ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ರೋಗಿಗಳ ನೆರವಿಗೆ 'ಹನುಮ ಪಡೆ'

Last Updated 14 ಮೇ 2021, 8:54 IST
ಅಕ್ಷರ ಗಾತ್ರ

ನವದೆಹಲಿ: ಗಾಯದ ನೋವಿನಲ್ಲೂ ನೆಲಕಚ್ಚಿ ಆಡಿ ಟೆಸ್ಟ್‌ ಪಂದ್ಯದ ಸೋಲು ತಪ್ಪಿಸಿದ್ದು ಸಣ್ಣ ಸಾಹಸವೇನಲ್ಲ. ಆದರೆ, ದಿಕ್ಕು ತೋಚದ ಕೋವಿಡ್‌ ಪೀಡಿತರಿಗೆ ಸ್ನೇಹಿತರ ಜಾಲದ ಮೂಲಕ ಆಸ್ಪತ್ರೆಯಲ್ಲಿ ಹಾಸಿಗೆ ಅಥವಾ ಆಮ್ಲಜನಕದ ಸಿಲಿಂಡರ್‌ ವ್ಯವಸ್ಥೆ ಮಾಡಿರುವುದು ಭಾರತ ಟೆಸ್ಟ್‌ ಕ್ರಿಕೆಟ್‌ ಆಟಗಾರ ಹನುಮ ವಿಹಾರಿ ಅವರಿಗೆ ಹೆಚ್ಚಿನ ಸಂತೃಪ್ತಿಯ ಭಾವ ಮೂಡಿಸಿದೆ.

ಎರಡನೇ ಅಲೆಯ ಅವಧಿಯಲ್ಲಿ ಹೆಚ್ಚಿರುವ ಸೋಂಕು ಪ್ರಕರಣ ದೇಶದಲ್ಲಿ ಅಭೂತಪೂರ್ವ ಆರೋಗ್ಯ ಬಿಕ್ಕಟ್ಟನ್ನೇ ಸೃಷಿಸಿದೆ. ಇಂಥ ಸನ್ನಿವೇಶದಲ್ಲಿ ಸಾಮಾಜಿಕ ಜಾಲತಾಣಗಳು ಗಂಭೀರ ಸ್ಥಿತಿಗೆ ತಲುಪಿರುವ ಹಲವು ಕೋವಿಡ್‌ ರೋಗಿಗಳಿಗೆ ನೆರವು ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.

ಕೆಲವು ಕ್ರಿಕೆಟಿಗರು ಇಂಥ ಸಮಯದಲ್ಲಿ ನೆರವಿಗೆ ಇಳಿದಿದ್ದಾರೆ. ಕೆಲವು ಹಣಕಾಸಿನ ನೆರವು ನೀಡಿದರೆ, ಮತ್ತೆ ಕೆಲವರು ಸೋಂಕು ಪೀಡಿತರಿಗೆ ಅಗತ್ಯವಿರುವ ಔಷಧ ಪೂರೈಸುವಲ್ಲಿ ನೆರವಾಗುತ್ತಿದ್ದಾರೆ.

ಕೌಂಟಿ ಚಾಂಪಿಯನ್‌ಷಿಪ್‌ನಲ್ಲಿ ಆಡಲು ಸದ್ಯ ಇಂಗ್ಲೆಂಡ್‌ನಲ್ಲಿರುವ ಹನುಮ ವಿಹಾರಿ ಟ್ವಿಟರ್‌ ಖಾತೆ ಮೂಲಕ ನೆರವಿಗೆ ಮನವಿ ಮಾಡುತ್ತಿದ್ದಾರೆ. ಅವರು ಸ್ನೇಹಿತರು, ಅಭಿಮಾನಿಗಳನ್ನು ಒಳಗೊಂಡ 100 ಮಂದಿಯ ತಂಡ ರೂಪಿಸಿದ್ದಾರೆ. ಈ ಗುಂಪಿನಲ್ಲಿರುವವರು ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳಿಗೆ ಸೇರಿದ್ದಾರೆ.

ನವದೆಹಲಿಯಲ್ಲಿ ಕಾಂಗ್ರೆಸ್‌ ನಾಯಕ ಬಿ.ವಿ.ಶ್ರೀನಿವಾಸ್‌ ಅವರು ಕೋವಿಡ್‌ ಪೀಡಿತರಿಗೆ ನೆರವಾಗಲು ಸೇವಾ ಕಾರ್ಯ ನಡೆಸುತ್ತಿದ್ದಾರೆ. ಇದೇ ಮಾದರಿಯಲ್ಲಿ ವಿಹಾರಿ ಅವರು ಸ್ನೇಹಿತರ ಜಾಲದ ಮೂಲಕ ಔಷಧ, ಆಮ್ಲಜನಕದ ಸಿಲಿಂಡರ್‌ ಪೂರೈಸುತ್ತಿದ್ದಾರೆ. ರೋಗಿಗಳಿಗೆ ತಿಂಡಿಯ ಪೊಟ್ಟಣ ತಲುಪಿಸುತ್ತಿದ್ದಾರೆ.

‘ಇಂಥ ಕೆಲಸವನ್ನು ವೈಭವೀಕರಿಸುವುದು ನನಗಿಷ್ಟವಿಲ್ಲ. ತಳಮಟ್ಟದ ಜನರಿಗೆ ನೆರವಾಗಬೇಕೆಂದು ಉದ್ದೇಶವಷ್ಟೇ ನನ್ನದು. ಇದು ಕಷ್ಟದ ಸಮಯವಾದ್ದರಿಂದ ಅವರಿಗೆ ನೆರವಿನ ಅಗತ್ಯವಿರುತ್ತದೆ’ ಎಂದು 27 ವರ್ಷದ ವಿಹಾರಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಹನುಮ ವಿಹಾರಿ
ಹನುಮ ವಿಹಾರಿ

ವಾರ್ವಿಕ್‌ಷೈರ್‌ ಪರ ಆಡಲು ವಿಹಾರಿ ಏಪ್ರಿಲ್‌ ಆರಂಭದಲ್ಲಿ ಇಂಗ್ಲೆಂಡ್‌ಗೆ ತೆರಳಿದ್ದರು. ಅವರು ಇಂಗ್ಲೆಂಡ್‌ನಿಂದಲೇ ಜೂನ್‌ 3ರಂದು ಭಾರತ ತಂಡನ್ನು ಸೇರಿಕೊಳ್ಳಲಿದ್ದಾರೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಮತ್ತು ಟೆಸ್ಟ್ ಸರಣಿಯಲ್ಲಿ ಆಡಲು ಭಾರತ ಆ ವೇಳೆ ಇಂಗ್ಲೆಂಡ್‌ಗೆ ತೆರಳಲಿದೆ.

ದಿನನಿತ್ಯ ಕೋವಿಡ್‌ ಪೀಡಿತರು ಪಡುತ್ತಿರುವ ಬವಣೆಯಿಂದ ಮತ್ತು ಚಿಕಿತ್ಸೆಗೆ ಇರುವ ಇತಿಮಿತಿ ಕಂಡು ಹನುಮ ಆಘಾತಗೊಂಡಿದ್ದಾರೆ.

ಇದನ್ನೂ ಓದಿ:

‘ಎರಡನೇ ಅಲೆ ಎಷ್ಟು ಜೋರಾಗಿದೆಯೆಂದರೆ ಸೋಂಕು ತೀವ್ರಗೊಂಡವರಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಸಿಗುವುದೂ ಕಷ್ಟವಾಗುತ್ತಿದೆ. ಇಂಥ ಸ್ಥಿತಿ ಯೋಚಿಸುವುದೂ ಕಷ್ಟ. ನನ್ನ ಟ್ವಿಟರ್‌ನ ಕೆಲವು ಅನುಯಾಯಿಗಳ ತಂಡ ಕಟ್ಟಿ ಸಾಧ್ಯವಾದಷ್ಟು ಮಂದಿಗೆ ನರೆವಾಗಲು ನಿರ್ಧರಿಸಿದೆ’ ಎಂದಿದ್ದಾರೆ ವಿಹಾರಿ. ಅವರಿಗೆ 1,10,000 ಫಾಲೊವರ್‌ಗಳಿದ್ದಾರೆ. ಆಂಧ್ರ ಪ್ರದೇಶದ ವಿಹಾರಿ 11 ಟೆಸ್ಟ್‌ಗಳನ್ನಾಡಿದ್ದು 624 ರನ್‌ ಗಳಿಸಿದ್ದಾರೆ.

‘ನನ್ನ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಸ್ವಯಂಸೇವಕರಾಗಿ ಸಹಾಯ ಮಾಡುವ 100 ಮಂದಿಯಿದ್ದಾರೆ. ಅವರ ಪರಿಶ್ರಮದಿಂದ ನಾನು ಜನರಿಗೆ ನೆರವಾಗಲು ಸಾಧ್ಯವಾವಿದೆ. ನಾನು ಕ್ರಿಕೆಟಿಗ, ಜನರಿಗೆ ಗೊತ್ತಿರುವವನು ನಿಜ, ಆದರೆ ಇಂಥ ಸೇವಾ ಮನೋಭಾವದ ಪಡೆಯಿಂದ ಸಂಕಷ್ಟದಲ್ಲಿರುವವರಿಗೆ ನೆರವು ಮುಟ್ಟಿಸಲು ಸಾಧ್ಯವಾಗುತ್ತದೆ’ ಎಂದಿದ್ದಾರೆ ವಿಹಾರಿ.

‘ನನ್ನ ಪತ್ನಿ, ಸೋದರಿ ಮತ್ತು ಆಂಧ್ರ ತಂಡದಲ್ಲಿ ನನ್ನ ಕೆಲವು ಜೊತೆಗಾರರೂ ಈ ವಾಲಂಟಿಯರ್‌ಗಳ ತಂಡದಲ್ಲಿದ್ದಾರೆ. ಅವರ ಬೆಂಬಲ ನೋಡಿ ಹೃದಯ ತುಂಬಿಬರುತ್ತದೆ’ ಎಂದು ವಿಹಾರಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT