ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲ್‌ರೌಂಡರ್‌ ಬೆಳವಣಿಗೆಗೆ ’ಇಂಪ್ಯಾಕ್ಟ್‌ ಪ್ಲೇಯರ್‘ ಅಡ್ಡಿ: ರೋಹಿತ್ ಶರ್ಮಾ

ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅಭಿಪ್ರಾಯ
Published 18 ಏಪ್ರಿಲ್ 2024, 16:18 IST
Last Updated 18 ಏಪ್ರಿಲ್ 2024, 16:18 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿರುವ ಇಂಪ್ಯಾಕ್ಟ್ ಪ್ಲೆಯರ್ ನಿಯಮವು ಆಲ್‌ರೌಂಡರ್‌ಗಳ ಬೆಳವಣಿಗೆಗೆ ಅಡ್ಡಿಯಾಗಲಿದೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಹೋದ ವರ್ಷದ ಐಪಿಎಲ್ ಆವೃತ್ತಿಯಲ್ಲಿ ಈ ನಿಯಮವನ್ನು ಜಾರಿಗೆ ತರಲಾಗಿತ್ತು. ತಂಡಗಳು ಪಂದ್ಯದಲ್ಲಿ ಬದಲೀ ಆಟಗಾರರನ್ನು (ಬ್ಯಾಟರ್ ಅಥವಾ ಬೌಲರ್) ತಮ್ಮ ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಳ್ಳುವ  ಒಂದು ಅವಕಾಶ ಇರುತ್ತದೆ. 

‘ಈ ನಿಯಮವು ಆಲ್‌ರೌಂಡರ್‌ಗಳ ಬೆಳವಣಿಗೆಗೆ ಮಾರಕಾಗಲಿವೆ. ವಾಷಿಂಗ್ಟನ್ ಸುಂದರ್, ಶಿವಂ ದುಬೆ ಅವರಂತಹ ಆಲ್‌ರೌಂಡರ್‌ಗಳು ಬ್ಯಾಟಿಂಗ್‌ಗೆ ಮಾತ್ರ ಸೀಮಿತವಾಗುತ್ತಾರೆ. ಅವರು ಬೌಲಿಂಗ್ ಮಾಡಲು ಅವಕಾಶ ಸಿಗುತ್ತಿಲ್ಲ. ನಮಗೆ (ಭಾರತ ತಂಡ) ಪಾಲಿಗೆ ಇದು ನಿಜಕ್ಕೂ ಒಳ್ಳೆಯದಲ್ಲ’ ಎಂದು ರೋಹಿತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಅವರು ಮೈಕೆಲ್ ವಾನ್ ಮತ್ತು ಆ್ಯಡಂ ಗಿಲ್‌ಕ್ರಿಸ್ಟ್ ಅವರೊಂದಿಗೆ ಯೂಟ್ಯೂಬ್ ವಾಹಿನಿಯ ‘ಕ್ಲಬ್ ಪ್ರೈರೀ ಫೈರ್‌’ ಕಾರ್ಯಕ್ರಮದಲ್ಲಿ ಮಾತನಾಡಿದರು. 

‘ಕ್ರಿಕೆಟ್‌ ಆಟವು ತಂಡದಲ್ಲಿ 11 ಆಟಗಾರರೊಂದಿಗೆ ಆಡುವುದಾಗಿದೆ. 12 ಆಟಗಾರರಿಂದ ಅಲ್ಲ. ಇಂಪ್ಯಾಕ್ಟ್‌ ಪ್ಲೇಯರ್ ನಿಯಮದ ಬಗ್ಗೆ ನನಗೇನೂ ಇಷ್ಟವಿಲ್ಲ. ಅಲ್ಪಸಲ್ಪ ಮನರಂಜನೆ ಹೆಚ್ಚಿಸಲು ಆಟದ ಸತ್ವವನ್ನು ಕಳೆದುಕೊಳ್ಳಲಾಗುತ್ತಿದೆ’ ಎಂದರು.  

‘12 ಆಟಗಾರರು ಇರುವುದರಿಂದ ಮನರಂಜನೆ ಹೆಚ್ಚುತ್ತದೆ. ಪಂದ್ಯದ ಸ್ಥಿತಿಯನ್ನು ಅವಲೋಕಿಸಿ ಅಗತ್ಯಕ್ಕೆ ತಕ್ಕಂತೆ ಆಟಗಾರನನ್ನು ಬದಲಿಸಬಹುದು. ಪಿಚ್ ಸ್ಥಿತಿಯ ಮೇಲೂ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಬಳಸಿಕೊಳ್ಳಬಹುದು. ತಂಡದ ಅಗ್ರಕ್ರಮಾಂಕದ ಬ್ಯಾಟರ್‌ಗಳು ಚೆನ್ನಾಗಿ ಆಡುತ್ತಿರುವಾಗ 6 ಅಥವಾ 7 ಬೌಲರ್‌ಗಳಿಗೆ ಸ್ಥಾನ ನೀಡಬಹುದು. ಆಗ ಹೆಚ್ಚುವರಿ ಬ್ಯಾಟರ್ ಅಗತ್ಯವೇ ಇರುವುದಿಲ್ಲ’ ಎಂದು ಹೇಳಿದರು.   

‘ಈ ಹಿಂದೆ ಮೊದಲು ಬ್ಯಾಟ್ ಮಾಡಿದ ತಂಡದ ಬ್ಯಾಟರ್‌ ಒಬ್ಬರು ಶತಕ ಬಾರಿಸಿದರೆ ಆ ತಂಡದ ಗೆಲುವಿನ ಸಾಧ್ಯತೆ ಶೇ 75ರಷ್ಟಾಗಿರುತ್ತಿತ್ತು. ಆದರೆ ಇಂಪ್ಯಾಕ್ಟ್‌ ಪ್ಲೇಯರ್ ನಿಯಮ ಬಂದ ಮೇಲೆ  ಅಂತಹ ಸಾಧ್ಯತೆಯು ಈಗ ಶೇ 50ಕ್ಕಿಂತ ಕಡಿಮೆಯಾಗಿದೆ’ ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ಗಿಲ್‌ಕ್ರಿಸ್ಟ್‌ ಹೇಳಿದರು. 

‘ಇಂಪ್ಯಾಕ್ಟ್ ಪ್ಲೇಯರ್ ನಿಯಮ ಬರುವ ಮುನ್ನ ಕೇವಲ ಎರಡು ಬಾರಿ ಮಾತ್ರ 250 ರನ್‌ಗಳಿಗಿಂತ ಹೆಚ್ಚಿನ ಮೊತ್ತ ದಾಖಲಾಗಿದ್ದವು. ಆದರೆ ಈ ಬಾರಿ ನಾಲ್ಕು ಸಲ 250ಕ್ಕಿಂತ ಹೆಚ್ಚಿನ ಮೊತ್ತ ದಾಖಲಾಗಿವೆ.  

‘ಸುಳ್ಳು ಸುದ್ದಿ’ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾರತ ತಂಡದ ಆಯ್ಕೆಗಾಗಿ ತಾವು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಆಗರಕರ್ ಮತ್ತು ಮುಖ್ಯ ಕೋಚ್‌ ರಾಹುಲ್ ದ್ರಾವಿಡ್ ಅವರನ್ನು ಭೇಟಿಯಾಗಿಲ್ಲ. ಈ ಕುರಿತು ಹರಡಿರುವ ಸುದ್ದಿಗಳು ಸುಳ್ಳು ಎಂದು ರೋಹಿತ್ ಶರ್ಮಾ ಹೇಳಿದರು.  ‘ನಾನು ಯಾರನ್ನೂ ಭೇಟಿಯಾಗಿಲ್ಲ. ಅಜಿತ್ ದುಬೈನಲ್ಲಿ  ಗಾಲ್ಫ್ ಆಡುತ್ತಿರಬಹುದು. ರಾಹುಲ್ ಭಾಯ್ (ದ್ರಾವಿಡ್) ತಮ್ಮ ಮಗ ಆಡುವುದನ್ರು  ವೀಕ್ಷಿಸಲು ಮುಂಬೈನಲ್ಲಿದ್ದಾರೆ. ಅವರ ಮಗ ಬ್ರೆಬೊರ್ನ್ ಕ್ರೀಡಾಂಗಣದ ಕೆಂಪು ಮಣ್ಣಿನಂಕಣದಲ್ಲಿ ಆಡುತ್ತಿದ್ದಾರೆ’ ಎಂದು ರೋಹಿತ್ ಸ್ಪಷ್ಟಪಡಿಸಿದರು.  ವಿಕೆಟ್‌ಕೀಪರ್ ಮಹೇಂದ್ರಸಿಂಗ್ ಧೋನಿ ಮತ್ತು ದಿನೇಶ್ ಕಾರ್ತಿಕ್ ಅವರು ವಿಶ್ಕಕಪ್ ಟೂರ್ನಿಯಲ್ಲಿ ಆಡಲು ತಂಡಕ್ಕೆ ಮರಳುವರೇ ಎಂಬ ಪ್ರಶ್ನೆಗೆ ರೋಹಿತ್ ‘ಇಬ್ಬರ ಆಟವನ್ನೂ ಐಪಿಎಲ್‌ನಲ್ಲಿ ನೋಡಿದ್ದೇನೆ. ಬಹಳ ಪರಿಣಾಮಕಾರಿಯಾಗಿದ್ದಾರೆ. ಧೋನಿ ಕೊನೆಯ ನಾಲ್ಕು ಎಸೆತಗಳಲ್ಲಿ ಮೂರುಸಿಕ್ಸರ್ ಹೊಡೆದು ತಂಡಕ್ಕೆ ಕಾಣಿಕೆ ನೀಡಿರುವುದು ಸಾಮಾನ್ಯವಲ್ಲ. ಆದರೆ ವಿಶ್ವಕಪ್ ಟೂರ್ನಿಯಲ್ಲಿ ಧೋನಿ ಅಮೆರಿಕದಲ್ಲಿ ಇರುತ್ತಾರೆ. ಆದರೆ ಕ್ರಿಕೆಟ್‌ಗಾಗಿ ಅಲ್ಲ. ಅವರು ಅಲ್ಲಿ ಗಾಲ್ಫ್ ಆಡಲಿದ್ದಾರೆ. ಡಿಕೆ (ದಿನೇಶ್) ಅವರನ್ನು ಮನವೊಲಿಸುವುದು ಸ್ವಲ್ಪ ಸುಲಭ ಎನಿಸುತ್ತದೆ’ ಎಂದು ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT