ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಮ್ಮೇಳನದ ಹೊತ್ತಿನ ಇಂಗ್ಲಿಷ್ ಯೋಚನೆಗಳು

Last Updated 9 ಸೆಪ್ಟೆಂಬರ್ 2018, 5:46 IST
ಅಕ್ಷರ ಗಾತ್ರ

ಜಗತ್ತಿನ ಯಾವುದೇ ಮೂಲೆಯಲ್ಲಿ ‘ವಿಶ್ವ ಕನ್ನಡ ಸಮ್ಮೇಳನ’ ಎನ್ನುವ ಹೆಸರು ಹೊತ್ತು ಒಂದು ಸಮ್ಮೇಳನ ನಡೆದರೂ ಆ ಹೊತ್ತಿಗೆ ಅಮೆರಿಕದ ‘ಅಕ್ಕ’ ಸಮ್ಮೇಳನದ ನೆನಪು ಬಂದುಹೋಗುತ್ತದೆ. ಅಥವಾ ಭಾರತದ ಹೊರಗೆ ಎಲ್ಲೋ ನಡೆದ, ನಡೆಯುವ ಕನ್ನಡ ಸಮ್ಮೇಳನದ ಬಗ್ಗೆ ಸ್ನೇಹಿತರಲ್ಲಿ ಹರಟೆ ಹೊಡೆದರೂ ಆಗ ಅಮೆರಿಕದಲ್ಲಿ ನಡೆಯುವ ‘ಅಕ್ಕ’ ಸಮ್ಮೇಳನದ ಬಗ್ಗೆ ಕೆಲವರಾದರೂ ಹೇಳುತ್ತಾರೆ. ಹಾಗೆ ಈ ಸಮ್ಮೇಳನವನ್ನು ನೆನಪು ಮಾಡುವವರು ‘ಅಕ್ಕ’ ಸಮ್ಮೇಳನವನ್ನು ಹತ್ತಿರದಿಂದ ನೋಡಿದವರೇ ಆಗಿರಬೇಕಂತಿಲ್ಲ.

ಅಮೆರಿಕದಲ್ಲಿ ಇರುವ ಸ್ನೇಹಿತರಿಂದ ಕೇಳಿದವರು, ಸಮ್ಮೇಳನದಲ್ಲಿ ಭಾಗವಹಿಸಿದ ಕಲಾವಿದರು, ಇನ್ನು ಹೇಗೋ ತಿಳಿದುಕೊಂಡವರು ಸುಮಾರು ಸಲ ‘ಅಕ್ಕ’ದ ವೈಭವದ ಬಗ್ಗೆ ಹೇಳಿದ್ದಿದೆ. ಹಲವು ಪ್ರತ್ಯೇಕ ಕನ್ನಡ ಸಂಘಟನೆಗಳು ಕೂಡಿ ಮಾಡುವ ‘ಅಕ್ಕ’ ಸಮ್ಮೇಳನ ಅಮೆರಿಕಕ್ಕೂ ಮತ್ತು ಕನ್ನಡಕ್ಕೂ ವಿಶಿಷ್ಟವೇ. ಸದ್ಯಕ್ಕೆ ನಾನು ಅಮೆರಿಕ ಹಾಗೂ ಕರ್ನಾಟಕ ಎರಡರಿಂದಲೂ ದೂರದಲ್ಲಿ ಇರುವ ಅಥವಾ ಎರಡೂ ನಾಡುಗಳ ನಡುವಿನ ಇಂಗ್ಲೆಂಡ್‌ನಲ್ಲಿ ಇರುವವನಾದ್ದರಿಂದ – ನಾನು ನೋಡದ, ಆದರೆ ಬಹಳಷ್ಟು ಕೇಳಿದ ‘ಅಕ್ಕ’ ಸಮ್ಮೇಳನ ನಡೆದ ಈ ಹೊತ್ತಿನಲ್ಲಿ – ಕೆಲವು ಇಂಗ್ಲಿಷ್ ಯೋಚನೆಗಳು ನನ್ನನ್ನು ಕಾಡುತ್ತಿವೆ.

ಯೋಚನೆಗಳಿಗೆ ಇಂತಹದ್ದೇ ಭಾಷೆ ಅಂತ ಇಲ್ಲದಿದ್ದರೂ ಈಗಿರುವ ದೇಶದ ಊರಿನ ಭಾಷೆ ಇಂಗ್ಲಿಷ್ ಆಗಿರುವುದರಿಂದ ಮತ್ತು ಸದ್ಯ ನನ್ನ ಕಣ್ಣು ಕಿವಿಗಳು ಇಂಗ್ಲೆಂಡ್‌ನಲ್ಲಿ ನೆಲೆಸಿರುವುದರಿಂದ ಈ ಯೋಚನೆಗಳನ್ನು ಇಂಗ್ಲಿಷ್ ಯೋಚನೆಗಳೆಂದೇ ಕರೆಯುತ್ತೇನೆ.

ಕರುನಾಡಿನಿಂದ ಸುಮಾರು ಐದು ಸಾವಿರ ಮೈಲಿ ದೂರದ ಬ್ರಿಸ್ಟಲ್ ಎಂಬ ಪುಟ್ಟ ಪಟ್ಟಣ ಇದು. ನಾನಿರುವ ಊರು. ಬ್ರಿಟನ್ನಿನ ಭೂಪಟವನ್ನು ಕಣ್ಣೆದುರು ಹರಡಿದರೆ ಈ ದೇಶದ ನೈಋತ್ಯ ಭಾಗದ ಒಂದು ಬಂದರು ಪಟ್ಟಣವೂ ಹೌದು. ಆಂಗ್ಲರ ದೇಶ, ಇಂಗ್ಲಿಷ್ ಭಾಷೆ, ಆಂಗ್ಲರ ಸಂಸ್ಕೃತಿ ಸುತ್ತೆಲ್ಲ ಹರಡಿಕೊಂಡಿದೆ. ಸಹಜ ಬಿಡಿ. ಆದರೂ, ಇಲ್ಲಿ ಆಂಗ್ಲರ ಮಾತಿನಲ್ಲಿ ಅತ್ಯಂತ ಹೆಚ್ಚು ಬಳಕೆ ಆಗುವ ಕನ್ನಡ ಶಬ್ದ ಒಂದಿದೆ; ಕೆಲವೊಮ್ಮೆ ಅಚ್ಚರಿಯಿಂದಲೂ, ಕೆಲವೊಮ್ಮೆ ಸಿಟ್ಟಿನಿಂದಲೂ ಮತ್ತೆ ಅಸೂಯೆಯಿಂದಲೂ, ಇಲ್ಲದಿದ್ದರೆ ಅಸಹನೆಯಿಂದಲೂ ನುಡಿಯುವ ಕನ್ನಡ ಪದ ಅದು ‘ಬೆಂಗಳೂರು’.

ಬ್ರಿಸ್ಟಲ್‌ನ ಬ್ರಿಟಿಷರಿಗೆ ‘ಬೆಂಗಳೂರು’ ಎನ್ನುವ ಶಬ್ದ ಚಿರಪರಿಚಿತ. ಬ್ರಿಟನ್‌ನ ವಿಮಾನ ಉದ್ಯಮದ ರಾಜಧಾನಿ ಬ್ರಿಸ್ಟಲ್. ಇದು ನನ್ನಂತಹ ಹಲವರಿಗೆ ಅನ್ನ, ಆಶ್ರಯ ನೀಡುತ್ತಿರುವ ಉದ್ಯಮವೂ ಹೌದು. ಮತ್ತೆ ನಾನಿಲ್ಲಿಗೆ ಬಂದದ್ದೂ ಬೆಂಗಳೂರಿನಿಂದಲೇ. ವಿಮಾನಕ್ಕೂ, ಬೆಂಗಳೂರಿಗೂ ಹಳೆಯ ತಳುಕು. 1940ರಲ್ಲಿ ಬೆಂಗಳೂರಿನ ದೊಮ್ಮಲೂರು ರಸ್ತೆಯಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸ್ಥಾಪನೆ ಆಗಿತ್ತು. ಭಾರತದಲ್ಲೇ ತಯಾರಾದದ್ದು ಎಂದು ಜಗತ್ತೆಲ್ಲ ಬೆರಗಿನಲ್ಲಿ ನೋಡುವ ವಿಮಾನವೊಂದನ್ನು ಇಲ್ಲಿಯತನಕ ಎಚ್ಎಎಲ್ ಸಂಸ್ಥೆ ನೀಡದಿದ್ದರೂ ಭಾರತದ ಹಾಗೂ ಜಗತ್ತಿನ ಅನೇಕ ವಿಮಾನ ಸಂಸ್ಥೆಗಳಲ್ಲಿ ಹಿಂದೆ ದುಡಿದ ಈಗ ದುಡಿಯುತ್ತಿರುವ ಸಾವಿರಾರು ತಂತ್ರಜ್ಞರನ್ನಂತೂ ಖಂಡಿತ ನೀಡಿದೆ.

ಇಂಗ್ಲೆಂಡ್‌ನಲ್ಲಿ ಕನ್ನಡ ಕಲಿಯುತ್ತಿರುವ ಮಕ್ಕಳು
ಇಂಗ್ಲೆಂಡ್‌ನಲ್ಲಿ ಕನ್ನಡ ಕಲಿಯುತ್ತಿರುವ ಮಕ್ಕಳು

ಜೊತೆಗೆ ಬೆಂಗಳೂರಿನಲ್ಲಿ ಎನ್.ಎ.ಎಲ್, ಎ.ಡಿ.ಎ, ಡಿ.ಆರ್‌.ಡಿ.ಒಗಳಂತಹ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳೂ ಬೆಳೆದಿವೆ. ಈಗಂತೂ ಬೆಂಗಳೂರಿನಲ್ಲಿ ಅಮೆರಿಕ, ಯೂರೋಪಿನ ವಿಮಾನ ಕಂಪನಿಗಳ ಶಾಖೆಗಳು ಸ್ಥಾಪನೆಗೊಂಡಿವೆ. ಅಮೆರಿಕ, ಯುರೋಪಿಗೂ, ಕನ್ನಡ ನಾಡಿಗೂ ಒಂದು ಹೊಸ ಸೇತುವೆ ಕಲ್ಪಿಸಿವೆ. ಇನ್ನು ಹೊರಗುತ್ತಿಗೆಯಲ್ಲಿ, ವಿಮಾನ ಎಂಜಿನಿಯರುಗಳ, ಸಾಫ್ಟ್‌ವೇರ್‌ ಎಂಜಿನಿಯರ್‌ಗಳ ಆಮದಿನಲ್ಲಿ ಬೆಂಗಳೂರಿಗೆ ಮಹತ್ವದ ಸ್ಥಾನ ಇರುವುದು ಹಳೆಯ ಸತ್ಯ.

ಭಾರತಕ್ಕೆ ವಿಮಾನ ಉದ್ಯಮದ ಮಟ್ಟಿಗೆ ಬೆಂಗಳೂರು ಹೇಗೋ, ಅಮೆರಿಕದ ವಿಮಾನ ಜಗತ್ತಿನಲ್ಲಿ ಕಾನ್ಸಾಸ್‌ನ ವಿಚಿತಾ ಪಟ್ಟಣ ಹೇಗೋ ಹಾಗೆಯೇ ಬ್ರಿಟನ್ನಿಗೆ ಬ್ರಿಸ್ಟಲ್ ಎನ್ನುವ ಊರು. ಮತ್ತೆ ವಿಮಾನದ ಕೆಲಸಗಳ ಹೊರತಾಗಿಯೂ ಬ್ರಿಸ್ಟಲ್ ಉದ್ಯೋಗ ನಗರಿಯೇ. ಕೆಲಸ ಹುಡುಕಿಕೊಂಡು ಬರುವುದು ಅಥವಾ ಇಲ್ಲಿನ ಕಂಪನಿಗಳು ಕೆಲಸಕ್ಕೆಂದು ಭಾರತೀಯರನ್ನು (ಕನ್ನಡಿಗರನ್ನು) ಕರೆತರುವುದು ನಡೆಯುತ್ತಿರುವುದರಿಂದ ಬ್ರಿಸ್ಟಲ್‌ನಲ್ಲಿ ಭಾರತೀಯರ ಮತ್ತು ಕನ್ನಡಿಗರ ಸಂಖ್ಯೆ ಜೊತೆ ಜೊತೆಗೆ ಬೆಳೆಯುತ್ತಿದೆ.

ಯೂರೋಪಿಯನ್ ಒಕ್ಕೂಟದಲ್ಲಿ ಬ್ರಿಟನ್ ಇದ್ದಷ್ಟು ದಿನ ಯೂರೋಪಿನ ಬಡ ಶ್ರೀಮಂತ ದೇಶದಿಂದ ವಿಶೇಷ ಪರವಾನಗಿಯ ಅಗತ್ಯ ಇಲ್ಲದೆ ಒಳನುಗ್ಗುವ ಯುರೋಪಿನವರ ಜೊತೆಗೆ, ವಲಸೆಯ ಕಟು ಕಾನೂನುಗಳನ್ನು ಪಾರು ಮಾಡಿಕೊಂಡು ಬರುವ ಒಂದು ದೊಡ್ಡ ಸಮೂಹ ಭಾರತೀಯರದು, ಕನ್ನಡಿಗರದು. ಬ್ರಿಟನ್‌ನ ಬಸ್ಸಿನಲ್ಲಿ, ಶಾಪಿಂಗ್ ಮಾಲಿನಲ್ಲಿ, ಚಲನಚಿತ್ರ ಮಂದಿರಗಳಲ್ಲಿ ನಡೆಯುವಾಗ ಭಾರತೀಯ ಭಾಷೆಗಳು, ಕನ್ನಡದ ನುಡಿಗಳು ಹಿಂದಿನಿಂದ ಎಲ್ಲೋ ಕೇಳಿದರೆ ತಿರುಗಿ ನೋಡದೆ ಮುಂದೆ ನಡೆಯುವಷ್ಟು ಸಾಮಾನ್ಯ ವಿಷಯ ಆಗಿಹೋಗಿದೆ.

ಬ್ರಿಟಿಷರು ಕೂಡ ಈ ಬದಲಾವಣೆಗೆ ಒಗ್ಗಿಕೊಳ್ಳುತ್ತಿದ್ದಾರೆ; ಒಗ್ಗಿಕೊಳ್ಳಬೇಕಾಗಿದೆ. ನಾನು ಕೆಲಸ ಮಾಡುವ ಕಚೇರಿಯಲ್ಲಿ ಎಲ್ಲ ದಿಕ್ಕುಗಳಲ್ಲೂ ಭಾರತೀಯರು ಕಾಣಿಸುತ್ತಾರೆ. ಪ್ರತಿದಿನವೂ ಕನ್ನಡ ಮಾತಾಡುವವರು ಅಕ್ಕಪಕ್ಕದಲ್ಲೇ ಕಾಣಿಸುತ್ತಾರೆ. ಯುರೋಪಿನಿಂದ ಇಲ್ಲಿಗೆ ವಲಸೆ ಬಂದ ಇಟಾಲಿಯನ್ನರು, ಪೋಲಿಷರು, ಸ್ಪ್ಯಾನಿಷರು ಇವರೆಲ್ಲ ಇಂಗ್ಲೆಂಡ್‌ನ ಯಾವ ಭಾಗದಲ್ಲಿ ಇದ್ದರೂ ತಮ್ಮ ತಮ್ಮ ಗುಂಪಿನಲ್ಲಿ ಕಾಣಿಸುವವರು, ತಮ್ಮ ಗುಂಪಿನಲ್ಲಿ ತಮ್ಮ ಭಾಷೆಯಲ್ಲೇ ಮಾತನಾಡುತ್ತಾರೆ. ಇಂತಹ ಗುಂಪುಗಳ ಪಟ್ಟಿಗೆ ಕನ್ನಡ, ಮಲಯಾಳ, ತಮಿಳು, ತೆಲುಗು, ಗುಜರಾತಿ, ಪಂಜಾಬಿ ಜನರ ಸಮೂಹಗಳು ತಮ್ಮ ತಮ್ಮ ಶಕ್ತ್ಯಾನುಸಾರ ಸೇರಿ ಹೋಗಿವೆ.

ಭಾರತೀಯರಿಗೆಲ್ಲ ಒಂದಕ್ಕಿಂತ ಹೆಚ್ಚು ಭಾಷೆ ತಿಳಿದಿರುವ ಬಗ್ಗೆ ನನ್ನ ಬ್ರಿಟಿಷ್ ಸಹೋದ್ಯೋಗಿಗಳಿಗೆ ಕುತೂಹಲ ಹುಟ್ಟುತ್ತದೆ. ಬ್ರಿಟಿಷರು ಯಾವಾಗಲೂ ಓಡಾಡುವ ಯುರೋ‍ಪ್ ಒಕ್ಕೂಟದೊಳಗೆ ವಿವಿಧ ಸಂಸ್ಕೃತಿಯ ಭಾಷೆಯ ದೇಶಗಳು ಹರಡಿರುವುದರಿಂದ ಮಾತೃಭಾಷೆಯ ಜೊತೆಗೆ, ಬಹಳ ಜನ ಮಾತಾಡುವ ಇನ್ನೊಂದು ಭಾಷೆ ಕಲಿಯುವುದು ಅವರಿಗೆ ಪ್ರಿಯವಾದ ಅನುಭವ ಮತ್ತು ಸಾಹಸ. ಈ ಹಿನ್ನೆಲೆಯಲ್ಲಿ ನನ್ನ ಬ್ರಿಟಿಷ್ ಸಹೋದ್ಯೋಗಿಗಳು, ಭಾರತೀಯರು ಇಂಗ್ಲಿಷ್ ಅಲ್ಲದ ಇನ್ನೊಂದು ಭಾಷೆಯನ್ನು ಸುಲಲಿತವಾಗಿ ಮಾತಾಡುವುದರ ಬಗ್ಗೆ ಅಸೂಯೆ ಪಡುತ್ತಾರೆ. ಮತ್ತೆ ಭಾರತದ ಬೇರೆ ರಾಜ್ಯದ ಇಬ್ಬರು ಮಾತಾಡಲು ಇಂಗ್ಲಿಷ್ ಭಾಷೆಯನ್ನ ಮಧ್ಯವರ್ತಿಯಾಗಿ ಬಳಸುವುದನ್ನು ನೋಡಿ ವಿಸ್ಮಯ ಪಡುತ್ತಾರೆ.

ಕನ್ನಡದ ಕೆಲವು ಅಕ್ಷರಗಳನ್ನು ನನ್ನಿಂದ ಬರೆಸಿ ಇದು ರೇಖಾ ಚಿತ್ರದಂತಿದೆ ಎನ್ನುತ್ತಾರೆ. ಮತ್ತೆ ಕೆಲವು ಶಬ್ದಗಳನ್ನು ಹೇಳಿಸಿ ‘ಏನೇ ಇರಲಿ... ಕಿವಿಗೆ ಇಂಪಾಗಿದೆ’ ಎನ್ನುತ್ತಾರೆ. ಇಂಗ್ಲೆಂಡ್‌ನ ಶಾಲೆಯ ಮಾಸ್ತರ, ಮಾಸ್ತರಣಿಯರು ಮಕ್ಕಳು ಮನೆಯಲ್ಲಿ ಮಾತೃಭಾಷೆಯಲ್ಲಿ ಮಾತಾಡಿದರೆ ಚೆನ್ನ ಎಂದು ಸಲಹೆ ನೀಡುತ್ತಾರೆ. ಮಕ್ಕಳು ಕೇಳಿ ನಲಿಯಬಹುದಾದ ಹಾಡುಗಳು, ಕಥೆಗಳು, ಕೀಟಲೆಗಳು, ಜಗಳ, ನಗೆ, ಪ್ರೀತಿ, ಸಾಂತ್ವನ ಎಲ್ಲದಕ್ಕೂ ಆಪ್ತವಾಗಿ ಒದಗುವುದು ಮನೆಯೊಳಗಿನ ಆಡುಮಾತಿನ ಭಾಷೆಯೇ ಎಂದು ಹೇಳುತ್ತಾರೆ. ಕೆಲವು ಭಾರತೀಯ ಹೆತ್ತವರು ತಮ್ಮ ಮಕ್ಕಳಿಗೆ ಇಂಗ್ಲಿಷ್ ಭಾಷೆ ಕಲಿಯಲು ಹೊರಗಡೆ ಹೇಗೂ ಹೇರಳ ಅವಕಾಶ ಇರುವುದರಿಂದ, ಮನೆಯಲ್ಲಿ ಕನ್ನಡಲ್ಲೇ ಮಾತಾಡುತ್ತಾರೆ. ಇನ್ನು ಇಂಗ್ಲಿಷ್‌ ಜೊತೆ ಇನ್ನೊಂದು ಭಾಷೆಯನ್ನು ಮಕ್ಕಳ ಮೇಲೆ ಹೊರಿಸಿದರೆ ದೊಡ್ಡ ಹೊರೆ ಆದೀತೋ ಅಥವಾ ಆಡುಮಾತಿನ ಭಾಷೆಯಲ್ಲಿ ಮಕ್ಕಳು ಮಾತನಾಡಿದರೆ ಹೊರಗಡೆ ಬ್ರಿಟಿಷ್ ಮಕ್ಕಳೆದುರು ಮುಜುಗರ ಆದೀತೋ ಎಂದು ನಂಬಿದವರೂ ಕೆಲವರು ಇದ್ದಾರೆ. ಕನ್ನಡಕ್ಕೂ ಆಗ ಮುಜುಗರ ಆದೀತು ಬಿಡಿ.

ಲಂಡನ್ ಸಮೀಪದ ಬ್ರಿಸ್ಟಲ್‌ನಲ್ಲಿ 24ರಂದು ಪ್ರದರ್ಶನಗೊಳ್ಳುವ ’ರಿಸರ್ವೇಶನ್’ ಚಲನ ಚಿತ್ರದ ಒಂದು ಪ್ರಚಾರ ಸಾಮಗ್ರಿ. (ಬೈಂದೂರು ಚಿತ್ರ)
ಲಂಡನ್ ಸಮೀಪದ ಬ್ರಿಸ್ಟಲ್‌ನಲ್ಲಿ 24ರಂದು ಪ್ರದರ್ಶನಗೊಳ್ಳುವ ’ರಿಸರ್ವೇಶನ್’ ಚಲನ ಚಿತ್ರದ ಒಂದು ಪ್ರಚಾರ ಸಾಮಗ್ರಿ. (ಬೈಂದೂರು ಚಿತ್ರ)

ದಶಕಗಳಿಂದ ಇಂಗ್ಲೆಂಡ್‌ಗೆ ವಲಸೆ ಬರುತ್ತಿರುವ ಕನ್ನಡಿಗರು ಎಷ್ಟೇ ಇದ್ದರೂ, ಭಾಷೆ, ಸಂಘಟನೆ, ಸಮಾಲೋಚನೆಗಳಿಂದ ಕನ್ನಡಿಗರು ತುಸು ದೂರ ಇರುವ ಜಾಯಮಾನಕ್ಕೋ, ಸಣ್ಣ ದೇಶವಾದ ಇಂಗ್ಲೆಂಡ್‌ನಲ್ಲಿ ಸಣ್ಣ ಗುಂಪು ಆದದಕ್ಕೋ ಅಥವಾ ಕನ್ನಡಿಗರು ಇರುವುದೇ ಹೀಗೋ ಅಂತೂ ಇಲ್ಲಿ ಕನ್ನಡ ಚಾನಲ್‌ಗಳು ಸ್ಕೈಟಿವಿ, ವರ್ಜಿನ್ ಮೀಡಿಯಾದಂತಹ ಮುಖ್ಯ ದೂರದರ್ಶನ ವಾಹಿನಿಗಳ ಸೇವೆಯ ಮೂಲಕ ಸಿಗುವುದಿಲ್ಲ. ಈಗಿನ ಸ್ಮಾರ್ಟ್ ಟಿ.ವಿ, ಇಂಟರ್ನೆಟ್ ಟಿ.ವಿಗಳ ಮೂಲಕ ಕನ್ನಡ ವಾರ್ತೆ, ಧಾರಾವಾಹಿ, ಹಾಡು, ಕುಣಿತ ಸ್ಪರ್ಧೆ ಎಲ್ಲ ಇಲ್ಲಿನ ಕೆಲವು ಮನೆಗಳನ್ನು ಮುಟ್ಟುತ್ತಿವೆ. ಹಾಗಂತ ಇತ್ತೀಚಿನ ಕನ್ನಡ ಚಿತ್ರಗಳ ಪ್ರದರ್ಶನ ಇಲ್ಲಿ ಈಗೀಗ ಸಾಮಾನ್ಯ ಆಗುತ್ತಿದ್ದರೂ, ಮತ್ತೆ ಆ ಪ್ರದರ್ಶನ ಕನ್ನಡಿಗರಿರುವ ಆಯಕಟ್ಟಿನ ಊರಿನಲ್ಲೇ ಆದರೂ ಒಂದು ದೇಖಾವೆಗಿಂತ ಹೆಚ್ಚು ಓಡುವುದಿಲ್ಲ ಎಂದು ಹಣ್ಣು ಮಂಡೆಯ ಕನ್ನಡಿಗರು ಒಬ್ಬರು ಹೇಳುತ್ತಾರೆ.

ಸಾಲು ಸಾಲಾಗಿ ಬರುವ ಕಮರ್ಷಿಯಲ್ ಚಿತ್ರಗಳ ನಡುವೆ, ಒಮ್ಮೊಮ್ಮೆ ‘ತಿಥಿ’, ‘ದೇವರ ನಾಡಲ್ಲಿ’, ‘ರಿಸರ್ವೇಶನ್’, ‘ಜೀರ್ಜಿಂಬೆ’ಯಂತಹ ಕಲಾತ್ಮಕ ಚಿತ್ರಗಳೂ ಪ್ರದರ್ಶನ ಕಂಡು ಮೆಚ್ಚುಗೆ ಗಳಿಸುತ್ತವೆ. ಒಂದೆರಡು ಹಿರಿ, ಹಲವು ಮರಿ ಕನ್ನಡ ಸಂಘಟನೆಗಳೂ ಇಲ್ಲಿವೆ. ಯುಗಾದಿಗೊಮ್ಮೆ, ರಾಜ್ಯೋತ್ಸವಕ್ಕೊಮ್ಮೆ ಅವರ ಉಪಸ್ಥಿತಿ ಎದ್ದು ಕಾಣುತ್ತದೆ. ಮಕ್ಕಳಿಗೆ ಕನ್ನಡ ಕಲಿಸುವ ತರಗತಿಗಳು ಇಲ್ಲಿನ ಕೆಲವು ಊರುಗಳಲ್ಲಿ ನಡೆಯುತ್ತವೆ. ಕನ್ನಡ ನಾಡಿನ ಹೆಸರಾಂತ ಸಾಹಿತಿಗಳನ್ನು ಕಲಾವಿದರನ್ನು ಕನ್ನಡ ಕಾರ್ಯಕ್ರಮಗಳಿಗೆ ಕರೆಸಿದ ಉದಾಹರಣೆಗಳೂ ಇವೆ. ಕಾರ್ಯಕ್ರಮ ಯಾವುದೇ ನೆಪದಲ್ಲಿದ್ದರೂ ಕೊನೆಗೆ ಸಿನಿಮಾ ಹಾಡಿಗೆ ಕುಣಿದು ಮನೆಗೆ ತೆರಳುವ ಕಾರ್ಯಕ್ರಮಗಳೇ ಹೆಚ್ಚು. ಇಲ್ಲಿನ ಹವ್ಯಾಸಿಗಳಿಂದ ಕಿರುಯಕ್ಷಗಾನ ಪ್ರದರ್ಶನಗಳು ನಡೆಯುತ್ತವೆ.

ಕೆಲವು ವರ್ಷಗಳ ಕೆಳಗೆ ಅನಂತಮೂರ್ತಿ ಅವರು ಲಂಡನ್‌ಗೆ ಬಂದಾಗಿನ ಒಂದು ಕಾರ್ಯಕ್ರಮದಲ್ಲಿ ಇಲ್ಲಿನ ಕನ್ನಡದ ಹಿರಿ ಸಂಘಟನೆಯ ಅಧ್ಯಕ್ಷರು ಸಿಕ್ಕಿದ್ದರು. ಮಾತಿನ ನಡುವೆ ಆಗ ನಾನು ಹೆಚ್ಚಾಗಿ ಬರೆಯುತ್ತಿದ್ದ ಕೆಂಡಸಂಪಿಗೆ ಎನ್ನುವ ಕನ್ನಡ ಸಾಹಿತ್ಯ ಪತ್ರಿಕೆಯೊಂದಿದೆ ಸಮಯ ಸಿಕ್ಕಿದಾಗ ನೋಡಿ ಅಂದೆ. ‘ಕೆಂಡಸಂಪಿಗೆ’ ಎನ್ನುವ ಹೆಸರು ಕೇಳಿದ ಕೂಡಲೇ ಅವರು, ಆ ಕಾಲಕ್ಕೆ ಇವರು ಕೇಳಿರದ ಈ ಪತ್ರಿಕೆಯ ಬಗ್ಗೆ ಯಾವ ಕುತೂಹಲವನ್ನು ತೋರಿಸದೆ, ‘ಕೆಂಡಸಂಪಿಗೆ’ ಎನ್ನುವ ಶಬ್ದ ಜೋಡಣೆಯಲ್ಲಿ ಅಸಮರ್ಪಕತೆ ಇದೆ ಎಂದೂ, ‘ಕೆಂಪು ಸಂಪಿಗೆ’ ಶಬ್ದದಿಂದ ಇದು ಹುಟ್ಟಿರಬಹುದೆಂದು ಅವರು ಬಲವಾಗಿ ನಂಬಿದ್ದರಿಂದ ‘ಕೆಂಡು‘ ಸಂಪಿಗೆ ಆಗಬೇಕಿತ್ತಲ್ಲವೆ ಎಂದು ಪ್ರಶ್ನಿಸಿದರು; ವಾದಿಸಿದರು.

ಅವರ ಪ್ರಶ್ನೆಯ ಭಾರವನ್ನು ಹೆಚ್ಚು ಹೊತ್ತು ಹೊರಲಾರದೆ, ಕೆಂಡಸಂಪಿಗೆ ಅಂತರ್ಜಾಲ ತಾಣದ ವಿಳಾಸ ಕೊಟ್ಟು ಅವರೆದುರಿಂದ ಕಣ್ಮರೆ ಆಗಿದ್ದೆ. ಇದು ಒಂಬತ್ತು ವರ್ಷಗಳ ಹಿಂದಿನ ಒಂದು ನೆನಪು. ಈಗ ಇಲ್ಲಿ ಕನ್ನಡ ಬರಹಗಳನ್ನು ಓದುವ, ಬರೆಯುವ, ವಿಮರ್ಶಿಸುವ ಸಣ್ಣ ಕೂಟವೇ ಇದೆ. ಕನ್ನಡ ಬರಹಗಳನ್ನು ಪ್ರಕಟಿಸುವ ‘ಅನಿವಾಸಿ.ಕಾಮ್’ ಅಂತರ್ಜಾಲ ಪತ್ರಿಕೆ ಇದೆ. ಈ ವರ್ಷ ಕೆಲವು ಸ್ನೇಹಿತರು ಸೇರಿ ಕನ್ನಡಿಗರ ಕ್ರಿಕೆಟ್ ತಂಡವನ್ನೂ ಬ್ರಿಸ್ಟಲ್‌ನಲ್ಲಿ ಕಟ್ಟಿದ್ದೇವೆ. ಕನ್ನಡಿಗರು ಹಾಗೂ ಕನ್ನಡದ ಉಪಸ್ಥಿತಿ ಬ್ರಿಟನ್‌ನಲ್ಲಿ ಹೆಚ್ಚುತ್ತಿರುವುದು ಸಿಹಿಸುದ್ದಿಯೇ.

ಆದರೆ, ದೀರ್ಘ ಕಾಲದಿಂದ ಇಲ್ಲಿ ನೆಲೆನಿಂತ ಅಥವಾ ಇಲ್ಲೇ ಕಾಯಂ ಬದುಕುತ್ತಿರುವ ಕನ್ನಡಿಗರ ಮಕ್ಕಳು ಅಂದರೆ ಇಲ್ಲೇ ಹುಟ್ಟಿದ ಮಕ್ಕಳು ಕನ್ನಡ ಮಾತಾಡುವ ಸಾಧ್ಯತೆ ಮತ್ತು ಉದಾಹರಣೆಗಳು ಹೆಚ್ಚು ಕಾಣ ಸಿಗುವುದಿಲ್ಲ.

ಇಲ್ಲಿನ ಹತ್ತಾರು ಊರುಗಳಲ್ಲಿ ನಡೆಯುವ ಯುಗಾದಿ, ರಾಜ್ಯೋತ್ಸವದಂತಹ ಕನ್ನಡದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕನ್ನಡದ ಮಕ್ಕಳು ಕನ್ನಡದ ಹಾಡಿಗೆ ಕುಣಿಯುವುದು ಕಾಣಿಸುತ್ತದೆ. ಆದರೆ, ಆ ಹಾಡಿನ ಶಬ್ದಗಳ ಅರ್ಥವನ್ನು ತಿಳಿದ ಮಕ್ಕಳು ಸಿಗುವುದು ವಿರಳ. ಮನೆಯ ಒಳಗೆ ಕನ್ನಡ ಮಾತಾಡುವ ಮಕ್ಕಳೂ ಮನೆಯ ಹೊರಗಿನ ಇನ್ನೊಂದು ಕನ್ನಡದ ಮಗುವನ್ನು ಭೇಟಿಯಾದರೆ ಅವರಿಬ್ಬರೂ ಇಂಗ್ಲಿಷ್‌ನಲ್ಲೇ ಮಾತಾಡುವ ಸಾಧ್ಯತೆ ಹೆಚ್ಚು. ಕೆಲವು ಊರುಗಳಲ್ಲಿ ಮನೆಯ ಹೊರಗೆ ಅಂದರೆ ಕನ್ನಡ ಸಂಘ ಸಂಸ್ಥೆಗಳು ‘ಕನ್ನಡ ಕಲಿ’ ತರಗತಿಗಳನ್ನು ನಡೆಸುತ್ತಿವೆ. ಮನೆಯಲ್ಲಿ ಮಕ್ಕಳು ತಮ್ಮೊಡನೆ ಇಂಗ್ಲಿಷ್ ಮಾತಾಡುವುದನ್ನು ಆತ್ಮೀಯವಾಗಿ ಸ್ವೀಕರಿಸಿದವರು ‘ಕನ್ನಡ ಕಲಿಕೆಯ ಹೊರಗುತ್ತಿಗೆ’ಯಲ್ಲಾದರೂ ಕನ್ನಡ ಕಲಿತು ಬರಲಿ ಎಂದು ಆ ತರಗತಿಗಳಿಗೆ ಕಳಿಸುತ್ತಾರೆ. ಕನ್ನಡ ಕಲಿಸುವ ತರಗತಿಗಳು, ಕನ್ನಡ ಹಾಡುಗಳನ್ನು ಹಾಡಲು ಕುಣಿಯಲು ಅವಕಾಶ ಕಲ್ಪಿಸುವ ಆಚರಣೆಗಳು, ಹಬ್ಬಗಳು ಹೀಗೊಂದು ಕನ್ನಡ ಭಾಷೆ ಅಂತಿದೆ ಎನ್ನುವ ಪರಿಚಯವನ್ನು ಮಕ್ಕಳಿಗೆ ನೀಡಬಹುದು.

ಸುತ್ತಲಿನ ಜಗತ್ತೆಲ್ಲ ಇಂಗ್ಲಿಷ್‌ಮಯವಾಗಿರುವಾಗ ಕನ್ನಡ ಭಾಷೆ ಕಲಿತು ಏನು ಮಾಡುವುದು ಎಂದು ಕೆಲವು ಮಕ್ಕಳಿಗೂ, ಹೆತ್ತವರಿಗೂ ಅನಿಸಲೂಬಹುದು. ಅನಾಯಾಸವಾಗಿ ಕಲಿಯಬಹುದಾದ ಬಲಿಷ್ಠ ಸ್ಥಳೀಯ ಸಂಸ್ಕೃತಿ ಮತ್ತು ಒತ್ತಾಯದಿಂದ ಕಲಿಯಬೇಕಾದ, ಬಳಕೆಗೆ ಹೆಚ್ಚು ಬಾರದ ದೂರದ ಹುಟ್ಟೂರಿನ ಸಂಸ್ಕೃತಿಗಳಲ್ಲಿ ಯಾವುದನ್ನು ಎಷ್ಟು ತೆಗೆದುಕೊಳ್ಳಬೇಕು ಎನ್ನುವುದು ಒಂದು ಸಂಕೀರ್ಣ ವಿಷಯವೇ. ತಾವೋ ತಮ್ಮ ಮಕ್ಕಳೋ ಎರಡೋ, ಮೂರೋ ಭಾಷೆಗಳನ್ನು ಕಲಿತರೆ ಹೆಮ್ಮೆ ಪಡುವ ಬ್ರಿಟಿಷರು ಈ ವಿಷಯದ ಸಂಕೀರ್ಣತೆಯನ್ನು ಬಿಡಿಸುವಲ್ಲಿ ನಮಗೆ ಮಾದರಿ ಆಗಬಹುದು. ಪ್ರತಿ ಭಾಷೆಯೂ ಒಂದು ಯೋಚನಾಕ್ರಮವನ್ನು ಕಲಿಸುತ್ತದೆ, ಹಲವು ಭಾಷೆಗಳನ್ನು ಬಲ್ಲವರು ಒಂದು ಸಮಸ್ಯೆಯನ್ನು ಹಲವು ರೀತಿಯಲ್ಲಿ ಬಗೆಹರಿಸುವ ಸಾಧ್ಯತೆಗಳನ್ನು ಯೋಚಿಸುತ್ತಾರೆಂದು ನಂಬುವನಂತಹ ಬ್ರಿಟಿಷರು ನಮಗೆ ಇಲ್ಲಿ ಅನುಕರಣೀಯರಾಗಬಹುದು. ಇಲ್ಲಿಗೆ ಕನ್ನಡವನ್ನು ತಂದ ಪೀಳಿಗೆಯ ಮುಂದಿನ ಪೀಳಿಗೆ ಕನ್ನಡವನ್ನು ಅವರ ತಂದೆ ತಾಯಿಯರಷ್ಟೇ ಹಚ್ಚಿಕೊಳ್ಳುವುದು, ಬಳಸುವುದು ನೋಡಸಿಗುವುದಿಲ್ಲ ಎನ್ನುವುದು ಇಲ್ಲಿನ ಕನ್ನಡಿಗರನ್ನು ಕಾಡುವ ಚಿಂತೆಗಿಂತ ಹೆಚ್ಚು ಕನ್ನಡವನ್ನು ಕಾಡುವ ಕೊರಗೇ ಇರಬೇಕು.

ಈ ಕೊರಗನ್ನು ಸ್ವಲ್ಪಮಟ್ಟಿಗೆ ನೀಗಲು, ಕನ್ನಡ ಸಂಸ್ಕೃತಿಯನ್ನು ಒಂದು ಮಟ್ಟಿಗೆ ಅನಿವಾಸಿ ಮಕ್ಕಳಿಗೆ ಪರಿಚಯಿಸುವುದು, ಇಲ್ಲಿನ ಕನ್ನಡಿಗರು ಮನೆಯಲ್ಲಿ ಕಡ್ಡಾಯವಾಗಿ ಕನ್ನಡ ಮಾತಾಡುವುದು, ಕನ್ನಡದ ಕಥೆಗಳನ್ನು ಹೇಳುವುದು, ಕನ್ನಡದ ಶಿಶುಗೀತೆಗಳನ್ನು ಹೇಳಿ ಮಲಗಿಸುವುದು, ಕನ್ನಡದಲ್ಲಿ ಆಟ ಆಡುವುದು ಸ್ವಲ್ಪಮಟ್ಟಿಗೆ ಸಹಾಯ ಆಗುತ್ತದೆ ಎಂದು ಇಂತಹ ಪ್ರಯೋಗಗಳನ್ನು ಮಾಡಿ ಯಶಸ್ವಿಯಾದ ಕೆಲ ಹೆತ್ತವರು ಹೇಳುತ್ತಾರೆ.

ಇಂತಹ ಯೋಚನೆಗಳ ನಡುವೆಯೇ ಸಮ್ಮೇಳನಗಳು ಬಂದು ಹೋಗುತ್ತಿರುತ್ತವೆ. ಕನ್ನಡನಾಡಿಗೆ ಹೆಸರು ತಂದವರು, ಸಚಿವರು, ಸೆಲೆಬ್ರಿಟಿಗಳು ಅದ್ದೂರಿ ಸಮ್ಮೇಳನಗಳಲ್ಲಿ ಮಿಂಚಿದ ಸುದ್ದಿ, ಭಾವಚಿತ್ರಗಳು ಕಾಣುತ್ತವೆ. ವಿಶ್ವ, ಕನ್ನಡ, ತೇರು, ಕನ್ನಡಿಗರನ್ನು ಬಲಪಡಿಸಿ ಕನ್ನಡವನ್ನು ಬಲಪಡಿಸುವುದು... ಹೀಗೆ ಈ ಸಮಯಕ್ಕೆಂದೇ ಹೊಸೆದ ಶಬ್ದ ಪ್ರಯೋಗಗಳು ಜೋಡಣೆಗಳು ಪತ್ರಿಕೆಗಳಲ್ಲಿ, ಸಮ್ಮೇಳನಗಳ ಭಾಷಣಗಳಲ್ಲಿ ಕೇಳಿಬರುತ್ತಿರುತ್ತವೆ. ಬಹುಭಾಷೆಗಳನ್ನು ಸುಲಲಿತವಾಗಿ ಮಾತನಾಡಿ ಆಂಗ್ಲರಲ್ಲಿ ಅಸೂಯೆ ಹುಟ್ಟಿಸುವ ಇಲ್ಲಿನ ಕನ್ನಡಿಗರಿರಲಿ ಅಥವಾ ಬೆಂಗಳೂರಿಗೆ ಕೆಲಸಗಳನ್ನು ಹೊರಗುತ್ತಿಗೆ ನೀಡಿ ಭಯಪಡುವ ಇಂಗ್ಲೆಂಡ್‌, ಅಮೆರಿಕ ಇರಲಿ ಕನ್ನಡ ‘ಮನೆ’ಯೊಳಗಿನ ಆಡು ಮಾತಾಗಿ ಬೆಳೆಯುವದಲ್ಲದಿದ್ದರೂ ಉಳಿಯುವ ಹೋರಾಟದಲ್ಲಿರುವುದು ವಿಶ್ವ ಕನ್ನಡ ಸಮ್ಮೇಳನದ ಈ ಹೊತ್ತಲ್ಲಿ ಮತ್ತೊಮ್ಮೆ ಯೋಚನೆಗೆ ಹಚ್ಚುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT