾರಿ ಇಲಾಖೆಯು ಇರುವ ಮದ್ಯದ ಅಂಗಡಿಗಳಿಗೆ ಮಾರಾಟದ ಗುರಿಯನ್ನು ನಿಗದಿಪಡಿಸುವುದು ಗುಟ್ಟಿನ ವಿಷಯವೇನೂ ಅಲ್ಲ. ಹಿಂದೆಲ್ಲಾ ಅನಧಿಕೃತ ಮದ್ಯ ಮಾರಾಟ ತಮ್ಮ ವ್ಯಾಪಾರಕ್ಕೆ ಧಕ್ಕೆ ಉಂಟುಮಾಡುತ್ತದೆ ಎಂದು ಮದ್ಯದ ಅಂಗಡಿ ಮಾಲೀಕರು ಭಾವಿಸಿದ್ದರು. ಈಗ ಅವರೇ ಮುಂದೆ ನಿಂತು ಅನಧಿಕೃತ ಮದ್ಯ ಮಾರಾಟದ ಉಸ್ತುವಾರಿ ನೋಡಿಕೊಂಡು ಅಬಕಾರಿ ಇಲಾಖೆ ಕೊಡುವ ಮಾರಾಟದ ಗುರಿಯನ್ನು ‘ಸಾಧಿಸುತ್ತಿದ್ದಾರೆ’. ಪರಿಣಾಮವಾಗಿ ಹಳ್ಳಿ ಹಳ್ಳಿಗಳ ಕಿರಾಣಿ ಅಂಗಡಿಗಳಲ್ಲೂ ಮದ್ಯ ಲಭ್ಯವಿದೆ!

ಕಳೆದ ಮೂರು ದಶಕಗಳಿಂದ ಮದ್ಯದಂಗಡಿಗಳಿಗೆ ಹೊಸದಾಗಿ ಪರವಾನಗಿಗಳನ್ನು ನೀಡದೇ ಇದ್ದದ್ದು ಪರವಾನಗಿ ಮಾರಾಟವೇ ಒಂದು ದಂಧೆಯಾಗಿ ಬೆಳೆಯಲು ಕಾರಣವಾಗಿದೆ. ಇದರಿಂದ ಭ್ರಷ್ಟಾಚಾರಿಗಳಿಗೆ ಅನುಕೂಲವಾಗಿದೆಯೇ ಹೊರತು ಸರ್ಕಾರದ ಬೊಕ್ಕಸಕ್ಕೇನೂ ಪ್ರಯೋಜನವಾಗಿಲ್ಲ. ಹಾಗೆ ನೋಡಿದರೆ ಸರ್ಕಾರದ ಬೊಕ್ಕಸಕ್ಕೆ ಹಾನಿಯಾಗಿರುವುದೇ ಹೆಚ್ಚು. ಸಿಎಲ್-2 ಮತ್ತು ಸಿಎಲ್-9 ಪರವಾನಗಿಗಳ ಶುಲ್ಕವನ್ನು ಅವುಗಳ ವ್ಯವಹಾರದ ಪ್ರಮಾಣಕ್ಕೆ ಅನುಗುಣವಾಗಿ ನಿಗದಿಪಡಿಸಬೇಕು ಮತ್ತು ಈ ಪರವಾನಗಿಗಳನ್ನು ನಿರ್ದಿಷ್ಟ ಭೌಗೋಳಿಕ ಮಿತಿಯೊಳಗಷ್ಟೇ ಬಳಸುವಂಥ ನಿಯಮಗಳನ್ನು ತರಬೇಕು.

1920ರಲ್ಲಿ ಅಮೆರಿಕದಲ್ಲಿ ಜಾರಿಗೆ ತರಲು ಉದ್ದೇಶಿಸಿದ ಮದ್ಯ ನಿಷೇಧದಿಂದ ತೊಡಗಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ವಿವಿಧ ರಾಜ್ಯಗಳು ಜಾರಿಗೆ ತಂದ ಮದ್ಯ ನಿಷೇಧಗಳೆಲ್ಲವೂ ಹೀನಾಯ ವೈಫಲ್ಯ ಕಂಡಿವೆ. ಈ ವಿಷಯದಲ್ಲಿ ಭಾವುಕ ನೈತಿಕತೆಯನ್ನು ಬದಿಗಿಟ್ಟು ಪ್ರಾಯೋಗಿಕವಾಗಿ ಆಲೋಚಿಸುವುದು ಅಗತ್ಯ. ಮದ್ಯದ ಅಂಗಡಿ ತೆರೆಯಲು ‍ಪರವಾನಗಿ ನೀಡುವುದನ್ನು ವಿರೋಧಿಸುವವರು ನೈತಿಕವೆಂದು ಭಾವಿಸುತ್ತಿರುವ ನಿಲುವೇ ದೊಡ್ಡ ಮಟ್ಟದ ಭ್ರಷ್ಟಾಚಾರ ಮತ್ತು ಕಾಳಸಂತೆಯ ದಂಧೆಗೆ ಕಾರಣವಾಗುತ್ತಿರುವ ವಿಪರ್ಯಾಸವನ್ನು ಅರ್ಥಮಾಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT