ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯತ್ನಿಸಿದಲ್ಲಿ ಯಶಸ್ಸು ಖಂಡಿತ

Last Updated 17 ಜುಲೈ 2018, 19:30 IST
ಅಕ್ಷರ ಗಾತ್ರ

ಮನಸ್ಸು ಮಾಡಿದ್ದೇ ಆದಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ. ‘ಮನಸ್ಸಿದ್ದರೆ ಮಾರ್ಗ’ ಹೌದಾದರೂ ಅದಕ್ಕೆ ಪೂರಕವಾಗಿ ಪ್ರಯತ್ನವೂ ಅತ್ಯಾವಶ್ಯಕ ಅಲ್ಲವೇ? ಸುಮ್ಮನೇ ಅಂದುಕೊಂಡ ಮಾತ್ರಕ್ಕೆ ಕಾರ್ಯ ಜರುಗಲು ಸಾಧ್ಯವಿಲ್ಲ. ಯಾವುದೇ ಕೆಲಸ ಸಾಧನೆಗೂ ಪ್ರಯತ್ನವೇ ಅಡಿಗಲ್ಲು. ಯತ್ನಿಸದೇ ಒಂದು ಹುಲ್ಲುಕಡ್ಡಿಯೂ ಆಚೀಚೆಗೆ ಸರಿಸಲಾಗದು. ಪಂಚತಂತ್ರದ ಈ ಶ್ಲೋಕದ ಇಂಗಿತವೂ ಅದೇ:

ಉದ್ಯಮೇನ ಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈಃ |

ನ ಹಿ ಸಿಂಹಸ್ಯ ಸುಪ್ತಸ್ಯ ಪ್ರವಿಶಂತಿ ಮುಖೇ ಮೃಗಾಃ ||

‘ಪ್ರಯತ್ನದಿಂದ ಕಾರ್ಯಗಳು ಸಿದ್ಧಿಸುತ್ತವೆಯೇ ವಿನಾ ಬರಿಯ ಬಯಕೆಗಳಿಂದಲ್ಲ; ನಿದ್ರಿಸುತ್ತಿರುವ ಸಿಂಹದ ಬಾಯಲ್ಲಿ ಮೃಗಗಳು ಬಂದು ತಾವಾಗಿ ಪ್ರವೇಶಿಸುವುದಿಲ್ಲ’ ಎಂಬುದು ಇದರ ಭಾವಾರ್ಥ.

ಬಹಳಷ್ಟು ಜನ ಆರಂಭಶೂರರು. ಅತ್ಯುತ್ಸಾಹದಿಂದಲೇ ಅಂದುಕೊಂಡಿದ್ದನ್ನು ಸಾಧಿಸಲು ಉದ್ಯುಕ್ತರಾಗುತ್ತಾರೆ. ಆದರೆ ಆರಂಭದಲ್ಲಿದ್ದ ಉತ್ಸಾಹ ಶೀಘ್ರದಲ್ಲೇ ನೆಲಕಚ್ಚಿ ನಿರುತ್ಸಾಹದಿಂದ ನಕರಾತ್ಮಕ ನಿಲುವನ್ನು ತಳೆದು, ‘ಈ ಕೆಲಸ ಬಲು ಕಠಿಣ, ನನ್ನ ಕೈಲಾಗದು; ಗುರಿ ಮುಟ್ಟುವುದು ಕಷ್ಟ; ನನ್ನ ಭಾಗ್ಯದಲ್ಲಿ ಅದರ ಲಭ್ಯವಿಲ್ಲ’ ಎಂದು ತನ್ನ ದೌರ್ಭಾಗ್ಯವನ್ನು ಹಳಿಯುತ್ತಾ ಕೊರಗುತ್ತಾ ಸುಮ್ಮನೇ ಇದ್ದುಬಿಡುವುದು ಇಂಥವರ ಸ್ವಭಾವ.

ಜಾತಕಬಲದ ಮೇಲೆ ಪೂರ್ತಿಯಾಗಿ ಅವಲಂಭಿಸಿ ಹೋಮ-ಹವನ, ಪೂಜೆ–ಪುನಸ್ಕಾರಗಳಿಗೆ ಹೇರಳ ಹಣ ಪೋಲು ಮಾಡಿ ಅಂದುಕೊಂಡ ಕಾರ್ಯ ಕೈಗೂಡಿತೆಂದೇ ಸಂಭ್ರಮಿಸುವ ಮತ್ತೊಂದು ವರ್ಗಕ್ಕೆ ದೈವಬಲ, ಪೂಜಾಬಲದ ಮೇಲೆ ಆದಮ್ಯ ನಂಬಿಕೆ. ಇರಲಿ, ಶ್ರದ್ಧಾಭಕ್ತಿಯಿಂದ ದೇವಕಾರ್ಯಗಳನ್ನು ಮಾಡುವುದರಿಂದ ಮನೋಬಲವನ್ನು ಹೆಚ್ಚಿಸಿಕೊಳ್ಳಬಹುದಾದರೆ ಒಳ್ಳೆಯದೇ.

ಕಷ್ಟ–ನಷ್ಟಗಳಿಂದ ಕುಗ್ಗಿಹೋದವರಲ್ಲಿ ಇಂತಹ ಕ್ರಿಯೆಗಳ ಆಚರಣೆ ಒಂದು ರೀತಿಯಲ್ಲಿ ಮನೋಚಿಕಿತ್ಸಕರಂತೆ ಕೆಲಸಮಾಡಿ ಆತ್ಮಸ್ಥೈರ್ಯ ತುಂಬುವುದಾದರೆ ನಿಜಕ್ಕೂ ಸ್ವಾಗತಾರ್ಹವೇ. ಆದರೆ ದೈವೇಚ್ಛೆಯೆಂದು ದೇವರ ಮೇಲೆ ಭಾರಹಾಕಿ ಮನುಷ್ಯಪ್ರಯತ್ನವನ್ನು ಸಂಪೂರ್ಣವಾಗಿ ಕಡೆಗಣಿಸುವುದು ಎಷ್ಟು ಸರಿ? ಪ್ರಯತ್ನವನ್ನೇ ಮಾಡದೆ ಗುರಿಯನ್ನು ಮುಟ್ಟಬೇಕಾದರೆ ಪವಾಡ ಘಟಿಸಬೇಕಷ್ಟೆ! ಎಲ್ಲವೂ ದೈವೇಚ್ಛೆಯೆಂದು ನಿಷ್ಕ್ರಿಯನಾದಲ್ಲಿ ಸಮಸ್ಯೆಯೇ ಹೊರತು ಸಾಧನೆಯೆಲ್ಲಿಯದು?

ವಿಹಾಯ ಪೌರುಷಮ್ ಯೋ ಹಿ ದೈವಮೇವಾವಲಂಬತೇ |

ಪ್ರಾಸಾದ ಸಿಂಹವತ್ತಸ್ಯ ಮೂರ್ಧ್ನಿ ತಿಷ್ಠನ್ತಿ ವಾಯಸಾಃ ||

‘ಯಾವಾಗ ಪುರುಷಪ್ರಯತ್ನವನ್ನು ಬಿಟ್ಟು ದೈವವನ್ನೇ ನಂಬಿಕೊಂಡಿರುತ್ತಾನೋ ಅವನ ತಲೆಯ ಮೇಲೆ ಉಪ್ಪರಿಗೆಯ ಮೇಲಿನ ಸಿಂಹದ ಪ್ರತಿಮೆಯ ಮೇಲೆ ಹೇಗೋ ಹಾಗೆ ಕಾಗೆಗಳು ಕುಳಿತುಕೊಳ್ಳುತ್ತವೆ.’

‘ಯಶಸ್ತಿಲಕಚಂಪೂ’ವಿನ ಈ ಶ್ಲೋಕದ ಒಳಾರ್ಥವೇ ಇದು. ದೈವೇಚ್ಛೆಯ ಮುಂದೆ ಹುಲುಮಾನವರ ಆಟವೇನೂ ನಡೆಯದು ಎಂದು ತಟಸ್ಥರಾಗಿದ್ದಲ್ಲಿ ಕ್ಷುಲ್ಲಕ ಸಂಕಷ್ಟಗಳೂ ಬೆಟ್ಟದಂತೆ ಬೆಳೆದು ಮನುಷ್ಯನನ್ನಾವರಿಸಿ ಆಳತೊಡಗುತ್ತವೆ.

ಬರೀ ಕಾರ್ಯೋನ್ಮುಖರಾದರೆ ಸಾಲದು; ದೃಢ ಸಂಕಲ್ಪವೂ ಬೇಕು. ಯಾವುದೇ ಕೆಲಸವೂ ಯಶಸ್ಸನ್ನು ಕಾಣಲು ಪರಿಶ್ರಮ ಪಡಬೇಕು. ಕಾರ್ಯ ಸಿದ್ಧಿಸಲು ಬಹಳಷ್ಟು ಹೆಣಗಬೇಕು. ಈ ಪ್ರಯತ್ನದಲ್ಲಿ ಸೋಲುಗಳೂ ಎದುರಾಗಬಹುದು. ಹಿಮ್ಮೆಟ್ಟದೇ ‘ಮರಳಿ ಯತ್ನವ ಮಾಡು’ ನಾಣ್ನುಡಿಯಂತೆ ಅಚಲವಾದ ನಂಬಿಕೆಯಿಂದ ಹಿಡಿದ ಕಾರ್ಯದಲ್ಲಿ ಮುಂದುವರೆಯಬೇಕು. ಹೀಗೆ ಸತತ ಪ್ರಯತ್ನಪಟ್ಟರೆ ಯಶಸ್ಸು ನಮ್ಮ ಕೈಹಿಡಿಯುವುದರಲ್ಲಿ ಸಂಶಯವಿಲ್ಲ.

ಗೆದ್ದವನಿಗೂ ಸೋತವನಿಗೂ ನಡುವೆ ಇರುವ ಅತಿಮುಖ್ಯ ವ್ಯತ್ಯಾಸವೆಂದರೆ ‘ಬಿಡದ ಯತ್ನ’. ಹೇಗೆ ಭಗೀರಥನು ಕಠಿಣ ತಪಸ್ಸನ್ನಾಚರಿಸಿದ; ಗಂಗಾವತಾರಣವಾದಾಗ ಉದ್ಭವಿಸಿದ ತೊಂದರೆಗಳಿಗೆ ಅವನು ಹೆದರದೇ ಅವುಗಳ ನಿವಾರಣೆಗಾಗಿ ಪುನಃ ಘೋರ ತಪಸ್ಸನ್ನು ಕೈಗೊಂಡ; ಕೊನೆಗೆ ಶಿವನನ್ನು ಒಲಿಸಿ ಸಮಸ್ಯೆಯನ್ನು ಬಗೆಹರಿಸಿಕೊಂಡ. ಹಾಗೆಯೇ ಅವಿರತವಾಗಿ ಯತ್ನಿಸಿದಲ್ಲಿ ಮಾತ್ರವೇ ಯಶಸ್ಸು ಕಟ್ಟಿಟ್ಟ ಬುತ್ತಿ.

ಮನುಷ್ಯಪ್ರಯತ್ನದಲ್ಲಿ ಗೆಲುವೆನ್ನುವುದು ನಾವು ನೋಡುವ ದೃಷ್ಟಿಕೋನದ ಮೇಲೂ ಅವಲಂಬಿಸಿರುತ್ತದೆ. ಥಾಮಸ್ ಆಲ್ವಾ ಎಡಿಸನ್ ವಿದ್ಯುತ್ ಬಲ್ಬ್‌ ಅನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಯತ್ನಿಸುವಾಗ ಅನೇಕ ಪ್ರಯೋಗಗಳ ಫಲಿತಾಂಶಗಳು ನಿರಾಶಾದಾಯಕವಾಗಿದ್ದವು. ಸ್ನೇಹಿತನೊಬ್ಬನಿಗೆ ಅವನು ನೀಡಿದ ಉತ್ತರ - ‘ಇಲ್ಲಿಯವರೆಗೆ ಯಾವ ಯಾವ ಲೋಹಮಿಶ್ರಣವನ್ನು ಬಳಸಿದರೆ ಬೆಳಕು ಹರಿಯದು ಎಂಬುದು ತಿಳಿಯಿತು. ಇನ್ನು ಬೆಳಕು ಬರುವಂತಹ ಲೋಹಮಿಶ್ರಣಗಳನ್ನೇ ಕಂಡುಹಿಡಿಯುತ್ತೇನೆ’. ಹೀಗೆ ಅವನು ಸೋಲನ್ನೇ ಜ್ಞಾನದ ಮೆಟ್ಟಿಲಾಗಿಸಿಕೊಂಡು ಯತ್ನಿಸಿದಾಗಲೇ ಅಲ್ಲವೇ ಬಲ್ಬ್‌ನ ಆವಿಷ್ಕಾರವಾದದ್ದು.

ಮನುಷ್ಯಪ್ರಯತ್ನದ ಪ್ರಾಮುಖ್ಯವನ್ನು ಎತ್ತಿಹಿಡಿಯಲು ‘ಒನ್‌ ಪರ್ಸೆಂಟ್‌ ಇನ್‌ಸ್ಪಿರೇಷನ್‌ ನೈನ್ಟಿನೈ ಪರ್ಸೆಂಟ್‌ ಪರ್ಸ್ಪಿರೇಷನ್‌’ (ಒಂದು ಭಾಗ ಸ್ಫೂರ್ತಿ, ತೊಂಬತ್ತು ಭಾಗ ಬೆವರು) – ಎಡಿಸನ್‌ನ ಈ ಪ್ರಸಿದ್ಧ ಸಾಲುಗಳೇ ಸಾಕು. ಬರೀ ಉತ್ಸಾಹದಿಂದ ಏನನ್ನೂ ಸಾಧಿಸಲಾಗದು, ಪ್ರಯತ್ನದ ಬಲವೇ ಯಶಸ್ಸಿಗೆ ಸೋಪಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT