ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆನ್‌ಡ್ರೈವ್‌ ಕೊಟ್ಟರೆ ಕ್ರಮಕೈಗೊಳ್ತಿರಾ? ಸಿಎಂಗೆ ಕುಮಾರಸ್ವಾಮಿ ಪ್ರಶ್ನೆ

ಸರ್ಕಾರದಲ್ಲಿ ಭ್ರಷ್ಟಾಚಾರ: ತಾಕತ್ತಿದೆಯಾ ಎಂದು ಸಿಎಂಗೆ ಕುಮಾರಸ್ವಾಮಿ ಪ್ರಶ್ನೆ
Published 16 ಮೇ 2024, 14:39 IST
Last Updated 16 ಮೇ 2024, 14:39 IST
ಅಕ್ಷರ ಗಾತ್ರ

ಮೈಸೂರು: ‘ಸರ್ಕಾರದ ಭ್ರಷ್ಟಾಚಾರಗಳ ಬಗ್ಗೆ ನನ್ನಲ್ಲಿರುವ ಪೆನ್‌ಡ್ರೈವ್‌ ನೀಡಲು ಸಿದ್ಧ. ಅದನ್ನು ಆಧರಿಸಿ ಕ್ರಮಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಕತ್ತು ಇದೆಯೇ?’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.

ಗುರುವಾರ ಇಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಅಧಿಕಾರಿಗಳು ವರ್ಗಾವಣೆಗೆ ಹಣ ಹೊಂದಿಸಿಕೊಳ್ಳಲು ಪರದಾಡುತ್ತಿರುವುದು, ಅವರಿಗೆ ಹಣಕ್ಕಾಗಿ ಒತ್ತಡ ಹಾಕಿದ್ದು ಯಾರು ಎಂಬುದರ ವಿವರ ನೀಡುತ್ತೇನೆ. ತನಿಖೆ ನಡೆಸುತ್ತಾರೆಯೇ? ನನ್ನನ್ನು ಹಿಟ್ ಅನ್‌ ರನ್‌ ಎನ್ನುತ್ತೀರಿ. ದಾಖಲೆಗಳನ್ನು ಕೊಟ್ಟ ಮೇಲೆ ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕಾದವರು ಯಾರು’ ಎಂದು ಪ್ರಶ್ನಿಸಿದರು.

‘ಸಂಸದ ಪ್ರಜ್ವಲ್‌ ಇಲ್ಲಿ ಇದ್ದಾಗಲೇ ನನ್ನ ಸಂಪರ್ಕದಲ್ಲಿರಲಿಲ್ಲ. ಇನ್ನು ವಿದೇಶಕ್ಕೆ ಹೋದ ಬಳಿಕ ನನ್ನ ಸಂಪರ್ಕಕ್ಕೆ ಬರುತ್ತಾರೆಯೇ?’ ಎಂದು ಅವರು ಪ್ರಶ್ನಿದರು.

‘ಪ್ರಜ್ವಲ್ ಪ್ರಕರಣದಿಂದ ಜೆಡಿಎಸ್‌ ಪಕ್ಷಕ್ಕೇ ಯಾವುದೇ ಹಿನ್ನಡೆ ಇಲ್ಲ. ಸರ್ಕಾರ ಸತ್ಯಾಂಶವನ್ನು ಹೊರ ತರಲಿ. ಆದರೆ, ಅವರಿಗೆ ಇದು ಬೇಕಾಗಿಲ್ಲ. ಜೆಡಿಎಸ್‌ ವರ್ಚಸ್ಸು ಹಾಳು ಮಾಡುವುದಷ್ಟೇ ಅವರಿಗೆ ಬೇಕಾಗಿರುವುದು’ ಎಂದು ದೂರಿದರು.

‘ಬಿಜೆಪಿ ಮುಖಂಡ ದೇವೇರಾಜೇಗೌಡರನ್ನು ಅತ್ಯಾಚಾರದ ಸುಳ್ಳು ಆರೋಪದ ಮೇಲೆ ಬಂಧಿಸಲಾಗಿದೆ. ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ತಿಂಗಳಾಗಿದೆ. ಅದಕ್ಕೆ 3  ದಿನ ಮುಂಚೆಯೇ ಅವರೂ ಹನಿಟ್ರ್ಯಾಪ್ ಎಂದು ದೂರು ನೀಡಿದ್ದಾರೆ. ಈಗ ಬಂಧಿಸಿರುವುದನ್ನು ನೋಡಿದರೆ ಕಾಂಗ್ರೆಸ್‌ನವರಿಗೆ ದೇವೇರಾಜೇಗೌಡರ ಬಳಿ ಇರುವ ಆಡಿಯೊ ತುಣುಕು ಬೇಕಷ್ಟೇ’ ಎಂದು ವ್ಯಂಗ್ಯವಾಡಿದರು.

‘ದೊಡ್ಡ ತಿಮಿಂಗಿಲ ಯಾರು ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಅವರಿಗೇ ಗೊತ್ತಿದೆ. ಅದು ಅವರ ಪಕ್ಕದಲ್ಲೇ ಇದೆ. ತನಿಖೆಯಾದರೆ ಹತ್ತು ನಿಮಿಷದಲ್ಲಿ ಸಿಗುತ್ತದೆ. ವಿಡಿಯೊ ಬಹಿರಂಗ ಮಾಡಿದ ಮೂಲವ್ಯಕ್ತಿ ಹಿಡಿದರೆ ದೊಡ್ಡ ತಿಮಿಂಗಲ ತಾನಾಗಿಯೇ ಸಿಗುತ್ತದೆ’ ಎಂದರು.

‘ಇಡೀ ಪ್ರಕರಣದಲ್ಲಿ ಪ್ರಾಮಾಣಿಕವಾದ ತನಿಖೆಯು ನಡೆಯುತ್ತಿಲ್ಲ. ಎಸ್‌ಐಟಿ ತನಿಖಾ ವರದಿಗಳು ಗೃಹ ಸಚಿವರಿಗಿಂತ ಮೊದಲು ಮಂಡ್ಯದ ಶಾಸಕರಿಗೆ ಹೋಗುತ್ತಿವೆ. ಗೃಹಸಚಿವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿಲ್ಲ’ ಎಂದು ಅವರು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT