ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಬಾಬರ್ ಆಟಕ್ಕೇಕೆ ಕೊಹ್ಲಿ ಜತೆ ಹೋಲಿಕೆ?

Last Updated 13 ಮೇ 2021, 10:41 IST
ಅಕ್ಷರ ಗಾತ್ರ

ಪಾಕಿಸ್ತಾನದ ಬಾಬರ್ ಆಜಂ ಆಟವನ್ನು ರನ್ ಮಷಿನ್ ಕೊಹ್ಲಿ ಬ್ಯಾಟ್ಸ್‌ಮನ್‌ಷಿಪ್ ಜತೆಗೆ ಹೋಲಿಸಿ ನೋಡಲಾಗುತ್ತಿದೆ. ಇಬ್ಬರ ಕವರ್‌ಡ್ರೈವ್‌ಗಳು ಚಿತ್ತಾಕರ್ಷಕ. ಯಾರದ್ದು ಶ್ರೇಷ್ಠ ಎಂಬ ಸಮೀಕ್ಷೆಯನ್ನೂ ಇತ್ತೀಚೆಗೆ ಐಸಿಸಿ ನಡೆಸಿತ್ತು. ಅದರಲ್ಲಿ ಕೂದಲೆಳೆಯ ಅಂತರದಲ್ಲಿ ಗೆದ್ದ ಬಾಬರ್, ರನ್‌ ಗಳಿಕೆಯಲ್ಲೂ ಕೊಹ್ಲಿ ಪಥದಲ್ಲೇ ಸಾಗುತ್ತಿರುವುದು ಗಮನಾರ್ಹ.

***

ಕ್ರಿಕೆಟ್‌ನಲ್ಲಿ ಕವರ್‌ಡ್ರೈವ್‌ ಘನತೆವೆತ್ತ ಶಾಟ್. ಆಫ್‌ಸ್ಟಂಪ್‌ನ ಆಚೆಗೆ ಪುಟಿಯುವ ಚೆಂಡಿನ ಗತಿ–ಸ್ಥಿತಿ ಅಂದಾಜಿಸಿ, ಅದರತ್ತ ಫ್ರಂಟ್‌ಫುಟ್ (ಮುಂದಡಿ) ಇಟ್ಟು, ಮೊಣಕೈಯನ್ನು ಸಲಿಸಾಗಿ ತಿರುಗಿಸಿ ಕವರ್ಸ್‌ನತ್ತ ಹೊಡೆಯುವ ಶಾಟ್‌ ಇದು. ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್ ತರಹದವರು ಈ ಶಾಟ್‌ ಆಡುತ್ತಿದ್ದಾಗ ಕಣ್ಣಿಗೆ ಹಬ್ಬ ಎಂದುಕೊಳ್ಳುತ್ತಿದ್ದೆವು. ಇದು ಕ್ರಿಕೆಟ್ ವೈಯಾಕರಣಿಗಳ ಪ್ರಕಾರ ‘ಏಸ್ಥೆಟಿಕ್ ಶಾಟ್’. ಸಾಂಪ್ರದಾಯಿಕವಾಗಿ ಕ್ರಿಕೆಟ್‌ ಅನ್ನು ಪ್ರೀತಿಸುವ ಮನಸ್ಸುಗಳಷ್ಟೇ ಇಂತಹ ಹೊಡೆತಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಅದರಲ್ಲೇ ತಮ್ಮತನದ ರುಜುವನ್ನೂ ಹಾಕುತ್ತಿರುತ್ತಾರೆ.

ಶ್ರೇಷ್ಠ ಕವರ್‌ಡ್ರೈವ್ ಆಟಗಾರರು ಯಾರು ಯಾರು ಎಂದು ಈಗ ಪ್ರಶ್ನೆ ಹಾಕಿದರೆ, ವಿಶ್ವದ ದಿಗ್ಗಜ ಆಟಗಾರರೂ ವಿರಾಟ್ ಕೊಹ್ಲಿ ಹಾಗೂ ಪಾಕಿಸ್ತಾನದ ಬಾಬರ್ ಆಜಂ ಹೆಸರನ್ನು ಹೇಳುತ್ತಾರೆ. ಇದೇ ವರ್ಷ ಫೆಬ್ರುವರಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ (ಐಸಿಸಿ) ಒಂದು ಸಮೀಕ್ಷೆ ನಡೆಸಿತು. ಕೊಹ್ಲಿ, ಬಾಬರ್, ಇಂಗ್ಲೆಂಡ್‌ನ ಜೋ ರೂಟ್‌, ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಇವರಲ್ಲಿ ಯಾರ ಕವರ್‌ಡ್ರೈವ್ ಅತ್ಯುತ್ತಮ ಎನ್ನುವ ಪ್ರಶ್ನೆಯನ್ನು ಅದು ಕೇಳಿತ್ತು. ಎರಡೂವರೆ ಲಕ್ಷಕ್ಕೂ ಹೆಚ್ಚು ಜನರಿಗೆ ಬಾಬರ್ ಆಜಂ ಕವರ್‌ಡ್ರೈವ್ ಇಷ್ಟವಾಯಿತು. ಅವರು ಕೊಹ್ಲಿ ಅವರಿಗಿಂತ ಬರೀ 0.1% ಹೆಚ್ಚು ವೋಟುಗಳನ್ನು ಪಡೆದು ಸಮೀಕ್ಷೆಯಲ್ಲಿ ವಿಜಯಿ ಎನ್ನಿಸಿಕೊಂಡರು. ಅದೇ ಹೊತ್ತಿಗೆ ಕರಾಚಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮೊದಲ ಟೆಸ್ಟ್‌ನಲ್ಲಿ ಮಣಿಸಿದ ತಂಡದ ನಾಯಕರಾಗಿ ಬಾಬರ್ ಕಣ್ಣು ಕೋರೈಸುತ್ತಿದ್ದರು.

ನಾಲ್ಕು ವರ್ಷಗಳಿಂದ ಬಾಬರ್ ಆಜಂ ಅವರನ್ನು ಕೊಹ್ಲಿ ಆಟದ ಶೈಲಿಯೊಂದಿಗೆ ಹೋಲಿಸಿ ನೋಡಲಾಗುತ್ತಿದೆ. ಭವಿಷ್ಯದ ಕೊಹ್ಲಿ ಆತ ಎಂದು 2017ರಿಂದಲೂ ಬಣ್ಣಿಸುತ್ತಾ ಬಂದವರ ಸಂಖ್ಯೆ ಕಡಿಮೆಯೇನಿಲ್ಲ. ಕಳೆದ ತಿಂಗಳು ಈ ಹೋಲಿಕೆಗೆ ಪುಷ್ಟಿ ಕೊಡುವಂತೆ ಬಾಬರ್ ಐಸಿಸಿ ಏಕದಿನ ಪಂದ್ಯಗಳ ಕ್ರಿಕೆಟ್‌ನಲ್ಲಿ ಮೊದಲ ರ‍್ಯಾಂಕ್‌ನ ಆಟಗಾರ ಎನಿಸಿಕೊಂಡರು. ಅವರು ಹಿಂದಿಕ್ಕಿದ್ದು ಕೊಹ್ಲಿಯನ್ನು. ಪಾಕಿಸ್ತಾನದ ಕ್ರಿಕೆಟ್‌ನಲ್ಲಿ ಇದುವರೆಗೆ ಆ ಸ್ಥಾನಕ್ಕೆ ಏರಿರುವುದು ನಾಲ್ವರು ಆಟಗಾರರು ಮಾತ್ರ. 1983ರಲ್ಲಿ ಜಹೀರ್ ಅಬ್ಬಾಸ್, 1988ರಲ್ಲಿ ಜಾವೆದ್ ಮಿಯಾಂದಾದ್ ಆದಮೇಲೆ 2003ರಲ್ಲಿ ಮೊಹಮ್ಮದ್ ಯೂಸುಫ್ ಆ ಉನ್ನತ ಸ್ಥಾನಕ್ಕೆ ಏರಿದ್ದರು. ಈಗ ಇನ್ನೊಂದು ದೊಡ್ಡ ಅಂತರದ ನಂತರ ಬಾಬರ್ ನಂಬರ್‌ ಒನ್‌ ಪಟ್ಟಕ್ಕೆ ಏರಿದ್ದು ಅಡಿಗೆರೆ ಎಳೆಯಬೇಕಾದ ಸಂಗತಿ.

ಟ್ವೆಂಟಿ20 ಕ್ರಿಕೆಟ್ ಶುರುವಾದ ಮೇಲೆ ಕಾಪಿಬುಕ್ ಹೊಡೆತಗಳೆಲ್ಲ ನಾಪತ್ತೆಯಾಗಿ ಹೊಡಿ–ಬಡಿ ಶೈಲಿಯೇ ಜನಪ್ರಿಯವಾಗುತ್ತದೆ ಎಂದು ಭಾವಿಸಿದ್ದವರ ಸಂಖ್ಯೆ ದೊಡ್ಡದು. ಆದರೆ, ಕೊಹ್ಲಿ, ಜೋ ರೂಟ್, ವಿಲಿಯಮ್ಸನ್, ಬಾಬರ್ ಆಜಂ, ಕೆ.ಎಲ್. ರಾಹುಲ್ ತರಹದವರು ಅದಕ್ಕೆ ಅವಕಾಶ ಕೊಡುತ್ತಿಲ್ಲ. ಕ್ರಿಕೆಟ್‌ನಲ್ಲಿ ಸಾಂಪ್ರದಾಯಿಕ ಹೊಡೆತಗಳ ಮೇಲೆ ಹಿಡಿತ ಸಾಧಿಸುವವರೇ ಬೇರುಗಳನ್ನು ಗಟ್ಟಿಮಾಡಿಕೊಳ್ಳಬಲ್ಲರು ಎನ್ನುವುದನ್ನು ಇವರೆಲ್ಲ ಸಾರುತ್ತಿದ್ದಾರೆ.

19 ವರ್ಷದೊಳಗಿನವರ ತಂಡದಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸುವಾಗ ಬಾಬರ್ ಆಜಂ ಅವರಿಗೆ ಎಜಾಜ್ ಅಹಮದ್ ಒಂದು ಪಾಠ ಹೇಳಿಕೊಟ್ಟಿದ್ದರಂತೆ. ‘ಕ್ರೀಸ್‌ನಲ್ಲಿ ಭದ್ರವಾಗಿ ನಿಂತುಕೋ. ಚೆಂಡನ್ನು ಧ್ಯಾನಸ್ಥನಾಗಿ ಗಮನಿಸು. ಚೆಂಡು ನಿನ್ನ ಬ್ಯಾಟ್‌ ಬಳಿಗೆ ಬರಬೇಕು ಅಷ್ಟೇ ಫುಟ್‌ವರ್ಕ್ ಸಾಕು. ಅದನ್ನು ಹಟವಾದಿಯಂತೆ ಮಾಡಿದರೆ ನೀನು ಬೆಳೆಯುತ್ತೀಯೆ’ ಎನ್ನುವುದೇ ಆ ಪಾಠ. ಬಾಬರ್ ಪದೇ ಪದೇ ಆ ಕಿವಿಮಾತನ್ನು ನೆನಪಿಸಿಕೊಳ್ಳುತ್ತಿರುತ್ತಾರೆ. ಮೊದಲೇ ಉಲ್ಲೇಖಿಸಿದಂತೆ ಕೊಹ್ಲಿ ಹಾಗೂ ಬಾಬರ್ ಕವರ್‌ಡ್ರೈವ್‌ಗಳಲ್ಲಿ ಇರುವ ಸಣ್ಣ ವ್ಯತ್ಯಾಸವನ್ನೂ ಆ ಪಾಠವೇ ಅರುಹುತ್ತದೆ. ವಿರಾಟ್‌ ಚೆಂಡು ಬೀಳುವ ಜಾಗಕ್ಕೆ ತಮ್ಮ ಪಾದವನ್ನು ಸಲಿಸಾಗಿ ಎಳೆದುಕೊಂಡು ಸಾಗುತ್ತಾರೆ. ಆದರೆ, ಬಾಬರ್ ದೇಹದ ಸಮತೋಲನ ಕಾಯ್ದುಕೊಂಡು ಚೆಂಡು ತುಸು ಪುಟಿಯುವವರೆಗೂ ನಿಗಾ ಮಾಡುತ್ತಾರೆ. ಉಳಿದಂತೆ ಇಬ್ಬರ ಕವರ್‌ಡ್ರೈವ್‌ ತಂತ್ರದಲ್ಲಿ ಸಾಮ್ಯತೆ ಇದೆ.

ಕೊಹ್ಲಿ ಹಾಗೂ ಬಾಬರ್ ಆಟವನ್ನು ಹೋಲಿಸಿ ನೋಡಲು ಅಂಕಿಅಂಶವೂ ಕಾರಣ. ಈ ಇಬ್ಬರೂ ಆಟಗಾರರ ಎಲ್ಲಾ ಮಾದರಿಯ ಕ್ರಿಕೆಟ್‌ನ ರನ್‌ ಗಳಿಕೆಯ ಕಡೆಗೆ ನೋಡೋಣ. 31 ಟೆಸ್ಟ್‌ಗಳಲ್ಲಿ 2,167 ರನ್‌ಗಳನ್ನು 44.42ರ ಸರಾಸರಿಯಲ್ಲಿ ಬಾಬರ್ ಗಳಿಸಿದ್ದಾರೆ. ಅಷ್ಟೇ ಪಂದ್ಯಗಳಲ್ಲಿ ಕೊಹ್ಲಿ 43.08ರ ಸರಾಸರಿಯಲ್ಲಿ 2,111 ರನ್‌ಗಳನ್ನು ಗಳಿಸಿದ್ದರು. 80 ಏಕದಿನ ಪಂದ್ಯಗಳಲ್ಲಿ 56.83ರ ಸರಾರಿಯಲ್ಲಿ ಬಾಬರ್ 3,808 ರನ್‌ಗಳನ್ನು ಕಲೆಹಾಕಿದರೆ, ಕೊಹ್ಲಿ ತಮ್ಮ ವೃತ್ತಿಬದುಕಿನ ಮೊದಲ 80 ಪಂದ್ಯಗಳಲ್ಲಿ 3,079 ರನ್‌ಗಳನ್ನು 45.95ರ ಸರಾಸರಿಯಲ್ಲಿ ಗಳಿಸಿದ್ದರು. 50 ಟ್ವೆಂಟಿ20 ಪಂದ್ಯಗಳಲ್ಲಿ ಬಾಬರ್ 1,916 ರನ್‌ಗಳನ್ನು ಸೇರಿಸಿದರು. ವಿರಾಟ್ 1,830 ರನ್‌ಗಳನ್ನು ಅಷ್ಟೇ ಪಂದ್ಯಗಳಿಂದ ಹೆಕ್ಕಿದ್ದರು. ಎಲ್ಲ ಮಾದರಿಗಳಲ್ಲಿ ಕೊಹ್ಲಿ ಅವರಿಗಿಂತ ಬಾಬರ್ ತುಸುವೇ ಮುಂದೆ ಇರುವುದನ್ನು ಈ ಅಂಕಿಅಂಶ ಪುಷ್ಟೀಕರಿಸುತ್ತದೆ. ಆದರೆ, ವಿದೇಶದ ಮೈದಾನಗಳಲ್ಲಿ ಹೆಚ್ಚು ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ ಆಟದ ವೈಖರಿಗೆ ಹೋಲಿಸಿದರೆ ಬಾಬರ್ ಸಾಗಬೇಕಾದ ಹಾದಿ ಇನ್ನೂ ದೂರವಿದೆ. ಬಾಬರ್ ಇದುವರೆಗೆ ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನ್‌ನಲ್ಲಿ ಗಳಿಸಿರುವ ಶತಕ ಒಂದೇ ಹೊರದೇಶದಲ್ಲಿ ದಾಖಲಿಸಿದ್ದು.

ಬಿಳಿ ಚೆಂಡಿನಲ್ಲಿ ಆಡುವುದರಲ್ಲೇ ಹೆಚ್ಚು ಪಳಗಿದ್ದ ಬಾಬರ್ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕಿನ ಮೊದಲ ಎರಡು ವರ್ಷ ಟೆಸ್ಟ್‌ ಕ್ರಿಕೆಟ್‌ಗೆ ಕುದುರಿಕೊಳ್ಳಲು ಪರದಾಡಿದ್ದರು. 17ನೇ ಟೆಸ್ಟ್‌ನಲ್ಲಿ ಅವರು ಮೊದಲ ಶತಕ ದಾಖಲಿಸಲು ಸಾಧ್ಯವಾದದ್ದು. ಕಳೆದ ತಿಂಗಳು ದಕ್ಷಿಣ ಆಫ್ರಿಕಾ ಎದುರು ನಡೆದ ಮೊದಲ ಟೆಸ್ಟ್‌ನ ಪ್ರಥಮ ಇನಿಂಗ್ಸ್‌ನಲ್ಲಿ ಅವರು ಸೊನ್ನೆಗೆ ಔಟಾಗಿದ್ದರು. ದ್ವಿತೀಯ ಇನಿಂಗ್ಸ್‌ನಲ್ಲಿ 30 ರನ್‌ ಹೊಡೆದ ಮೇಲೆ ಲಯಕ್ಕೆ ಮರಳಿದ್ದು.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌)ನಲ್ಲಿ ಆಡದೇ ಇರುವುದೂ ಬಾಬರ್‌ಗೆ ವರದಾನವಾಗಿದೆ ಎನ್ನುವ ಅಭಿಪ್ರಾಯವಿದೆ. ಅವರ ಆಟದ ತಂತ್ರವನ್ನು ಅಂದಾಜು ಮಾಡಿ, ಕಟ್ಟಿಹಾಕುವಷ್ಟು ಕಾಲಾವಕಾಶ ಎದುರಾಳಿಗಳಿಗೆ ಸಿಗದೇ ಇರಲು ಅದೇ ಕಾರಣವೆನ್ನುವುದು ವ್ಯಾಖ್ಯಾನ. ಮೂರು ವರ್ಷಗಳ ಹಿಂದೆ ಪಾಕಿಸ್ತಾನದ ಅನುಭವಿ ಬ್ಯಾಟ್ಸ್‌ಮನ್‌ಗಳಾದ ಮಿಸ್ಬಾ ಉಲ್ ಹಕ್ ಹಾಗೂ ಯೂನಿಸ್‌ ಖಾನ್ ಕ್ರಿಕೆಟ್ ಆಡುವುದನ್ನು ನಿಲ್ಲಿಸಿದ ಮೇಲೆ ಬಾಬರ್ ಜವಾಬ್ದಾರಿ ಹೆಚ್ಚಾಯಿತು. ನಾಯಕತ್ವದ ನೊಗವನ್ನು ಹೆಗಲ ಮೇಲೆ ಇರಿಸಿದರೂ ಅವರು ಹೈರಾಣಾಗಲಿಲ್ಲ. ಅದು ಅವರ ಗಟ್ಟಿ ಮನಸ್ಸಿಗೆ ಕನ್ನಡಿ ಹಿಡಿಯುತ್ತದೆ. ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚುರಿಯನ್‌ನಲ್ಲಿ ನಡೆದ ಮೂರನೇ ಟ್ವೆಂಟಿ20 ಪಂದ್ಯದಲ್ಲಿ 15 ಬೌಂಡರಿ ಹಾಗೂ 6 ಸಿಕ್ಸರ್‌ಗಳಿದ್ದ 122 ರನ್‌ಗಳನ್ನು ಬರೀ 59 ಎಸೆತಗಳಲ್ಲಿ ಬಾಬರ್ ಗಳಿಸಿದರು. ಪಾಕಿಸ್ತಾನದ ಪರವಾಗಿ ಬ್ಯಾಟ್ಸ್‌ಮನ್ ಒಬ್ಬ ಟ್ವೆಂಟಿ20 ಕ್ರಿಕೆಟ್‌ನಲ್ಲಿ ಗಳಿಸಿದ ಅತಿ ದೊಡ್ಡ ಮೊತ್ತವಿದು. ಇನ್ನೂ ಎರಡು ಓವರ್‌ಗಳು ಬಾಕಿ ಇರುವಾಗ 205/1 ಎಂಬ ಸ್ಕೋರ್‌ ಅನ್ನು ದಕ್ಷಿಣ ಆಫ್ರಿಕಾ ಎದುರು ಮೂಡಿಸುವುದು ತಮಾಷೆಯಲ್ಲ.

ಚುಟುಕು ಕ್ರಿಕೆಟ್‌ನಲ್ಲಿ ನಂಬರ್ ಒನ್ ಆಟಗಾರನ ಪಟ್ಟಕ್ಕೇರಿದ ಮೇಲೆ ಬಾಬರ್ ಏಕದಿನ ಪಂದ್ಯಗಳಲ್ಲಿ ಆ ಸ್ಥಾನ ಮುಟ್ಟಿದ್ದಾಗಿದೆ. ‘ಟೆಸ್ಟ್‌ ಪಂದ್ಯವನ್ನು ಶ್ರೇಷ್ಠ ಮಾದರಿ ಎನ್ನುತ್ತಾರೆ. ಅದರಲ್ಲಿ ನಂಬರ್ ಒನ್ ಆಗುವುದು ನನ್ನ ಗುರಿ’ ಎನ್ನುವ ಮೂಲಕ ಬಾಬರ್ ತಮ್ಮೊಳಗಿನ ಆಟದ ಹಸಿವನ್ನು ವ್ಯಕ್ತಪಡಿಸಿದ್ದಾರೆ. ಅವರ ಕವರ್‌ಡ್ರೈವ್ ನೋಡುಗರ ಕಣ್ಣಿಗೆ ಹಬ್ಬ ಎನ್ನುವುದಂತೂ ಉತ್ಪ್ರೇಕ್ಷೆಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT