ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಪ್‌ಸ್ಲಿಪ್: ಅಣ್ಣಾಮಲೈ ಅರಣ್ಯದ ಆನೆ ಸ್ಕೂಲ್

Last Updated 12 ಆಗಸ್ಟ್ 2019, 8:32 IST
ಅಕ್ಷರ ಗಾತ್ರ

ಕೊಯಮತ್ತೂರಿನಿಂದ ಪೊಲ್ಲಾಚಿ ಮಾರ್ಗವಾಗಿ ಟಾಪ್‌ಸ್ಲಿಪ್‌ ಎಂಬ ಸ್ಥಳ ತಲುಪಿದರೆ, ಅಲ್ಲಿಂದಲೇ ಅಣ್ಣಾಮಲೈ ಕಾಡು ಶುರುವಾಗುತ್ತದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಈ ದಟ್ಟ ಕಾಡು ಆನೆ ಹಾಗೂ ಹುಲಿ ಸಂರಕ್ಷಿತ ಪ್ರದೇಶ. ಸ್ಥಳೀಯ ಆದಿವಾಸಿ ಜನಾಂಗದ ‘ಆನೆ ಮಲೈ’ ಎಂಬುದನ್ನು ತಮಿಳರು ಅಣ್ಣಾಮಲೈ ಮಾಡಿದ್ದಾರೆ.

ಟಾಪ್‌ಸ್ಲಿಪ್(Topslip)ನಿಂದ 8 ಕಿ.ಮೀ. ದಟ್ಟ ಕಾಡಿನಲ್ಲಿ ಸಾಗಿದ ನಂತರ ಗುಡ್ಡದ ಬುಡದಲ್ಲಿ ವಿವಿಧ ಭಂಗಿಯಲ್ಲಿ ನಿಂತ ಆನೆಗಳನ್ನು ಕಾಣುತ್ತವೆ. ಅದೇ ಕೋಯಿಕಮುದಿ ಗಜಶಾಲೆಯ ಆವಾರ(Kozhikamudhi Elephant Camp).

ನಾನು ಕೋಯಿಕಮುದಿ ತಲುಪಿದಾಗ ಮಾವುತರು ಗುಡ್ಡದ ಇಳಿಜಾರಿನಿಂದ ಗಂಡಾನೆ ಯನ್ನು ಶಾಲೆಯ ಆವಾರಕ್ಕೆ ಹೊಡೆದುಕೊಂಡು ಬರಲು ಪ್ರಯತ್ನಿಸುತ್ತಿದ್ದರು. ಇನ್ನೊಂದು ಕಡೆ ಆನೆಯೊಂದು ತನ್ನ ಸೊಂಡಿಲನ್ನು ಉದ್ದನೆಯ ದಿಮ್ಮಿಯ ಮೇಲೆ ಚಾಚಿ ವಿಶ್ರಾಂತಿ ಪಡೆಯುತ್ತಿತ್ತು. ಮರಿ ಆನೆ ಮಕ್ಕಳೊದಿಗೆ ಸಲುಗೆಯಿಂದ ಆಟವಾಡುತ್ತಿತ್ತು.

ಒಂದೇ ಜಾಗದಲ್ಲಿ ಸುಮಾರು 30 ಆನೆಗಳು ಕಾಣಿಸಿಕೊಂಡವು. ಅಷ್ಟೊಂದು ಆನೆಗಳನ್ನು ಕಂಡಾಗ ಪ್ರವಾಸಿಗರ ಮೊಗದಲ್ಲಿ ಅಚ್ಚರಿಯ ಭಾವ.

ಗಜಶಾಲೆಯಲ್ಲಿ..

ಈ ಗಜಶಾಲೆಯಲ್ಲಿ ಪ್ರತಿಯೊಂದು ಆನೆ ನೋಡಿಕೊಳ್ಳಲು ಇಬ್ಬರು ಆದಿವಾಸಿ ಮಾವುತರು ಇರುತ್ತಾರೆ. ಆದರೆ, ಯಾವ ಆನೆಗೊ ತನ್ನದೇ ಆದ ಸ್ವಾತಂತ್ರವಿರಲಿಲ್ಲ. ಆವುಗಳ ಕಾಲಿಗೆ ಕಬ್ಬಿಣದ ಚೈನ್ ಕಟ್ಟಿದ್ದರು. ಇವು ಪಳಗಿಸಿದ ಆನೆಯಾದರೂ ಅವುಗಳು ಸದಾ ಕಾಲ ಮಾವುತನ ಸುಪರ್ದಿನಲ್ಲಿ ಇರುವುದು ಅನಿವಾರ್ಯ. ಕಾಡಿನಲ್ಲಿ ಸಂಚರಿಸಿ ತನ್ನ ಆಹಾರನ್ನು ತಾನೇ ಹುಡುಕಿ ಸೇವಿಸಲೂ ಮನುಷ್ಯನ ಪರವಾನಗಿ ಬೇಕಾಗಿರುವಂತಹ ಸನ್ನಿವೇಶ. ಇಂಥ ಹುಲ್ಲು, ಎಲೆ ತಿಂದು ಬದುಕುವ ಈ ಬೃಹತ್‌ ಗಾತ್ರದ ಜೀವ ಕಂಡರೆ ಮನುಷ್ಯ ಬೆದರಿ ಹೋಗುತ್ತಾನೆ.

ಈ ಆನೆಗಳಿಗೆ ಕಾಡಿನ ಹುಲ್ಲಿನ ಜೊತೆಗೆ ಪ್ರತಿ ದಿನ ಗಜಶಾಲೆಯಲ್ಲಿ ಮುಂಜಾನೆ ಹಾಗೂ ಸಂಜೆ ರುಚಿಕಟ್ಟಾದ ಬೇಯಿಸಿದ ಆಹಾರ ತಯಾರಿಸಿ ಕೊಡುತ್ತಾರೆ. ಅದಕ್ಕಾಗಿಯೇ ಪ್ರತ್ಯೇಕ ಅಡುಗೆ ಮನೆ ಇದೆ. ದೊಡ್ಡ ಪ್ರೆಶರ್ ಕುಕರ್‌ನಲ್ಲಿ ಅಕ್ಕಿ ಮತ್ತು ರಾಗಿ ಬೇಯಿಸಿ ದೊಡ್ಡ ದೊಡ್ಡ ಮುದ್ದೆಗಳನ್ನು ಮಾಡಿ ಪ್ರತಿ ಆನೆಯ ಹೆಸರಿನ ಅಡಿಯಲ್ಲಿ ಜೋಡಿಸಿಟ್ಟಿರುತ್ತಾರೆ. ಕಂದು ಬಣ್ಣದ ರಾಗಿ ಮತ್ತು ಬಿಳಿ ಬಣ್ಣದ ಅಕ್ಕಿಯ ಈ ಮುದ್ದೆಯನ್ನು ಅಚ್ಚುಕಟ್ಟಾಗಿ ಪೇರಿಸಿಟ್ಟಿದ್ದನ್ನು ನೋಡಿದರೆ, ಅವುಗಳು ಬೇಕರಿಯ ಕೇಕ್ ಹಾಗೆ ಕಾಣುತ್ತದೆ. ಆನೆಯನ್ನು ನೋಡಿಕೊಳ್ಳುವ ಮಾವುತ ಬಂದು ಅಡುಗೆ ಕೋಣೆಯಿಂದ ಅದನ್ನು ಒಯ್ದು, ರುಚಿಗೆ ತಕ್ಕ ಬೆಲ್ಲ ಹಾಕಿ ಆನೆಗೆ ಉಣಬಡಿಸುವ ದೃಶ್ಯ ಸ್ವಾರಸ್ಯಕರವಾಗಿದೆ.

ದೊಡ್ಡದಾಗಿರುವ ಈ ಮುದ್ದೆಗಳನ್ನು ಮಾವುತ ತನ್ನ ಕೈಯಿಂದ ನೇರವಾಗಿ ಆನೆಯ ಬಾಯಿಗೆ ಹಾಕುತ್ತಾನೆ. ಅದನ್ನು ತುರುಕುತ್ತಾನೆ ಎಂದರೆ ಸರಿಯಾದೀತು! ತೋರಿಕೆಯ ದಂತ ಇದ್ದರೂ ಆನೆಗಳ ಬಾಯಿಯಲ್ಲಿ ಹಲ್ಲು ಚಿಕ್ಕದಾಗಿರುತ್ತದೆ. ಆದ್ದರಿಂದ ಅವುಗಳು ಈ ಮುದ್ದೆಯನ್ನು ನುಂಗುವುದನ್ನು ನೋಡಬಹುದು. ಆನೆಯ ಗಾತ್ರ, ತೂಕ ಹಾಗೂ ವಯಸ್ಸಿನ ಆಧಾರದ ಮೇಲೆ ಅವುಗಳಿಗೆ ನೀಡುವ ಆಹಾರವೂ ನಿರ್ಧಾರವಾಗುತ್ತದೆ.

ಆನೆಗಳ ಆರೋಗ್ಯ ಕಾಪಾಡಲು ಇರುವ ಪಶು ವೈದ್ಯರು ಪ್ರತಿ ಆನೆಯ ಕೇಸ್‌ಶೀಟ್ ಅನ್ನು ಸಿದ್ಧಪಡಿಸಿ ಅವುಗಳಿಗೆ ಬೇಕಾಗುವ ಆಹಾರ ಮತ್ತು ಆರೋಗ್ಯದ ಕುರಿತು ದಾಖಲೆ ಇಡುತ್ತಾರೆ. ನಾನು ಹೋದಾಗ ಮೀರಾ ಎಂಬ ಆನೆ, ತನೆಗೆ ಕೊಟ್ಟ ಅಹಾರವನ್ನೂ ತಿನ್ನದೇ ಮುಖವನ್ನು ಸಪ್ಪೆಯಾಗಿಸಿಕೊಂಡು ನಿಂತಿದ್ದನ್ನು ಗಮನಿಸಿದೆ. ಮಾವುತ ‘ಅದಕ್ಕೆ ಜ್ವರ ಬಂದಿದೆ. ಅದಕ್ಕೆ ಆಹಾರ ಸೇವಿಸುತ್ತಿಲ್ಲ’ ಎಂದು ತಿಳಿಸಿದ.

ಬೆಟ್ಟ ಕುರುಬ ಹಾಗೂ ಮಲೆ ಮಾಲಸರ್ ಎಂಬ ಆದಿವಾಸಿ ಜನಾಂಗದವರು ಗಜಶಾಲೆಯ ಆನೆಗಳನ್ನು ನೋಡಿಕೊಳ್ಳುವ ಮಾವುತರು. ಆನೆಗಳ ಹಾಗೆ ಜೀವನವಿಡೀ ಕಾಡಿನಲ್ಲಿಯೇ ವಾಸವಾಗಿದ್ದು ಅಪರೂಪಕ್ಕೆ ಒಮ್ಮೆ ರಜಾ ಸಿಕ್ಕಾಗ ಹೊರ ಜಗತ್ತಿನ ಪಯಣ ಬೆಳೆಸುತ್ತಾರೆ. ಗಜಶಾಲೆಯ ಪಕ್ಕದಲ್ಲೇ ಇವರ ಹಾಡಿ. ತಮ್ಮ ಸಂಸಾರ ಹಾಗೂ ತಾವು ನೋಡಿಕೊಳ್ಳುವ ಆನೆಯ ಜೊತೆಗೆ ಹಗಲು ರಾತ್ರಿ ವಾಸ.

ಸದಾ ಹಸಿರು ಕಾಡಿನ ಮಧ್ಯೆ ಇರುವ ಅಣ್ಣಾಮಲೈ ಸುತ್ತಲಿನ ಅರಣ್ಯ ಮತ್ತು ಅಪರೊಪದ ಈ ಗಜಶಾಲೆಯು ದೇಶಿ ಮತ್ತು ವಿದೇಶಿ ಪ್ರವಾಸಿಗರನ್ನು ಸದಾ ಆಕರ್ಷಿಸುತ್ತದೆ. ಇದು ಒಮ್ಮೆ ನೋಡಲೇ ಬೇಕಾದ ಪ್ರವಾಸಿ ತಾಣ.

ತಲುಪುವುದು ಹೇಗೆ?

ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಿಂದ ಕೊಯಮತ್ತೂರಿಗೆ ಬಸ್‌, ರೈಲು ಮತ್ತು ವಿಮಾನ ಸೌಲಭ್ಯವಿದೆ. ಕೊಯಮತ್ತೂರಿನಿಂದ 80 ಕಿ.ಮೀ ದೂರವಿರುವ ಅಣ್ಣಾಮಲೈ ತಲುಪಲು ಅಂದಾಜು 3 ತಾಸು ಬೇಕು. ಪೊಲ್ಲಾಚಿಯ ನಂತರ ಘಟ್ಟದ ರಸ್ತೆ ಸರಿಯಾಗಿಲ್ಲ. ವಾಹನ ನಿಧಾನಗತಿಯಲ್ಲಿ ಸಾಗುತ್ತದೆ. ಇದರಿಂದ ಸುತ್ತಲಿನ ಕಾಡನ್ನು, ಕಾಡಿನ ವೈವಿಧ್ಯ ಸವಿಯಲು ಸಮಯ ಸಿಗುತ್ತದೆ. ಕೆಲವೊಮ್ಮೆ ಕಾಡು ಪ್ರಾಣಿಗಳ ದರ್ಶನ ಆಗಬಹುದು.

ಕೊಯಮತ್ತೂರಿನಿಂದ ಅಣ್ಣಾಮಲೈಗೆ ಕೇರಳ ಸಾರಿಗೆ ಸಂಸ್ಥೆ ಬಸ್‌ಗಳಿವೆ. ಖಾಸಗಿ ವಾಹನದಲ್ಲೂ ಹೋಗಬಹುದು. ಬಸ್‌ನಲ್ಲಿ ಪೊಲ್ಲಾಚಿಗೆ ಬಂದು ನಂತರ ಅಲ್ಲಿಂದ ಬಸ್‌ ಬದಲಾಯಿಸಿ 37 ಕಿಮೀ ದೂರವಿರುವ ಟಾಪ್‌ಸ್ಲಿಪ್ ತಲುಪಬಹುದು. ಇದಕ್ಕೂ ಮುನ್ನ ದಾರಿಯಲ್ಲಿ ಸಿಗುವ ಸೇತುಮುಡಿ ಚೆಕ್‌ಪೋಸ್ಟ್‌ನಲ್ಲಿ ಹಣ ಪಾವತಿಸಿ ಅಣ್ಣಾಮಲೈ ಹುಲಿ ಸಂರಕ್ಷಿತ ಪ್ರದೇಶದ ಪ್ರವೇಶಕ್ಕೆ ರಸೀತಿ ಪಡೆಯಬೇಕು. ಸ್ವಂತ ವಾಹನವಿದ್ದರೆ ಅದಕ್ಕೂ ಶುಲ್ಕ ಪಾವತಿಸಿ ಪರವಾನಗಿ ಪಡೆಯಬೇಕು. ಪೊಲ್ಲಾಚಿಯಿಂದ ಟ್ಯಾಕ್ಸಿಗಳು ಲಭ್ಯ. ಮುಂಜಾನೆ ಹೋಗಿ ಸಂಜೆಯೊಳಗೆ ಕೊಯಮತ್ತೂರಿಗೆ ಹಿಂತಿರುಗಿ ಬರಬಹುದು.

ಅರಣ್ಯ ಇಲಾಖೆ ಬಸ್‌: ಟಾಪ್‌ಸ್ಲಿಪ್‍ನಲ್ಲಿ ಪ್ರವಾಸಿಗರನ್ನು ಗಜ ಶಾಲೆಗೆ ಕರೆದೊಯ್ಯಲು ಅರಣ್ಯ ಇಲಾಖೆಯ ಮಿನಿ ಬಸ್ ಸಿದ್ಧವಾಗಿರುತ್ತದೆ. ಬೆಳಿಗ್ಗೆ 7 ರಿಂದ 10 ಗಂಟೆ ಮತ್ತು ಮಧ್ಯಾಹ್ನ 3 ರಿಂದ 5ರ ಅವಧಿಯಲ್ಲಿ ಬಸ್‌ಗಳು ಸಂಚರಿಸುತ್ತವೆ. ಪ್ರತಿಯೊಬ್ಬರಿಗೆ ₹200 ಶುಲ್ಕ. ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದರೆ, ಇಡೀ ಬಸ್‌ ಅನ್ನು ಬಾಡಿಗೆ ಪಡೆದು ಗಜಶಾಲೆ ನೋಡಿ ಬರಬಹುದು.

ಊಟ– ವಸತಿ ಹೇಗೆ?: ಟಾಪ್‌ಸ್ಲಿಪ್‍ನಲ್ಲಿ ಅರಣ್ಯ ಇಲಾಖೆಯ ವಸತಿಗೃಹಗಳಿವೆ. ಇಲ್ಲಿ ಉಳಿಯಲು ಮುಂಚಿತವಾಗಿ ಪೊಲ್ಲಾಚಿಯಲ್ಲಿರುವ ಅರಣ್ಯ ವಲಯದ ಆಫೀಸಿನಲ್ಲಿ ಹಣ ಪಾವತಿಸಿ ಬುಕ್‌ ಮಾಡಬೇಕು. ಇಲಾಖೆಯ ಕ್ಯಾಂಟೀನ್ ಜತೆಗೆ, ಹತ್ತಿರದ ಹೋಟೆಲ್‍ಗಳಿವೆ. ಇಲ್ಲಿ ದಕ್ಷಿಣ ಭಾರತದ ಶೈಲಿಯ ಊಟ-ಉಪಹಾರ ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT