ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಡಿಲ ಬಂಧದಲ್ಲೂ ದಕ್ಕಿದ ಹಲವು ಭಾವಗಳು

ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆ–2023: ತೀರ್ಪುಗಾರರ ಟಿಪ್ಪಣಿ
Published 11 ನವೆಂಬರ್ 2023, 9:11 IST
Last Updated 11 ನವೆಂಬರ್ 2023, 9:11 IST
ಅಕ್ಷರ ಗಾತ್ರ

ಓದುಗರೋರ್ವರು ಒಂದು ಸಾಹಿತ್ಯ ಸ್ಪರ್ಧೆಯ ವಿಜೇತ ಬರಹದಲ್ಲಿ ಸಾಮಾನ್ಯವಾಗಿ  ನಿರೀಕ್ಷಿಸುವುದೇನು? ಈ ಪ್ರಶ್ನೆಗೆ ನೇರ ಉತ್ತರ - ಕಿಂಚಿತ್ತಾದರೂ ಹೊಸತನ್ನು!  ಆ ಬರಹದ ವಸ್ತುವೋ, ಭಾಷೆಯೋ, ಕಾಣ್ಕೆಯೋ, ಅಲಂಕಾರವೋ, ನಿರೂಪಣೆಯೋ, ಕೊನೆಗೊಂದು ಘೋಷಣೆಯೋ, ಅದು ಅದುವರೆಗೆ ಕಂಡಿರದಂತಹ ಹೊಸತೊಂದನ್ನು ಹೊಂದಿದ್ದರೆ ಓದುಗ ಮನ‌ವು ಆಹಾ ಎನ್ನುತ್ತದೆ. ಬರೆಯುವ ನಾವೆಲ್ಲರೂ ಓದುಗರ ಆ ‘ಆಹಾ’ ಎನ್ನುವ ಉದ್ಗಾರಕ್ಕೆ ಕಾಯ್ದಿರುವವರು. ಅಲ್ಲ ಎಂದರೆ ಅದು ನಿಸ್ಸಂಶಯವಾಗಿ ಸುಳ್ಳು ಮತ್ತು ಮೋಸ. ಜಗತ್ತಿನ ಯಾವ ದೇಶ ಕಾಲ ಭಾಷೆಯಾದರೂ ಸರಿ, ಸಾಹಿತ್ಯದ ಅಳತೆಗೋಲು ಕೊನೆಗೂ ಓದುಗರೇ ಹೌದು. ಓದುಗರ ಈ ಉದ್ಗಾರವೇ ಹೌದು. 

ಕಾವ್ಯದ ವಸ್ತು ಹೊಸದಾಗಿರುವುದು ಸದಾ ಅಪೇಕ್ಷಣೀಯವೇ ಆದರೂ ಅದು ಅಂಗೈ ಮೇಲಿನ ನೆಲ್ಲಿಕಾಯಿಯಲ್ಲ. ಕವಿಯ ಸ್ವಾನುಭವವೂ ಚಿಂತನೆಯ ಕ್ರಮವೂ ಸಂಪೂರ್ಣವಾಗಿ ಭಿನ್ನವಾದಾಗ ಮಾತ್ರ ದಕ್ಕುವ ಭಾಗ್ಯವದು. ಆದರೆ ಒಂದೊಂದು ಹಗಲಿಗೂ ಬದಲಾಗುತ್ತಿರುವ ಈಗಿನ ಸಮಾಜ ಲಕ್ಷಣಗಳಿಗೆ ಭಾಷ್ಯವಾಗಬಲ್ಲ ಹೊಸ ಆಶಯ, ಹಳೆಯ ಪದಗಳಿಗೆ ಆರೋಪಿಸಬಹುದಾದ ಹೊಸ ಅರ್ಥ, ಕವಿತೆಯ ಕಟ್ಟಡದಲ್ಲಿ ಸ್ವಂತದ್ದೆ ವಿನ್ಯಾಸ,  ಕೇವಲ ನಮ್ಮವೇ ಆದ ರೂಪಕಗಳು, ನಾವೇ ಪಳಗಿಸಿಕೊಂಡ ಭಾಷೆ ಇವುಗಳಲ್ಲಿ ನಾವೀನ್ಯವನ್ನು ಖಂಡಿತವಾಗಿಯೂ ಕವಿಯೊಬ್ಬರು ಸಾಧಿಸಬಹುದು. ಈ ಒಂದೊಂದಕ್ಕೂ ಕನ್ನಡ ಕಾವ್ಯದಲ್ಲೆ ಅನೇಕ ಉದಾಹರಣೆಗಳಿವೆ. ಇದಾವುದೂ ಇಲ್ಲದೆ ಅದೇ ಸವೆದ ವಸ್ತು, ಹುಸಿ ಸಾಮಾಜಿಕ‌ ಕಾಳಜಿ, ಅನುಭಾವವೆಂದು ಕಲ್ಪಿಸಿಕೊಂಡ ಒಂದು ಚಮತ್ಕಾರ, ಭಾಷಾ ಚಾಕಚಕ್ಯತೆಯಿಂದ ಓದುಗರನ್ನು‌ ಕೆಡವಿಕೊಳ್ಳಬಲ್ಲೆನೆಂಬ ಹುಂಬ ವಿಶ್ವಾಸ, ಏನನ್ನೂ ಹೊಸದಾಗಿ ಹೇಳದೆ ಪ್ಯಾಕೇಜಿನ ಹಾಗೆ ತುಂಬಿಕೊಡುವ ಪುರಾಣ ಪಾತ್ರಗಳು,  ಒಳಲಯವನ್ನು ಕಾಪಾಡಿಕೊಳ್ಳಲು‌ ಸೋತ ಗದ್ಯಸಾಲುಗಳು, ಅನುಭವವೊಂದನ್ನು‌ ಕವನವಾಗಿಸುವಾಗ ಗೈರಾದ ಕುಶಲತೆ, ತಿಣುಕಿ ಕೂರಿಸಿದ ರೂಪಕಗಳು, ಇಂತಹುವನ್ನು ಕಾವ್ಯದ ಹೆಸರಿನಲ್ಲಿ ಸರಬರಾಜು ಮಾಡುವ ಕಂತ್ರಾಟುದಾರರಾದರೆ ಕವಿಗಳು, ಓದುಗರು ಅವುಗಳನ್ನು ಯಾಕಾದರೂ ಒಪ್ಪಿಕೊಳ್ಳಬೇಕು? 

ಈ ಪ್ರಶ್ನೆಗಳನ್ನು ಮತ್ತೆ ಮತ್ತೆ ಕೇಳಿಕೊಳ್ಳುವಂತೆ ಮಾಡಿದ್ದು ನನ್ನ ಕೈಯಲ್ಲಿದ್ದ  ಪ್ರಜಾವಾಣಿ ದೀಪಾವಳಿ ಕಾವ್ಯಸ್ಪರ್ಧೆಯ ಅಂತಿಮ ಸುತ್ತಿನ ಐವತ್ತೆರಡು ಕವಿತೆಗಳು. ಪ್ರಜಾವಾಣಿ ಸಾಹಿತ್ಯ ಸ್ಪರ್ಧೆಗಳಿಗಿರುವ ದೀರ್ಘ ಹಿನ್ನೆಲೆ, ಅವುಗಳಲ್ಲಿ ವಿಜೇತರಾದ ಬರಹಗಾರರ ಸಾಹಿತ್ಯ ಬಾಳಿಕೆಗಳು ಈಗ ದಂತಕಥೆಗಳಾಗಿವೆ. ಒಂದು ಬಿರುದಿನ ಹಾಗೆ ಈ ಗೆಲುವು ಅವರನ್ನು ಹಿಂಬಾಲಿಸುತ್ತದೆ. ಕನ್ನಡ ಸಾಹಿತ್ಯದ ಓದುಗರು ಅವರ ಆಸಕ್ತಿಗಳು ಅದೆಷ್ಟೆ ಛಿದ್ರಗೊಂಡಿದ್ದರೂ ಈ ಸ್ಪರ್ಧೆಗಳತ್ತ ಒಂದು ನಿಗದಲ್ಲೆ ಇರುತ್ತಾರೆ. ಈ ಸವಾಲೇ ನನ್ನನ್ನು ಹೆಚ್ಚು ಬಾಧಿಸಿದ್ದು! ನಾವು ಆಯ್ಕೆ ಮಾಡುವ ಕವಿತೆಗಳು ಈ ನಿರೀಕ್ಷೆಯನ್ನು‌ ಮುಟ್ಟಬಲ್ಲುವೆ ಎಂಬುದನ್ನು ಪದೇ ಪದೇ ಕೇಳಿಕೊಂಡೇ ಮುಂದುವರೆದೆ. ಎಷ್ಟೇ ತಿರುವಿ ಮಗುಚಿದರೂ  ಈ ಕೇಳಿಕೆಗೆ ಸಂಪೂರ್ಣವಾಗಿ ಸಮಾಧಾನ ಕೊಡುವ ಕವಿತೆಗಳು ಕಾಣಲಿಲ್ಲ. ಆಯ್ಕೆ ಅನಿವಾರ್ಯ. ಕೈಲಿದ್ದವುಗಳಲ್ಲೇ‌ ಉತ್ತಮವೆಂದು ಅನ್ನಿಸಿದ ಈ ಎಂಟು ಕವಿತೆಗಳನ್ನು ಕೆಳ ಕಾಣಿಸಿದಂತೆ ಬಹುಮಾನಕ್ಕೆ ಆರಿಸಿದ್ದೇವೆ. ಆದರೆ ನಿರಾಶೆಯೊಂದು ಈಗಲೂ ಕುಕ್ಕುತ್ತಿದೆ. ನಮ್ಮ ಸುತ್ತಲೂ ಉತ್ತಮವಾಗಿ ಬರೆಯುವ ಅನೇಕ ಕವಿಗಳಿದ್ದೂ ಕೊರತೆ ಉಳಿಯಿತು. ಹಾಗಾದರೆ ಒಳ್ಳೆಯ ಕವಿತೆ ಎಂದರೇನು? ಈ ಪ್ರಶ್ನೆಗೆ ಜಗತ್ತಿನ ಯಾವ ಕಾವ್ಯ ಮೀಮಾಂಸೆಯೂ ಆಚಂದ್ರಾರ್ಕವಾದ ಉತ್ತರವನ್ನು ಕೊಡಲು ಸಾಧ್ಯವಿಲ್ಲ. ಕಾವ್ಯ ಲಕ್ಷಣವೆಂಬುದು‌ ಅನವರತ ಬದಲಾವಣೆಗೊಳಪಡುವ ವಿದ್ಯಮಾನ. ಕನ್ನಡ ಕಾವ್ಯವನ್ನೆ ಉದಾಹರಿಸುವುದಾದರೆ,  ಈ ಒಂದು ಸಾವಿರ ವರ್ಷಗಳಲ್ಲಿ ಅದು ತಾನು ನಂಬಿದ್ದ ಅನೇಕ ಲಕ್ಷಣ ಸೂತ್ರಗಳನ್ನು ನಿರ್ದಾಕ್ಷಿಣ್ಯವಾಗಿ ಕಳಚಿ ಬಿಸುಡಿದೆ. ಅಷ್ಟೇ ಆಪ್ಯಾಯಮಾನವಾಗಿ ಹೊಸ ಲಕ್ಷಣಗಳನ್ನು ತಬ್ಬಿಕೊಂಡಿದೆ. ಹೀಗೆ ತಬ್ಬಿಕೊಂಡ ಹೊಸ ಲಕ್ಷಣಗಳು ಗೋಡೆಗೆ ಹೊಂದದ ಗಿಲಾವಿನಂತೆ ಉಳಿದದ್ದೂ ಇದೆ, ಉದುರಿದ್ದೂ ಇದೆ. ಸಮಾಜದ ಚಹರೆ ಬದಲಾದಂತೆ ಕಾವ್ಯಲಕ್ಷಣವೂ ಪಲ್ಲಟವಾಗುವುದು ಇದಕ್ಕೆ ಕಾರಣ. ಒಂದಲ್ಲ ಹತ್ತು ಬಗೆಯ ಒತ್ತಡಗಳಿಂದ ಸಮಾಜವು ತನ್ನ ಚಹರೆಯನ್ನು ಬದಲಾಯಿಸಿಕೊಳ್ಳುವುದು ಅದಕ್ಕೆ ಅನಿವಾರ್ಯ, ಅದನ್ನೇ ಅನುಸರಿಸುವ ಸಾಹಿತ್ಯಕ್ಕೂ ಅದು ಅನಿವಾರ್ಯ. 

ಈ ಹೊತ್ತಿನ ವಿಶೇಷವೆಂದರೆ ಭಯ ಹುಟ್ಟಿಸುವಷ್ಟು ವೇಗದಲ್ಲಿ ಆ ಬದಲಾವಣೆಗಳು ಘಟಿಸುತ್ತಿರುವುದು. ಅದೇ ವೇಗದಲ್ಲಿ ಕಾವ್ಯಲಕ್ಷಣಗಳೂ  ಬದಲಾಗಬೇಕಲ್ಲವೇ ಎಂಬ ಸಮಾಧಾನವನ್ನು ಧರಿಸುತ್ತ ಅದೇ ಕೈಗೋಲಿನ ನೆರವಿನಿಂದ ಈ ಕವನಗಳನ್ನು ಹಲವು ಸಲ ಓದಿ ಸಮಕಾಲೀನ ಸಂಕಟಗಳಿಗೆ ತುಡಿಯುತ್ತಿವೆ ಅನಿಸಿದ ಕವಿತೆಗಳನ್ನು ಕೆಳಕಂಡಂತೆ ಆಯ್ಕೆ ಮಾಡಿದ್ದೇವೆ.

ಮೊದಲನೆಯ ಬಹುಮಾನ: ಬಾಲೆ , ಬೆತ್ತಲೆ ಬೊಂಬೆ ಮತ್ತು ಕಡಲು

ಇದು ಜಗತ್ತಿನ ಯಾವ ಮೂಲೆಯಲ್ಲಾದರೂ ಹೆಣ್ಣುಮಗುವೊಂದರ ಮೇಲೆ ಜರಗಬಹುದಾದ ನಿರ್ಲಜ್ಜ ಪ್ರಹಾರವನ್ನು ಕುರಿತು ಹೇಳುವ ಕವಿತೆ. ಇದನ್ನೋದುತ್ತ ನಾವೇ ಸಾಕ್ಷಿಯಾದ ಅನೇಕ ಎಳೆ ಬಾಲೆಯರ ಮೂಕ ಸಂಕಟ ಮತ್ತೆ ಬಂದು ಎದೆಯನ್ನು ಕಲಕಿ‌ಹೋಯ್ತು. ಮಾತನಾಡದ ಬೊಂಬೆಗೂ ಈ ಎಳೆಯ ಹೆಣ್ಣುಗಳಿಗೂ ಕವಿತೆ ಥಳಕು ಹಾಕುತ್ತದೆ. 

ಎರಡನೆಯ ಬಹುಮಾನ: ಮತ್ತೊಂದು ನರಕ

ಆಧುನಿಕ ಜಗತ್ತು ತಾನು ಕಲ್ಪಿಸಿಕೊಂಡ ಸುಖ–ಸಂಭ್ರಮವೊಂದನ್ನು ನಿರ್ಮಿಸಲು ಅದೆಷ್ಟು ಮನೆಹಾಳು ಕೆಲಸ ಮಾಡುತ್ತಿದೆಯೆಂಬುದನ್ನು ಈ ಕವಿತೆ ಹೇಳುತ್ತದೆ. ಮೂರನೆಯವನ ತಲುಬಿಗಾಗಿ ತನ್ನ ನೆಲ, ಹೊಲ, ಮನೆ, ಜನಗಳೆಂಬ ಭಾವತಂತುಗಳನ್ನು‌ ಕತ್ತರಿಸಿಕೊಂಡು  ಊರಿಂದೂರಿಗೆ, ದೇಶದಿಂದ ದೇಶಕ್ಕೆ, ಖಂಡದಿಂದ ‌ಖಂಡಕ್ಕೆ, ಒಂದು ನರಕದಿಂದ ಇನ್ನೊಂದಕ್ಕೆ ಬದುಕನ್ನು ಒತ್ತೆಯಿಟ್ಟು ಗುಳೆ ಹೋಗುವ ಸಾಮಾನ್ಯರ ಯಾತನೆಯನ್ನು ಕವನ ದಾಖಲಿಸುತ್ತದೆ. ಕವಿತೆಗೆ ಕೈ ಕಾಲಿಲ್ಲ ನಿಜ, ಓದುವವರಿಗೆ ಇರುತ್ತದೆ. ಅವರಲ್ಲಿ ಇಂತಹ ಕವಿತೆಗಳು ಚಲನೆಯನ್ನುಂಟು ಮಾಡಬೇಕು.

ಮೂರನೆಯ ಬಹುಮಾನ: ಬೆಟ್ಟದೂರು ಮತ್ತು ನಾನು

ಬೆಟ್ಟದೂರೆಂಬ ಹಳ್ಳಿಯಿಂದ ಕಾರ್ಪೊರೇಟ್ ನಗರಕ್ಕೆ ಬಂದ ಯುವತಿಯೋರ್ವಳು ತನ್ನಮ್ಮ ಹಾಡಿದ ಲಾಲಿ ಹಾಡಿನ ಸಮೇತ ತನ್ನ ಹಳ್ಳಿಯ  ಸಮಸ್ತ ಸೊಗಡನ್ನೂ ಕಂಡು, ಕದ್ದು ಮಾರ್ಕೆಟಿಂಗ್ ಮಾಡಿ ಕೊಂದಿದ್ದಾಳೆ. ಈಗ ಅಲ್ಲೂ ಏನೂ ಉಳಿದಿಲ್ಲ. ಇಲ್ಲೂ ಏನನ್ನಾದರೂ ಸ್ವಂತವಾಗಿ ಸೃಷ್ಟಿಸಿ ‘ಅಮ್ಮನಾಗುವ’ ಸಾಧ್ಯತೆ ಇವಳಲ್ಲೂ ಇಲ್ಲ. ಈ ಅಸಹ್ಯ ಬೆಳವಣಿಗೆಗೂ ಅಷ್ಟೇ ನಾವೆಲ್ಲರೂ ಸಾಕ್ಷಿದಾರರೇ!

ಮೆಚ್ಚುಗೆಗೆ ಪಾತ್ರವಾದ ಕವಿತೆಗಳು 

ಅ. ಕಣ್ಣಬೀದಿಯಲ್ಲಿ ಹನಿದೇರು: ಈ ದೀರ್ಘ ಕವಿತೆಯು ತನ್ನ ದಟ್ಟ ರೂಪಕಗಳನ್ನು ಮುಖ್ಯ ಭಾವದ ವಿಸ್ತರಣೆಯಿಂದಾಚೆಗೆ ಒಂದಿಂಚೂ ಚೆಲ್ಲುವರೆಯದಂತೆ ಹಿಡಿದ ಜಾಣ್ಮೆಯಿಂದಾಗಿ ಆ ತೀವ್ರ ದುಃಖಭಾವವು ಓದುಗರನ್ನೂ ಆವರಿಸುವಂತೆ ಮಾಡುತ್ತದೆ. ದೀರ್ಘತೆಯೆ ಇದರ ತೊಡಕು ಕೂಡ.

ಆ.  ಮೈ ತುಂಬಾ ಯೋನಿಗಳುಳ್ಳ ಶಾಪಗ್ರಸ್ತೆಯ ಅಳಲು: ಈ ಕವಿತೆ ಪುರಾಣ ಪ್ರತಿಮೆಯನ್ನು ನೆನಪಿಸುತ್ತ ಅದನ್ನು ಈ ಹೊತ್ತಿನ ನಮ್ಮ ಭೂಮಿಯ ಮೇಲೆ ನಾವೇ ನಡೆಸುತ್ತಿರುವ ಅತ್ಯಾಚಾರದ ಕಡೆಗೆ ಹೊರಳಿಸಿದೆ. ಹೆತ್ತು ಸುಸ್ತಾದರೂ ಬಿಡದೆ ಭೂಮಿಯಿಂದ ಬಲವಂತ ಪ್ರಸವಗಳನ್ನು ನಡೆಸುವ ಈ ನಮ್ಮ ಹೇಯ ಕ್ರಿಯೆ ಚಂದ್ರನಿಗೂ ವರ್ಗಾವಣೆಯಾಗಿ ಬಿಟ್ಟರೆ ಎನಿಸಿತು. 

ಇ. ಅದು:  ಗುಟ್ಟು ಬಿಟ್ಟುಕೊಡದ ರೋಚಕದಂತೆ ಕಟ್ಟಲ್ಪಟ್ಟ ಈ ಕವಿತೆ ಮಾನವ ದೇಹ ಮತ್ತು ಮನಸ್ಸುಗಳನ್ನು ನಿಧಾನವಾಗಿ ಆಕ್ರಮಿಸಿ ಛಿದ್ರಗೊಳಿಸುವ ಕಾಲ ಪ್ರಹಾರವನ್ನು ಕುರಿತು ಹೇಳುತ್ತದೆ. ಕನ್ನಡಕ್ಕೆ ಹೊಸದಲ್ಲವಾದರೂ ಈ ಕವಿತೆಯ ಬಂಧ ಓದಿ ಓದಿ ಸುಸ್ತಾದ ಗದ್ಯಸಾಲುಗಳ ನಡುವೊಂದು ನೆಮ್ಮದಿ ಕಾಣಿಸಿದ್ದು ದಿಟ. 

ಈ. ತಾಯಿಯಾಗಿದ್ದೇನೆ: ಹೆತ್ತು ಮಾತ್ರವೇ ತಾಯಿಯಾಗಬೇಕಿಲ್ಲ, ತಾಯಿಯಾಗುವ  ಹಂಬಲದಲ್ಲೆ ತಾನು ತಾಯಿಯಾಗಿದ್ದೇನೆ ಎಂದು ಈ‌ ಕವಿತೆಯ, ಟೆಸ್ಟ್ ಕಿಟ್ ಹಿಡಿದ ಜೀವಕಾತುರೆ ಹೆಣ್ಣು ಹೇಳುತ್ತಾಳೆ. ಪ್ರತಿ ಹೆಣ್ಣುಮಗುವಿನ ಹುಟ್ಟೂ ಈ‌ ಜಗತ್ತಿಗೆ ಹೊಸ ತಾಯಿಯೊಬ್ಬಳ ಸೇರ್ಪಡೆ ಎಂಬ ಮಾತಿದೆ. ಹುಟ್ಟುವಾಗಲೆ ಪೊರೆವ ಗುಣ ಹೊತ್ತು ಬರುವ ಪ್ರತಿ ಹೆಣ್ಣೂ ಹೆರದಿದ್ದರೂ ತಾಯಿಯೇ ಎಂಬ ಘನ ಆಶಯದ ಕವಿತೆ ಇದು.

ಉ. ಆತ್ಮ ಸಿಲುಬೆಯಲ್ಲಿ ಏಸು ಜನನವಾದರೆ: ಈ ಹೊತ್ತಿನ ನಮ್ಮ ಸಂದರ್ಭದಲ್ಲಿ ಒಂದು ಸ್ವಶೋಧನೆಯ ಅಗತ್ಯ ಎಲ್ಲರಿಗೂ ಇದೆ ಎಂದು ಎಚ್ಚರಿಸುವ ಕವಿತೆ.

ವಿಜೇತರು, ಅಂತಿಮ ಸುತ್ತಿಗೆ ಪ್ರವೇಶ ಪಡೆದವರು‌ ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಕವಿಗಳಿಗೂ ಅಭಿನಂದನೆಗಳು ಮತ್ತು ದೀಪಾವಳಿಯ ಶುಭಾಶಯಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT