ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೂರು | ಸಿಡಿಯಮ್ಮ ಜಾತ್ರೆ ನಾಳೆ; ಸಂಭ್ರಮದ ಸಿದ್ಧತೆ

Published 9 ಮೇ 2024, 7:31 IST
Last Updated 9 ಮೇ 2024, 7:31 IST
ಅಕ್ಷರ ಗಾತ್ರ

ಹುಣಸೂರು: ಸರ್ವರನ್ನು ಒಗ್ಗೂಡಿಸುವ ಗ್ರಾಮ ದೇವತೆ ಸಿಡಿಯಮ್ಮ ಜಾತ್ರೆಗೆ ಕಟ್ಟೆಮಳಲವಾಡಿ ಗ್ರಾಮದಲ್ಲಿ ಸಕಲ ಸಿದ್ದತೆ ನಡೆದಿದೆ.

ಮೇ 3ರಿಂದ ಆರಂಭವಾದ ಸಿಡಿಯಮ್ಮ ಜಾತ್ರೆ ಸಿದ್ದತೆ ಕೆಲಸಗಳು ಮೂರು ದಿನದಿಂದ ನಿರಂತರವಾಗಿ ಜಾತ್ರಾ ಮಾಳ(ಸ್ಥಳ) ದಲ್ಲಿ 16 ಸಮುದಾಯಗಳು ಒಗ್ಗೂಡಿ ಒಂದೊಂದು ಕೆಲಸವನ್ನು ಹಂಚಿಕೊಂಡು ಸಿದ್ದತೆಯಲ್ಲಿ ತೊಡಗಿವೆ.

ಕಟ್ಟೆಮಳಲವಾಡಿ ಗ್ರಾಮದಲ್ಲಿ ಬ್ರಾಹ್ಮಣ, ಉಪ್ಪಾರ, ಬಣಜಿಗ, ಮಡಿವಾಳ, ನಾಮಧಾರಿ ಗೌಡ, ನಾಯಕ, ಆದಿಜಾಂಬವ ಸೇರಿದಂತೆ ಹಲವು ಜಾತಿಗಳಿಂದ ಕೂಡಿದ್ದು, ದಲಿತ ಸಮುದಾಯವೇ ಬಹುಸಂಖೆಯಲ್ಲಿದೆ. ಈ ಎಲ್ಲಾ ಸಮಾಜದವರು ಸ್ನೇಹದಿಂದ ಜಾತ್ರೆಗೆ ಸಿದ್ಧತೆ ಮಾಡುವುದು ವಿಶೇಷ.

ಸಿಡಿಯಮ್ಮ ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ಸಮುದಾಯ ಜಾತ್ರೆ ಕೆಲಸ ಕಾರ್ಯಗಳಲ್ಲಿ ಪ್ರತಿನಿಧಿಸುವ ವಾಡಿಕೆ ಅನಾದಿಕಾಲದಿಂದಲೂ ನಡೆದಿದೆ. ಜಾತ್ರೆ ಆರಂಭದ ದಿನದಿಂದಲೇ ಉಪ್ಪಾರ ಸಮಾಜದವರು ಸಿಡಿಯಮ್ಮನ ತೇರಿನ ಮರ ಗುರುತಿಸಿ ಗ್ರಾಮಕ್ಕೆ ತರುವ ಮೂಲಕ ಚಾಲನೆ ನೀಡುವರು.

ವಿಶ್ವಕರ್ಮ ಸಮಾಜ ರಥ ಸಿದ್ಧತೆಯಲ್ಲಿ ತೊಡಗಿದರೆ, ಮಡಿವಾಳ ಸಮಾಜದವರು ಪಂಜು ಹಿಡಿಯುವುದು ಮತ್ತು ದೇವರ ನಡಿಗೆಗೆ ನೆಲಹಾಸು ಹಾಕುವುದು. ಆದಿಜಾಂಬ ಸಮಾಜದವರು ತಮಟೆ, ಕಹಳೆ ವಾದ್ಯ ನುಡಿಸುವುದು, ನಾಮಧಾರಿ ಗೌಡ ಸಿಡಿಯಮ್ಮ ತಿರುಗುವ ರಾಟೆ ಹಿಡಿಯುವ ಜವಾಬ್ದಾರಿ ಹೊರುತ್ತಾರೆ. ಬ್ರಾಹ್ಮಣ ಸಮಾಜದವರು ದೇವರ ಗುಡಿಯಿಂದ ದೇವರನ್ನು ರಥಕ್ಕೆ ಹೊತ್ತು ತಂದು ಪೂಜಾ ಕೈಂಕರ್ಯದಲ್ಲಿ ತೊಡಗಿದರೆ, ಹಣಕಾಸು ವ್ಯವಹಾರವನ್ನು ಬಣಜಿಗ ಶೆಟ್ಟರು ನಿರ್ವಹಿಸುತ್ತಾರೆ.

ಜಾತ್ರಾ ಕಾರ್ಯಕ್ರಮ: ಮೇ 9ರಂದು ಸಿಡಿಯಮ್ಮ ಜಾತ್ರಾ ಮಾಳದಲ್ಲಿ ತೇರು ಸಿದ್ದಪಡಿಸುವ ಕೆಲಸ ನಡೆಯಲಿದೆ. ಮೇ 10ರಂದು ಸಿಡಿಯಮ್ಮ ಜಾತ್ರೆಗೆ ಸುತ್ತಲಿನ ಕಟ್ಟೆಮಳಲವಾಡಿ ಕೊಪ್ಪಲು, ಅಗ್ರಹಾರ, ಬಿಳಿಗೆರೆ, ಮಾರಗೋಡನಹಳ್ಳಿ, ಮೈಲಂಬೂರು, ಮರೂರು, ಬೆಳ್ತೂರು ಕಲ್ಕುಣಿಕೆ ಗ್ರಾಮಗಳಿದ ಗ್ರಾಮ ದೇವತೆಗಳನ್ನು ಕರೆ ತರಲಾಗುವುದು.

ಲಕ್ಷ್ಮಣತೀರ್ಥ ನದಿಯಿಂದ ಮೆರವಣಿಗೆಯಲ್ಲಿ ಬರುವ ದೇವರನ್ನು ಭಕ್ತರು ವಾದ್ಯದೊಂದಿಗೆ ಸಿಡಿಯಮ್ಮನನ್ನು ಮಾಳಕ್ಕೆ ತರುವರು. ಬಳಿಕ ಗ್ರಾಮದ ಶಕ್ತಿ ದೇವತೆಗಳ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಅರ್ಪಿಸಿದ ಬಳಿ ಸಿಡಿ ತೇರು ಹತ್ತುವುದು ವಾಡಿಕೆ ಎನ್ನುತ್ತಾರೆ ಕೃಷ್ಣಶೆಟ್ಟಿ ಮತ್ತು ಕಿರಣ್ ಕುಮಾರ್.

ಮೇ 14 ರಂದು ವೆಂಕಟರಮಣಸ್ವಾಮಿ ಮತ್ತು ಸಿಡಿಯಮ್ಮ ರಥೋತ್ಸವ ಜರುಗಲಿದ್ದು, ರಥೋತ್ಸವದಲ್ಲಿ ಬ್ರಾಹ್ಮಣ ಸಮಾಜದವರು ಭಾಗಿಯಾಗಲಿದ್ದು, ಇವರಿಗೆ ವಿವಿಧ ಸಮಾಜದವರು ಕೈ ಜೋಡಿಸಲಿದ್ದಾರೆ ಎಂದು ಶಂಕರಯ್ಯ ತಿಳಿಸಿದರು.

ಕಟ್ಟೆಮಳಲವಾಡಿ ಗ್ರಾಮದಲ್ಲಿ ಸುಣ್ಣ ಬಣ್ಣದೊಂದಿಗೆ ಸಿಂಗರಿಸಿಕೊಂಡ ಸಿಡಿಯಮ್ಮ ದೇವಸ್ಥಾನ
ಕಟ್ಟೆಮಳಲವಾಡಿ ಗ್ರಾಮದಲ್ಲಿ ಸುಣ್ಣ ಬಣ್ಣದೊಂದಿಗೆ ಸಿಂಗರಿಸಿಕೊಂಡ ಸಿಡಿಯಮ್ಮ ದೇವಸ್ಥಾನ
‘ಸರ್ವಜನಾಂಗದ ಜಾತ್ರೆ’
‘ಬಹುಸಂಖೆಯಲ್ಲಿರುವ ದಲಿತ ಸಮಾಜದೊಂದಿಗೆ ಗ್ರಾಮದ 16 ವಿವಿಧ ಜನಾಂಗ ಕೈ ಜೋಡಿಸಿ ಜಾತ್ಯಾತೀತ ಮನಸ್ಸಿನಿಂದ ಸಿಡಿಯಮ್ಮ ಜಾತ್ರೆ ನೆರವೇರಿಸಲಿದ್ದಾರೆ’ ಎಂದು ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ ಹೇಳಿದರು. ‘ಶತಮಾನದಿಂದ ಜಾತ್ಯಾತೀತ ತತ್ವ ಸಿದ್ದಾಂತಕ್ಕೆ ಜಾತ್ರೆ ಮಾದರಿಯಾಗಿದೆ. ಎಲ್ಲರೂ ಒಂದೊಂದು ಕೆಲಸಗಳನ್ನು ನಿಭಾಯಿಸುತ್ತಾ ಸಂಭ್ರಮದಿಂದ ಜಾತ್ರೆ ಮಾಡಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT