ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್ ಕಲಿಯುವ ಜರೂರು – ಸವಾಲು

Last Updated 20 ಫೆಬ್ರುವರಿ 2016, 19:40 IST
ಅಕ್ಷರ ಗಾತ್ರ

ಅಭಿಧಮನಿ, ಅಪಧಮನಿ, ಚಲುವೆಪುಡಿ ಕಾಂತಕ್ಷೇತ್ರ, ಪರಮಾಣುಗಳೆಲ್ಲ ಇಂಗ್ಲಿಷ್‌ ತರಗತಿಗಳಲ್ಲಿ ಹೆಸರು ಬದಲಿಸಿಕೊಂಡು ಬಂದಾಗ ತಾವು ಈ ಹಿಂದೆ ಕಲಿತದ್ದು ಏನೂ ಅಲ್ಲವೇನೋ ಎಂದು ಕನ್ನಡ ಮೀಡಿಯಂ ವಿದ್ಯಾರ್ಥಿಗಳಿಗೆ ಅನಿಸಿಬಿಡುತ್ತದೆ.

ಔಪಚಾರಿಕ ಶಿಕ್ಷಣದ ಪ್ರತಿಹಂತದಲ್ಲೂ ಭಾಷೆಯ ವಿಷಯ ಬಂದಾಗೆಲ್ಲಾ ಕನ್ನಡ ಮತ್ತು ಇಂಗ್ಲಿಷ್ ನಡುವೆ ತೊಳಲಾಡುತ್ತ, ಬಹುಪಾಲು ಕನ್ನಡದಲ್ಲಿಯೇ ಶಿಕ್ಷಣ ಪಡೆದಿರುವ ನನಗೆ ಹೀಗೆಲ್ಲಾ ಅನಿಸುವುದುಂಟು: ಇಂಗ್ಲಿಷ್ ಎಂಬುದೊಂದು ಬರಿಯ ಭಾಷೆಯೇ? ಮಾಧ್ಯಮವೇ? ಅಗತ್ಯವೇ? ಆವಕಾಶಗಳ ಅನಂತಾಗರವೇ? ಜ್ಞಾನದ ಹೆಬ್ಬಾಗಿಲೇ? ಅಲ್ಲವಾದಲ್ಲಿ ಮತ್ತೇನು?

ಅಕ್ಷರಗಳಿಗೆ ತೆರೆದುಕೊಂಡ ಎರಡೋ ಮೂರನೆಯದೋ ತಲೆಮಾರು ನನ್ನದು. ಕಲಿಕೆಯೆಂದರೆ ಅದು ಕನ್ನಡ ಮತ್ತು ಕನ್ನಡದಲ್ಲಿ ಮಾತ್ರ ಎಂದುಕೊಂಡಿದ್ದ ಪರಿಸರ ಮತ್ತು ದಿನಗಳವು. ಚಿಕ್ಕಂದಿನಲ್ಲಿ ಇಂಗ್ಲಿಷ್ ಎಂಬುದು ಇಂಗ್ಲಿಷರು ಬಿಟ್ಟುಹೋದ, ಮುಂದೊದು ದಿನ ಪಠ್ಯದಲ್ಲೂ ಬರುವುದರಿಂದ ಓದಲೇಬೇಕಾದ ಅನಿವಾರ್ಯ ಭಾಷೆ. ಮುಂದೊಂದು ದಿನ ಈ ಭಾಷೆ ಸರ್ವಾಂತರ್ಯಾಮಿಯಾಗಿ ಬದುಕಿನ ಎಲ್ಲಾ ಘಟ್ಟದಲ್ಲೂ ಇಣುಕುವುದೆಂಬ ಕಲ್ಪನೆಯೇ ಇಲ್ಲದ ವಯಸ್ಸದು.

ಕನ್ನಡ ವರ್ಣಮಾಲೆಯಾದಿಯಾಗಿ ಕಾಗುಣಿತ, ಒತ್ತಕ್ಷರ ಇತ್ಯಾದಿಗಳನ್ನು ತುಂಬ ಆಸ್ಥೆಯಿಂದ ಮಕ್ಕಳಿಗೆ ಕಲಿಸುತ್ತಿದ್ದ ಹಿರಿಯರು, ಶಿಕ್ಷಕರಿಗೆ ಇಂಗ್ಲಿಷ್ ಒಂದು ಅಗತ್ಯಭಾಷೆ ಎಂದೆನಿಸುತ್ತಲೇ ಇರಲಿಲ್ಲ. ನನಗಂತೂ ಕನ್ನಡ ವರ್ಣಮಾಲೆಯ ಅ ಆ ಇ ಈ, ಕಾಗುಣಿತ, ಅಂಕಿಗಳು, ಮಗ್ಗಿ, ಇತ್ಯಾದಿಗಳನ್ನು ಕಲಿತ ನೆನಪು ನಿಚ್ಚಳವಾಗಿದೆ. ಆದರೆ ಇಂಗ್ಲಿಷ್ ಕಲಿಕೆ ಆರಂಭವಾದದ್ದು ಯಾವಾಗೆಂದು ನಿರ್ದಿಷ್ಟವಾಗಿ ನೆನಪಿಲ್ಲ. ಆಗ ಇಂಗ್ಲಿಷ್ ಕಲಿಕೆ ಐದನೆಯ ತರಗತಿಗೆ ಆರಂಭವಾಗುತ್ತಿದ್ದುದು. ಹಾಗಾಗಿ ಬಹುಶಃ ಒಂದನೇ ತರಗತಿಯಿಂದ ಐದನೇ ತರಗತಿಯ ಮಧ್ಯದಲ್ಲೆಲ್ಲೊ ಇಂಗ್ಲಿಷ್ ಕಲಿಕೆ ಆರಂಭವಾಗಿರಬೇಕು.

ಇಂಗ್ಲಿಷ್ ಬಲ್ಲ ಪೋಷಕರಾಗಿದ್ದರೆ ಐದನೇ ತರಗತಿಗೂ ಮುನ್ನ ಅಕ್ಷರ ಪರಿಚಯ ಆಗಿರುತ್ತಿತ್ತು. ಇಲ್ಲವಾದರೆ ಅಲ್ಲಿಂದಲೇ ಇಂಗ್ಲಿಷ್ ಅಕ್ಷರ ಕಲಿಕೆ ಆರಂಭ. ಇಂಗ್ಲಿಷ್ ವರ್ಣಮಾಲೆಯ ಪೂರ್ಣ ಪರಿಚಯವಾಗುವುದಕ್ಕೆ ಮೂರ್ನಾಲ್ಕು ತಿಂಗಳು ಬೇಕಾಗುತ್ತಿತ್ತು. ಅಷ್ಟೊತ್ತಿಗಾಗಲೇ ಪಾಠಗಳು ಪ್ರಾರಂಭವಾಗಿರುತ್ತಿದ್ದವು. ಅಕ್ಷರ ಕಲಿಕೆಯೇ ಪೂರ್ಣವಾಗದಿರುವಲ್ಲಿ ಕಲಿಕೆ ಹೇಗೆ ಮುಂದುವರಿದೀತು? ಆಮೇಲಿನ ಪಾಠ, ಪ್ರಶ್ನೋತ್ತರ, ಸ್ಪೆಲ್ಲಿಂಗ್, ವಿರುದ್ಧಾರ್ಥಕ, ಸಮನಾರ್ಥಕ ಪದಗಳನ್ನೆಲ್ಲಾ ಬಾಯಿಪಾಠ ಮಾಡುತ್ತಿದ್ದೆವು. ಅದೂ ಸಾಧ್ಯವಾಗದಿರುವವರು ಇಂಗ್ಲಿಷ್ ಕಲಿಕೆಯಿಂದ ದಿನೇ ದಿನೇ ದೂರ ಸರಿಯುತ್ತ ಅದನ್ನೊಂದು ಎಂದಿಗೂ ಬಿಡಿಸಲಾಗದ ಕಗ್ಗಂಟನ್ನಾಗಿಸಿಕೊಳ್ಳುತ್ತಿದ್ದರು.

ತರಗತಿಯಲ್ಲಿ ಎಲ್ಲರೆದುರಿಗೆ ಇಂಗ್ಲಿಷ್ ಪಾಠ ಓದುವ ಸರದಿ ಬಂದಾಗ ಓದಲಾಗದೇ ತೇಕುವ ಅಸಹಾಯಕತೆ, ಎಲ್ಲರೆದುರಿನ ಅವಮಾನ, ಬೆತ್ತದ ಹೊಡೆತ– ಎಲ್ಲವೂ ಸೇರಿ ಇಂಗ್ಲಿಷನ್ನು ಆಜನ್ಮ ವೈರಿಯಾಗಿಸುತ್ತಿದ್ದವು. ಕನ್ನಡ ಪಾಠಗಳೆಂದರೆ ಕಣ್ಣರಳಿಸಿ ಕಲಿಯುವವರಿಗೆ ಅವರದಲ್ಲದ, ತೀರ ಅಪರಿಚಿತ ಭಾಷೆಯನ್ನು ಕಲಿಸುವಾಗ ವಿಶೇಷವಾದ ಬೋಧನಾ ಮಾರ್ಗದ ಅಗತ್ಯವಿರುತ್ತದಲ್ಲ.... ಅದಿಲ್ಲದೆ, ಸಾಕಷ್ಟು ಪೂರ್ವತಯಾರಿ, ತರಬೇತಿಗಳಿಲ್ಲದ ಭಾಷಾಬೋಧನೆ ಅಪಾಯಕಾರಿಯಾಗಬಹುದು. ಇಂಗ್ಲಿಷ್ ಅನ್ನು ಪಠ್ಯದ ಒಂದು ಭಾಷೆಯಾಗಿ ಮಾತ್ರ ಅಭ್ಯಾಸ ಮಾಡುವವರಿಗೆ ಅದು ದೊಡ್ಡದೊಂದು ಸಮಸ್ಯೆಯಾಗುವುದು ಕಲಿಕಾ ಮಾಧ್ಯಮವಾಗಿ ಕಡ್ಡಾಯವಾಗಿ ಓದಲೇ ಬೇಕಾದಾಗ.

ಹತ್ತನೆಯ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿ ಪಿಯುಸಿಯಲ್ಲಿ ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆದ ಗೆಳತಿಯೊಬ್ಬಳು ತರಗತಿಯ ಮೊದಲ ದಿನದ ಪಾಠಗಳು ಏನೊಂದೂ ಅರ್ಥವಾಗದೇ ಕಣ್ಣೀರಾಗಿ ಮನೆಗೆ ಬಂದಿದ್ದಳು. ತಾನಿನ್ನು ಕಾಲೇಜಿಗೆ ಹೋಗುವುದಿಲ್ಲವೆಂದು ಹಟ ಹಿಡಿದಿದ್ದಳು. ಅಭಿಧಮನಿ, ಅಪಧಮನಿ, ಚಲುವೆಪುಡಿ ಕಾಂತಕ್ಷೇತ್ರ, ಪರಮಾಣುಗಳೆಲ್ಲ ಹೆಸರು ಬದಲಿಸಿಕೊಂಡು ಬಂದಾಗ ತಾವು ಈ ಹಿಂದೆ ಕಲಿತದ್ದು ಏನೂ ಅಲ್ಲವೇನೋ ಎಂದು ತಾತ್ಕಾಲಿಕವಾಗಿಯಾದರೂ ಅನಿಸಿಬಿಡುತ್ತದೆ. ಇನ್ನು ಮಾನವಿಕ ಶಾಸ್ತ್ರಗಳನ್ನೋದುವ ವಿದ್ಯಾರ್ಥಿಗಳ ಕತೆ ಬೇರೆ ತೆರನದು.

ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಕಾನೂನು ಮೊದಲಾದವುಗಳನ್ನು ಒಂದು ಹಂತದವರೆಗೆ ಕನ್ನಡದಲ್ಲಿಯೇ ಓದಬಹುದು, ಓದುತ್ತೇವೆ ನಿಜ. ಆದರೆ ಸ್ನಾತಕೋತ್ತರ ತರಗತಿಗಳಲ್ಲಿ ಓದು ವಿಸ್ತಾರವಾಗಬೇಕಾದಾಗ, ವಿಷಯದ ಆಳವಾದ ಜ್ಞಾನ ಬೆಳೆಸಿಕೊಳ್ಳಬೇಕಾದಾಗ ಲಭ್ಯವಿರುವ ಬೆರಳೆಣಿಕೆಯ ಕನ್ನಡ ಪುಸ್ತಕಗಳು ವಿಷಯದ ಸಮಗ್ರ ಜ್ಞಾನ ನೀಡಬಲ್ಲವೇ? ಅಂತರಶಿಸ್ತೀಯ ಸಂಶೋಧನೆಯಂತೂ ಹಲವಾರು ವಿಷಯಗಳ ಆಳವಾದ ಅಧ್ಯಯನ ಬೇಡುತ್ತವೆ. ಮಾನವಿಕ ಶಾಸ್ತ್ರಗಳನ್ನು ಅಲ್ಲಿಯವರೆಗೆ ಕನ್ನಡದಲ್ಲಿಯೇ ಓದಿದವರಿಗೆ ಇದೊಂದು ಬಹುದೊಡ್ಡ ಸವಾಲು.

ಪ್ರಜ್ಞಾಪೂರ್ವಕವಾಗಿಯೋ ಅಲ್ಲದೆಯೋ ಇಂಗ್ಲಿಷನ್ನು ಅಲ್ಲಿಯವರೆಗೆ ನಿರ್ಲಕ್ಷಿಸಿದವರಿಗೆ ಅಲ್ಪಾವಧಿಯಲ್ಲಿಯೇ ಇಂಗ್ಲಿಷ್‌ನಲ್ಲಿ ಹಿಡಿತ ಸಾಧಿಸಲಾಗುವುದಿಲ್ಲ. ವಿದ್ವತ್‌ಪೂರ್ಣ ಪುಸ್ತಕಗಳನ್ನು ಓದಿದರೂ ಭಾಷೆಯ ಕಾರಣದಿಂದ ಸಂಪೂರ್ಣವಾಗಿ ದಕ್ಕಿಸಿಕೊಳ್ಳಲಾರದ ಅಸಹಾಯಕತೆ. ಮಾನವಿಕ ವಿಭಾಗದ ಸಂಶೋಧನೆಗಳು ಬರಿಯ ಕಾಟಾಚಾರವಾಗುತ್ತಿರುವುದಕ್ಕೆ, ಮಾನವಿಕ ಶಾಸ್ತ್ರಗಳಿಗೆ ನಾವು ಗಮನೀಯ ಕೊಡುಗೆ ಕೊಡಲು ಸಾಧ್ಯವಾಗದಿರುವುದಕ್ಕೆ ಇರುವ ಹಲವು ಕಾರಣಗಳಲ್ಲಿ ಭಾಷೆ ತಂದೊಡ್ಡುವ ಈ  ಸಮಸ್ಯೆಯೂ ಒಂದು ಎಂದೆನಿಸುತ್ತದೆ.

ಸ್ನಾತಕೋತ್ತರ ಅರ್ಥಶಾಸ್ತ್ರ ಓದಿರುವ ನನ್ನ ವಿದ್ಯಾರ್ಥಿ ದಿನದ ಅನುಭವಗಳೂ ಇದಕ್ಕಿಂತ ಭಿನ್ನವಾಗೇನಿಲ್ಲ. ಪದವಿವರೆಗಿನ ಕನ್ನಡ ಮಾಧ್ಯಮದ ಓದು ಪದವಿಯಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಹೊರಳಿಕೊಂಡಿತು. ಉನ್ನತ ತರಗತಿಗೆ ಹೋದಂತೆ ಪಾಠ ಮತ್ತು ಪುಸ್ತಕಗಳು ಇಂಗ್ಲಿಷ್‌ನಲ್ಲಿಯೇ ಇರುವುದೆಂದು ಯಾರೋ ಹೇಳಿದ ಕಾರಣಕ್ಕಾಗಿ– ಇಂಗ್ಲಿಷ್ ಪತ್ರಿಕೆ ಓದುವುದು, ರೇಡಿಯೋ ಟೀವಿಗಳ ಇಂಗ್ಲಿಷ್ ಸುದ್ದಿಗೆ ಕಿವಿಯಾಗುವುದು, ಸ್ನೇಹಿತರೊಂದಿಗೆ ಇಂಗ್ಲಿಷ್‌ನಲ್ಲಿಯೇ ಮಾತನಾಡುವುದು, ಇತ್ಯಾದಿ ಪ್ರಯತ್ನಗಳು ಆರಂಭವಾದವು. ಮುಂದೆ ಎಂ.ಎ ತರಗತಿಗೆ ಬಂದಾಗ ಇಂಗ್ಲಿಷ್ ಎಂದರೆ ಬೆಚ್ಚಿಬೀಳುವ ಸ್ನೇಹಿತರ ದೊಡ್ಡ ಗಡಣವೇ ಸಿಕ್ಕಿತು.

ಪದವಿಯನ್ನು ಕನ್ನಡದಲ್ಲಿಯೇ ಓದಿದವರು ಸಂಖ್ಯೆ ಶೇಕಡಾ ತೊಂಬತ್ತಕ್ಕಿಂತಲೂ ಅಧಿಕ. ವಿಶ್ವವಿದ್ಯಾಲಯದ ಪಾಠಗಳು ಸಂಪೂರ್ಣ ಇಂಗ್ಲಿಷ್‌ಮಯ. ಪಾಠಗಳು ಏನೊಂದೂ ಅರ್ಥವಾಗದ, ಬಹುದೊಡ್ಡ ಗ್ರಂಥಾಲಯವಿದ್ದರೂ ಆಯಾವಿಷಯಗಳ ಪಠ್ಯಗಳು ಕನ್ನಡದಲ್ಲಿ ಲಭ್ಯವಿಲ್ಲದ ಸ್ಥಿತಿ ಹಳ್ಳಿಗಳ ಪ್ರತಿಭಾವಂತರನ್ನು ಕುಗ್ಗಿಸಿಬಿಡುತ್ತಿತ್ತು. ಇಂಗ್ಲಿಷ್‌ನಲ್ಲಿ ನಡೆಯುವ ತರಗತಿಯ ಸಂವಾದ, ಗುಂಪು ಚರ್ಚೆಗಳಲ್ಲಿ ಭಾಷೆಯ ಕಾರಣಕ್ಕಾಗಿ ತೊಡಗಿಕೊಳ್ಳಲಾರದ ಅಸಹಾಯಕತೆ ಕೀಳರಿಮೆಗೆ ನೂಕಿಬಿಡುತ್ತಿತ್ತು. ಭಾಷೆಯನ್ನು ಮೀರಿನಿಲ್ಲುವ ಪ್ರಯತ್ನಗಳು ನಡೆಯುವುದೇ ಇಲ್ಲವೆಂದಲ್ಲ. ವಿಷಯದ ಜ್ಞಾನ, ಬುದ್ದಿಮತ್ತೆ, ಅಧ್ಯಯನ, ಪರಿಶ್ರಮ ಇವೆಲ್ಲವುಗಳನ್ನು ಚೆನ್ನಾಗಿ ಇಂಗ್ಲಿಷ್ ಬಲ್ಲ ಸ್ನೇಹಿತರ ಚಟಪಟ ಮಾತುಗಳು ಸುಮ್ಮನಾಗಿಸಿಬಿಡುತ್ತಿದ್ದವು. ಉದ್ಯೋಗ ಗಿಟ್ಟಿಸಿಕೊಳ್ಳುವಾಗಲೂ ಅಷ್ಟೇ, ಇಂಗ್ಲಿಷ್ ಮುಖ್ಯ ಅರ್ಹತೆಯಾಗಿರುತ್ತದೆ.

ನಾನು ಓದಿದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಪುಸ್ತಕಗಳ ತುಂಬ ಒಳ್ಳೆಯ ಸಂಗ್ರಹವಿತ್ತು. ಮತ್ತದನ್ನು ಆಸ್ಥೆಯಿಂದ ವಿದ್ಯಾರ್ಥಿಗಳು ಓದುವಂತೆ ಮಾಡುವ ಶಿಕ್ಷಕರೂ ಇದ್ದರು. ಮುಂದೆ ಸಾಹಿತ್ಯದಲ್ಲಿ ಅಭಿರುಚಿ ಹುಟ್ಟಲು ಇದೂ ಕಾರಣವಾಯಿತು. ಆದರೆ ಕನ್ನಡ ಹೊರತುಪಡಿಸಿ ಇತರ ಭಾಷೆಗಳ (ಹಿಂದಿ/ ಇಂಗ್ಲಿಷ್) ಪುಸ್ತಕಗಳ ಸಂಗ್ರಹ ಅಲ್ಲಿದ್ದಂತೆ ನೆನಪಿಲ್ಲ. ಏಕೆಂದರೆ ವಿದ್ಯಾರ್ಥಿ ದಿನಗಳಲ್ಲಂತೂ ಇಂಗ್ಲಿಷ್ ಎಂದರೆ ಪಠ್ಯದ ಇಂಗ್ಲಿಷ್ ಮಾತ್ರವೇ. ಮಕ್ಕಳಕತೆ, ಒಂದಿಷ್ಟು ಪದ್ಯ, ಕಾದಂಬರಿ, ಆತ್ಮಕತೆ– ಇವೆಲ್ಲ ಪುಸ್ತಕಗಳು ಇಂಗ್ಲಿಷ್‌ನಲ್ಲಿ ನನ್ನ ಆರಂಭಿಕ ವಿದ್ಯಾರ್ಥಿ ದಿನಗಳಲ್ಲೇ ಸಿಕ್ಕಿದ್ದರೆ? 

ಭಾಷೆ– ಅದರಲ್ಲೂ ಮಾತೃಭಾಷೆ ಯಾವತ್ತಿಗೂ ಒಂದು ಅಭಿಮಾನದ ವಿಷಯವೇ. ನಾವು ಆಲೋಚಿಸುವುದು, ಪ್ರತಿಕ್ರಿಯಿಸುವುದು, ತರ್ಕಿಸುವುದು ಎಲ್ಲ ಮಾತೃಭಾಷೆಯಲ್ಲಿಯೇ. ಇತರ ಭಾಷೆಗಳ ಕಲಿಕೆಗೆ ಬುನಾದಿಯಾಗಿ ಒದಗಿಬರುವುದೂ ಮಾತೃಭಾಷೆಯೇ.  ಇಂತಹ ಸತ್ವಶಾಲಿ ಮಾತೃಭಾಷೆಯೊಂದಿಗೆ ಹೊರಜಗತ್ತಿನೊಂದಿಗೆ ಕೊಂಡಿಯಂತೆ ಬಳಕೆಯಾಗಬಲ್ಲ, ಜಗತ್ತಿನ ಇತರ ಭಾಷೆಗಳಲ್ಲಿರುವ ಅಮೂಲ್ಯಜ್ಞಾನವನ್ನು ಒದಗಿಸಬಲ್ಲ, ಇಲ್ಲಿಯ ಜ್ಞಾನವನ್ನು ವರ್ಗಾಯಿಸಬಲ್ಲ ಭಾಷೆಯೊಂದರ ಅಗತ್ಯ ಖಂಡಿತವಾಗಿಯೂ ಇರುತ್ತದೆ. ಈ ನಿಟ್ಟಿನಲ್ಲಿ ಕನ್ನಡ –ಇಂಗ್ಲಿಷ್ ಸಮನ್ವಯ ಈ ಹೊತ್ತಿನ ಅಗತ್ಯವೆಂದೇ ಹೇಳಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT