ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ಎರಡನೇ ಹಂತದ ಮತದಾನಕ್ಕೆ ವೇದಿಕೆ ಸಜ್ಜು

ರಾಹುಲ್ ಗಾಂಧಿ, ಹೇಮಾಮಾಲಿನಿ, ತರೂರ್, ರಾಜೀವ್‌ ಚಂದ್ರಶೇಖರ್‌ ಭವಿಷ್ಯ ಇಂದು ನಿರ್ಧಾರ
Published 25 ಏಪ್ರಿಲ್ 2024, 21:45 IST
Last Updated 25 ಏಪ್ರಿಲ್ 2024, 21:45 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಶುಕ್ರವಾರ ನಡೆಯಲಿದ್ದು, ದೇಶದ 88 ಕ್ಷೇತ್ರಗಳ ಜನರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. 1,200ಕ್ಕೂ ಹೆಚ್ಚು ಅಭ್ಯರ್ಥಿಗಳು ಜನಾದೇಶ ಬಯಸಿದ್ದಾರೆ. 

ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್‌ ಶೆಖಾವತ್‌ ಮತ್ತು ರಾಜೀವ್‌ ಚಂದ್ರಶೇಖರ್‌ ಸೇರಿದಂತೆ ಹಲವು ಪ್ರಮುಖರ ಭವಿಷ್ಯ ನಿರ್ಧಾರವಾಗಲಿದೆ.

ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಎರಡನೇ ಹಂತದಲ್ಲಿ 89 ಕ್ಷೇತ್ರಗಳಿಗೆ ಮತದಾನ ನಡೆಯಬೇಕಿತ್ತು. ಆದರೆ ಮಧ್ಯಪ್ರದೇಶದ ಬೇತುಲ್‌ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿಯ ನಿಧನದ ಕಾರಣ ಮತದಾನವನ್ನು ಮುಂದೂಡಲಾಗಿದ್ದು, ಮೂರನೇ ಹಂತದಲ್ಲಿ (ಮೇ 7) ನಡೆಸಲು ನಿರ್ಧರಿಸಲಾಗಿದೆ.

1.67 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 16 ಲಕ್ಷಕ್ಕೂ ಅಧಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಿದೆ.

ಏಳು ಹಂತಗಳ ಚುನಾವಣೆಯ ಮೊದಲ ಹಂತದಲ್ಲಿ ಏಪ್ರಿಲ್‌ 19ರಂದು 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. 

ಕೇರಳದ ಎಲ್ಲ 20 ಸ್ಥಾನಗಳಿಗೆ ಶುಕ್ರವಾರ ಮತದಾನ ನಡೆಯಲಿದೆ.  ಎರಡನೇ ಹಂತದೊಂದಿಗೆ ಕೇರಳ, ರಾಜಸ್ಥಾನ ಮತ್ತು ತ್ರಿಪುರಾ ರಾಜ್ಯಗಳಲ್ಲಿ ಮತದಾನ ಪೂರ್ಣಗೊಳ್ಳಲಿದೆ. ಮೊದಲ ಹಂತದಲ್ಲಿ ತಮಿಳುನಾಡು (39), ಉತ್ತರಾಖಂಡ (5), ಅರುಣಾಚಲ ಪ್ರದೇಶ (2), ಮೇಘಾಲಯ (2), ಅಂಡಮಾನ್‌ ಮತ್ತು ನಿಕೋಬಾರ್ (1), ಮಿಜೋರಾಂ (1), ನಾಗಾಲ್ಯಾಂಡ್ (1), ಪುದುಚೇರಿ (1), ಸಿಕ್ಕಿಂ (1) ಮತ್ತು ಲಕ್ಷದ್ವೀಪದಲ್ಲಿ (1) ಮತದಾನ ಪ್ರಕ್ರಿಯೆ ಪೂರ್ಣಗೊಂಡಿತ್ತು.

ಶುಕ್ರವಾರ ಚುನಾವಣೆ ನಡೆಯಲಿರುವ 88 ಸ್ಥಾನಗಳಲ್ಲಿ ಬಿಜೆಪಿಯು ಕಳೆದ ಬಾರಿ 52ನ್ನು ಗೆದ್ದುಕೊಂಡಿತ್ತು. ಕೇರಳದಲ್ಲಿ ಈ ಬಾರಿ ಗೆಲುವಿನ ಖಾತೆ ತೆರೆಯಲು ಬಿಜೆಪಿ ಭಾರಿ ಕಸರತ್ತು ನಡೆಸಿದೆ.

ಮೊದಲ ಹಂತದ ಬಳಿಕ ನಡೆದ ಚುನಾವಣಾ ಪ್ರಚಾರ ಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಮಂಗಳಸೂತ್ರ ಸೇರಿದಂತೆ ಜನರ ಸಂಪತ್ತನ್ನು ಕಸಿದುಕೊಂಡು, ‘ನುಸುಳುಕೋರ’ರಿಗೆ ಹಂಚುತ್ತದೆ ಎಂದು ಆರೋಪಿಸಿದ್ದರು. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಹೇಳಿಕೆಯನ್ನು ಉಲ್ಲೇಖಿಸಿ ಅವರು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದರು.

ಪ್ರಧಾನಿಗೆ ತಿರುಗೇಟು ನೀಡಿದ್ದ ಕಾಂಗ್ರೆಸ್, ‘ಸೋಲಿನ ಆತಂಕದಿಂದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ಕೋಮು ದ್ವೇಷ ಹರಡುತ್ತಿದ್ದಾರೆ’ ಎಂದು ಟೀಕಿಸಿತ್ತು.

ಎರಡನೇ ಹಂತದ ಪ್ರಮುಖ ಅಭ್ಯರ್ಥಿಗಳು

ರಾಹುಲ್‌ ಗಾಂಧಿ (ಕಾಂಗ್ರೆಸ್)

ಕ್ಷೇತ್ರ: ವಯನಾಡ್‌, ಕೇರಳ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಕಣಕ್ಕಿಳಿದಿರುವುದರಿಂದ ಕೇರಳದ ವಯನಾಡ್‌ ಲೋಕಸಭಾ ಕ್ಷೇತ್ರವು ಈ ಬಾರಿಯೂ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. 2019ರಲ್ಲಿ ರಾಹುಲ್‌ ಅವರು 4,31,770 ಮತಗಳ ಅಂತರದಿಂದ ಸಿಪಿಐ ಅಭ್ಯರ್ಥಿ ಪಿ.ಪಿ.ಸುನೀರ್ ಅವರನ್ನು ಪರಾಭವಗೊಳಿಸಿದ್ದರು. ಈ ಬಾರಿ ರಾಹುಲ್‌ ಅವರಿಗೆ ಪ್ರತಿಸ್ಪರ್ಧಿಯಾಗಿ ಸಿಪಿಐನ ಆನಿ ರಾಜಾ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್‌
ಸ್ಪರ್ಧಿಸುತ್ತಿದ್ದಾರೆ.

ಕೆ.ಸಿ.ವೇಣುಗೋಪಾಲ್ (ಕಾಂಗ್ರೆಸ್)

ಕ್ಷೇತ್ರ: ಆಲಪ್ಪುಳ, ಕೇರಳ

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂಘಟನಾ) ಕೆ.ಸಿ. ವೇಣುಗೋಪಾಲ್ ಅವರು ಕೇರಳದ ಆಲಪ್ಪುಳ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಕಣಕ್ಕಿಳಿದಿದ್ದಾರೆ. ಕಳೆದ ಬಾರಿ ಇಲ್ಲಿಂದ ಗೆದ್ದಿದ್ದ ಎ.ಎಂ. ಆರಿಫ್‌ ಅವರನ್ನೇ ಸಿಪಿಎಂ ಮತ್ತೆ ಅಖಾಡಕ್ಕಿಳಿಸಿದೆ. ಬಿಜೆಪಿಯು ಪಕ್ಷದ ಪ್ರಮುಖ ನಾಯಕಿ ಶೋಭಾ ಸುರೇಂದ್ರನ್‌ ಅವರನ್ನು ಸ್ಪರ್ಧಿಯಾಗಿಸಿದೆ.

ಹೇಮಾಮಾಲಿನಿ (ಬಿಜೆಪಿ)

ಕ್ಷೇತ್ರ: ಮಥುರಾ, ಉತ್ತರ ಪ್ರದೇಶ

ಕನಸಿನ ಕನ್ಯೆ ಎಂದೇ ಪ್ರಖ್ಯಾತರಾಗಿರುವ ಹೇಮಾಮಾಲಿನಿ ಅವರು ಮಥುರಾದಿಂದ ಮತ್ತೆ ಕಣಕ್ಕೆ ಇಳಿದಿದ್ದಾರೆ. ರಾಜ್ಯಸಭಾ ಸದಸ್ಯೆಯಾಗಿದ್ದ ಅವರು 2014ರಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 2014 ಹಾಗೂ 2019ರಲ್ಲಿ ಗೆದ್ದಿದ್ದರು. ಅವರು ಕಾಂಗ್ರೆಸ್‌ನ ಮುಕೇಶ್‌ ಧನ್ಗರ್‌ ವಿರುದ್ಧ ಪೈಪೋಟಿ ನಡೆಸುವರು.

ಅರುಣ್‌ ಗೋವಿಲ್‌ (ಬಿಜೆಪಿ)

ಕ್ಷೇತ್ರ: ಮೀರಠ್, ಉತ್ತರ ಪ್ರದೇಶ

ಬಿಜೆಪಿಯು ಮೀರಠ್‌ ಕ್ಷೇತ್ರದಿಂದ ಕಿರುತೆರೆ ನಟ ಅರುಣ್‌ ಗೋವಿಲ್‌ ಅವರನ್ನು ಕಣಕ್ಕೆ ಇಳಿಸಿದೆ. ಅರುಣ್‌ ಅವರು 1987ರಲ್ಲಿ ದೂರದರ್ಶನದಲ್ಲಿ ಪ್ರಸಾರಗೊಂಡಿದ್ದ ರಮಾನಂದ ಸಾಗರ್‌ ಅವರ ‘ರಾಮಾಯಣ’ ಧಾರಾವಾಹಿಯಲ್ಲಿ ರಾಮನ ಪಾತ್ರದಲ್ಲಿ ನಟಿಸುವ ಮೂಲಕ ಮನೆ ಮಾತಾಗಿದ್ದರು. ಅವರು 2021ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಇಲ್ಲಿ ಬಿಎಸ್‌ಪಿಯ ದೇವವ್ರತ್‌ ಕುಮಾರ್‌ ಮತ್ತು ಎಸ್‌ಪಿಯ ಸುನೀತಾ ವರ್ಮಾ ಕಣದಲ್ಲಿದ್ದಾರೆ.

ಪ್ರಕಾಶ್‌ ಅಂಬೇಡ್ಕರ್‌ (ವಿಬಿಎ)

ಕ್ಷೇತ್ರ: ಅಕೋಲಾ, ಮಹಾರಾಷ್ಟ್ರ

ಮಹಾರಾಷ್ಟ್ರದ ಅಕೋಲಾ ಲೋಕಸಭಾ ಕ್ಷೇತ್ರದಿಂದ ವಂಚಿತ್‌ ಬಹುಜನ ಆಘಾಡಿ ಮುಖ್ಯಸ್ಥ ಹಾಗೂ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್‌ ಅಖಾಡಕ್ಕಿಳಿದಿದ್ದಾರೆ. ಪ್ರಕಾಶ್‌ ಅವರು ಸ್ಪರ್ಧಿಸಿರುವುದರಿಂದ ಕ್ಷೇತ್ರದ ಜಾತ್ಯತೀತ ನಿಲುವಿನ ಮತದಾರರ ಮತಗಳು ಹಂಚಿ ಹೋಗುವ ಸಾಧ್ಯತೆ ಇದೆ ಮತ್ತು ಇದರಿಂದ ಬಿಜೆಪಿ ಅಭ್ಯರ್ಥಿಗೆ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಭೂಪೇಶ್‌ ಬಘೆಲ್ (ಕಾಂಗ್ರೆಸ್)

ಕ್ಷೇತ್ರ: ರಾಜನಂದಗಾವ್, ಛತ್ತೀಸ್‌ಗಢ

ಛತ್ತೀಸಗಢದ ರಾಜನಂದಗಾವ್ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರೆ, ಹಾಲಿ ಸಂಸದ ಸಂತೋಷ್ ಪಾಂಡೆ ಮರುಆಯ್ಕೆ ಬಯಸಿ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಛತ್ತೀಸಗಢದಲ್ಲಿ ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತರುವಲ್ಲಿ ವಿಫಲರಾಗಿರುವ ‘ಕಾಕಾ’ ಭೂಪೇಶ್ ಬಘೆಲ್, ಪ್ರತಿಷ್ಠಿತ ಕ್ಷೇತ್ರದಲ್ಲಿ ಪಕ್ಷಕ್ಕೆ ಜಯ ತಂದುಕೊಡುವರೇ ಎನ್ನುವ ಕುತೂಹಲ ರಾಜಕೀಯ ವಲಯದಲ್ಲಿದೆ.           

ಓಂ ಬಿರ್ಲಾ (ಬಿಜೆಪಿ)

ಕ್ಷೇತ್ರ: ಕೋಟಾ, ರಾಜಸ್ಥಾನ

ಬಿಜೆಪಿ ಅಭ್ಯರ್ಥಿ, ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರು ‘ಹ್ಯಾಟ್ರಿಕ್‌’ ಗೆಲುವಿನ ಕನಸಿನೊಂದಿಗೆ ಕೋಟಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್‌ ಪಕ್ಷವು ಪ್ರಹ್ಲಾದ್‌ ಗುಂಜಲ್‌ ಅವರನ್ನು ಅಖಾಡಕ್ಕಿಳಿಸಿದೆ. ಬಿರ್ಲಾ ಅವರು 2014 ಮತ್ತು 2019ರಲ್ಲಿ ಇಲ್ಲಿ ಗೆದ್ದಿದ್ದರು. ಬಿರ್ಲಾ ಅವರಿಗೆ ಈ ಬಾರಿ ಕಠಿಣ ಪೈಪೋಟಿ ಎದುರಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಗಜೇಂದ್ರ ಸಿಂಗ್‌ ಶೆಖಾವತ್‌ (ಬಿಜೆಪಿ)

ಕ್ಷೇತ್ರ: ಜೋಧಪುರ, ರಾಜಸ್ಥಾನ

ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ಅವರೂ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಜೋಧಪುರ ಕ್ಷೇತ್ರದಿಂದ ಕಣಕ್ಕಿಳಿದಿರುವ ಅವರಿಗೆ ಕಾಂಗ್ರೆಸ್‌ನ ಕರಣ್‌ ಸಿಂಗ್‌ ಉಚಿಯಾರ್ಡ ಪೈಪೋಟಿ ನೀಡುತ್ತಿದ್ದಾರೆ. ಶೆಖಾವತ್‌, 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕ ಅಶೋಕ್‌ ಗೆಹಲೋತ್‌ ಅವರ ಮಗ ವೈಭವ್‌ ಅವರನ್ನು ಪರಾಭವಗೊಳಿಸಿದ್ದರು.

ರಾಜೀವ್‌ ಚಂದ್ರಶೇಖರ್‌ – ಶಶಿ ತರೂರ್‌ ಪೈಪೋಟಿ

ಕ್ಷೇತ್ರ: ತಿರುವನಂತಪುರ, ಕೇರಳ

ತಿರುವನಂತಪುರ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಗೆದ್ದಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ ಶಶಿ ತರೂರ್‌ ಅವರು ಈ ಬಾರಿಯೂ ಕಣಕ್ಕಿಳಿದಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಕೇಂದ್ರದ ಎಲೆಕ್ಟ್ರಾನಿಕ್ಸ್ ಮತ್ತು ಐ.ಟಿ. ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಇದೇ  ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದಾರೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಅವರು ಈ ಹಿಂದೆ ಬಿಜೆಪಿಯ ರಾಷ್ಟ್ರೀಯ ವಕ್ತಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸಿಪಿಎಂನಿಂದ ಪನ್ಯನ್‌ ರವೀಂದ್ರನ್‌ ಕಣದಲ್ಲಿದ್ದಾರೆ. ಕಳೆದ ಬಾರಿ ಈ ಕ್ಷೇತ್ರದಿಂದ ಶಶಿತರೂರ್‌ ಗೆದ್ದಿದ್ದರು.ಕ್ಷೇತ್ರ: ತಿರುವನಂತಪುರ, ಕೇರಳ

ತಿರುವನಂತಪುರ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಗೆದ್ದಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ ಶಶಿ ತರೂರ್‌ ಅವರು ಈ ಬಾರಿಯೂ ಕಣಕ್ಕಿಳಿದಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಕೇಂದ್ರದ ಎಲೆಕ್ಟ್ರಾನಿಕ್ಸ್ ಮತ್ತು ಐ.ಟಿ. ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಇದೇ  ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದಾರೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಅವರು ಈ ಹಿಂದೆ ಬಿಜೆಪಿಯ ರಾಷ್ಟ್ರೀಯ ವಕ್ತಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸಿಪಿಎಂನಿಂದ ಪನ್ಯನ್‌ ರವೀಂದ್ರನ್‌ ಕಣದಲ್ಲಿದ್ದಾರೆ. ಕಳೆದ ಬಾರಿ ಈ ಕ್ಷೇತ್ರದಿಂದ ಶಶಿತರೂರ್‌ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT