ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಣ್ಣೆ ತೀರದ ನೂರರ ಹಣತೆ

Last Updated 15 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

‘ನಾಟ್ಯೋತ್ಸವ’ದ ಹೊಸಮುಡಿಪನ್ನು ಕನ್ನಡ ಸಾಹಿತ್ಯಕ್ಕೆ ಒಪ್ಪಿಸಿದ ಪೇಜಾವರ ಸದಾಶಿವರಾಯರಿಗೆ ಇದು (ಜ. ೧೫–-೦೨–-೧೯೧೩) ನೂರು ತುಂಬಿದ ವರುಷ. ‘ಅಲರು’ವಿನಿಂದ ‘ನಾಟ್ಯೋತ್ಸವ’ಕ್ಕೆ ಪೇಜಾವರರ ನಡೆ ಹನುಮದ್ವಿಲಾಸದ ಅದ್ಭುತ. ನವೋದಯದ ದಿನಗಳ ಆನಂದಮಯ ಭಾವಕೋಶದ ಕಟ್ಟು ಬಿಚ್ಚಿ ಹೊಸಕಾಲದೊಂದಿಗೆ ಮುಖಾಮುಖಿಯಾಗುವ ಹುಡುಕಾಟ ಸದಾಶಿವರಾಯರ ಕಾವ್ಯದರ್ಶನ. ಆದ್ದರಿಂದಲೇ ಕಾಲಚಕ್ರದ ನೂರರ ಗಡಿಯಾಚೆಗೆ ಇಂದೂ ಪೇಜಾವರರು ಪ್ರಸ್ತುತ.

ಸದಾಶಿವರಾಯರ ಹೆಸರಿನೊಂದಿಗಿನ ಪೇಜಾವರ ಅವರ ಹಿರೀಕರ ಊರು, ಮಂಗಳೂರು ಸಮೀಪದ ಹಳ್ಳಿ. ಶಿವಳ್ಳಿ ಬ್ರಾಹ್ಮಣ ಸಮುದಾಯದ ಕೃಷಿಕ ಕುಟುಂಬ ಅವರದು. ತಂದೆ ಶ್ಯಾಮರಾಯರು ಮೆಟ್ರಿಕ್ ಪಾಸುಮಾಡಿದರೂ ನೆಚ್ಚಿಕೊಂಡಿದ್ದು ಕೃಷಿ ಬದುಕನ್ನು. ಶ್ಯಾಮರಾಯರ ಹೆಂಡತಿ ಚೊಚ್ಚಿಲ ಹೆರಿಗೆಯಲ್ಲಿ ಹೆಣ್ಣು ಮಗುವನ್ನು ಹಡೆದು ಸಾವನ್ನಪ್ಪಿದರು. ಮತ್ತೆ ಶ್ಯಾಮರಾಯರ ಮದುವೆಯಾಗಿ ಬಾಳು ತುಂಬಿದವರು ಸೀತಮ್ಮ; ಸದಾಶಿವರಾಯರ ತಾಯಿ. ಆರು ಗಂಡು, ಮೂರು ಹೆಣ್ಣು ಮಕ್ಕಳ ದೊಡ್ಡ ಕುಟುಂಬದಲ್ಲಿ ಸದಾಶಿವರಾಯರು ಹಿರಿಯವರು. ಹಿರಿಮಗನ ಎಲ್ಲ ‘ಹಿರಿತನ’ದೊಂದಿಗೆ ಬದುಕಿದವರು ಸದಾಶಿವರಾಯರು.

ತಂದೆ ಶ್ಯಾಮರಾಯರ ಕಾಲಕ್ಕೆ (೧೯೦೪) ಈ ಕುಟುಂಬ ಪೇಜಾವರದಿಂದ ಬಂದು ನೆಲೆನಿಂತುದು ಕಟೀಲಿನಲ್ಲಿ. ಸದಾಶಿವರಾಯರ ಬಾಲ್ಯ, ಆರಂಭಿಕ ಓದು ನಡೆದದ್ದು, ಕಟೀಲಿನ ಆಸುಪಾಸಿನಲ್ಲಿ.  ಬಾಲ್ಯದ ಬದುಕು ಕಟ್ಟಿದ ಆ ಪ್ರಕೃತಿ ಅವರ ಕಾವ್ಯಸೃಷ್ಟಿಯ ನೆಲೆಯೂ ಹೌದು. ತಂದೆ ಶ್ಯಾಮರಾಯರದು ಕೃಷಿಕರ್ಮ ಹಾಗೂ ವ್ಯಾವಹಾರಿಕ ಬದುಕಿನ ನಿರ್ವಹಣೆ. ಮಕ್ಕಳು, ಮನೆತನದ ಉಸ್ತುವಾರಿ ತಾಯಿ ಸೀತಮ್ಮನವರದು. ಸೀತಮ್ಮ ಹೆಚ್ಚಿನ ಓದು ಬಲ್ಲವರಲ್ಲ. ಆದರೆ, ಭಗವದ್ಗೀತೆ, ಕುಮಾರವ್ಯಾಸ ಭಾರತ, ಜೈಮಿನಿ ಭಾರತ ಹಾಡಿ, ವ್ಯಾಖ್ಯಾನ ಮಾಡುವ ಪ್ರತಿಭೆ ಅವರಲ್ಲಿತ್ತು. ಸದಾಶಿವರಾಯರು ತಮ್ಮ ಬರೆಹವನ್ನು ಮೊದಲು ಓದಿ ಒಪ್ಪಿಸುತ್ತಿದ್ದುದು ಸೀತಮ್ಮರಿಗೆ. ಈ ದೃಷ್ಟಿಯಲ್ಲಿ ಸೀತಮ್ಮ ಸದಾಶಿವರಾಯರ ‘ಕಾವ್ಯಗುರು’ವೂ ಹೌದು.

ಸದಾಶಿವರಾಯರು ಹದಿನಾರರ ಹರೆಯದಲ್ಲಿ ಕಾವ್ಯ ಕಟ್ಟಿದ ಮತ್ತು ಇಪ್ಪತ್ತಾರರ ಯೌವನದಲ್ಲಿ ಸಾವು ಕಂಡವರು. ಈ ಹತ್ತು ವರುಷಗಳ ಹರಹಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕನ್ನಡ ಸಾಹಿತ್ಯಕ್ಕೆ ತಂದುಕೊಟ್ಟ ನಾವೀನ್ಯ ಮತ್ತು ವಿಸ್ತಾರದಿಂದಲೇ ಸದಾಶಿವರಾಯರು ನಮಗೆ ಮುಖ್ಯರಾಗುವುದು. ಈ ಕಿರುಗಾಲದಲ್ಲಿ ಕತೆ, ಕವಿತೆ, ಪ್ರಬಂಧ, ನಾಟಕ– ಎಲ್ಲ ಬಗೆಯಲ್ಲೂ ಬಗೆಬಗೆದು ಬರೆದರು.  ಕನ್ನಡದ ಒಡಲು ತುಂಬಿದರು.

ಕನ್ನಡದ ದೀಪ
ಸದಾಶಿವರಾಯರ ಮನೆಮಾತು ತುಳು. ಊರ ಭಾಷೆಯೂ ತುಳು. ಶಾಲೆ ತುಳು ಸೀಮೆ. ಓದಿನ ಐಚ್ಛಿಕ ಭಾಷೆ ಸಂಸ್ಕೃತ. ಹೈಸ್ಕೂಲು, ಇಂಟರ್ ಮೀಡಿಯಟ್ ಶಿಕ್ಷಣ ಇಂಗ್ಲಿಷ್ ಮಾಧ್ಯಮದಲ್ಲಿ;  ಇಂಗ್ಲಿಷ್ ಪರಿಸರದ ಸಂತ ಅಲೋಸಿಯಸ್ ಸಂಸ್ಥೆಯಲ್ಲಿ. ಮೆಕಾನಿಕಲ್ ಇಂಜಿನಿಯರಿಂಗ್ ಓದಿದ್ದು ಹಿಂದಿಯ ಊರು ವಾರಣಾಸಿಯ ಹಿಂದೂ ವಿಶ್ವವಿದ್ಯಾನಿಲಯದಲ್ಲಿ. ಪಿಎಚ್.ಡಿ. ಗೆ ಆಯ್ದುಕೊಂಡ ನೆಲ ದೂರದ ಇಟಲಿ ದೇಶದ ಮಿಲಾನೊ. ಸಾವು ಕಂಡದ್ದೂ ಅಲ್ಲೇ. ಹೀಗೆ ಕನ್ನಡದ ಸಂದರ್ಭ, ಪರಿಸರದಿಂದ ಹೊರತಾಗಿದ್ದರೂ ಅವರ ಕನ್ನಡ ಪ್ರೀತಿ, ಕನ್ನಡ ಕಟ್ಟುವ ಶ್ರದ್ಧೆ, ಕನ್ನಡ ಕಟ್ಟಿದ ಪ್ರತಿಭೆ ಎಲ್ಲವೂ ಅಪರೂಪದ್ದು.

ಸದಾಶಿವರಾಯರು ಶಿಕ್ಷಣಾರ್ಥಿಯಾಗಿ ಮಂಗಳೂರು ಸೇರಿದ್ದು ೧೯೨೯ರಲ್ಲಿ. ಅದು ಕನ್ನಡದ ಕೆಲಸಗಳು ಸಂಘಟನಾತ್ಮಕ ನೆಲೆ ಕಂಡುಕೊಳ್ಳುತ್ತಿದ್ದ ಹೊತ್ತು. ಧಾರವಾಡದ ‘ಗೆಳೆಯರ ಗುಂಪು’, ಬಿಜಾಪುರದ ‘ಹಲಸಂಗಿ ಗೆಳೆಯರು’, ಉಡುಪಿಯ ‘ಕಿರಿಯರ ಪ್ರಪಂಚ’ ಮಾದರಿಯಲ್ಲಿ ಮಂಗಳೂರಲ್ಲಿ ‘ಮಿತ್ರಮಂಡಳಿ’ ೧೯೨೭ರಲ್ಲಿ ಸ್ಥಾಪನೆಯಾಗಿತ್ತು. ಬಹುತೇಕ ವಿದ್ಯಾರ್ಥಿಗಳೇ ಸದಸ್ಯರಾಗಿ ಕನ್ನಡಕ್ಕಾಗಿ ಕೈತೊಟ್ಟ ಮಿತ್ರಕೂಟವದು. ಈ ಮಿತ್ರಮಂಡಳಿಯೇ ಸದಾಶಿವರಾಯರ ಕನ್ನಡದ ಗರಡಿಮನೆ. ಸದಾಶಿವರಾಯರ ಕ್ರಿಯಾಶೀಲತೆ ಕಂಡ ಹಿರಿಯರಾದ ಜೆ. ವಾಮನ ಭಟ್ಟರು ‘ಅಲರು’ವಿನ ಸಂಪಾದನಾ ಜವಾಬ್ದಾರಿಯನ್ನು ಅವರಿಗೆ ವಹಿಸಿದರು. ಆಗ ಸದಾಶಿವರಾಯರಿಗೆ ಹದಿನೈದರ ವಯಸ್ಸು. ಅತ್ಯಂತ ಕಿರಿಯ ಸಂಪಾದಕನೆಂಬ ಹೆಗ್ಗಳಿಕೆ. ಒಂದೇ ದಿನದಲ್ಲಿ ‘ಅಲರು’ವಿನ ೨೦೦ ಪ್ರತಿಗಳನ್ನು ಮಾರಾಟ ಮಾಡಿ ವಾರದಲ್ಲಿ ಹಣಸಂದಾಯ ಮಾಡಿದ ಹೆಗ್ಗಳಿಕೆಯ ದಾಖಲೆ. ಇಲ್ಲಿನ ಕವಿತೆಗಳ ಆಯ್ಕೆಯ ಹಿಂದಿನ ಅವರ ಗ್ರಹಿಕೆ ಮತ್ತು ನೋಟದಿಂದ ‘ಅಲರು’ ಇಂದೂ ತನ್ನ ಪ್ರಾತಿನಿಧಿಕತೆಯನ್ನು ಕಾಯ್ದಿಟ್ಟುಕೊಂಡಿದೆ.

ಸದಾಶಿವರಾಯರ ಕನ್ನಡದ ಕಾಯಕ ವಾರಣಾಸಿಯಲ್ಲೂ ಮುಂದುವರಿಯಿತು. ‘ವಾರಣಾಸಿ ಕರ್ನಾಟಕ ಸಂಘ’ವನ್ನು ಕಟ್ಟಿ ಅದರಲ್ಲಿ ಸಕ್ರಿಯವಾಗಿ ತೊಡಗಿಕೊಂಡರು. ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಡಾ. ಬಾಳೇಬೈಲು ದಾಸಣ್ಣಾಚಾರ್ಯರು ಅಧ್ಯಕ್ಷರಾಗಿದ್ದಾಗ ಸದಾಶಿವರಾಯರು ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕನ್ನಡದ ಕಟ್ಟಾಳು ಎನಿಸಿದರು. 
ಸದಾಶಿವರಾಯರ ಉನ್ನತ ಶಿಕ್ಷಣದ ಆಸೆಗೆ ಇಂಬಾಗಿ ದಾರಿ ತೆರೆದವರು ಸಂತ ಅಲೋಸಿಯಸ್ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಫೆಜ್ಜಿ ಅವರು. ಸದಾಶಿವರಾಯರಿಗೆ ಇಟಾಲಿಯನ್ ಭಾಷೆ ಕಲಿಸಿದ್ದು ಅವರೇ. ಇಟಲಿಯ ಮಿಲಾನೊ ವಿಶ್ವವಿದ್ಯಾನಿಲಯದಲ್ಲಿ ಮೋಟರಾಲಜಿಯಲ್ಲಿ ಪಿಎಚ್.ಡಿ.ಗೆ ಅವಕಾಶ, ಫಿಯಟ್ ಸಂಸ್ಥೆಯಿಂದ ಫೆಲೋಶಿಪ್ ಅನುದಾನ ದೊರೆತು ೧೯೩೬ರ ಆಗಸ್ಟ್ ೪ರಂದು ಪೇಜಾವರರು ಇಟಲಿಗೆ ತೆರಳಿದರು. ಅಲ್ಲಿನ ಯಂತ್ರಗಳ ನಡುವಿನ ಬದುಕು, ಒಂಟಿತನದ ಒತ್ತಡದ ಮಧ್ಯೆಯೂ ಅವರಿಗೆ ಒತ್ತಾಸೆಯಾಗಿ ನಿಂತದ್ದು ಕನ್ನಡದ ನಂಟು. 

ವಿಶ್ವಕನ್ನಡದ ಕನಸು
ಸದಾಶಿವರಾಯರು ಕನ್ನಡವನ್ನು ವಿಶ್ವಕನ್ನಡವಾಗಿಸುವ ಕನಸು ಕಂಡವರು. ಇಂದು ನಾವು ಕನ್ನಡ ಮನಸು ಅಭಿವ್ಯಕ್ತಗೊಂಡ ಬಗೆ ಹಾಗೂ ಅನ್ಯಭಾಷೆಗಳಿಗೆ ಅನುವಾದಗೊಳ್ಳುವಲ್ಲಿ ಹೊಸ ವಿಸ್ತಾರ ಪಡೆಯಬೇಕು ಎನ್ನುವ ಮಾತಾಡುತ್ತಿದ್ದರೆ ಸದಾಶಿವರಾಯರು ಸರಿಸುಮಾರು ೭ ದಶಕಗಳ ಹಿಂದೆ ಆ ಮುನ್ನೋಟ ಕಂಡವರು. ‘ತ್ರಿವೇಣಿ’, ‘ಪ್ರಭಾತ’, ‘ಜಯಕರ್ನಾಟಕ’ದಂತಹ ಸಾಹಿತ್ಯಿಕ ಪತ್ರಿಕೆಗಳನ್ನು ದೂರದ ಇಟಲಿಗೆ ತರಿಸಿಕೊಳ್ಳುತ್ತಿದ್ದರು. ಗೋಕಾಕ್, ಕಾರಂತ, ಮಾಸ್ತಿ, ಕಡೆಂಗೋಡ್ಲು, ವಾಮನಭಟ್, ನವನೀತ ರಾಮರಾವ್ ಮುಂತಾದವರ ಮಿತ್ರಕೂಟದೊಂದಿಗೆ ನಡೆಸಿದ ಪತ್ರ ಸಂವಾದದಲ್ಲಿ ಕನ್ನಡ ಕಟ್ಟುವ ಅವರ ಪ್ರಾಮಾಣಿಕ ತುಡಿತ, ಚಿಂತನೆ ವ್ಯಕ್ತವಾಗುತ್ತದೆ.

ಹದಿನಾರರ ವಿದ್ಯಾರ್ಥಿದೆಸೆಯಲ್ಲಿ ಕವಿತೆ ಬರೆದು ಕವಿ ಎನಿಸಿಕೊಂಡವರು ಪೇಜಾವರರು. ನವೋದಯದ ದಿನಮಾನವದು. ಆ ಮನಸ್ಥಿತಿಗೆ, ಆ ಅನುಭವಕ್ಕೆ ಸಹಜವಾದ ಅನುಕರಣೆ, ಭಾವುಕತೆ, ಪ್ರಾಸಪ್ರಿಯತೆ ಸದಾಶಿವರಾಯರ ಮೊದಲ ಪ್ರಯೋಗಗಳಾದ ‘ಕವಿ’, ‘ಲಕ್ಕಣ’ನಂತಹ ರಚನೆಗಳಲ್ಲಿವೆ. ಆದರೆ ಕಣ್ಣುಕಟ್ಟಿದ ಪ್ರಭಾವದಿಂದ ಬಿಡಿಸಿಕೊಂಡು ತನ್ನತನವನ್ನು ಕಂಡುಕೊಳ್ಳುವ ಅನ್ವೇಷಣೆಯ ಶೋಧದಲ್ಲಿ, ಮುರಿದು ಕಟ್ಟುವ ಪ್ರಕ್ರಿಯೆಯಲ್ಲಿ ಸದಾಶಿವರಾಯರ ಕಾವ್ಯಶಕ್ತಿ ನಂತರದಲ್ಲಿ ಅನಾವರಣಗೊಂಡಿತು.

ಅವರ ವಿರಚನೆಯ ಮಾದರಿ ‘ಮನವ ಶೋಧಿಸು ದಿನದಿನವು ನಿಚ್ಚ’ ಎನ್ನುವ ಆತ್ಮಾವಲೋಕನದ ಪ್ರಮೇಯದಲ್ಲಿ ಹುಟ್ಟಿದ್ದು. ‘ಹಿಂದಿನ ಕವಿತೆ ಎಲ್ಲವನ್ನೂ ಸುಟ್ಟು ಹಾಕಿದ’ ಸತ್ಯದಲ್ಲಿ ಶೋಧಿಸಿದ್ದು, ಹೀಗೆ ಸುಟ್ಟು ಹುಟ್ಟಿದ್ದೇ ಪೇಜಾವರರ ಕಾವ್ಯದ ಕೊಡುಗೆ. ಪೇಜಾವರರು ಗೋಕಾಕರಿಗೆ ಬರೆದ ಪತ್ರದಲ್ಲಿ ನವೋದಯದ ಏಕತಾನತೆಯನ್ನು ಮುರಿದು ನವ್ಯಕಟ್ಟುವ, ಹೊಸಮಾರ್ಗ ತುಳಿವ ತುಡಿತ ಸ್ಪಷ್ಟವಾಗುತ್ತದೆ. ಅವರ ‘ವರುಣ’, ‘ನಾಟ್ಯೋತ್ಸವ’ ಕವನಗಳು ಇದನ್ನು ಸಾಕ್ಷೀಕರಿಸಿವೆ ಕೂಡ. ಹೀಗಾಗಿ ನವ್ಯದ ಹುಟ್ಟಿನ ಪ್ರಶ್ನೆಯಲ್ಲಿ ಬುನಾದಿ ಕಟ್ಟಿದ ಎಲ್ಲ ಗೌರವ ಪೇಜಾವರರಿಗೆ ಸಿಗಬೇಕು. ಅದನ್ನು ಬೆಳೆಸಿದ ಗರಿಮೆ ಗೋಕಾಕ, ಅಡಿಗ ಪರಂಪರೆಗೆ ಸಲ್ಲಬೇಕು. 

ಜೀವನಪ್ರೀತಿ ಸದಾಶಿವರಾಯರಲ್ಲಿ ಆರ್ದ್ರಹೃದಯದ ಹರಿಯುವ ಗುಣದ್ದು. ಬದುಕಿನ ಬಗೆಗೆ ಅವರಿಗೆ ಅತ್ಯಂತ  ಸಂಭ್ರಮದ, ಉಲ್ಲಾಸದ ಭಾವವಿದೆ. ಹಾಗಾಗಿಯೇ ಬದುಕನ್ನು ಆಪ್ತವಾಗಿ ಗಾಢವಾಗಿ ಪ್ರೀತಿಸುವುದು ಅವರಿಗೆ ಸಾಧ್ಯವಾಗಿದೆ. ಬದುಕಿನ ಬಗೆಗಿನ ಈ ಅತೀವ ಪ್ರೀತಿಯಿಂದಲೆ ಸಾವು ಮತ್ತೆ ಮತ್ತೆ ಕಾಡುವ ದೊಡ್ಡ ಪ್ರಶ್ನೆಯಾಗಿ, ವಿಸ್ಮಯವಾಗಿ ಅವರ ಮುಂದೆ ನಿಲ್ಲುವುದು.  ಬದುಕು–ಸಾವನ್ನು ಎದುರುಬದುರಿಟ್ಟು ಬದುಕಿನ ಪ್ರೀತಿಯನ್ನು ಅವರು ಕಂಡುಕೊಳ್ಳುತ್ತಾರೆ. ಹೀಗಾಗಿಯೇ ಹೊರನೋಟದಲ್ಲಿ ಸಾವಿನ ದುರಂತವನ್ನು ಬಿಚ್ಚಿಡುತ್ತಲೇ ಒಳಲೋಕದಲ್ಲಿ ಬದುಕನ್ನು ಆಪ್ತವಾಗಿ ಕಟ್ಟಿಕೊಳ್ಳುತ್ತಾರೆ. ಅಂದರೆ ಹೊರಗಿನ ಸಾವಿನ ಆಕೃತಿ ಒಳಗಿನ ಬದುಕಿನ ಆಶಯವಾಗಿ ಪಲ್ಲಟಗೊಳ್ಳುತ್ತದೆ. ಈ ಮಾಂತ್ರಿಕತೆಯೇ ಸದಾಶಿವರಾಯರ ಜೀವನದರ್ಶನ.                         

ಮರು ಓದಿನ ಜರೂರು
ಪೇಜಾವರರನ್ನು ‘ನಾಟ್ಯೋತ್ಸವದ ಕವಿ’ಯಾಗಿ ಮತ್ತೆ ಮತ್ತೆ ಕಾಣುವ ಪ್ರಯತ್ನ ಸಾಹಿತ್ಯಿಕವಾಗಿ ಅವರ ಒಟ್ಟು ಬರಹದ ಅರ್ಥ ಮತ್ತು ವ್ಯಾಪ್ತಿಯನ್ನು ಕುಗ್ಗಿಸಲಾಗಿದೆ. ಹಾಗಾಗಿಯೇ ಆ ನೆಲೆಯಲ್ಲಿ ಸರಿಯಾದ ಚರ್ಚೆ, ಮೌಲ್ಯಮಾಪನ ನಡೆದೇ ಇಲ್ಲ. ಮುಗಳಿಯವರು ಸದಾಶಿವರಾಯರ ಕವನ ಸಂಕಲನ ‘ವರುಣ’ (೧೯೫೨) ಹಾಗೂ ಈಚೆಗೆ ಅನಿಲ್ ಗೋಕಾಕರು, ವಿ.ಕೃ. ಗೋಕಾಕ್ ಮತ್ತು ಸದಾಶಿವರಾಯರ ಪತ್ರಸಾಹಿತ್ಯ ಪ್ರಕಟಿಸಿದ ಮೇಲೆಯೇ ಪೇಜಾವರರ ಅಜ್ಞಾತ ಮುಖದ ಒಂದಷ್ಟು ಪರಿಚಯವಾದುದು. ಹೀಗಿದ್ದೂ ಪೇಜಾವರರ ಗದ್ಯರಚನೆಗಳು ನಿರ್ಲಕ್ಷಕ್ಕೆ ಒಳಗಾಗಿ ನೇಪಥ್ಯದಲ್ಲೇ ಉಳಿದವು. ಇದೀಗ ಕೇಂದ್ರ ಸಾಹಿತ್ಯ ಅಕಾಡೆಮಿ ಶತಮಾನದ ಸ್ಮೃತಿಗಾಗಿ ಪೇಜಾವರ ಸದಾಶಿವರಾಯರ ಸಮಗ್ರ ಸಂಪುಟವನ್ನು ಪ್ರಕಟಿಸುತ್ತಿದೆ. ‘ಪೇಜಾವರ ಸದಾಶಿವರಾವ್, ನೂರರ ನುಡಿ ನಮನ’ ಹೊತ್ತಗೆ ಎಸ್.ಶ್ಯಾಮಸುಂದರ ಪ್ರಕಾಶನ ತರುತ್ತಿದೆ. ಈ ಎರಡು ಕೃತಿಗಳು ಅನಾವರಣಗೊಂಡಾಗ ಪೇಜಾವರರ ಸಾಹಿತ್ಯದ ಮರುಓದು, ಮರು ವ್ಯಾಖ್ಯಾನ ಸಾಧ್ಯವಾಗಬಹುದು, ಆಗಬೇಕು.

ಇನ್ನೇನು ಥೀಸಿಸ್ ಒಪ್ಪಿಸುವ ಸನ್ನಾಹದಲ್ಲಿರುವಾಗ, ಕಾದಿದ್ದ ಊರ ದಾರಿ ಹಿಡಿವ ಧಾವಂತದಲ್ಲಿರುವಾಗ ಸದಾಶಿವರಾಯರು ಕರುಳುಬೇನೆಗೆ ತುತ್ತಾದರು. ಕನ್ನಡನಾಡಿಗೆ ಮರಳುವ ಸಂಭ್ರಮ ಅಲ್ಲೇ ಹಿಂಗಿತು; ೧೮.೧೦.19೩೯ರಂದು, ೨೬ರ ಯೌವನದ ಜೀವನಪ್ರೀತಿ ಇಟ್ಟುಕೊಂಡೇ. ಇಟಲಿಯಿಂದ ತಾಯಿಗೆ ಅವರು ಬರೆದ– ‘ಎರಡು ವರ್ಷದ ನಂತರ ನನ್ನ ದೇಹದಾಢ್ಯ ನೋಡಿ ನೀನೇ ಆಶ್ಚರ್ಯ ಪಡಲಿಕ್ಕುಂಟು’ ಎನ್ನುವ ಮಾತು ಹಾಗೂ ‘I hope with your blessings it would fetch me a decent livelyhood to maintain myself and look after my brothers’ ಎಂದು ತಂದೆಗೆ ಇತ್ತ ಭರವಸೆ ಎಲ್ಲವೂ ಹುಸಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT