ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ ಜೊತೆ ಬ್ಯಾಟಿಂಗ್‌ ಮಾಡುವುದು ಅದ್ಭುತ ಅನುಭವ: ಡುಪ್ಲೆಸಿ

Published 18 ಮಾರ್ಚ್ 2024, 23:23 IST
Last Updated 18 ಮಾರ್ಚ್ 2024, 23:23 IST
ಅಕ್ಷರ ಗಾತ್ರ

ಬೆಂಗಳೂರು: ಸೂಪರ್‌ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ ಅವರ ಸದಾ ಲವಲವಿಕೆಯ ವ್ಯಕ್ತಿತ್ವವನ್ನು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಫ್‌ ಡು ಪ್ಲೆಸಿ ಅವರು ಕೊಂಡಾಡಿದ್ದಾರೆ. ರನ್‌ ಯಂತ್ರ ಕೊಹ್ಲಿ ಅವರ ಜೊತೆ ಬ್ಯಾಟಿಂಗ್‌ ಮಾಡುವುದು ‘ಅದ್ಭುತ ಅನುಭವ’ ಎಂದು ಫಫ್‌ ಡುಪ್ಲೆಸಿ ಬಣ್ಣಿಸಿದ್ದಾರೆ.

‌2021ರ ಋತುವಿನ ನಂತರ ಕೊಹ್ಲಿ ನಾಯಕತ್ವ ತ್ಯಜಿಸಿದ ನಂತರ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಆರ್‌ಸಿಬಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

‘ಅವರ ಜೊತೆಗೆ ಬ್ಯಾಟಿಂಗ್ ಮಾಡುವುದು ಅದ್ಭುತ ಅನುಭವ. ಜೊತೆಯಾಗಿ ಬ್ಯಾಟಿಂಗ್‌ ಮಾಡಲು ಬಯಸುವ ಅಚ್ಚುಮೆಚ್ಚಿನ ಆಟಗಾರರಲ್ಲಿ ಅವರೂ ಒಬ್ಬರು. ಅವರು ನನ್ನಲ್ಲಿ ಉತ್ಸಾಹ ತುಂಬುತ್ತಾರೆ’ ಎಂದು ಡುಪ್ಲೆಸಿ ‘ಸ್ಟಾರ್‌ ಸ್ಪೋರ್ಟ್ಸ್’ಗೆ ತಿಳಿಸಿದ್ದಾರೆ.

ಕೊಹ್ಲಿ ತಂಡದ ನಾಯಕರಾಗಿಲ್ಲದೇ ಇರಬಹುದು. ಆದರೆ ಅವರು ನೀಡುವ ಸಲಹೆಗಳು, ತಂಡಕ್ಕೆ ತುಂಬುವ ಹುರುಪು ಡುಪ್ಲೆಸಿ ಅವರ ಮೆಚ್ಚುಗೆಗೆ ಪಾತ್ರವಾಗಿದೆ. ‘ಕ್ಷೇತ್ರರಕ್ಷಣೆ ನಿಯೋಜನೆ ವೇಳೆ ಅವರು ಮಹತ್ವದ ಪಾತ್ರ ವಹಿಸುತ್ತಾರೆ. ಹಲವು ವಿಷಯಗಳಲ್ಲಿ ತಂಡದ ಮುಂಚೂಣಿಯಲ್ಲಿರುತ್ತಾರೆ. ವಿಶೇಷವಾಗಿ ಕ್ಷೇತ್ರರಕ್ಷಣೆ ನಿಯೋಜನೆ ಮತ್ತು ತಂಡಕ್ಕೆ ಉತ್ಸಾಹ ತುಂಬುವಲ್ಲಿ ಅವರ ಪಾತ್ರ ಮಹತ್ವದ್ದು’ ಎಂದಿದ್ದಾರೆ ಡುಪ್ಲೆಸಿ.

ಕ್ರೀಡಾಂಗಣದ ಆಚೆಯೂ ಕೊಹ್ಲಿ ತಮ್ಮ ಮೇಲೆ ಬೀರಿರುವ ಪ್ರಭಾವ ಅಸದಳ ಎಂದಿದ್ದಾರೆ. ನಾವಿಬ್ಬರೂ ಬೇರೆ ಬೇರೆ ಶೈಲಿಯ ಅಡುಗೆ ಇಷ್ಟಪಡುತ್ತೇವೆ. ಫ್ಯಾಷನ್‌ ಬಗ್ಗೆಯೂ ಚರ್ಚಿಸುತ್ತೇವೆ. ಧರಿಸುವ ಸ್ಟೈಲಿಷ್ ಉಡುಪುಗಳ ಚಿತ್ರಗಳನ್ನು ಹಂಚಿಕೊಳ್ಳುತ್ತೇವೆ. ಕೈಗಡಿಯಾರಗಳ ಬಗ್ಗೆಯೂ ಅವರಿಗೆ ವಿಶೇಷ ಮೋಹವಿದೆ’ ಎಂದಿದ್ದಾರೆ.

ಮ್ಯಾಕ್ಸ್‌ವೆಲ್‌ಗೆ ಮೆಚ್ಚುಗೆ: ಕಳೆದ ಮೂರು ವರ್ಷಗಳಿಂದ ತಂಡದ ಬ್ಯಾಟಿಂಗ್‌ ಶಕ್ತಿಯಾಗಿರುವ ಮ್ಯಾಕ್ಸ್‌ವೆಲ್‌ ಬಗ್ಗೆಯೂ ಡುಪ್ಲೆಸಿ ಮಾತನಾಡಿದರು. ಮ್ಯಾಕ್ಸ್‌ವೆಲ್‌ 2021 ಋತುವಿನಲ್ಲಿ 513 ರನ್ ಗಳಿಸಿದ್ದರು. ನಂತರದ ಎರಡು ವರ್ಷ 301 ಮತ್ತು 400 ರನ್ ಗಳಿಸಿದ್ದರು. ಐದು ಅಥವಾ ಆರನೇ ಕ್ರಮಾಂಕದಲ್ಲಿ ಅವರು ಫಿನಿಷರ್ ಪಾತ್ರ ನಿರ್ವಹಿಸುತ್ತಿದ್ದಾರೆ.

‘ಐಪಿಎಲ್‌ ಕ್ರಿಕೆಟ್‌ಗೆ ಸಂಬಂಧಿಸಿ ಆರ್‌ಸಿಬಿಯೊಂದಿಗೆ ಮ್ಯಾಕ್ಸಿ ಅವರ ಕಳೆದ ಋತುಗಳು ಫಲಪ್ರದವಾಗಿದೆ. ಅವರು ಕೆಲವು ಚಮತ್ಕಾರಿಕ ಇನಿಂಗ್ಸ್‌ಗಳನ್ನು ಆಡುತ್ತಾರೆ. 80 ಅಥವಾ 90 ರನ್‌ಗಳ ಇನಿಂಗ್ಸ್‌ನಂತೆ. ಅವರು ಅಗ್ಗವಾಗಿ ವಿಕೆಟ್‌ ನೀಡುವುದು ಕಡಿಮೆ’ ಎಂದಿದ್ದಾರೆ.

‘ಆರ್‌ಸಿಬಿಗೆ ಬಂದ ನಂತರ ಅವರು ಸ್ಥಿರತೆ ಕಂಡುಕೊಂಡಿದ್ದಾರೆ. ಎರಡು ವರ್ಷ ಅಮೋಘವಾಗಿ ಆಡಿದ್ದಾರೆ. ಅವರ ಜೊತೆ ಆಡುವಾಗ ಬ್ಯಾಟಿಂಗ್‌ ಸುಲಭವಾದಂತೆ ಅನಿಸುತ್ತದೆ. ಅವರು ಯಾವುದೇ ದಾಳಿಯನ್ನು, ವಿಶೇಷವಾಗಿ ಸ್ಪಿನ್ ದಾಳಿಯನ್ನು ಪುಡಿಗಟ್ಟಬಲ್ಲರು’ ಎಂದು ಡುಪ್ಲೆಸಿ ಮೆಚ್ಚುಗೆಯ ಮಾತನಾಡಿದ್ದಾರೆ. ‘ಸ್ಪಿನ್ನರ್‌ಗಳೆದುರು ಅವರು ಎಷ್ಟೊಂದು ಬಲಿಷ್ಠ ಆಟಗಾರ ಎಂದರೆ, ಅವರ ಜೊತೆ ಆಡುತ್ತಲೇ, ಜೊತೆಗಾರರಾಗಿ ನಾವೂ ಆ ವೇಗಕ್ಕೆ ಹೊಂದಿಕೊಂಡು ಆಡಬಲ್ಲವೆಂಬ ಭಾವನೆ ಮೂಡುತ್ತದೆ’ ಎಂದಿದ್ದಾರೆ.

ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮ ಇಂದು

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರ್ ತಂಡದ ಅನ್‌ಬಾಕ್ಸ್ ಕಾರ್ಯಕ್ರಮವು ಇದೇ 19ರಂದು ನಡೆಯಲಿದೆ.

ಈ ಸಂದರ್ಭದಲ್ಲಿ ತಂಡದ ಹೆಸರಿನಲ್ಲಿ ಬೆಂಗಳೂರ್ ಪದವನ್ನು ಬೆಂಗಳೂರು ಎಂದು ಬದಲಾವಣೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಚಿನ್ನಸ್ವಾಮಿ ಕ್ರೀಡಾಂಗಣ ದಲ್ಲಿ ಅಂದು ಸಂಜೆ 4 ಗಂಟೆಯಿಂದ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ತಂಡದ ಆಟಗಾರರೆಲ್ಲರೂ ಅಭ್ಯಾಸ ನಡೆಸುವರು. ತಂಡದ 12ನೇ ಪ್ಲೇಯರ್ ಆರ್ಮಿ (ಅಭಿಮಾನಿಗಳು)ಯೊಂದಿಗೆ ಬಾಂಧವ್ಯ ಬೆಸೆಯುವ ಕಾರ್ಯಕ್ರಮ ಇದಾಗಿದೆ. 

ತರಬೇತಿ ಶಿಬಿರದಲ್ಲಿ ಕೊಹ್ಲಿ

ಬೆಂಗಳೂರು: ಭಾರತದ ಬ್ಯಾಟಿಂಗ್ ತಾರೆ ವಿರಾಟ್ ಕೊಹ್ಲಿ ಅವರು ಸೋಮವಾರ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ತರಬೇತಿ ಶಿಬಿರದಲ್ಲಿ ಮೊದಲ ಬಾರಿ ಕಾಣಿಸಿಕೊಂಡರು. ಇದೇ 22ರಂದು ಇಂಡಿಯನ್‌ ಪ್ರೀಮಿಯರ್ ಲೀಗ್ ಆರಂಭವಾಗಲಿದೆ.

ಕೊಹ್ಲಿ ಲಂಡನ್‌ನಿಂದ ಭಾನುವಾರ ಸ್ವದೇಶಕ್ಕೆ ಮರಳಿದ್ದರು. ಎರಡನೇ ಮಗು ಅಕಾಯ್ ಜನನದ ಕಾರಣ ಅವರು ಲಂಡನ್‌ನಲ್ಲಿದ್ದರು. ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊಹ್ಲಿ ವಾರ್ಮ್‌ ಅಪ್ ನಡೆಸಿದರು. ಆರ್‌ಸಿಬಿ ಚೆನ್ನೈನಲ್ಲಿ ಶುಕ್ರವಾರ ನಡೆಯುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ.

ಆರ್‌ಸಿಬಿ ಪರ ಈ ಹಿಂದಿನ ಆವೃತ್ತಿಯಲ್ಲಿ ಅವರು ಎರಡು ಶತಕ, ಆರು ಅರ್ಧ ಶತಕಗಳ ನೆರವಿನಿಂದ ಪರ 639 ರನ್ ಕಲೆಹಾಕಿದ್ದರು.

35 ವರ್ಷದ ಕೊಹ್ಲಿ ಅವರಿಗೆ ಐಪಿಎಲ್‌ನ ಪ್ರದರ್ಶನ ಮಹತ್ವದ್ದಾಗಲಿದೆ. ಈ ಟೂರ್ನಿಯ ನಂತರ ಅಮೆರಿಕ ಮತ್ತು ಕೆರಿಬಿಯನ್‌ನಲ್ಲಿ ಐಸಿಸಿ ಟಿ20 ವಿಶ್ವಕಪ್‌ ಪಂದ್ಯಾವಳಿ ಇರುವ ಕಾರಣ ಐಪಿಎಲ್‌ನಲ್ಲಿ ಅವರ ಪ್ರದರ್ಶನದ ಮೇಲೆ ಎಲ್ಲರ ಗಮನ ನೆಟ್ಟಿದೆ. ಕೊಹ್ಲಿ, ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್‌ಗಳ ಸರಣಿಯಲ್ಲಿ ಆಡಿರಲಿಲ್ಲ.

ರೋಹಿತ್ ಶರ್ಮಾ ಮಾರ್ಗದರ್ಶನ ಮುಂದುವರಿಯಲಿದೆ: ಹಾರ್ದಿಕ್ ಪಾಂಡ್ಯ

ಮುಂಬೈ (ಪಿಟಿಐ): ಈ ಹಿಂದಿನ ಆವೃತ್ತಿಯಲ್ಲಿ ನಾಯಕರಾಗಿದ್ದ ರೋಹಿತ್‌ ಶರ್ಮಾ ಅವರು ಮುಂದೆಯೂ ತಮಗೆ ಮಾರ್ಗದರ್ಶಕರಾಗಿ ಮುಂದುವರಿಯಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್‌ ನಾಯಕ ಹಾರ್ದಿಕ್ ಪಾಂಡ್ಯ ಸೋಮವಾರ ಹೇಳಿದರು.

ಕಳೆದ ವರ್ಷ ಅನಿರೀಕ್ಷಿತ ಬೆಳವಣಿಗೆಯಲ್ಲಿ ಮುಂಬೈ ತಂಡ, ಗುಜರಾತ್‌ ಟೈಟನ್ಸ್‌ನಿಂದ ಏಕಗಂಟಿನ ಒಪ್ಪಂದದಲ್ಲಿ ಪಾಂಡ್ಯ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಅದರ ಬೆನ್ನಲ್ಲೇ ಅವರನ್ನು 2024ರ ಐಪಿಎಲ್‌ಗೆ ನಾಯಕರನ್ನಾಗಿ ಮಾಡಿದ್ದು, ರೋಹಿತ್ ಅಭಿಮಾನಿಗಳಿಗೆ ಅಸಮಾಧಾನ ಉಂಟುಮಾಡಿತ್ತು. ಪಾಂಡ್ಯ ಅವರು ಎರಡು ವರ್ಷ ಟೈಟನ್ಸ್‌ ನಾಯಕರಾಗಿದ್ದರು.

‘ಇದರಿಂದ ತುಂಬಾ ವ್ಯತ್ಯಾಸವೇನೂ ಆಗುವುದಿಲ್ಲ. ಅವರ ಸಹಾಯ ನನಗೆ ಎಂದೆಂದೂ ಇರುತ್ತದೆ. ಅವರು ಭಾರತ ತಂಡದ ನಾಯಕರಾಗಿದ್ದವರು. ಈ ತಂಡ (ಮುಂಬೈ) ಏನು ಸಾಧನೆ ಮಾಡಿದೆಯೊ ಅದನ್ನೆಲ್ಲಾ ಅವರ ನಾಯಕತ್ವದಲ್ಲೇ ಮಾಡಿತ್ತು’ ಎಂದು ಪಾಂಡ್ಯ ಮಾಧ್ಯಮ ಸಂವಾದದಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT