ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಾನತು ಹಿಂಪಡೆಯದಿದ್ದಲ್ಲಿ ಸ್ವಂತ ವೆಚ್ಚದಲ್ಲಿ ನಿರ್ವಹಣೆ:ಭಾರತ ಕುಸ್ತಿ ಫೆಡರೇಷನ್

ಡಬ್ಲ್ಯುಎಫ್‌ಐ ಸಭೆಯಲ್ಲಿ ನಿರ್ಧಾರ
Published 29 ಮಾರ್ಚ್ 2024, 15:56 IST
Last Updated 29 ಮಾರ್ಚ್ 2024, 15:56 IST
ಅಕ್ಷರ ಗಾತ್ರ

ನವದೆಹಲಿ: ತನ್ನ ಮೇಲಿನ ಅಮಾನತನ್ನು ಹಿಂಪಡೆಯುವಂತೆ ಸಲ್ಲಿಸುವ ಕೋರಿಕೆಯನ್ನು ಕ್ರೀಡಾ ಸಚಿವಾಲಯ ಪರಿಗಣಿಸದಿದ್ದಲ್ಲಿ, ‘ಸರ್ಕಾರಕ್ಕೆ ವೆಚ್ಚ ಬರದ ರೀತಿ’ ಕಾರ್ಯನಿರ್ವಹಿಸಲು ಭಾರತ ಕುಸ್ತಿ ಫೆಡರೇಷನ್ ಶುಕ್ರವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಿದೆ.

ವಿಶ್ವ ಕುಸ್ತಿ ಸಂಸ್ಥೆಯಾದ ಯುನೈಟೆಡ್‌ ವರ್ಲ್ಡ್‌ ರೆಸ್ಲಿಂಗ್ ಅಮಾನತು ಹಿಂಪಡೆದ ಮೇಲೆ ಮತ್ತು ಭಾರತ ಒಲಿಂಪಿಕ್‌ ಸಂಸ್ಥೆಯು ಅಡ್‌ಹಾಕ್‌ ಸಮಿತಿ ವಿಸರ್ಜಿಸಿದ ನಂತರ ಇದೇ ಮೊದಲ ಬಾರಿ ಫೆಡರೇಷನ್‌ ನೊಯ್ಡಾದಲ್ಲಿ ಇಂಥ ಸಭೆ ನಡೆಸಿದೆ. ಫೆಡರೇಷನ್‌ ಮೇಲೆ ವಿಶ್ವ ಕುಸ್ತಿ ಸಂಸ್ಥೆ ಅಮಾನತು ಇದ್ದಾಗ ದೇಶದಲ್ಲಿ ಕುಸ್ತಿ ಚಟುವಟಿಕೆಗಳನ್ನು ಅಡ್‌ಹಾಕ್‌ ಸಮಿತಿ ನಡೆಸುತಿತ್ತು.

ಈ ಎರಡು ಬೆಳವಣಿಗೆಗಳ ನಂತರ ಕುಸ್ತಿ ಫೆಡರೇಷನ್‌ ಮರಳಿ ಆಡಳಿತದ ವಹಿಸಿಕೊಂಡರೂ, ಸರ್ಕಾರ ಮಾತ್ರ ಅಮಾನತನ್ನು ಹಿಂಪಡೆದಿಲ್ಲ.

ಫೆಡರೇಷನ್ ತನ್ನ ನಿಯಮಗಳನ್ನು ಮುರಿದಿದೆ ಎಂಬ ಕಾರಣ ನೀಡಿ, ಅಧಿಕಾರ ವಹಿಸಿದ ಮೂರೇ ದಿನಗಳಲ್ಲಿ ಸಚಿವಾಲಯವು ಅದರ ಮೇಲೆ ಅಮಾನತು ಹೇರಿತ್ತು. ವಿಶೇಷ ಸಾಮಾನ್ಯ ಸಭೆಯಲ್ಲಿ 25 ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಮಹಾಪ್ರಧಾನ ಕಾರ್ಯದರ್ಶಿ ಆಗಿರುವ ವಿರೋಧಿ ಬಣದ ಪ್ರೇಮ್‌ ಚಂದ್‌ ಲೋಚಬ್ ಅವರು ಗೈರುಹಾಜರಾಗಿದ್ದರು.

‘ಅಮಾನತು ಹೇರಿಕೆ ಹಿಂಪಡೆಯುವಂತೆ ಸರ್ಕಾರವನ್ನು ವಿನಂತಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಯುಡಬ್ಲ್ಯುಡಬ್ಲ್ಯು ಈಗಾಗಲೇ ಅಮಾನತು ಹಿಂಪಡೆದಿದೆ. ಅಡ್‌ಹಾಕ್ ಸಮಿತಿ ವಿಸರ್ಜನೆಯಾಗಿದೆ. ಅಮಾನತು ಮುಂದುವರಿಸುವುದರಲ್ಲಿ ಯಾವುದೇ ಅರ್ಥವಿಲ್ಲ’ ಎಂದು ಫೆಡರೇಷನ್‌ನ ಮೂಲವೊಂದು ಪಿಟಿಐಗೆ ತಿಳಿಸಿದೆ.

‘ಸಚಿವಾಲಯವು ಈ ಮನವಿಯನ್ನು ಪರಿಗಣಿಸದಿದ್ದಲ್ಲಿ ಮತ್ತು ಹಣಕಾಸು ನೆರವು ಒದಗಿಸದಿದ್ದಲ್ಲಿ ಸರ್ಕಾರಕ್ಕೆ ವೆಚ್ಚವಾಗದ ರೀತಿ ಕಾರ್ಯನಿರ್ವಹಿಸಲು ನಿರ್ಧರಿಸಲಾಗಿದೆ’ ಎಂದು ಮೂಲ ತಿಳಿಸಿದೆ.

ಪೈಲ್ವಾನರ ತರಬೇತಿ, ಸ್ಪರ್ಧೆಗಳಿಗೆ ಮತ್ತು ಅನುಭವ ಉದ್ದೇಶದಿಂದ ವಿದೇಶ ಪ್ರವಾಸಗಳಿಗೆ ಕೇಂದ್ರ ನೆರವು ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT