ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆಗೊಂಬೆ ಡ್ಯಾನ್ಸ್‌!

ಮಾಯಕೊಂಡದಲ್ಲೊಂದು ವಿಶಿಷ್ಟ ದಸರೆ ಆಚರಣೆ
Last Updated 8 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

ದಸರಾ ಉತ್ಸವದಲ್ಲಿ ಜೀವಂತ ಆನೆಗಳನ್ನು ಬಳಸುವುದು ಸಹಜ. ಆದರೆ, ಬೃಹತ್ ಆನೆಗೊಂಬೆಗಳನ್ನು ಮಾಡಿ, ಅದನ್ನೇ ಹೊತ್ತುಕೊಂಡು ಕುಣಿಸುವುದನ್ನು ಎಲ್ಲಾದರೂ ಕಂಡಿದ್ದೀರಾ?

ಇಲ್ಲ ಎನ್ನುವುದಾದರೆ ಈ ಬಾರಿ ದಾವಣಗೆರೆ ಜಿಲ್ಲೆ ಮಾಯಕೊಂಡದ ದಸರಾ ಉತ್ಸವಕ್ಕೆ ಬನ್ನಿ. ಅಲ್ಲಿ ಮನುಷ್ಯರೇ ತಾವು ನಿರ್ಮಿಸುವ ಆನೆಗಳ ಪ್ರತಿರೂಪವನ್ನು ಹೊತ್ತು ಕುಣಿಯುವುದನ್ನು ನೋಡಬಹುದು. ಇದೇ ಕಾರಣದಿಂದಲೇ ಈ ಊರಿನ ದಸರಾವನ್ನು ’ಮಾನವ ನಿರ್ಮಿತ ಆನೆಗಳ ಕುಣಿತ ಉತ್ಸವ’ ಎಂದು ಕರೆಯುತ್ತಾರೆ. ಇದೊಂದು ವಿಶಿಷ್ಟ ಆಚರಣೆಯಾಗಿದೆ.

ಥೇಟ್ ಆನೆಗಳೇ ಕುಣಿದಂತೆ...
ಮಾಯಕೊಂಡದಲ್ಲಿ ಪಾಳೆಗಾರರ ಕಾಲದ ಕಲ್ಗಿ ಗರಡಿ, ಪೇಟೆ ಗರಡಿ ಮತ್ತು ಕೋಟೆ ಗರಡಿ ಎಂಬ ಮೂರು ಗರಡಿ ಮನೆಗಳಿವೆ. ಪ್ರತಿ ಗರಡಿ ಮನೆಯ ಹುಡುಗರು ಒಂದೊಂದು ಆನೆ ಪ್ರತಿಕೃತಿ ತಯಾರಿಸುತ್ತಾರೆ. ಒಟ್ಟು ಮೂರು ಆನೆ ಗೊಂಬೆಗಳು ಉತ್ಸವದಲ್ಲಿರುತ್ತವೆ.

ಉತ್ಸವಕ್ಕೆ ಒಂದು ವಾರ ಇರುವಂತೆಯೇ ಗಜರಾಜನ ಪ್ರತಿಕೃತಿಗಳ ತಯಾರಿಕೆ ಶುರುವಾಗುತ್ತದೆ. ಖಾಲಿ ಚಕ್ಕಡಿ ಮೇಲೆ ಹತ್ತು ಅಡಿ ಎತ್ತರದಲ್ಲಿ ಕಬ್ಬಿಣದ ಬಂಕಗಳನ್ನು ಬಾಗಿಸಿ, ಅದರ ಮೇಲೆ ಕಂಬಳಿ, ಕಪ್ಪುಬಟ್ಟೆ ಹೊದಿಸುತ್ತಾರೆ. ಅದೇ ಆನೆಯ ದೇಹ. ಸೊಂಡಿಲನ ರೂಪದಲ್ಲಿರುವ ಬಂಡಿಯ ಮೂಕಿಗೆ ಸೊಂಡಿಲಾಕಾರದ ಕಪ್ಪು ಬಟ್ಟೆ ತೊಡಿಸುತ್ತಾರೆ. ಅದರ ಮೇಲೆ ರಂಗು ರಂಗಿನ ಚಿತ್ತಾರಗಳನ್ನು ಬಿಡಿಸುತ್ತಾರೆ. ಅಲ್ಲಿಗೆ ಸೊಂಡಿಲು ಸಿದ್ಧವಾಯಿತು.

ಹೇಗೂ ಆನೆಗೆ ಮೊರದಗಲದ ಕಿವಿ ಅಲ್ಲವೇ. ಅದಕ್ಕಾಗಿ, ಮೊರಗಳಿಂದಲೇ ಕಿವಿಗಳನ್ನು ಮಾಡುತ್ತಾರೆ. ತಲೆ, ಮುಖ ಎಲ್ಲಕ್ಕೂ ಮೊರವೇ ಆಧಾರ. ಕಣ್ಣುಗಳಿಗೆ ವಿದ್ಯುದ್ದೀಪ ಅಲಂಕರಿಸುತ್ತಾರೆ. ಅವು ಸದಾ ಮಿನುಗುತ್ತಿರುತ್ತವೆ. ಹೀಗೆ ಎಲ್ಲ ಅಲಂಕಾರ ಮಾಡಿ, ಹತ್ತು ಅಡಿ ಎತ್ತರದ ಆನೆ ಸಿದ್ಧವಾಗುತ್ತದೆ.

ರಂಗೇರುವ ಉತ್ಸವ
ಸಂಪ್ರದಾಯದಂತೆ ವಿಜಯದಶಮಿ ದಿನ ಸಂಜೆ ಗ್ರಾಮದ ಎಲ್ಲಾ ದೇವತೆಗಳು ಬನ್ನಿಮಂಟಪಕ್ಕೆ ಹೋಗಿ, ಅಂಬುಚ್ಛೇಧನ ನಡೆಸಿ, ಬನ್ನಿ ಮುಡಿದು, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಬನ್ನಿ ಮುಡಿಯುತ್ತಿದ್ದಂತೆ ಗ್ರಾಮದ ಗರಡಿಮನೆಗಳ ಮುಖ್ಯಸ್ಥರು ವಾದ್ಯದೊಂದಿಗೆ ತೆರಳಿ ಪರಸ್ಪರ ವೀಳ್ಯೆ ನೀಡಿ ಬರುತ್ತಾರೆ. ಆನೆ ನಿರ್ಮಿಸಿದ ಬಂಡಿಗಳಿಗೆ ವಿಶೇಷ ಪೂಜೆ ಸಲ್ಲಿಸಿ, ‘ಆನೆಕುಣಿತ’ ಆರಂಭಿಸಲಾಗುತ್ತದೆ.

ಪ್ರತಿ ಆನೆ ಗೊಂಬೆ ಹೊತ್ತ ಬಂಡಿಗಳು ಮೂರು ದಿಕ್ಕುಗಳಲ್ಲಿರುವ ಗರಡಿ ಮನೆಗಳಿಂದ ಕುಣಿಯುತ್ತಾ ಬಂದು ಆಂಜನೇಯ ವೃತ್ತದಲ್ಲಿ ಸೇರುತ್ತವೆ. ಕಿರುಗುಟ್ಟುವ ಚಕ್ಕಡಿ ಗಾಡಿ ಸದ್ದು, ಪಟಾಕಿ ಆರ್ಭಟ ಮೇಳೈಸಿದ ಮೂರು ಆನೆಗಳ ಕುಣಿತ ಸಂಭ್ರಮ ಮೂಡಿಸುತ್ತವೆ. ಮೂರು ಗರಡಿ ಮನೆಯ ಹುಡುಗರು ತಾವು ತಯಾರಿಸಿದ ಆನೆಗೊಂಬೆಗಳೊಂದಿಗೆ ಉತ್ಸವಕ್ಕೆ ಹೊರಡುತ್ತಾರೆ.

ಮೂಕು ಹಿಡಿದು ಕುಣಿಯುವವರು
ಮೂರು ಬಂಡಿಗಳಲ್ಲಿ, ಒಂದು ಬಂಡಿಯ ನೊಗಕ್ಕೆ ಎತ್ತುಗಳನ್ನು ಕಟ್ಟುತ್ತಾರೆ. ಉಳಿದ ಎರಡು ಬಂಡಿಗಳ ಮೂಕುಗಳನ್ನು ಪೈಲ್ವಾನರು ಹಿಡಿದು, ಚಕ್ಕಡಿಯ ಗಾಲಿಗಳನ್ನು ದೂಕುತ್ತಾ, ಆನೆ ಬಂಡಿ ಕುಣಿಸುತ್ತಾರೆ. ಬಂಡಿಯ ಮೂಕು ಮೇಲೆ ಕೆಳಗೆ ಮಾಡುತ್ತಾ, ಬಂಡಿಯನ್ನು ಹಿಂದಕ್ಕೆ ಮುಂದಕ್ಕೆ ಎಳೆದಾಡಿ, ಆನೆ ಕುಣಿಸುವ ಯುವಕರ ಉತ್ಸಾಹ, ಸಂಭ್ರಮ ಮುಗಿಲು ಮುಟ್ಟುತ್ತದೆ. ತಾವು ತಯಾರಿಸಿದ ಆನೆ ಗೊಂಬೆಯ ಮೇಲೆ ಒಬ್ಬರು ಮಾವುತರಂತೆ ಕುಳಿತಿರುತ್ತಾರೆ. ಗೊಂಬೆಯ ಕಣ್ಣಿಗೆ ಅಳವಡಿಸಿರುವ ವಿದ್ಯುತ್ ದೀಪಗಳು ಮಿನುಗಿದಾಗ ಆನೆಯೇ ಪಿಳಿ ಪಿಳಿ ಕಣ್ಬಿಟ್ಟಂತೆ ಕಾಣುತ್ತದೆ.

ಆನೆಗಳ ಪ್ರತಿಕೃತಿ ಹೊತ್ತ ಬಂಡಿಗಳು ರಭಸದಿಂದ ಓಡುತ್ತಿದ್ದಾಗ, ರಣಬಾಜಿ ನಾದಕ್ಕೆ ಉತ್ಸವದಲ್ಲಿ ನೆರೆದಿದ್ದವರು ಹೆಜ್ಜೆ ಹಾಕುತ್ತಾರೆ. ಕುಸ್ತಿ ಪಟ್ಟು ಪ್ರದರ್ಶಿಸುವ ಪೈಲ್ವಾನರು, ಬೆಂಕಿಯ ಪಂಜು ತಿರುವುತ್ತಿದ್ದಾಗ, ದೂರದಲ್ಲಿ ಕಿವಿ ಗಡಚಿಕ್ಕುವ ಪಟಾಕಿ ಸದ್ದು ಕೇಳಿಸುತ್ತದೆ. ಪಂಜಿಗೆ ಸೀಮೆಎಣ್ಣೆ ಊದಿ ಬೆಂಕಿಬುಗ್ಗೆ ಎಬ್ಬಿಸುವಂತಹ, ಕೌತುಕಗಳು ಒಂದೆಡೆ ಕಾಣುತ್ತವೆ. ಅಲ್ಲಿಗೆ ಮಾಯಕೊಂಡದ ದಸರಾ ಉತ್ಸವ ರಂಗೇರಿದೆ ಎಂದು ಅರ್ಥ. ತಡರಾತ್ರಿಯವರೆಗೂ ಯವಕರು ಆನೆಗೊಂಬೆ ಕುಣಿಸಿ, ತಾವೂ ಕುಣಿದು ಸಂಭ್ರಮಿಸುತ್ತಾರೆ.

ಈ ಆಚರಣೆ ಯಾವಾಗಿಂದ ಆರಂಭವಾಯಿತು ಎನ್ನುವುದಕ್ಕೆ ಸೂಕ್ತ ದಾಖಲೆ ಲಭ್ಯವಿಲ್ಲ. ಆದರೆ, ‘ಇದು ಅನಾದಿ ಕಾಲದ ಆಚರಣೆ’ ಎನ್ನುತ್ತಾರೆ ಹಿರಿಯ ಪೈಲ್ವಾನರಾದ ಬಸಪ್ಪ ಹಾಗೂ ಭೀಮಜ್ಜ. ‘ಚಿಕ್ಕವರಿಂದಲೂ ನಮ್ಮ ಗರಡಿ ಮನೆ ಯುವಕರೇ ಇದನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಹಿರಿಯರು ಹೇಳುವಂತೆ ವಿಜಯನಗರದ ಅರಸರ ಕಾಲದಿಂದಲೂ ನಡೆದುಕೊಂಡು ಬಂದಿದೆಯಂತೆ. ಬೇರೆ ಯಾವುದೇ ಊರಲ್ಲೂ ಇಂಥದ್ದೊಂದು ಆಚರಣೆ ಇದ್ದಂತೆ ಕಾಣುವುದಿಲ್ಲ. ಇಂಥ ಆಧುನಿಕ ಯುಗದಲ್ಲೂ ಸಾಂಪ್ರದಾಯಿಕ ಉತ್ಸವ ಉಳಿಸಿಕೊಂಡು ಬರುತ್ತಿರುವುದು ಸಂತಸದ ವಿಷಯ’ ಎನ್ನುತ್ತಾರೆ ಅವರು.

ಒಟ್ಟಾರೆ ಈ ಆಧುನಿಕ ಯುಗದಲ್ಲೂ ಸಾಂಪ್ರದಾಯಿಕ ಆಚರಣೆಗಳನ್ನು ಮಾಯಕೊಂಡದಂತಹ ಊರಿನವರು ಮುನ್ನಡೆಸಿಕೊಂಡು ಬಂದಿರುವುದು ಆ ಸ್ಥಳದ ಹಿರಿಯರಿಗೆ ಹೆಮ್ಮೆಯ ವಿಷಯವಾಗಿದೆ.

ಆನೆಗೊಂಬೆ ತಯಾರಿಯಲ್ಲಿ ಗರಡಿಮನೆ ಸದಸ್ಯರು
ಆನೆಗೊಂಬೆ ತಯಾರಿಯಲ್ಲಿ ಗರಡಿಮನೆ ಸದಸ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT