ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರುವೆಯ ನೀತಿ

ಮಕ್ಕಳ ಕಥೆ
Last Updated 31 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಐದನೇ ತರಗತಿಯ ವಿದ್ಯಾರ್ಥಿ ಶರಣಪ್ಪ ಬಹಳ ಸೋಮಾರಿ. ಓದುವುದೆಂದರೆ ಆತನಿಗೆ ಅಲರ್ಜಿ. ‘ಮನೆಗೆಲಸದಲ್ಲಾದ್ರೂ ಸಹಾಯ ಮಾಡು ಬಾರೋ’ ಎಂದು ಅಮ್ಮ ಕರೆದರೆ ಆಕೆಯ ಕಣ್ಣಿಗೆ ಬೀಳದಂತೆ ಎಲ್ಲಾದರೂ ಅವಿತುಬಿಡುತ್ತಿದ್ದ. ಈತನನ್ನು ಹೇಗಪ್ಪಾ ಸರಿದಾರಿಗೆ ತರುವುದೆಂದು ಆತನ ತಾಯಿ ತುಂಗವ್ವಳಿಗೆ ಚಿಂತೆಯಾಗಿತ್ತು.

ಅಂದು ಶಾಲೆಯಿಂದ ಮನೆಗೆ ಮರಳಿದ ಶರಣಪ್ಪ ಅಂಗಳದಲ್ಲಿ ಆಟವಾಡುತ್ತಿದ್ದಾಗ ಇರುವೆಯೊಂದು ತನಗಿಂತ ಬೃಹತ್‌ ಗಾತ್ರದ ಕಲ್ಲುಸಕ್ಕರೆ ತುಂಡನ್ನು ಕಚ್ಚಿ ಕೊಂಡೊಯ್ಯುವುದನ್ನು ಕಂಡನು. ಈ ವಿದ್ಯಮಾನವನ್ನು ಕಂಡು ಆತನಿಗೆ ಬಹಳ ಅಚ್ಚರಿಯೆನಿಸಿತು.

ಹಾಗೆಯೇ ಇರುವೆಯನ್ನೊಮ್ಮೆ ಮಾತಾಡಿಸೋಣವೆನಿಸಿ, ‘ಏಯ್‌ ಇರುವೆಯಕ್ಕಾ... ಏನಿದು ನಿನ್ನ ಸಾಹಸ? ನಿನಗಿಂತಲೂ ಗಾತ್ರದಲ್ಲಿ ಹಿರಿದಾದ ಕಲ್ಲುಸಕ್ಕರೆಯನ್ನು ಕಚ್ಚಿಕೊಂಡೊಯ್ಯಲು ಯತ್ನಿಸುತ್ತಿರುವೆಯಲ್ಲಾ. ನಿನಗಿದು ಕಷ್ಟವೆನಿಸುವುದಿಲ್ಲವೇ?’ ಎಂದು ಕೇಳಿದ.

‘ಅಯ್ಯೋ ತಮ್ಮಾ, ನೀನಿನ್ನೂ ಎಳಸು. ನಿನಗೆ ಇವೆಲ್ಲಾ ಎಲ್ಲಿಂದ ಅರ್ಥವಾಗಬೇಕು? ನಮ್ಮ ಬದುಕೇ ಹೀಗೆ ಅಲ್ಲಿ ಇಲ್ಲಿ ಆಹಾರಕ್ಕಾಗಿ ಅಲೆದಾಡಿ ಏನು ದೊರೆಯುತ್ತದೆಯೋ ಅದನ್ನೇ ತಿನ್ನಬೇಕು. ಹಾಗೆಯೇ ಮನೆಗೂ ಕೊಂಡೊಯ್ದು ದಾಸ್ತಾನು ಮಾಡಬೇಕು. ಇಲ್ಲವಾದಲ್ಲಿ ಇಂದು ಊಟ ದೊರೆತರೆ ಇನ್ನೊಂದು ದಿನ ಊಟ ದೊರೆತೀತೆಂಬ ನಂಬಿಕೆಯಿಲ್ಲ.

ಅದಕ್ಕಾಗಿ ನಾವು ವಿಶ್ರಾಂತಿಯಿಲ್ಲದೆ ದುಡಿಯುತ್ತಲೇ ಇರುತ್ತೇವೆ. ಇನ್ನಂತೂ ಸಾಲು ಸಾಲಾಗಿ ಹಬ್ಬ ಬೇರೆ ಬರುತ್ತಿದೆ. ಹಬ್ಬಕ್ಕೆ ಸಿಹಿ ಮಾಡಬೇಕಲ್ಲವೇ? ಅದಕ್ಕಾಗಿ ಸಕ್ಕರೆ ಅರಸುತ್ತಿದ್ದೆ. ಆಗ ಇದು ದೊರಕಿತು ನೋಡು. ಇದನ್ನು ಕೊಂಡೊಯ್ಯಲು ಶ್ರಮಿಸುತ್ತಿದ್ದೇನೆ...’ ಇರುವೆಯು ಮಾತಾಡುತ್ತಾ ನಿಂತಿದ್ದಾಗ ಮಳೆ ಪ್ರಾರಂಭವಾಯಿತು. ‘ಅಯ್ಯಯ್ಯೋ ಮಳೆ ಬರಲಾರಂಭಿಸಿತಲ್ಲಾ ಈಗೇನು ಮಾಡುವುದು?’ ಎನ್ನುತ್ತಾ ಪಕ್ಕದಲ್ಲಿದ್ದ ದೊಡ್ಡದಾದ ತರಗೆಲೆಯೊಂದರ ಕೆಳಗೆ ಸಕ್ಕರೆ ತುಂಡನ್ನಿರಿಸಿ ತಾನೂ ಅಲ್ಲೇ ಕುಳಿತಿತು ಇರುವೆ.

‘ಹೊಗು ತಮ್ಮಾ ಮನೆ ಸೇರಿಕೋ. ಈ ಮಳೆಯಲ್ಲಿ ಯಾಕೆ ಸುಮ್ನೆ ನೆನೀತೀಯಾ? ನಿಮಗೆ ಮಾನವರಿಗೆಲ್ಲ ಮಳೆ ಸೋಕಿದರೆ ನೆಗಡಿ–ಜ್ವರ ಬಾಧಿಸುತ್ತದೆ. ಆದರೆ ನಮಗೆ ಮಳೆ–ಬಿಸಿಲಿನ ಹಂಗಿಲ್ಲ. ಪ್ರಕೃತಿಯ ವಿರುದ್ಧ  ಈಸಿಯೇ ಬದುಕುವುದು ನಮ್ಮ ಹಣೆಬರಹ’ ಎಂದಿತು.

ಇರುವೆಯ ಮಾತನ್ನಾಲಿಸಿದ ಶರಣಪ್ಪನಿಗೆ ತನ್ನ ಬಗ್ಗೆಯೇ ಬೇಸರವೆನಿಸಿತು. ನೇರವಾಗಿ ಮನೆಗೆ ತೆರಳಿ ‘ಅಮ್ಮ ಇಂದಿನಿಂದ ಎಲ್ಲಾ ಕೆಲಸಗಳಲ್ಲೂ ನಾನು ನಿನಗೆ ಸಹಾಯ ಮಾಡುತ್ತೇನೆ ಆಯ್ತಾ?’ ಎಂದಾಗ ಮಗನಲ್ಲಾದ ಪರಿವರ್ತನೆಗೆ ಕಾರಣ ತಿಳಿಯದೆ ತುಂಗವ್ವ ಒಂದು ಕ್ಷಣ ಆತನನ್ನೇ ದಿಟ್ಟಿಸಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT